For the best experience, open
https://m.samyuktakarnataka.in
on your mobile browser.

ಸಾವು ಇಷ್ಟು ನಿರಾಳವೇ?

03:37 AM Aug 14, 2024 IST | Samyukta Karnataka
ಸಾವು ಇಷ್ಟು ನಿರಾಳವೇ

ನಮ್ಮಜ್ಜನ ತಂದೆ ಭೀಮಾಚಾರ್ಯರು. ಅವರ ಹಿಂದಿನವರ ಹೆಸರು ನನಗೆ ಗೊತ್ತು ಆದರೆ ವಿವರಗಳು ತಿಳಿದಿಲ್ಲ. ಭೀಮಾಚಾರ್ಯರು ಔಷಧಿ ಕೊಡುತ್ತಿದ್ದರಂತೆ ಹಾಗೂ ಜ್ಯೋತಿಷ್ಯದಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ಆಗ ಬದುಕು ಸುಲಭವಾಗಿತ್ತು. ಅಪೇಕ್ಷೆಗಳೂ ಅತಿಯಾಗಿರಲಿಲ್ಲ. ಭೀಮಾಚಾರ್ಯರು ಮನೆಯ ಕಡೆಗೆ ಕಾಳಜಿ ಮಾಡುತ್ತಿದ್ದುದು ಕಡಿಮೆ. ಕುದುರೆ ಹತ್ತಿ ಹೊರಟರೆ ಹಳ್ಳಿ, ಹಳ್ಳಿ ಪ್ರವಾಸ, ಅಲ್ಲಿಯ ಜನರಿಗೆ ಔಷಧಿ ಕೊಡುವುದು, ಜ್ಯೋತಿಷ್ಯ ಹೇಳುವುದು ಇದೇ ಅವರ ಕೆಲಸ. ಗುಣವಾದ ಮೇಲೆ ರೋಗಿಗಳು ಬಂದು, “ಸ್ವಾಮೀ, ನಿಮ್ಮಿಂದ ಭಾಳ ಉಪಕಾರ ಆತು. ಎಷ್ಟು ರೊಕ್ಕ ಕೊಡಬೇಕು?” ಎಂದು ಕೇಳಿದರೆ ಇವರು ನಗುತ್ತಾ, “ಆತಪಾ, ಒಂದು ಸೇರು ಫೇಡೆ ತಂದುಕೊಡು, ಸಾಕು” ಎನ್ನುವರು. ಅವರು ಕೊಟ್ಟ ಫೇಡೆಯನ್ನಾದರೂ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರೇ? ಇಲ್ಲ, ತಾವೊಂದು ತಿಂದು ಉಳಿದದ್ದನ್ನು ಅಲ್ಲಿದ್ದ ಮಕ್ಕಳಿಗೆ ಹಂಚಿ ಬಂದುಬಿಡುವರು. ಮನೆಯಲ್ಲಿ ಅತಿಯಾದ ಬಡತನ. ಮನೆ ಹ್ಯಾಗೆ ನಡೆದೀತು ಎಂಬ ಚಿಂತೆಯೂ ಬರದ ನಿರ್ಲಿಪ್ತತೆಯೋ ಅಥವಾ ಭಗವಂತ ಹೇಗೋ ನಡೆಸುತ್ತಾನೆಂಬ ಪರಮ ನಂಬಿಕೆಯೋ ತಿಳಿಯದು. ನನ್ನಜ್ಜ ಅಂದಿನ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದಾಗ ನನಗೆ ಕಣ್ಣೀರು ಬರುತ್ತಿತ್ತು. ಮನೆಯಲ್ಲಿ ಯಾರೋ ಪುಣ್ಯಾತ್ಮರು ಕೊಟ್ಟ ಜೋಳ. ಅದರಿಂದಲೇ ದಿನಾಲು ರೊಟ್ಟಿ (ಭಕ್ರಿ) ಇಲ್ಲವಾದರೆ ನುಚ್ಚು ತಯಾರಾಗಬೇಕು. ಅನ್ನ ತುಂಬ ಅಪರೂಪ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಅಂದು ಮಾತ್ರ ತುಸು ಅನ್ನ. ನನ್ನ ಅಜ್ಜನಿಗೆ ಅನ್ನ ತಿನ್ನಬೇಕು ಎನ್ನಿಸಿದಾಗ ಆತ ಹತ್ತಿರವೇ ಇದ್ದ ಕೃಷ್ಣಾ ನದಿ ದಂಡೆಗೆ ಹೋಗಿ ಬಿಸಿಲಿನಲ್ಲಿ ಕಾದು ಕೆಂಡವಾಗಿದ್ದ ಬಂಡೆಗಳ ಮೇಲೆ ಬೋರಲಾಗಿ ಮಲಗುತ್ತಿದ್ದನಂತೆ. ಮೈಚರ್ಮ ಸುಟ್ಟು ಕಪ್ಪಗಾಗುವವರೆಗೂ ಹಾಗೆಯೇ ತಡೆದುಕೊಂಡಿದ್ದು ನಂತರ ಮನೆಗೆ ಧಾವಿಸಿ ಬಂದು, “ಅವ್ವಾ, ನನಗ ಜ್ವರಾ ಬಂದಾವ ನೋಡು” ಎನ್ನಬೇಕು. ಆಗ ತಾಯಿ ಮೈಮುಟ್ಟಿ ನೋಡಿ, “ಹೌದಲ್ಲೋ, ಮೈ ಬೆಂಕಿ ಆಗ್ಯದಪ್ಪ. ಇರು, ಇವತ್ತ ನಿನಗೆ ಅನ್ನ ಮಾಡಿ ಹಾಕತೀನಿ” ಎಂತಿದ್ದಳಂತೆ. ಇದು ಮನೆಯ ಪರಿಸ್ಥಿತಿ.
