For the best experience, open
https://m.samyuktakarnataka.in
on your mobile browser.

ಸಾಲ ಮಾಡದೆ ಸಿಂಗಪುರ ನೋಡು

02:30 AM Feb 28, 2024 IST | Samyukta Karnataka
ಸಾಲ ಮಾಡದೆ ಸಿಂಗಪುರ ನೋಡು

ಪೊಲೀಸ್ ಸ್ಟೇಷನ್‌ನಲ್ಲಿ ಪೇದೇನ ಎದರ‍್ಹಾಕ್ಕೊಳ್ಬೇಡ. ಬೆಡ್‌ರೂಮಲ್ಲಿ ಹೆಂಡ್ತೀನ ಎದರ‍್ಹಾಕ್ಕೊಳ್ಬೇಡ’ ಎಂಬ ಮಾತನ್ನ ಬೇರೆ ಯಾರೂ ಹೇಳಿಲ್ಲ, ನಾನೇ ಅನುಭವದಿಂದ ಹೇಳ್ತಾ ಇದ್ದೀನಿ. ಪೇದೆ ಜೊತೆ ವಾದ ಮಾಡಿದ್ರೆ ಉಪವಾಸ ಕೆಡವ್ತಾನೆ, ಒದೆ ಕೊಡ್ತಾನೆ. ಮಡದಿ ಜೊತೆ ವಾದ ಮಾಡಿದ್ರೆ ಉಪವಾಸ ಕೆಡವ್ತಾಳೆ, ಕಾಟ ಕೊಡ್ತಾಳೆ. “ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಬಂದೆಳೆವಾಗ ಎದೆಯ ರಿಬ್ಬು ಮುರಿದಂತೆ ಸರ್ವಜ್ಞ” ಎಂಬ ಮಾತು ಇಂದಿಗೆ ಹೆಚ್ಚು ಪ್ರಸ್ತುತ. ಎದೆಗೂಡಿನ ರಿಬ್ಬು ಮುರಿದ್ರೆ ಅದಕ್ಕೆ ಔಷಧಿಯೇ ಇಲ್ಲ, ಹಾಗೇ ರೆಸ್ಟಲ್ಲಿದ್ದು ಸರಿಮಾಡ್ಕೋಬೇಕು, ನೋವನ್ನು ಅನುಭವಿಸ್ಲೇಬೇಕು. ನೋಡೋವ್ರಿಗೆ ಇದು ಗೊತ್ತಾಗೊಲ್ಲ. ಸಾಲ ತಗೋಬೇಡ ಅಂತ ಶೇಕ್ಸ್ಪಿಯರು ಹ್ಯಾಮ್‌ಲೆಟ್ ನಾಟಕದಲ್ಲಿ Polonius advice to his son ನಲ್ಲಿ ಮಗನಿಗೆ ಹೇಳುವ ಬುದ್ಧಿ ಮಾತಿದೆ. ಯಾರಿಗೂ ಹಣವನ್ನು ಸಾಲವಾಗಿ ಕೊಡಬೇಡ, ಬೇರೆಯವರಿಂದ ಸಾಲ ಪಡೆಯಬೇಡ. ಏಕೆಂದರೆ, ಸಾಲ ಕೊಟ್ಟರೆ ಹಣ ತಾನೂ ಹೋಗುವುದಲ್ಲದೆ ಸ್ನೇಹವನ್ನೂ ಕಳೆದುಬಿಡುತ್ತದೆ. “ಋಣವ ಹೊರುವುದಕ್ಕಿಂತ ಹೆಣವ ಹೊರುವುದು ಲೇಸು” ಎಂಬುದು ಕವಿವಾಣಿ.ಗರೀಬಿ ಹಠಾವೋ’ ಎಂಬ ಸ್ಲೋಗನ್‌ನ ತಾತ ನಮ್ಮ ತಂದೆಗೆ ಹೇಳಿದ್ರಂತೆ. ಅದನ್ನ ನಮ್ಮ ತಂದೆ ನನಗೆ ಹೇಳಿದ್ದರು. ಅದನ್ನ ನಾನು ನನ್ನ ಮಗನಿಗೆ ಹೇಳಿದ್ದೇನೆ. ಈ ಸಲ ನಾವು ಚುನಾವಣೇಲಿ ಗೆದ್ದರೆ ಗರೀಬಿ ಹಠಾವೋ’ ಆಗುತ್ತೆ ಎಂಬ ಆಶ್ವಾಸನೆ ಪ್ರತಿ ಬಾರಿಯೂ ಸಿಗುತ್ತದೆ. ನಮ್ಮ ಗರೀಬಿಯನ್ನು ದೂರ ಮಾಡಲು ಬಂದವರಲ್ಲಿ ಹಲವರು ಅರಬ್ ದೊರೆಗಳಂತೆ ಐಷಾರಾಮಿ ಬಂಗಲೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಒಂದಕ್ಕಿಂತ ಹೆಚ್ಚಾಗಿ ಸಂಸಾರಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಸ್ಥಿತಿ ನಾಡ ಹೆಂಚಿನ ಗುಡಿಸಲಾಗಿದೆ. ವಿಶ್ವನ ಪರಿಸ್ಥಿತಿ ಸಹ ಮಿಡ್ಲ್ ಕ್ಲಾಸೇ. ಬಡತನದಿಂದಾಗಿ ಅವನ ಮನೆಯಲ್ಲಿ ಆಗಾಗ ವೈಮನಸ್ಯ ಬರುತ್ತದೆ. ಜಗಳ ವಿಪರೀತವಾಗಿ ಎಚ್ಚರಿಕೆಯ ಗಂಟೆ ಕೀ ಕೀ ಎಂದಾಗ ನನಗೆ ಫೋನ್ ಬರುತ್ತದೆ. ವಿಶ್ವನ ಕುಟುಂಬದಲ್ಲಿ ಕಲಹ, ಕಾದಾಟ ಆದಾಗ ಸಂಧಾನಕ್ಕೆ ನಾನು ಹೋಗ್ಲೇಬೇಕು. ಕಳೆದ ಬುಧವಾರ ಅವರ ಮನೆಗೆ ಹೋದಾಗ ಕದನ ವಿರಾಮದ ವಾತಾವರಣ ಇತ್ತು. ಹಗೆಯ ಹೊಗೆ ಕಾಣುತ್ತಿತ್ತು. ಗಂಡ-ಹೆಂಡತಿ ಬೇರೆ ಬೇರೆ ದಿಕ್ಕಿಗೆ ಮುಖ ಮಾಡಿಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚೆಚ್ಚುವ ಗಾಳಿಯು ಬೀಸುತಿದೆ’ ಎಂದು ಹಾಡಿಕೊಳ್ಳುತ್ತಿದ್ದರು.
“ಸಮಾಧಾನ ಮಾಡ್ಕೋ ವಿಶ್ವ” ಎಂದೆ.
“ನೀನು ಬರ‍್ತಾ ೧೦೦ ಗ್ರಾಂ ಸಮಾಧಾನ ತರಬೇಕಿತ್ತು. ದಶರಥ ಕೈಕೆಗೆ ಮಾತು ಕೊಟ್ಟಂತೆ ಯಾವತ್ತೋ ಒಂದು ಆಶ್ವಾಸನೆ ಇವಳಿಗೆ ಕೊಟ್ಟೆ. ಅದು ನೆರವೇರಿಸಿ ಅಂತ ಕೂಗಾಡ್ತಿದ್ದಾಳೆ” ಎಂದಾಗ ವಿಶಾಲು ಹಳೆಯ ಮೆಸೇಜ್ ತೋರಿಸಿದಳು. `ಮುಂದಿನ ವರ್ಷ ನಾನು ಸಿಂಗಪೂರ್‌ಗೆ ಗ್ಯಾರಂಟಿಯಾಗಿ ರ‍್ಕೊಂಡ್ಹೋಗ್ತೀನಿ’ ಎಂಬ ಮಾತು ಅದರಲ್ಲಿತ್ತು.
ಗ್ಯಾರಂಟಿ ಎಂಬ ಗರಗಸ ಕಾಲಕ್ರಮೇಣ ಕೊರಳು ಕೊಯ್ಯುತ್ತಿರುತ್ತೆ. ಸಿಂಗಪುರದ ಪ್ರವಾಸ ಬಹಳ ದುಬಾರಿಯಾಗಿದೆ. ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದಾಗ ಈಗ ದುಪ್ಪಟ್ಟು
ಹಣ ಬೇಕಾಗುತ್ತೆ. ಇಂಥ ಗ್ಯಾರಂಟಿಯನ್ನು ವಿಶ್ವ ಯಾಕೆ ಕೊಟ್ಟ ಎಂದು ಬೇಸರಿಸಿದೆ. ವಿಶಾಲು ತನ್ನ ನೋವನ್ನ ತೋಡಿಕೊಂಡಳು.
“ನಾನು ಸಿಂಗಪುರಕ್ಕೆ ಹೋಗ್ತೀನಿ ಅಂತ ಲೇಡೀಸ್ ಕ್ಲಬ್ಬಲ್ಲೆಲ್ಲ ಹೇಳಿದ್ದಾಗಿದೆ. ಯಾವಾಗ ಹೋಗ್ತೀರ ಅಂತ ಮೆಂರ‍್ಸ್ ಕೇಳ್ತಾ ಇದ್ದಾರೆ. ಹೋಗ್ಲಿಲ್ಲ ಅಂದ್ರೆ ಎಷ್ಟು ಅವಮಾನ ಆಗುತ್ತೆ” ಅಂದ್ಲು.

“ಹೋಗಿ ಬಂದೆ ಅಂದ್ರಾಯ್ತು” ಎಂದ ವಿಶ್ವ.
“ಫೇಸ್‌ಬುಕ್ಕಲ್ಲಿ, ಇನ್‌ಸ್ಟಾಗ್ರಾಮಲ್ಲಿ ಫೋಟೋಗಳು ಹಾಕೋದು ಬೇಡವೇನ್ರಿ?
ಇ- ಕಾಲದಲ್ಲಿ ಸುಳ್ಳು ಹೇಳೋಕೆ ಆಗೊಲ್ಲ” ಎಂದಳು.
“ಏನು ಯೋಚ್ನೆ ಮಾಡ್ತಿದ್ದೀಯ ವಿಶ್ವ?” ಎಂದೆ.
“ಇವತ್ತು ಪ್ರವಾಸ ಮಾಡಿ ಮುಂದಿನ ವರ್ಷ ದುಡ್ ಕಟ್ಟಿ ಅನ್ನೋ ಸ್ಕೀಮುಗಳೆಲ್ಲ ಬಂದಿವೆ. ಆದ್ರೆ ವಿಪರೀತ ಬಡ್ಡಿ” ಅಂದ.
“ಸಾಲ ಮಾಡಿ ಪ್ರವಾಸ ಮಾಡ್ಬರ‍್ದು ವಿಶ್ವ” ಎಂದು ಒತ್ತಿ ಹೇಳಿದೆ. ವಿಶಾಲುಗೆ ಸಿಟ್ಟಾಯಿತು.
“ಸಾಲ ಮಾಡಿ ತುಪ್ಪ ತಿನ್ನು ಅಂತ ಚಾರ್ವಾಕ ಹೇಳಿಲ್ವಾ?” ಎಂದಳು ವಿಶಾಲೂ.
