ಸಾಮೂಹಿಕ ವಿವಾಹ ಎಲ್ಲವ್ವನ ಐಡಿಯಾ
ಅಲ್ಲೆಲ್ಲೋ ಸಾರ್ವಜನಿಕ ಲಗ್ನದಲ್ಲಿ… ಮದುವೆಯಾದವರೂ ಸಹ ನಾವಿಬ್ಬರೂ ಹೊಸದಾಗಿ ಲಗ್ನವಾಗುತ್ತಿದ್ದೇವೆ ಎಂದು ಬಂಬ್ಡಾ ಎಬ್ಬಿಸಿದ ಸುದ್ದಿ ಸೋದಿಮಾಮಾನ ಕಿವಿಗೂ ಬಡಿದು..ಏನಿದೂ ಹೀಗಾಯ್ತು ? ಇಂಥವೆಲ್ಲ ಆಗಬಾರದಲ್ಲ.. ಯಾಕೆ ಹೀಗಾಯ್ತು ಎಂದು ಕೇಳುತ್ತೇನೆ ತಡೀ ಎಂದು ಅವರು ಸೀದಾ ತಿಗಡೇಸಿಗೆ ಕರೆ ಮಾಡಿ..ಏನ್ ತಿಗಡೇಸ್ಯಾ ಏನಿದೆಲ್ಲ…ನೀ ಏನ್ ಮಾಡುತ್ತಿದ್ದೆ? ಯಾರು ಯಾರನ್ನು ಲಗ್ನವಾಗಿದ್ದಾರೆ ಎಂದು ಹಗಲೆಲ್ಲ ಮೆಸೇಜ್ ಮಾಡುತ್ತೀಯ..ಇದು ಗೊತ್ತಿಲ್ಲವೇ? ಇದೆಲ್ಲ ಯಾಕಾಯಿತು? ನಿನಗೆ ಎಂಟು ದಿನಗಳ ಗಡವು ಕೊಡುತ್ತೇನೆ…ಎಲ್ಲವನ್ನೂ ಪರಿಶೀಲಿಸಿ ಹೇಳು ಎಂದು ತಾಕೀತು ಮಾಡಿದರು. ಅಂದಿನಿಂದ ತಿಗಡೇಸಿ ಓಣೋಣಿ ತಿರುಗಾಡಿ…ಬಹಳಷ್ಟು ಮಂದಿಯ ಮನೆಗೆ ಹೋಗಿ…ಎಲ್ಲವನ್ನೂ ಪತ್ತೆ ಹಚ್ಚಿ ಸೋದಿ ಅವರಿಗೆ ಪತ್ರ ಬರೆದ…
ಡಿಯರ್ ಸೋದಿ ಮಾಮೋರೆ….
ನೀವು ಹೇಳಿದ ಪ್ರಕಾರ ಸಾಮೂಹಿಕ ವಿವಾಹದಲ್ಲಿ ಗಂಡಸರು ಹೆಣ್ಣು ಡ್ರೆಸ್ಸು ಹಾಕಿಕೊಂಡು ಹೋಗಿ ಮದುವೆಯಾದರು. ಇನ್ನೂ ಹಲವರು ಮದುವೆಯಾಗಿದ್ದರೂ ನಾವು ಈಗ ಆಗುತ್ತೇವೆ ಎಂದು ಅಲ್ಲಿ ಎರಡನೇ ಬಾರಿ ತಾಳಿಕಟ್ಟಿಸಿಕೊಂಡು ರೊಕ್ಕೆ ಇಸಿದುಕೊಂಡು ಬಂದಿದ್ದಾರೆ. ಜಿಲಿಬಿಲಿ ಎಲ್ಲವ್ವಳು ಸಿಕ್ಕಾಪಟ್ಟೆ ಸಾಲ ಮಾಡಿದ್ದಳು. ಆಕೆಗೆ ದಿನಾಲೂ ಸಾಲಗಾರರು ಗಂಟು ಬಿದ್ದಿದ್ದರು. ಕನ್ನಾಳ್ಮಲ್ಲ…ಸರ್ಕಲ್ ಹನ್ಮಂತ…ತಳವಾರ್ಕಂಟಿ…ಜೀರನ್ಮಂತ…ಗೋಸ್ಲಗುಂಡಪ್ಪ..