ಭೀಮಾಚಾರ್ಯರು ಜ್ಯೋತಿಷ್ಯದಲ್ಲಿ ಒಳ್ಳೆಯ ಹೆಸರು ಮಾಡಿದ್ದರು ಎಂದು ಹೇಳಿದೆನಲ್ಲ, ಒಮ್ಮೆ ಅವರು ಬಿಜಾಪೂರ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದರು. ಆ ಕಡೆಗೆ ಹೋದಾಗಲೆಲ್ಲ ಅಲ್ಲಿಯ ದೇಸಾಯರ ಮನೆಗೆ ಹೋಗಿ ಒಂದೆರಡು ದಿನ ಅಲ್ಲಿದ್ದು ಮತ್ತೆ ಮುಂದಿನ ಪ್ರಯಾಣ. ಆ ಮನೆಯವರಿಗೆಲ್ಲ ಭೀಮಾಚಾರ್ಯರ ಬಗ್ಗೆ ತುಂಬ ಗೌರವ. ಹಿರಿಯ ದೇಸಾಯಿಯವರು ಕಾಲವಾಗಿ ಬಹಳ ವರ್ಷವಾಗಿತ್ತು. ಅವರ ಹೆಂಡತಿ ದೇಸಗಿತ್ತಿಗೂ ಆಗ ವಯಸ್ಸಾಗಿತ್ತು. ಮಡಿ ಹೆಂಗಸು, ಪೂಜೆ, ಹರಿಕಥೆಗಳಲ್ಲೇ ಕಾಲ ಕಳೆಯುತ್ತಿದ್ದರು. ಭೀಮಾಚಾರ್ಯರು ಮನೆಗೆ ಬಂದಾಗ ರಾತ್ರಿ ಊಟವಾದ ಮೇಲೆ ಅವರ ಮುಂದೆ ಕುಳಿತು, “ಆಚಾರ, ನನಗೆ ಜೀವ ಸಾಕು ಅನಿಸೇದ. ನಾ ಎಷ್ಟು ದಿನ ಬದುಕಿದರೂ ಏನು ಪ್ರಯೋಜನ? ನನಗ ಇನ್ನೂ ಎಷ್ಟು ಆಯುಷ್ಯ ಅದ ನೋಡಿ ಹೇಳ್ರಿ” ಎಂದಳಂತೆ. ಭೀಮಾಚಾರ್ಯರಿಗೆ ದೇಸಾಯರ ಮನೆಯ ಎಲ್ಲರ ಜನ್ಮಕುಂಡಲಿಯೂ ಬಾಯಿಪಾಠ. ಆ ಹೆಣ್ಣುಮಗಳ ಕುಂಡಲಿಯನ್ನು ಮನಸ್ಸಿನಲ್ಲಿ ತಂದುಕೊಂಡು ಏನೇನೋ ಲೆಕ್ಕಹಾಕಿ ಹೇಳಿದರು, “ನೋಡಿ ತಾಯೀ, ಈಗ ವೈಶಾಖ ಮಾಸ ನಡೆದದ. ಇನ್ನೊಂದು ತಿಂಗಳು ತಡೀರಿ. ಮುಂದ ಆಷಾಢ ಮಾಸದಾಗ ಏಕಾದಶಿ ಭಾಳ ದೊಡ್ಡ ದಿವಸ, ನಮ್ಮ ಪಾಂಡುರಂಗನ ದರ್ಶನಕ್ಕೆ ಶ್ರೇಷ್ಠ ದಿನ. ಆವತ್ತೇ ಹೋಗಿಬಿಡ್ರಿ”. ಆಕೆಯ ಕಣ್ಣಲ್ಲಿ ಗಳಗಳ ನೀರು, “ಆಚರ‍್ರ, ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ರಿ. ಆಷಾಢ ಏಕಾದಶಿ ದಿನವೇ ನಾನು