ಸಿಎಂ ಬಹಿರಂಗ ಚರ್ಚೆಗೆ ಬರಲಿ
ಶಿರಸಿ: ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ಧರಾಮಯ್ಯನವರೆ ನನ್ನ ಮುಂದೆ ಬರಲಿ. ಲೈವ್ ಡಿಬೆಟ್ ಮಾಡೋಣ. ರಾಜ್ಯದ ಜನರೂ ನೋಡಲಿ ಎಂದು ಸಂಸದ ಅನಂತಕುಮಾರ ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಕೆಣಕಿದ್ದು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜನಾ..? ಶೇ.೨೦ ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸಿ ಮಾತನಾಡುತ್ತಾರೆ. ೮೦ ರಿಂದ ೮೫ ಶೇ. ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಪ್ರಶ್ನಿಸಿ ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಮಯ್ಯನವರು ತಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ, ಪಕ್ಷದ ಹೇಳಿಕೆ ಅಲ್ಲ, ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ. ಮೋದಿಯವರು ಹಾಗೂ ನಮ್ಮ ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು ಸಿದ್ದರಾಮಯ್ಯ. ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು. ನಮ್ಮ ಪ್ರಧಾನಿ ಮೋದಿ, ಅಮಿತ ಶಾ ಬಗ್ಗೆ ಯಾರೆಲ್ಲ ಏನೇನು ಮಾತನಾಡಿದ್ದಾರೆ ಹೇಳಬೇಕಾ ಎಂದ ಅನಂತಕುಮಾರ, ಮೋದಿಯವರನ್ನು ಕಪ್ಪೆ, ಮಂಗ, ನಪಸುಂಕ ಎಂದು ಸಲ್ಮಾನ ಖುರ್ಷಿದ ಕರೆದರು. ಶರದ್ ಪವಾರ ಹಾಗೂ ಕಾಂಗ್ರೆಸ್ ಬಹುತೇಕ ನಾಯಕರು ಮೋದಿಯರನ್ನ ಹಿಟ್ಲರ್ ಎಂದು ಕರೆದಿದ್ದಾರೆ. ಸಿಎಂ ಸಿದ್ಧರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಮಾಸ್ ಮರ್ಡರರ್ ಎಂದರು. ದಿಗ್ವಿಜಯ ಸಿಂಗ್ ಮೋದಿಯವರನ್ನು ರಾವಣ ಅಂತ ಕರೆದರು, ಜಯರಾಂ ರಮೇಶ ಭಸ್ಮಾಸುರ ಎಂದರು. ಮಣಿಶಂಕರ್ ಅಯ್ಯರ್ ವಿಷ ಸರ್ಪ ಅಂತ ಕರೆದರು, ಇನ್ನೂ ಏನ್ರಿ ಹೇಳಿಸಿಕೊಳ್ಳಬೇಕು ನಾವು ಎಂದು ಕಿಡಿಕಾರಿದರು.
ಕಾಂಗ್ರೆಸ್‌ನವರಿಗೆ, ಸಿದ್ದರಾಮಯ್ಯನವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಅನಂತಕುಮಾರ ಸ್ಪಷ್ಟಪಡಿಸಿದರು.