ಇರಪಾಪುರ ಮಾದೇವ… ಲಾದುಂಚಿ ರಾಜ ಸೇರಿದಂತೆ ಸುಮಾರು ಹದಿನೈದು ಮಂದಿ ಹೋಗಿ ಜಿಲಿಬಿಲಿ ಎಲ್ಲವ್ವನ ಮನೆಮುಂದೆ ಧರಣಿ ಮಾಡಿದರು. ಅದು ನಮಗೆ ಗೊತ್ತಿಲ್ಲ ನಮಗೆ ಯಾವಾಗ ರೊಕ್ಕ ಕೊಡುತ್ತಿ ಹೇಳು ಅಂತ ಗಂಟುಬಿದ್ದರು. ಅಷ್ಟರಲ್ಲಿ ಕರಿಭೀಮವ್ವ ಶೇಷಮ್ಮನ ಹೊಟೆಲ್‌ನಿಂದ ಹಾಳೆಯಲ್ಲಿ ಮಿರ್ಚಿ ಕಟ್ಟಿಸಿಕೊಂಡು ಬಂದಿದ್ದಳು. ಅದನ್ನು ಇಸಿದುಕೊಂಡು ಜಿ.ಬಿ.ಎ ಹಾಳೆಯನ್ನು ಬಿಡಿಸಿ ನೋಡಿದಳು. ಅದರಲ್ಲಿ ಸಾಮೂಹಿಕ ವಿವಾಹ…ಇಲ್ಲಿ ಲಗ್ನ ಆದರೆ ಅವರಿಗೆ ಇಷ್ಟೆಲ್ಲ ಕೊಡಲಾಗುವುದು ಎಂದು ಲಿಸ್ಟ್ ಹಾಕಿದ್ದರು. ಕೂಡಲೇ ಐಡಿಯಾ ಎಂದು ಒದರಿದ ಆಕೆ ಧರಣಿ ನಿರತರನ್ನು ಉದ್ದೇಶಿಸಿ… ನೋಡ್ರಪಾ ನನಗೂ ನಿಮ್ಮ ಕಷ್ಟ ಅರ್ಥವಾಗುತ್ತದೆ. ನೀವೆಲ್ಲರೂ ಇಂತಹ ದಿನ ನಿಮ್ಮ ಹೆಂಡತಿಯರನ್ನು ಕರೆದುಕೊಂಡು ಇಂಥಲ್ಲಿಗೆ ಬನ್ನಿ… ನಾ ಹೇಳಿದ ಹಾಗೆ ಕೇಳಬೇಕು ಅಂದಳು. ಹೇಗಾದರೂ ಮಾಡಿ ಸಾಲ ವಾಪಸ್ ಬಂದರೆ ಸಾಕು ಎಂದು ಅವರೆಲ್ಲರೂ ಹೂಂ ಅಂದರು. ಹೆಣ್ಣುಮಕ್ಕಳನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಪುಗಸೆಟ್ಟೆ ಬಸ್ಸಿನಲ್ಲಿ ಕರೆದುಕೊಂಡು ಹೋದಳು. ಗಂಡಸರೆಲ್ಲ ಹಿಂದೆ ಲಾರಿಯಲ್ಲಿ ಬಂದರು. ಸಾಮೂಹಿಕ ವಿವಾಹದಲ್ಲಿ ಅವರ ಜೋಡಿ ನಿಲ್ಲಿಸಿದಳು. ಸಂಘಟಕರು ಏನು ಕೊಡಬೇಕೋ ಅದನ್ನು ಕೊಟ್ಟರು. ಇನ್ನೂ ಹಲವು ಗಂಡಸರೂ ಕೂಡ ಹೆಂಗಸಿನ ವೇಷ ಹಾಕಿಕೊಂಡು ತಾಳಿ ಕಟ್ಟಿಸಿಕೊಂಡಿದ್ದಾರೆ.. ನಡೆದಿದ್ದು ಇಷ್ಟು ಸಾಹೇಬ್..ಈಗ ಜಿಲಿಬಿಲಿ ಎಲ್ಲವನೇ ಇದಕ್ಕೆಲ್ಲ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾನೆ.