ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸುನೀತಾ ಆರೋಗ್ಯ ಕಸಿದ ಬಾಹ್ಯಾಕಾಶ ವಾಸ?

03:30 AM Nov 16, 2024 IST | Samyukta Karnataka

೫೯ ವರ್ಷ ವಯಸ್ಸಿನ ಭಾರತೀಯ ಸಂಜಾತ ಬಾಹ್ಯಾಕಾಶ ಯಾತ್ರಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ತನ್ನ ೧೫೫ ದಿನಗಳ ವಾಸ್ತವ್ಯದ ಪರಿಣಾಮವಾಗಿ ದೇಹದ ತೂಕದಲ್ಲಿ ಗಣನೀಯ ಇಳಿಕೆ ಕಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಳ್ಳಲಾದ ಅವರ ಚಿತ್ರಗಳಲ್ಲಿ ಸುನೀತಾ ವಿಲಿಯಮ್ಸ್ ಬಹಳ ತೆಳ್ಳಗಾಗಿರುವಂತೆ ಕಂಡಿದ್ದು, ಅವರ ಕೆನ್ನೆಯೂ ಇಳಿದುಹೋದಂತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಾಹ್ಯಾಕಾಶದಲ್ಲಿ ಸುದೀರ್ಘ ವಾಸ್ತವ್ಯ ಅವರ ದೇಹದ ಮೇಲೆ ಬೀರಿರುವ ಪರಿಣಾಮಗಳನ್ನು ಇದು ಪ್ರದರ್ಶಿಸಿದೆ.
ನಾಸಾದ ಆರೋಗ್ಯ ನಿರ್ವಹಣಾ ತಂಡಕ್ಕೆ ಸುನೀತಾ ವಿಲಿಯಮ್ಸ್ ಅವರ ದೇಹ ಸ್ಥಿತಿ ಪ್ರಮುಖ ಕಾಳಜಿಯ ವಿಚಾರವಾಗಿದ್ದು, ಅವರು ತೂಕ ಕಳೆದುಕೊಂಡಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವರ ಒಟ್ಟಾರೆ ಆರೋಗ್ಯ ಸುಧಾರಣೆಗಾಗಿ ಪ್ರಯತ್ನ ನಡೆಸುತ್ತಿದೆ. ಅವರು ಜೂನ್ ತಿಂಗಳಲ್ಲಿ ಬಾಹ್ಯಾಕಾಶ ಯಾತ್ರೆಗೆ ತೆರಳಿದ ಸಂದರ್ಭದಲ್ಲಿ, ೬೩ ಕೆಜಿ ತೂಕ ಹೊಂದಿದ್ದರು. ಆದರೆ, ಬಾಹ್ಯಾಕಾಶದಲ್ಲಿ ಹಲವಾರು ತಿಂಗಳುಗಳನ್ನು ಕಳೆದಿರುವುದರಿಂದ, ಅವರು ಬಹಳಷ್ಟು ತೂಕ ಕಳೆದುಕೊಂಡಿದ್ದಾರೆ.
ತೂಕ ಕಳೆದುಕೊಳ್ಳುವುದಕ್ಕೆ ಕಾರಣಗಳು
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ದೇಹದ ತೂಕವನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಅಂದಾಜು ೩,೫೦೦-೪,೦೦೦ ಕ್ಯಾಲರಿಗಳಷ್ಟು ಆಹಾರ ಸೇವಿಸಬೇಕಾಗುತ್ತದೆ. ಏಕೆಂದರೆ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಚಟುವಟಿಕೆಗಳನ್ನು ನಡೆಸುವುದರಿಂದ ದೇಹ ಭೂಮಿಯಲ್ಲಿರುವುದಕ್ಕಿಂತ ಹೆಚ್ಚು ಕ್ಯಾಲರಿಯನ್ನು ದಹಿಸುತ್ತದೆ. ಆದರೆ, ಸುನೀತಾ ವಿಲಿಯಮ್ಸ್ ಅವರಿಗೆ ದೇಹದ ತೂಕ ಕಾಪಾಡಿಕೊಳ್ಳಲು ಅವಶ್ಯಕವಾದಷ್ಟು ಆಹಾರ ಸೇವಿಸುವುದು ಕಷ್ಟಕರವಾಗಿತ್ತು ಎನ್ನಲಾಗಿದೆ. ಇದರ ಪರಿಣಾಮವಾಗಿ, ಅವರ ತೂಕ ಕಡಿಮೆಯಾಗತೊಡಗಿತು.
