For the best experience, open
https://m.samyuktakarnataka.in
on your mobile browser.

ಸಿದ್ಧಾರೂಢರ ಕೃಪೆಯ ಶಿವಪುತ್ರ ಸ್ವಾಮಿಗಳು…

03:00 AM Jun 10, 2024 IST | Samyukta Karnataka
ಸಿದ್ಧಾರೂಢರ ಕೃಪೆಯ ಶಿವಪುತ್ರ ಸ್ವಾಮಿಗಳು…

ಸಿದ್ಧಾರೂಢರ ಕೃಪೆಯಿಂದ ಸುಬ್ಬಯ್ಯ ಶಾಸ್ತ್ರಿಗಳು ಶಿವಪುತ್ರ ಸ್ವಾಮಿಗಳಾಗಿ ಜನಿಸಿದರು. ಸಿದ್ಧಾರೂಢರು ಜ್ಞಾನ ಸಿದ್ಧರಾಗಿ ಅವತರಿಸಿದರೂ ಗುರು ಶಿಷ್ಯ ಪರಂಪರೆಗೆ ಚ್ಯುತಿ ಬರಬಾರದೆಂದು ತಿಳಿದು ದೇವರಭೂಪುರದ ಗಜದಂಡ ಸ್ವಾಮಿಗಳನ್ನು ಗುರುಗಳನ್ನಾಗಿ ಸ್ವೀಕರಿಸಿದರು. ಅಲ್ಲಿ ಇದ್ದಾಗ ಸುರಪುರದ ಸುಬ್ಬಯ್ಯ ಶಾಸ್ತ್ರಿಗಳು ಮಠಕ್ಕೆ ಆಗಮಿಸಿ, ಪಂಡಿತನೆಂಬ ಅಹಂಕಾರದಿಂದ. ಸ್ವಾಮಿಗಳೇ ನಿಮ್ಮ ಶಿಷ್ಯರಿಗೆ ಏನು ಉಪದೇಶ ಮಾಡುತ್ತಿರುವಿರಿ ಎಂದು ಕೇಳುತ್ತಾರೆ.
ಅದಕ್ಕೆ ಸ್ವಾಮಿಗಳು ಉಪನಿಷತ್ತುಗಳನ್ನು ಹೇಳುತ್ತಿದ್ದೇನೆ ಎಂದರು. ಆಗ ಶಾಸ್ತ್ರಿಗಳು ಉಪನಿಷತ್ ಹೇಳುವ ಕೇಳುವ ಅಧಿಕಾರ ಬ್ರಾಹ್ಮಣರಲ್ಲದವರಿಗೆ ಇರುವುದಿಲ್ಲ. ಅದು ಹೇಗೆ ನೀವು ಹೇಳುತ್ತಿರುವಿರಿ, ಎಂದು ಅನೇಕ ಪ್ರಶ್ನೆಗಳನ್ನು ಕೇಳಹತ್ತಿದರು.. ಇದನ್ನು ಕಂಡು ಬಾಲಸಿದ್ಧಾರೂಡರು ಗುರುಗಳ ಅಪ್ಪಣೆ ಪಡೆದುಕೊಂಡು, ಶಾಸ್ತ್ರಿಗಳೇ ಭೇದರಹಿತವಾದ ಅಭೇದ ದರ್ಶನ ರೂಪ ಪರಬ್ರಹ್ಮ ಸ್ವರೂಪದ ಜ್ಞಾನವನ್ನು ಉಂಟು ಮಾಡಿ ತನ್ನ ಸ್ವರೂಪದಲ್ಲಿ ನೆಲೆ ನಿಲ್ಲುವಂತೆ ಮಾಡುವ ವಿದ್ಯೆಯೇ ಉಪನಿಷತ್ ವಿದ್ಯೆ.