“ನಿಜ, ಋಣಕೃತ್ವಾ ಘೃತಂ ಪಿಬೇತ್” ಅಂತ ಚಾರ್ವಾಕ ಹೇಳ್ದ. ನಾಳೆ ಭಸ್ಮ ಆಗೋಂಥ ಈ ನಶ್ವರ ಶರೀರ ಮತ್ತೆ ಹುಟ್ಟಿ ಬರುತ್ತೆ ಅಂತ ಗ್ಯಾರಂಟಿ ಏನು? ಬದುಕಿರೋವಾಗ್ಲೇ ಎಂಜಾಯ್ ಮಾಡ್ಬೇಕು ಅಂತ ಪ್ರತಿಪಾದಿಸಿದ. ಆದ್ರೆ ಆ ಕಾಲಕ್ಕೇ ಅವನ ಮಾತನ್ನ ಬಹುಮಂದಿ ವಿರೋಧಿಸಿದ್ರು. ತುಪ್ಪ ತಿನ್ನೋಕೆ ಸಾಲ ಮಾಡಿದ್ರೆ ಯಾವ ಬೆಪ್ಪ ತೀರಿಸ್ತಾನೆ?
“ತೀರಿಸೋಕೆ ಕಂತುಗಳಿಲ್ವಾ?” ಎಂದಳು ವಿಶಾಲು.
ಬಹಳ ಯೋಚನೆ ಮಾಡಿ ವೇದಾಂತಿಯಂತೆ ನಾನು ಹೇಳಿದೆ.
“ಕುಟುಂಬ ಪದದಲ್ಲಿ ವಿಶೇಷ ಅರ್ಥ ಇದೆ. ಕ-ಅಂದ್ರೆ ಕಚ್ಚಾಟ, ಕಾ-ಅಂದ್ರೆ ಕಾದಾಟ, ಕಿ-ಕಿರುಚಾಟ, ಕೀ-ಕೀರ್ತಿಭಂಗ, ಆಮೇಲೆ ಕು- ಅಂದ್ರೆ ಕುಟುಂಬ ಬರುತ್ತೆ” ಅಂದೆ.
“ಈ ಟೆನ್ಶನ್‌ನಲ್ಲಿ ಗ್ರಾಮರ್ ಕ್ಲಾಸ್ ಬೇಕಾಗಿತ್ತಾ? ನಿಮ್ಮ ಕ, ಕಾ, ಕಿ, ಕೀ ಬೇಡ. ನಾನಂತೂ ಸಿಂಗಪುರಕ್ಕೆ ಹೋಗ್ಲೇಬೇಕು” ಎಂದು ವಿಶಾಲು ಪಟ್ಟು ಹಿಡಿದಳು. ವಿಶಾಲುಗೆ ಅನೇಕ ರೀತಿಯಲ್ಲಿ ಸಮಾಧಾನ ಮಾಡಿದರೂ ಆಕೆ ಜಗ್ಗಲಿಲ್ಲ. ಸಿಂಗಪೂರ್‌ದಲ್ಲಿ ಒಂದು ಪಾರ್ಕ್ ಇದೆ. ಆ ಪಾರ್ಕ್ನಲ್ಲಿ ಪ್ರಾಣಿಗಳು, ಕೋತಿಗಳು, ಪಕ್ಷಿಗಳು ಷೋ ಕೊಟ್ಟು ಖುಷಿ ಪಡಿಸುತ್ತೆ” ಎಂದಾಗ ವಿಶ್ವ ನನ್ನ ಮುಖ ನೋಡಿದ.
“ಇವತ್ತು ಗಂಡ-ಹೆಂಡ್ತಿ ಸಿಂಗಪೂರ್‌ಗೆ ಒಂದು ವಾರ ಹೋಗಿ ರ‍್ಬೇಕು ಅಂದ್ರೆ ಮೂರು ಲಕ್ಷ ಆದ್ರೂ ಬೇಕು” ಎಂದೆ.
“ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು” ಎಂದು ಗೋವಿನ ಪದ್ಯದ ಸಾಲು ವಿಶಾಲೂ ಹೇಳಿದಳು.
“ಸಿಂಗಪೂರಕ್ಕೆ ಇವಳ್ನ ರ‍್ಕೊಂಡು ಹೋಗೋಕೆ ನಾನು ಹಣಕ್ಕಾಗಿ ಪ್ಲ್ಯಾನ್ ಮಾಡ್ತೀನಿ” ಎಂದು ವಿಶ್ವ ತೀರ್ಮಾನ ಕೊಟ್ಟ.
“ಹೇಗೆ?” ಎಂದೆ.
“ಹತ್ತು ಲಕ್ಷಕ್ಕೆ ಒಂದು ಕಿಡ್ನಿ ಮರ‍್ಬಿಡ್ತೀನಿ” ಎಂದಾಗ ವಿಶಾಲುಗೆ ಷಾಕಾಯ್ತು.
“ಬೇಡ್ರೀ, ಬೇಕಿದ್ರೆ ತಾಳಿ ನಾನು ಮರ‍್ತೀನಿ. ನಿಮ್ಮ ಕಿಡ್ನಿ ಮಾತ್ರ ಮಾರೋಕೆ ಹೋಗ್ಬೇಡಿ” ಎಂದಳು.
ಆಸ್ಟ್ರೇಲಿಯಾಗೆ ಸಿಡ್ನಿ ಹ್ಯಾಗೆ ಮುಖ್ಯಾನೋ ಮನುಷ್ಯನಿಗೆ ಕಿಡ್ನಿ ಅಷ್ಟೇ ಮುಖ್ಯ.
“ಸಾಲ ಮಾಡ್ದೆ ಸಿಂಗಪೂರ್‌ಗೆ ಹೋಗೋ ಐಡಿಯಾ ನನ್ಹತ್ರ ಇದೆ” ಎಂದೆ. ಅವರಿಬ್ಬರ ಕಿವಿ ಚುರುಕಾಯಿತು.
“ದೊಡ್ಡ ತಿರುಪತಿಗೆ ಹೋಗಲು ಆಗದವರು ಚಿಕ್ಕ ತಿರುಪತಿಗೆ ಹೋಗ್ತಾರೆ. ಅಷ್ಟೇ ಫಲ ಸಿಗುತ್ತೆ. ಸಿಂಗಪೂರ್‌ಗೆ ಫ್ಲೈಟಲ್ಲೇ ಹೋಗ್ಬೇಕು ಅಂತೇನಿಲ್ಲ. ಬೆಂಗಳೂರಿನ ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯದಲ್ಲಿ ಸಿಂಗಪುರ ಬಡಾವಣೆ ಇದೆ. ಅಲ್ಲೊಂದು ಪಾರ್ಕೂ ಇದೆ. ಇಲ್ಲಿನ ಸಿಂಗಪೂರದ ಪಾರ್ಕ್ಗೆ ಆಟೋದಲ್ಲಿ ವಿಶಾಲೂನ ರ‍್ಕೊಂಡ್ಹೋಗು. ದುಡ್ಡು, ಕಾಸು ಉಳಿಯುತ್ತೆ” ಎಂದಾಗ ವಿಶ್ವನಿಗೆ ಖುಷಿಯಾಯ್ತು.
ಕೆರಳಿದ ವಿಶಾಲೂ ಒಂದು ಲೋಟ ಬಿಸಿನೀರು ನನ್ನ ಮುಂದೆ ತಂದಿಟ್ಟು ಹೇಳಿದಳು.
“ಕಾಫಿಪುಡಿ ಮುಗಿದಿದೆ. ಈ ಬಿಸಿನೀರನ್ನೇ ಕಾಫಿ ಅಂತ ತಿಳ್ಕೊಂಡು ಕುಡಿದುಬಿಡಿ” ಎಂದಳು.