ದೇಹಕ್ಕೆ ಕ್ಯಾಲರಿಯ ಕೊರತೆಯ ಜೊತೆಗೆ, ಮೂಳೆ ಮತ್ತು ಸ್ನಾಯುಗಳ ಶಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ವ್ಯಾಯಾಮ ನಡೆಸಬೇಕಾಗುತ್ತದೆ. ಇದೂ ಅವರ ಆರೋಗ್ಯದ ಮೇಲೆ ಹೆಚ್ಚಿನ ಒತ್ತಡ ಹೇರಿದೆ. ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯುಗಳು ಮತ್ತು ಮೂಳೆಗಳು ಸವೆಯುವುದನ್ನು ತಡೆಯಲು ಈ ವ್ಯಾಯಾಮಗಳು ಅನಿವಾರ್ಯವಾಗಿದೆ. ಆದರೆ ಇದು ಕ್ಯಾಲರಿಯನ್ನು ಕ್ಷಿಪ್ರವಾಗಿ ದಹಿಸುತ್ತದೆ. ಅದರೊಡನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೀಮಿತ ಆಹಾರದ ಆಯ್ಕೆಗಳಿರುವುದರಿಂದ, ಅವಶ್ಯಕ ಕ್ಯಾಲರಿಯನ್ನು ಸಂಪಾದಿಸುವುದು ಸವಾಲಾಗುತ್ತದೆ.
ಆದರೆ ಮಹಿಳಾ ಗಗನಯಾತ್ರಿಗಳಿಗೆ ಈ ಸವಾಲು ಇನ್ನೂ ಕಠಿಣವಾಗಿರುತ್ತದೆ. ಸಂಶೋಧನೆಗಳ ಪ್ರಕಾರ, ಮಹಿಳೆಯರ ದೇಹಶಕ್ತಿಯನ್ನು ಸಂಸ್ಕರಿಸುವ ವಿಧಾನ ಪುರುಷರಿಗಿಂತ ಭಿನ್ನವಾಗಿರುವುದರಿಂದ ಅವರು ಸ್ನಾಯು ತೂಕವನ್ನು ಬೇಗ ಕಳೆದುಕೊಳ್ಳುತ್ತಾರೆ. ೨೦೨೩ರ ನಾಸಾದ ಅಧ್ಯಯನವೊಂದು ಬಾಹ್ಯಾಕಾಶ ನಿರ್ದಿಷ್ಟವಾಗಿ ಮಹಿಳೆಯರ ಮೇಲೆ ಉಂಟುಮಾಡುವ ಪರಿಣಾಮಗಳನ್ನು ತೋರಿಸಿದೆ.
ಗುರುತ್ವಾಕರ್ಷಣೆ ದುರ್ಬಲ
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಭೂಮಿಗೆ ಹೋಲಿಸಿದರೆ ಬಹಳ ದುರ್ಬಲವಾಗಿರುತ್ತದೆ. ಇದರ ಪರಿಣಾಮವಾಗಿ, ಬಹಳಷ್ಟು ಜನರಲ್ಲಿ ಬಾಹ್ಯಾಕಾಶ ಅಸ್ವಸ್ಥತೆ' ಕಾಣಿಸಿಕೊಳ್ಳುತ್ತದೆ. ತಲೆನೋವು, ತಲೆಸುತ್ತು ಮತ್ತು ವಾಂತಿ ಇದರ ಲಕ್ಷಣಗಳಾಗಿವೆ. ಭೂಮಿಯಲ್ಲಿ ಮಾನವ ದೇಹದ ಮೇಲೆ ಗುರುತ್ವಾಕರ್ಷಣೆಯ ಪರಿಣಾಮ ಹೆಚ್ಚಾಗಿರುತ್ತದೆ. ಮಾನವರ ಕಿವಿಯ ಒಳಭಾಗದಲ್ಲಿರುವವೆಸ್ಟಿಬುಲಾರ್ ಆರ್ಗನ್' ಎಂಬ ಅಂಗ ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಈ ವೆಸ್ಟಿಬುಲಾರ್ ಅಂಗಗಳು ಗುರುತ್ವಾಕರ್ಷಣೆ ಮತ್ತು ವೇಗದಲ್ಲಿನ ಬದಲಾವಣೆಯ ಮಾಹಿತಿಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವರ್ತಿಸಿ, ಮೆದುಳಿಗೆ ಕಳುಹಿಸುತ್ತವೆ. ಭೂಮಿಯಲ್ಲಿರುವಾಗ, ಮೆದುಳಿಗೆ ವೆಸ್ಟಿಬುಲಾರ್ ಅಂಗಗಳಿಂದ ಮಾಹಿತಿ ನಿರಂತರವಾಗಿ ಲಭಿಸಿ, ದೇಹದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣಾ ಸನ್ನಿವೇಶದಲ್ಲಿ, ವೆಸ್ಟಿಬುಲಾರ್ ಅಂಗಗಳ ಸಂಕೇತಗಳು ಭೂಮಿಯಲ್ಲಿರುವುದಕ್ಕಿಂತ ಭಿನ್ನವಾಗಿರುತ್ತವೆ. ಈ ಬದಲಾವಣೆಗಳು ಮೆದುಳಿಗೆ ಗೊಂದಲ ಉಂಟುಮಾಡಿ, ಗಗನಯಾತ್ರಿಗಳು ಅಸ್ವಸ್ಥತೆ ಹೊಂದುವಂತೆ ಮಾಡುತ್ತದೆ. ಆದರೆ ಈ ಬಾಹ್ಯಾಕಾಶ ಅಸ್ವಸ್ಥತೆ ಶಾಶ್ವತವಾದುದಲ್ಲ. ಬಾಹ್ಯಾಕಾಶದಲ್ಲಿ ಕೆಲವು ದಿನಗಳನ್ನು ಕಳೆದ ಬಳಿಕ ಮೆದುಳು ವೆಸ್ಟಿಬುಲಾರ್ ಅಂಗಗಳಿಂದ ಬರುವ ಹೊಸ ಸಂಕೇತಗಳಿಗೆ ಹೊಂದಿಕೊಳ್ಳಲಾರಂಭಿಸುತ್ತದೆ. ಇಂತಹ ಹೊಂದಾಣಿಕೆಗಳಿಂದಾಗಿ ಮೆದುಳಿಗೆ ವೆಸ್ಟಿಬುಲಾರ್ ಅಂಗಗಳ ಹೊಸ ಸಂಕೇತಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ, ಬಾಹ್ಯಾಕಾಶ ಅಸ್ವಸ್ಥತೆ ಕ್ರಮೇಣ ದೂರವಾಗುತ್ತದೆ.
ಭೂಮಿಯಲ್ಲಿ ಗುರುತ್ವಾಕರ್ಷಣೆ ರಕ್ತ ಮತ್ತು ದೇಹದ ಇತರ ದ್ರವಗಳನ್ನು ದೇಹದ ಕೆಳಭಾಗಕ್ಕೆ ಹರಿಯುವಂತೆ ಮಾಡುತ್ತದೆ. ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣೆಯಿಂದಾಗಿ, ಈ ದ್ರವಗಳು ದೇಹದ ಮೇಲ್ಭಾಗದಲ್ಲೇ ಶೇಖರವಾಗುತ್ತವೆ. ಗಗನಯಾತ್ರಿಗಳ ತಲೆಯ ಭಾಗದಲ್ಲಿ ದ್ರವಗಳ ಸಂಗ್ರಹದಿಂದಾಗಿ, ಗಗನಯಾತ್ರಿಗಳ ಮುಖ ಊದಿಕೊಂಡಂತೆ ಕಾಣಿಸುತ್ತದೆ. ಬಾಹ್ಯಾಕಾಶದಲ್ಲಿ ಕೆಲವು ಸಮಯ ಕಳೆದ ಬಳಿಕ, ದೇಹದ ದ್ರವಗಳು ಕ್ರಮೇಣ ಹೊಂದಿಕೊಂಡು, ಕೆಲವು ವಾರಗಳ ಬಳಿಕ ಮುಖದ ಊತ ಕಡಿಮೆಯಾಗತೊಡಗುತ್ತದೆ.
ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ
ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆದಂತೆ, ಮೂಳೆಗಳು ಮತ್ತು ಸ್ನಾಯುಗಳು, ಅದರಲ್ಲೂ ಕಾಲುಗಳು ಮತ್ತು ಬೆನ್ನಿನ ಕೆಳಭಾಗ ದುರ್ಬಲವಾಗತೊಡಗುತ್ತವೆ. ಬಾಹ್ಯಾಕಾಶದಲ್ಲಿ ಭೂಮಿಯಲ್ಲಿರುವಂತೆ ಗುರುತ್ವಾಕರ್ಷಣೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಭೂಮಿಯಲ್ಲಿ ಕೇವಲ ನಿಲ್ಲುವುದು ಮತ್ತು ನಡೆಯುವುದೇ ಮೂಳೆಗಳು ಮತ್ತು ಸ್ನಾಯುಗಳಿಗೆ ದೇಹಕ್ಕೆ ಬೆಂಬಲ ನೀಡುವ ಕೆಲಸ ಮಾಡುವಂತೆ ಮಾಡುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ, ದೇಹ ಅಷ್ಟೊಂದು ಕಷ್ಟಪಟ್ಟು ಕೆಲಸ ಮಾಡಬೇಕಾಗುವುದಿಲ್ಲ. ಆದ್ದರಿಂದ, ಕಾಲ ಕಳೆದಂತೆ ಸ್ನಾಯುಗಳು ಮತ್ತು ಮೂಳೆಗಳು ಶಕ್ತಿ ಕಳೆದುಕೊಳ್ಳತೊಡಗುತ್ತವೆ.
ಬಾಹ್ಯಾಕಾಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣಗಳಿದ್ದು, ಇವು ಮಾನವ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಭೂಮಿಯ ಸುತ್ತಲೂ ಒಂದು ವಾತಾವರಣದ ಹೊದಿಕೆ ಇದೆ. ಇದು ನಮಗೆ ಉಸಿರಾಡಲು ಅವಶ್ಯಕವಾದ ಆಮ್ಲಜನಕವನ್ನು ಒದಗಿಸುವುದು ಮಾತ್ರವಲ್ಲದೆ, ಜೀವಿಗಳನ್ನು ಅಪಾಯಕಾರಿ ನೇರಳಾತೀತ ಕಿರಣಗಳು ಮತ್ತು ವಿಕಿರಣಗಳಿಂದ ರಕ್ಷಿಸುತ್ತದೆ. ಆದರೆ ಬಾಹ್ಯಾಕಾಶದಲ್ಲಿ ವಾತಾವರಣ ಅತ್ಯಂತ ಕನಿಷ್ಠವಾಗಿದ್ದು, ಗಗನಯಾತ್ರಿಗಳು ಭೂಮಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ವಿಕಿರಣಕ್ಕೆ ತೆರೆಯಲ್ಪಡುತ್ತಾರೆ. ಭೂಮಿಯ ಮೇಲೆ ಆರು ತಿಂಗಳ ಅವಧಿಯಲ್ಲಿ ಎದುರಾಗುವ ವಿಕಿರಣ, ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಒಂದು ದಿನದ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಹೆಚ್ಚಿನ ಪ್ರಮಾಣದ ವಿಕಿರಣಗಳಿಗೆ ತೆರೆಯಲ್ಪಡುವುದು, ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.
