ಸಿದ್ದರಾಮಯ್ಯ ಕೆಳಗಿಳಿದ ಮೇಲೆ ಸರಕಾರ ಇರಲ್ಲ
ಯಾದಗಿರಿ: ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಲ್ಲಿವರೆಗೆ ಕಾಂಗ್ರೆಸ್ ಸರಕಾರ ಇರುತ್ತದೆ. ಅವರು ಕೆಳಗಿಳಿದ ಮೇಲೆ ಸರಕಾರಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾರ್ಮಿಕವಾಗಿ ನುಡಿದರು. 8 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಹಲವು ಮಂದಿ ಶಾಸಕರು ವಿಜಯೇಂದ್ರ ಸಂಪರ್ಕದಲ್ಲಿದ್ದಾರೆ ಎನ್ನುವುದು ಗೊತ್ತಾ, ಕೈ ನಾಯಕರು 8 ಮಂದಿ ಆಪರೇಷನ್ ಮಾಡಿದರೆ ಎನ್ಡಿಎಯವರು 20 ಶಾಸಕರನ್ನು ಆಪರೇಷನ್ ಮಾಡ್ತಾರೆ ಎಂದು ಅವರು ಎಸ್. ಟಿ ಸೋಮಶೇಖರ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕೆಲಸ ಕಾರ್ಯ ಆಗುತ್ತಿಲ್ಲ. ಹೀಗಾಗಿ ಅನೇಕ ಜನ ಕುಮಾರಸ್ವಾಮಿ, ವಿಜಯೇಂದ್ರ ಸಂಪರ್ಕದಲ್ಲಿರಬಹುದು. ಇನ್ನೂ ಶಿವರಾಮೇಗೌಡ ಕೃತಜ್ಞತೆ ಹೀನರಿದ್ದಾರೆಂದು ನನಗೆ ಅನಿಸುತ್ತಿದೆ. ಸೋತು ಸುಣ್ಣವಾದ ಶಿವರಾಮೇಗೌಡರಿಗೆ ದೇವೇಗೌಡರ ಕುಟುಂಬ ಸಂಸತ್ತಿಗೆ ಕಳಿಸಿದೆ, ಆ ಋಣ ನಿಮಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.