ಬ್ರಹ್ಮ ವಿದ್ಯೆಗೆ ಬ್ರಾಹ್ಮಣರೇ ಅಧಿಕಾರಿಗಳೆಂದು ಹೇಳುತ್ತಿರಿ. ಹಾಗಾದರೆ ಅನ್ಯ ಜಾತಿಗಳಲ್ಲಿ ಅಧಿಕಾರಿಗಳು ಇಲ್ಲವೇ ವಜ್ರಸೂಚಿ ಉಪನಿಷತ್ತು ಬ್ರಾಹ್ಮಣರು ಯಾರು ಎಂಬುದನ್ನು ಸಾರಿ ಸಾರಿ ಹೇಳಿರುತ್ತದೆ. ಅದನ್ನು ನೀನು ನೋಡಿರುವೆಯಾ, ಒಂದು ವೇಳೆ ಶರೀರವು ಬ್ರಾಹ್ಮಣ ಎಂದು ನೀನು ಹೇಳಿದರೆ, ಈ ಶರೀರವು ಪಾತವಾದ ನಂತರ ಈ ಶರೀರಕ್ಕೆ ಆತನ ಮಗನು ಬೆಂಕಿಯ ಸ್ಪರ್ಶ ಮಾಡುವನು. ಈ ರೀತಿ ಮಾಡುವುದರಿಂದ ಅವನಿಗೆ ಬ್ರಹ್ಮ ಹತ್ಯೆ ದೋಷ ಬರಬೇಕಾಗಿತ್ತು.
ಕಾರಣ ಶರೀರವು ಬ್ರಾಹ್ಮಣವಲ್ಲ. ಜೀವತ್ವ ಬ್ರಾಹ್ಮಣ ಎಂದರೆ ಅನೇಕ ಕ್ರಿಮಿ ಕೀಟಗಳಲ್ಲಿರುವ ಜೀವ ಬ್ರಾಹ್ಮಣ ಅಂತಾಗುವುದು, ಆದುದರಿಂದ ಜೀವವು ಬ್ರಾಹ್ಮಣವಲ್ಲ. ಇನ್ನು ಜಾತಿ ಬ್ರಾಹ್ಮಣ ಎಂದರೆ ಬೇರೆ ಬೇರೆ ಅನ್ಯ ಜಾತಿಗಳಲ್ಲಿ ಜನಿಸಿರುವ ವೇದವ್ಯಾಸ, ಶೃಂಗ ಋಷಿ ಅಗಸ್ತ್ಯ ಮಹಾಮುನಿ, ವಿಶ್ವಾಮಿತ್ರ, ಗೌತಮ, ವಶಿಷ್ಠ ಇವರೆಲ್ಲರೂ ಬ್ರಹ್ಮ ಜ್ಞಾನಿಗಳಾಗಿ ಜಗತ್ ಪೂಜ್ಯರಾಗಿರುತ್ತಾರೆ.
ಜ್ಞಾನ ಬ್ರಾಹ್ಮಣನೆಂದರೆ ಎಲ್ಲಾ ಪ್ರಾಣಿಗಳಲ್ಲಿಯೂ ಜ್ಞಾನವಿರುತ್ತದೆ ಇವೆಲ್ಲಾ ಬ್ರಾಹ್ಮಣರೇ, ಇನ್ನು ಕರ್ಮ ಬ್ರಾಹ್ಮಣವೆಂದರೆ ಅದು ಅನೇಕ ಪ್ರಕಾರ ಇರುತ್ತದೆ. ತನ್ನ ಸ್ವಸ್ವರೂಪವಾದ ಪರಬ್ರಹ್ಮ ವಸ್ತುವನ್ನು ಅರಿತವನೇ ನಿಜವಾದ ಬ್ರಾಹ್ಮಣವೆಂದು ಅರಿಯಬೇಕು ಎಂದು ಸಿದ್ಧಾರೂಢರು ಸುಬ್ಬಯ್ಯ ಶಾಸ್ತ್ರಿಗಳಿಗೆ ಉಪನಿಷತ್ ಎಂದರೆ ಏನು ಹಾಗೂ ಬ್ರಾಹ್ಮಣ ಎಂದರೆ ಯಾರು ಎಂಬುದನ್ನು ಶೃತಿ ಯುಕ್ತಿ ಸ್ವಾನುಭವಗಳಿಂದ ಬೋಧಿಸುತ್ತಾರೆ. ಇದನ್ನು ಕೇಳಿದ ಸುಬ್ಬಯ್ಯ ಶಾಸ್ತ್ರಿಗಳು ಈತನು ಸಾಮಾನ್ಯ ಬಾಲಕನಲ್ಲ. ಈತನು ಸಾಕ್ಷಾತ್ ಪರಶಿವನೇ ಇರುತ್ತಾನೆ. ಎಂದು ಕೊಂಡಾಡಿ ಸಿದ್ಧಾರೂಢರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅಲ್ಲಿಂದ ಹೋಗುತ್ತಾರೆ.