ಹಿಂದಿನ ಬಾಹ್ಯಾಕಾಶ ನೌಕೆಗಳಿಗೆ ಹೋಲಿಸಿದರೆ, ಐಎಸ್‌ಎಸ್ ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಗೆ ಹೋಲಿಸಿದರೆ ಅದರಲ್ಲಿನ ಜಾಗ ಸೀಮಿತವಾಗಿರುತ್ತದೆ. ಇಂತಹ ಸಂಕುಚಿತ ಸ್ಥಳದಲ್ಲಿ ಇತರ ಗಗನಯಾತ್ರಿಗಳ ಜೊತೆ ಸುದೀರ್ಘ ಕಾಲ ಕಳೆಯುವುದು ಸಹ ಒತ್ತಡ ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಜೊತೆಯಾಗಿ ಕೆಲಸ-ಜೀವನ ನಡೆಸುವುದರಿಂದ, ಗಗನಯಾತ್ರಿಗಳ ಗಮನಕ್ಕೆ ಬರುವ ಮುನ್ನವೇ ಈ ಒತ್ತಡ ಅವರನ್ನು ಆವರಿಸಿರುತ್ತದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾತ್ರಿಗಳು ಅಮೆರಿಕ, ರಷ್ಯಾ, ಕೆನಡಾ, ಯುರೋಪ್ ಮತ್ತು ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿರುತ್ತಾರೆ. ಅವರ ನಡುವಿನ ಭಾಷೆ ಮತ್ತು ಸಂಸ್ಕೃತಿಯ ವ್ಯತ್ಯಾಸದ ಪರಿಣಾಮವಾಗಿಯೂ ಅವರ ಮೇಲೆ ಒತ್ತಡ ಕಾಣಿಸಿಕೊಳ್ಳಬಹುದು. ಗಗನಯಾತ್ರಿಗಳ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ, ಅವರಿಗೆ ಬಾಹ್ಯಾಕಾಶದಲ್ಲಿರುವಾಗ ಕುಟುಂಬಸ್ಥರೊಡನೆ, ಸ್ನೇಹಿತರೊಡನೆ ಮಾತನಾಡಲು ಅನುಕೂಲ ಕಲ್ಪಿಸಲಾಗಿದೆ. ಅದಲ್ಲದೆ, ಬಾಹ್ಯಾಕಾಶದ ಆಹಾರದ ಗುಣಮಟ್ಟವನ್ನೂ ಸಾಕಷ್ಟು ಉತ್ತಮಪಡಿಸಲಾಗಿದೆ.
