ಸಿದ್ದರಾಮಯ್ಯ ಹುಲಿ ಅಂತಾದ್ರೆ ಮತ್ಯಾಕೆ ಹೆದರುತ್ತಿದ್ದಾರೆ: ಸಚಿವ ಜೋಶಿ ಲೇವಡಿ
ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹುಲಿ ಇದ್ದಂಗೆ. ಬಿಜೆಪಿ ಅರೋಪ, ದೂರಿಗೆ ಹೆದರಲ್ಲ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹುಲಿಯಾದ್ರೆ ಮತ್ಯಾಕೆ ಹೆದರುತ್ತಿದ್ದಾರೆ? ರಾಜ್ಯಪಾಲರ ಬಗ್ಗೆ ಟೀಕೆ ಯಾಕೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಎದುರಿಸಲಿ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಇಳಿಸಿಲ್ಲಮ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ನಾಯಕರೇ ಇಳಿಸಿದ್ದಾರೆ. ಇತಿಹಾಸ ಪುಟಗಳಲ್ಲಿ ದಾಖಲೆ ಇವೆ. ಡಿ. ದೇವರಾಜ ಅರಸು ಅವರನ್ನು, ಬಂಗಾರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ಯಾರು? ಇಂತಹ ಅನೇಕ ಉದಾಹರಣೆಗಳು ಇವೆ. ಈ ಪ್ರಶ್ನೆ ಬಹಳ ಸಲ ಕಾಂಗ್ರೆಸ್ ನವರಿಗೂ ಕೇಳಿದ್ದೇನೆ. ಇವತ್ತಿಗೂ ಉತ್ತರ ಕೊಡಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಬಯಲು ಮಾಡಲು ದೂರು ದಾಖಲಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ನಾವು ಈ ಹೋರಾಟ ಕೈಗೆತ್ತಿಕೊಂಡ ಬಳಿಕ ಕೋವಿಡ್ ಸಂದರ್ಭದಲ್ಲಿ 2000 ಕೋಟಿ ಭ್ರಷ್ಟಾಚಾರ ಆಗಿದೆ. ಬಿಜೆಪಿ ಸರ್ಕಾರ ಕಾರಣ ಎಂದು ಆರೋಪಿಸಿದೆ. ತರಾತುರಿಯಲ್ಲಿ ವರದಿ ತರಿಸಿಕೊಂಡಿದೆ. ಇಂಥದ್ದಕ್ಕೆ ಬಿಜೆಪಿ ಹೆದರುವುದಿಲ್ಲ. ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಿಸಲಿ. ಆದರೆ, ಒಂದುವರೆ ವರ್ಷದಿಂದ ಸಿದ್ದರಾಮಯ್ಯ ಏನು ಮಾಡಿದರು? ಇಷ್ಟು ದಿವಸ ಸುಮ್ಮನೆ ಯಾಕೆ ಇದ್ದರು? ನಾವು ಮುಡಾ ಹಗರಣ ಬಯಲು ಮಾಡಿದ್ದಕ್ಕೆ ಇಂತಹ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.