ನಂತರ ಸಿದ್ಧಾರೂಢರು ಎಲ್ಲ ಕಡೆಗೆ ಸಂಚರಿಸಿ ಹುಬ್ಬಳ್ಳಿಗೆ ಬಂದು ನೆಲೆನಿಂತಾಗ ಮುಪ್ಪಾವಸ್ಥೆಯಲ್ಲಿ ಇರುವ ಸುಬ್ಬಯ್ಯಶಾಸ್ತ್ರೀ ಸಿದ್ದಾರೂಢರ ಕೀರ್ತಿವಾರ್ತೆ ಕೇಳಿ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರ ದರ್ಶನ ಆಶೀರ್ವಾದವನ್ನು ಪಡೆದು ನನಗೆ ಈಗ ಬಹಳ ವಯಸ್ಸಾಗಿದೆ. ಮುಂದಿನ ಜನ್ಮದಲ್ಲಿ ನಿಮ್ಮ ಶಿಷ್ಯನಾಗಿ ನಿಮ್ಮ ಸೇವೆಯನ್ನು ಮಾಡುವ ಅವಕಾಶವನ್ನು ಕರುಣಿಸಬೇಕೆಂದು ಪ್ರಾರ್ಥಿಸುತ್ತಾರೆ.
ಸಿದ್ಧಾರೂಢರು ನಿನ್ನ ಇಷ್ಟದಂತೆಯೇ ಆಗಲಿ ಎಂದು ಆಶೀರ್ವದಿಸುತ್ತಾರೆ. ನಂತರ ಅದೇ ಸುಬ್ಬಯ್ಯ ಶಾಸ್ತ್ರಿಯು ಗರಗ ಗ್ರಾಮದ ಶಿವಬಸಪ್ಪ ಹಾಗೂ ಶಿವಲಿಂಗಮ್ಮ ಎಂಬ ಪುಣ್ಯದಂಪತಿಗಳ ಉದರದಿಂದ ಶಿವಪುತ್ರನಾಗಿ ಜನ್ಮತಾಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಸಿದ್ಧಾರೂಢರ ಸನ್ನಿಧಿಗೆ ಆಗಮಿಸಿ ಸದ್ಭಾವ ಸೇವಾದಿಗಳನ್ನು ಮಾಡುತ್ತಾರೆ. ಕನ್ನಡದ ಉಪನಿಷತ್ತುಗಳು ಎಂದು ಪ್ರಖ್ಯಾತಿ ಪಡೆದಿರುವ ನಿಜಗುಣರ ಸಮಸ್ತ ಗ್ರಂಥಗಳನ್ನು ಹಾಗೂ ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿರುವ ಸಮಸ್ತ ಅದ್ವೈತ ವೇದಾಂತ ಗ್ರಂಥಗಳನ್ನೆಲ್ಲ ಅಧ್ಯಯನ ಮಾಡುತ್ತಾರೆ. ನಿಜಗುಣ ಶಿವಯೋಗಿಗಳ ಸಮಸ್ತ ಅದ್ವೈತ ವೇದಾಂತ ಗ್ರಂಥಗಳಿಗೆ ಟೀಕಾ ತಾತ್ಪರ್ಯ ಬರೆದರು.

ಶಾಮಾನಂದ ಬಾಳಪ್ಪ ಪೂಜೇರಿ