ವೈದ್ಯಕೀಯ ನಿರ್ವಹಣೆ
ಐಎಸ್‌ಎಸ್‌ನಲ್ಲಿ, ವೈದ್ಯಕೀಯ ಉಪಚಾರದ ಜವಾಬ್ದಾರಿ ಹೊಂದಿರುವ ಗಗನಯಾತ್ರಿ ಅವಶ್ಯಕತೆ ಇರುವವರಿಗೆ ಚಿಕಿತ್ಸೆ ನೀಡುತ್ತಾರೆ. ವೈದ್ಯಕೀಯ ತುರ್ತನ್ನು ನಿಭಾಯಿಸುವ ಜವಾಬ್ದಾರಿ ಹೊಂದಿರುವ ಗಗನಯಾತ್ರಿಯನ್ನು ಕ್ರೂಯ ಮೆಡಿಕಲ್ ಆಫೀಸರ್ ಎಂದು ಕರೆಯಲಾಗುತ್ತದೆ. ಈ ಗಗನಯಾತ್ರಿ ಬಾಹ್ಯಾಕಾಶದಲ್ಲಿ ಯಾರಾದರೂ ಯಾರಾದರೂ ಅಸ್ವಸ್ಥರಾದರೆ, ಗಾಯಗೊಂಡರೆ ಅವಶ್ಯಕ ಉಪಚಾರ, ಗಾಯಕ್ಕೆ ಹೊಲಿಗೆ ಮಾಡಿ, ಚುಚ್ಚುಮದ್ದು ನೀಡುತ್ತಾರೆ.
ವೈದ್ಯಕೀಯದ ಗುರಿಗಳು
ಮಾನವರು ಬಾಹ್ಯಾಕಾಶದಲ್ಲೂ ಸುರಕ್ಷಿತವಾಗಿ ಜೀವಿಸುವುದನ್ನು ಖಾತ್ರಿಪಡಿಸಲು ಬಹಳಷ್ಟು ವೈದ್ಯಕೀಯ ವಿಚಾರಗಳನ್ನು ಸರಿಪಡಿಸಬೇಕಾಗುತ್ತದೆ. ಬಾಹ್ಯಾಕಾಶ ವೈದ್ಯಕೀಯ ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳನ್ನು ಅರ್ಥಮಾಡಿಕೊಂಡು, ಬಳಿಕ ಅವುಗಳನ್ನು ತಡೆಗಟ್ಟಲು ಅಥವಾ ಕಡಿಮೆಗೊಳಿಸಲು ನೆರವಾಗುತ್ತದೆ. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದರಿಂದ ಸಂಪಾದಿಸುವ ತಂತ್ರಜ್ಞಾನ ಮತ್ತು ಮಾಹಿತಿಗಳು ಬಾಹ್ಯಾಕಾಶದಲ್ಲಿ ಜೀವಿಸುವ ಮತ್ತು ಕೆಲಸ ಮಾಡುವ ಸವಾಲನ್ನು ಪರಿಹರಿಸುವುದು ಮಾತ್ರವಲ್ಲದೆ, ಭೂಮಿಯಲ್ಲಿರುವ ಜನರ ಔಷಧೋಪಚಾರಗಳನ್ನೂ ಸುಧಾರಿಸಬಹುದು.
ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಮೆಡಿಕಲ್ ಆಪರೇಶನ್ಸ್ ರಿಕ್ವೆರ್‌ಮೆಂಟ್ಸ್ ಡಾಕ್ಯುಮೆಂಟ್ ಎಂಬುದು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳನ್ನು ಆರೋಗ್ಯವಂತರಾಗಿಡಲು ಬೇಕಾದ ಎಲ್ಲ ವಿಚಾರಗಳನ್ನು ಒಳಗೊಂಡಿರುತ್ತದೆ. ಇದು ದೈನಂದಿನ ಆರೋಗ್ಯ ತಪಾಸಣೆ, ವ್ಯಾಯಾಮ ಮತ್ತು ಬಾಹ್ಯಾಕಾಶ ವಾತಾವರಣದ ನಿರ್ವಹಣೆಗಳನ್ನು ಒಳಗೊಂಡಿದೆ. ಅದರೊಡನೆ, ಬಾಹ್ಯಾಕಾಶ ಆಹಾರ ಮತ್ತು ದೈನಂದಿನ ಪೂರೈಕೆಗಳು ಸಹ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆರೋಗ್ಯವಂತರಾಗಿ ಜೀವಿಸುವಂತೆ ಮಾಡಲು ನೆರವಾಗುತ್ತವೆ.

Next Article