ಹೋದೆ ಅಂದ್ರ ಸೀದಾ ಪಾಂಡಪ್ಪನ ಮುಂದೇ ಕೂಡ್ರತೀನಿ. ಆದ್ರ ಅಚರ‍್ರ, ಆವತ್ತಿನ ದಿವಸ ನೀವು ಇಲ್ಲಿಗೆ ಬರಬೇಕು. ನಾನು ಹೋಗೋ ಮುಂದ ಇದ್ದು, ಮಕ್ಕಳ ಕಡಿಂದ ಎಲ್ಲ ಶಾಸ್ತ್ರ ಸರಿಯಾಗಿ ಮಾಡಸಬೇಕು” ಎಂದು ವಚನ ತೆಗೆದುಕೊಂಡರಂತೆ. ವಿಚಿತ್ರ ಎನ್ನಿಸೋದಿಲ್ಲವೇ? ಇಂಥ ದಿವಸ ನೀವು ಪ್ರಾಣಬಿಟ್ಟು ಹೋಗಿಬಿಡಿ ಎಂದು ಇವರು ಹೇಳುವುದು, ಅದಕ್ಕೆ ಪ್ರತಿಯಾಗಿ ಆಕೆ ಅಂದು ನೀವಿದ್ದು ಕಳುಹಿಸಿಕೊಡಬೇಕು ಎಂದು ಕೇಳುವುದು ಇಂದು ಎಷ್ಟು ಅಸಂಬದ್ಧ ಎನ್ನಿಸುತ್ತದೆಯಲ್ಲವೇ?. ಈ ದಿನಗಳಲ್ಲಿ ಬೇರೆ ಊರಿಗೆ ಹೋಗುವುದೂ ಅಷ್ಟು ಖಚಿತವಾಗಿರುವುದಿಲ್ಲ.
ಮಾತು ಕೊಟ್ಟಂತೆ ಆಷಾಢ ಏಕಾದಶಿ ಹಿಂದಿನ ದಿನ ದಶಮಿಯಂದೆ ಆಚಾರ್ಯರು ದೇಸಾಯರ ಮನೆ ಸೇರಿದರು. ದೇಸಗಿತ್ತಿ ಎಲ್ಲರಿಗೂ ಹೇಳಿಬಿಟ್ಟಿದ್ದರಿಂದ ಮನೆ ತುಂಬ ಬಂಧು ಬಳಗದವರು ಬಂದಿದ್ದಾರೆ! ಮುದುಕಿ ಮಾತ್ರ ಹೋದ ತಿಂಗಳು ಎಷ್ಟು ಗಟ್ಟಿಮುಟ್ಟಾಗಿದ್ದರೋ ಈಗಲೂ ಅಷ್ಟೇ ಗಟ್ಟಿಮುಟ್ಟಾಗಿದ್ದರು, ಅನಾರೋಗ್ಯದ ಯಾವ ಸುಳಿವೂ ಇಲ್ಲ. ವಿಚಿತ್ರವೆಂದರೆ ಆಕೆಯಲ್ಲಿ ಯಾವ ಸಂಶಯವೂ ಇಲ್ಲ. ಪ್ರಯಾಣಕ್ಕೆ ತಯಾರಿ ಮಾಡುವವರಂತೆ, “ಆಚರ‍್ರ, ನಾಳೆ ಎಷ್ಟೊತ್ತಿಗೆ ಹೋದ್ರ ಛೊಲೋ? ಸಂಜೀ ಮುಂದ ಹೋದ್ರ ಮನೀ ಮಂದಿಗೆಲ್ಲ ತ್ರಾಸ ಆಗ್ತದ, ಯಾಕಂದ್ರ ರಾತ್ರಿ ಕ್ರಿಯಾ ಮಾಡೋದು ಕಷ್ಟ. ಅದಕ್ಕ ಮುಂಜಾನೇ ಹೋಗಲಿಕ್ಕೆ ಆಗ್ತದೇನು ನೋಡ್ರಿ” ಎಂದರಂತೆ. ಅದಕ್ಕೆ ಆಚಾರ್ಯರು ಒಂದೆರಡು ಕ್ಷಣ ಏನೋ ಚಿಂತಿಸಿ, “ಇಲ್ಲಿ ನೋಡ್ರಿ, ನಾಳೆ ಹೇಗಿದ್ರೂ ಉಪವಾಸ. ಮುಂಜಾನೆ ಲಗೂನೆ ಎದ್ದು ಪೂಜಾ ಮಾಡಿಬಿಡ್ತೀನಿ. ಸುಮಾರು ಹತ್ತು ಗಂಟೆಕ್ಕ ನಿಮಗ ತೀರ್ಥ, ತುಳಸಿ ಕೊಡತೀನಿ. ಮುಂದ ಅರ್ಧಾತಾಸಿನ್ಯಾಗ ಹೊರಡಲಿಕ್ಕೆ ಮುಹೂರ್ತ ಬರೋಬರಿ ಅದ” ಎಂದರು. ಆಕೆ ಸಂತೋಷದಿಂದ, “ಅಷ್ಟು ಮಾಡ್ರಿ ಅಚರ‍್ರ, ಈ ಜೀವಾ ಪಾರ ಮಾಡಿ ಬಿಡ್ರಿ” ಎಂದು ಎದ್ದರು. ಆಕೆಯ ನಂಬಿಕೆ ಅದ್ಭುತ. ಆದರೆ ವಿಚಿತ್ರವೆಂದರೆ ಮನೆಮಂದಿ ಕೂಡ ಮರುದಿನ ಹತ್ತೂವರೆಯ ಬಸ್ಸಿಗೆ ಆಕೆಯನ್ನು ಕಳುಹಿಸಿ ಬರುವ ರೀತಿಯಲ್ಲಿ ಎಲ್ಲ ತಯಾರಿ ಮಾಡುತ್ತಿದ್ದರಂತೆ.
ಆಚಾರ್ಯರು ಬೆಳಿಗ್ಗೆ ಬೇಗನೇ ಎದ್ದು ಅತ್ಯಂತ ವಿರಾಮದಲ್ಲಿ ಪೂಜೆಯನ್ನು ಪೂರೈಸಿದರು. ಮನೆಯಲ್ಲಿ ಎಲ್ಲರೂ ಎದ್ದು ಸ್ನಾನ ಮುಗಿಸಿ ದೇವರ ಮಂಗಳಾರತಿ ತೆಗೆದುಕೊಂಡರು. ದೇಸಗಿತ್ತಿ ಅಜ್ಜಿ ಸಂಭ್ರಮದಲ್ಲಿದ್ದಾರೆ! ಮನೆಯ ಎಲ್ಲರಿಗೂ ಆಶೀರ್ವದಿಸಿ, ಅಪ್ಪಿಕೊಂಡು, ಯಾರಿಗೆ ಏನು ಹೇಳಬೇಕೋ ಹೇಳಿ, ‘ಚಿಂತೀ ಮಾಡಬ್ಯಾಡ್ರಿ. ಇದು ಭಾಳ ಹಳೇ ಅರಿವಿ (ಬಟ್ಟೆ), ಇದನ್ನು ಭಾಳ ದಿವಸ ಇಟಗೋಬಾರ್ದು. ಅದರ ಕೆಲಸ ಮುಗದದ. ನಗನಗತಾ ಇದನ್ನ ಕಳಿಸಿಬಿಡ್ರಿ. ನಾ ಹೋದ ಮೇಲೆ ಈ ದೇಹ ಒಣಾ ಕಟಿಗಿ ಇದ್ಹಂಗ. ಇದನ್ನು ಭಾಳಹೊತ್ತು ಇಟಗೋಬ್ಯಾಡ್ರಿ. ಲಗೂನೆ ಮುಗಿಸಿಬಂದು ಬಿಡ್ರಿ” ಎಂದರು! ಹತ್ತು ಗಂಟೆಗೆ ತೀರ್ಥ, ತುಳಸಿ ತೆಗೆದುಕೊಂಡರು. ಆಚಾರ್ಯರು ಪಡಸಾಲೆಯಲ್ಲಿ ನೆಲದ ಮೇಲೆ ದರ್ಭೆ ಹಾಕಿಸಿ ಅದರ ಮೇಲೆ ಒಂದು ಚಾಪೆ ಹಾಸಿಸಿದರು. “ತಾಯೀ, ಈಗ ಹೊತ್ತು ಬಂತು, ರ‍್ರಿ. ಚಾಪೀಮ್ಯಾಲೆ ಮಲಗಿಕೋರಿ. ಕಣ್ಣುಮುಚ್ಚಿ ಪಾಂಡುರಂಗನ ಧ್ಯಾನ ಮಾಡ್ರಿ. ನಾನು ವಿಷ್ಣು ಸಹಸ್ರನಾಮ ಹೇಳ್ತೀನಿ. ಅದನ್ನ ಮನಸ್ಸಿನ್ನಾಗ ನೆನಸಿಕೋತ ಸಾವಕಾಶ ಉಸಿರಾಡಿಕೋತ ನಿಮ್ಮ ಪ್ರವಾಸಕ್ಕೆ ಹೊರಡ್ರಿ. ದೇವರು ನಿಮಗ ಒಳ್ಳೇದು ಮಾಡ್ತಾನ” ಎಂದರು. ಆಕೆ ಬಂದು ಆಚಾರ್ಯರಿಗೆ ನಮಸ್ಕಾರ ಮಾಡಿ, “ಅಂತೂ ನನ್ನ ಮುಕ್ತ ಮಾಡಿದ್ರಿ ಆಚರ‍್ರ” ಎಂದು ಚಾಪೆಯ ಮೇಲೆ ಮಲಗಿದರು. ಬಂಧುಬಳಗವೆಲ್ಲ ಸುತ್ತ ನೆರೆದಿದೆ. ಆರೋಗ್ಯವಾಗಿ, ಗಟ್ಟಿಮುಟ್ಟಾಗಿದ್ದವರು ಮುಂದೆ ಕೆಲವೇ ಕ್ಷಣಗಳಲ್ಲಿ ತೀರಿಹೋಗುವುದು ಸಾಧ್ಯವೇ ಎಂಬ ಸಂಶಯವೂ ಯಾರಿಗೂ ಬಂದಿರಲಿಲ್ಲ! ಆಚಾರ್ಯರು ತಮ್ಮ ಗಂಭೀರವಾದ ಏರಿದ ಧ್ವನಿಯಲ್ಲಿ ವಿಷ್ಣು ಸಹಸ್ರನಾಮ ಹೇಳತೊಡಗಿದರು. ಅವರೊಂದಿಗೆ ಮನೆಯ ಕೆಲವರೂ ಸೇರಿಕೊಂಡರು. ಅಜ್ಜಿ ಕಣ್ಣುಮುಚ್ಚಿ ನಿರಾಳರಾಗಿ, ನಿಧಾನವಾಗಿ ಉಸಿರಾಡುತ್ತಿದ್ದರು. ಸ್ತೋತ್ರ ಮುಗಿದೊಡನೆ ಆಚಾರ್ಯರು ಕೂಗಿದರು, “ಎಲ್ಲರೂ ಪಾಂಡುರಂಗನ ಭಜನೆ ಮಾಡ್ರಿ. ಜೈ ಜೈ ವಿಠ್ಠಲ, ಜೈ ಹರಿ ವಿಠ್ಠಲ, ಜೈ ಜೈ ವಿಠಲ, ಜೈ ಹರಿವಿಠ್ಠಲ”. ಎಲ್ಲರೂ ಒಕ್ಕೊರಲಿನಿಂದ ಜೋರಾಗಿ ಹೇಳಿದರು “ಜೈ ಜೈ ವಿಠ್ಠಲ, ಜೈ ಹರಿ ವಿಠ್ಠಲ”. ಈ ಧ್ವನಿ ಪ್ರತಿಧ್ವನಿಸುತ್ತಿದ್ದಂತೆ ಆಚಾರ್ಯರು ಬಾಗಿಲಕಡೆಗೆ ಮುಖಮಾಡಿ ದೀರ್ಘದಂಡ ನಮಸ್ಕಾರ ಮಾಡಿ, “ಪ್ರಭೋ, ಈ ಜೀವಾನ ನಿನ್ನ ಪಾದಕ್ಕೆ ಸೇರಿಸಿಕೊ” ಎಂದರು. ಅಜ್ಜಿಯ ಪ್ರಾಣ ಹೋಗಿತ್ತು! ಎಷ್ಟು ಹಗುರವಾದ ಬದುಕು! ಎಂಥ ಬಲವಾದ ನಂಬಿಕೆ, ಶ್ರದ್ಧೆ! ಅದು ಶ್ರದ್ಧೆಯ ಯುಗ!