For the best experience, open
https://m.samyuktakarnataka.in
on your mobile browser.

ಸುಖ ದುಃಖಗಳೆರಡೂ ಸಹಜ

03:10 AM Dec 07, 2023 IST | Samyukta Karnataka
ಸುಖ ದುಃಖಗಳೆರಡೂ ಸಹಜ

ದುಃಖಕ್ಕೆ ಸಾವಿರ ಕಾರಣಗಳಿರುವಂತೆ, ಸಂತೋಷಕ್ಕೂ ಕೂಡ ಸಾವಿರ ಕಾರಣಗಳಿರುತ್ತವೆ. ಇವೆರಡೂ ಕೂಡ ಮೂರ್ಖರನ್ನಷ್ಟೇ ಆವರಿಸುತ್ತವೆ. ನಿಜವಾದ ವಿವೇಕಿಯ ಹತ್ತಿರವೇ ಸುಳಿಯುವುದಿಲ್ಲ.
ಸುಖ-ದುಃಖಗಳೆರಡೂ ಕೂಡ ಆಗಮೋಪಾಯಿನೋ ನಿತ್ಯಾಃ ಎಂದು ಹೇಳುವಂತೆ ಸಹಜವಾಗಿ ಬಂದು ಹೋಗುವ ಪ್ರಕ್ರಿಯೆಗಳು. ಎರಡೂ ಕೂಡ ಅನಿತ್ಯವೇ ಆಗಿವೆ. ಅನಿತ್ಯವಾದ ಸುಖ-ದುಃಖಗಳನ್ನು ಅನುಭವಿಸಿ ಯಾರು ಕುಗ್ಗುವಿಕೆ-ಹಿಗ್ಗುವಿಕೆಯನ್ನು ಹೊಂದುತ್ತಾನೋ, ಅವನು ಮೂರ್ಖನೇ ಆಗಿದ್ದಾನೆ.
ನಿಜವಾದ ವಿವೇಕಿಯಾದ ವಿದ್ವಾಂಸನು ಸುಖ-ದುಃಖಗಳೆರಡರ ವಿಷಯದಲ್ಲಿ ಸಮತ್ವ ಬುದ್ಧಿಯನ್ನು ಹೊಂದಿರುತ್ತಾನೆ. ಸುಖದಿಂದ ಹಿಗ್ಗುವುದಿಲ್ಲ. ದುಃಖದಿಂದ ಕುಗ್ಗುವುದಿಲ್ಲ. ಆದ್ದರಿಂದ ಅವನ ಮನಸ್ಸಿನ ಮೇಲೆ ಈ ಸುಖ-ದುಃಖಗಳು ಉಂಟು ಮಾಡುವುದಿಲ್ಲ. ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ.
ಆಸೆಯನ್ನು ಬಿಡಿರಿ: ಕಾಲಕ್ಕೆ ಅನುಗುಣವಾಗಿ ಈ ಸುಖ-ದುಃಖಗಳೆರಡೂ ಅಪ್ರಿಯ ಹಾಗೂ ಪ್ರಿಯಗಳಾಗುತ್ತವೆ. ಜೀವರಲ್ಲಿ ಪ್ರತ್ಯೇಕವಾದ ಪರಿವರ್ತನೆಯನ್ನು ಹೊಂದಿಸುತ್ತಾ, ಸುಖ-ದುಃಖಗಳೆರಡನ್ನೂ ಹೆಚ್ಚಿಸುತ್ತಾ ಚಕ್ರದಂತೆ ಸುತ್ತಿ, ಸುತ್ತಿ ಬರುತ್ತಲೇ ಇರುತ್ತವೆ.
ವಾಸ್ತವಿಕವಾಗಿ ಲೋಕದಲ್ಲಿ ಸುಖವೇ ಇರುವುದಿಲ್ಲ. ದುಃಖವಷ್ಟೇ ಇರುತ್ತದೆ. ಪ್ರಪಂಚದಲ್ಲಿ ದುಃಖವೇ ಬಹಳವಿದೆ. ಸುಖವೇ ಇಲ್ಲದಾಗಿದೆ. ಹೆಜ್ಜೆಹೆಜ್ಜೆಗೂ ದುಃಖವೇ ಒದಗುತ್ತವೆ. ಏಕೆಂದರೆ ಪ್ರತಿಯೊಬ್ಬರಿಗೂ ಅತ್ಯಾಸೆಗಳು. ಇದರಿಂದ ಪೀಡಿತರಾಗಿ ದುಃಖವನ್ನೇ ಹೊಂದುತ್ತಾರೆ. ದುಃಖವೆಂಬ ಪೀಡೆಗೆ ವಿನಾಶವೇ ಸುಖ. ಎಲ್ಲ ಆಸೆಗಳನ್ನು ಪರಿತ್ಯಾಗ ಮಾಡಬೇಕು. ಆಗಷ್ಟೇ ಸುಖವು ದೊರಕುತ್ತದೆ.
ಆಸೆಗೆ ಮಿತಿಯೇ ಇಲ್ಲ. ಪ್ರತಿಯೊಬ್ಬರೂ ಆಸೆಯಿಂದ ಪೀಡಿತರಾಗಿ ಮನಸ್ಸಿಗೆ ಬಹಳ ದುಃಖವನ್ನು ಅನುಭವಿಸುತ್ತಾರೆ. ಎಷ್ಟೇ ಐಶ್ವರ್ಯವಿದ್ದರೂ ಭೋಗವಿದ್ದರೂ, ತೃಷ್ಣೆಯಿಂದ ಪೀಡಿತನಾದ ವ್ಯಕ್ತಿಯು ದುಃಖಿಯಾಗಿರುತ್ತಾನೆ. ಆದ್ದರಿಂದ ಈ ಲೋಕದಲ್ಲಿ ಸುಖವೇ ಕಾಣಿಸುತ್ತಿಲ್ಲ. ಸುಖಬಂದಾಗಲೂ ಮತ್ತಷ್ಟು ಸುಖದ ಅಪೇಕ್ಷೆಯನ್ನು ಪಟ್ಟು ಬಂದಿರುವ ಸುಖವನ್ನು ಅನುಭವಿಸಲು ಇವನಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಭಾಗವತದಲ್ಲಿ ನೈರಾಶ್ಯಂ ಪರಮಂ ಸುಖಂ ಎಂಬುದಾಗಿ ಯಯಾತಿಯು ಹೇಳುತ್ತಾನೆ. ಆಸೆಯನ್ನು ಪರಿತ್ಯಾಗ ಮಾಡುವುದೇ ನಿಜವಾದ ಸುಖ.