ಸುನೀತಾ ವಿಲಿಯಮ್ಸ್‌ಗೆ ತಾಜಾ ಆಹಾರದ ಕೊರತೆ
ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ ಐದು ತಿಂಗಳಿನಿಂದ ಸಿಲುಕಿರುವ ನಾಸಾದ ಇಬ್ಬರು ಗಗನಯಾತ್ರಿಗಳಿಗೆ ತಿನ್ನಲು ಸಾಕಷ್ಟು ಆಹಾರ ದಾಸ್ತಾನು ಇದೆ ಎಂದು ನಾಸಾ ಹೇಳಿಕೊಂಡಿದೆ. ಆದರೆ ಈ ಗಗನಯಾತ್ರಿಗಳ ದಾಸ್ತಾನಿನಲ್ಲಿ ತಾಜಾ ಆಹಾರಗಳ ಸಂಗ್ರಹ ಕ್ರಮೇಣವಾಗಿ ಕುಸಿಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬೆಳಗಿನ ಉಪಹಾರಕ್ಕೆ ಧಾನ್ಯಗಳು, ಪುಡಿ ಮಾಡಿದ ಹಾಲು, ಪಿಜ್ಜಾ, ರೋಸ್ಟ್ ಚಿಕನ್, ಸಿಗಡಿ ಕಾಕ್‌ಟೇಲ್ ಮತ್ತು ಟ್ಯೂನಾ ತಿನ್ನುತ್ತಿದ್ದಾರೆ. ಆದರೂ ಅವರ ಆಹಾರದಲ್ಲಿ ತಾಜಾಹಣ್ಣುಗಳು ಹಾಗೂ ತರಕಾರಿಗಳ ಕೊರತೆ ಇದೆ. ಇತ್ತೀಚೆಗೆ ಸುನೀತಾ ಅವರ ಟೊಳ್ಳಾದ ಕೆನ್ನೆ ಇರುವ ಚಿತ್ರ ಜಗಜ್ಜಾಹೀರಾದ ನಂತರ ಅವರ ಆಹಾರದತ್ತ ಗಮನಹರಿಸಿರುವುದು ಇಲ್ಲಿ ಉಲ್ಲೇಖನೀಯ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಆಹಾರ ಪೂರೈಕೆ ಮಾಡಲು ಮೂರು ತಿಂಗಳುಗಳು ಬೇಕಾಗುತ್ತದೆ.
ಸುನೀತಾ ಈ ಕೇಂದ್ರ ಪ್ರವೇಶಿಸಿದ ನಂತರ ಮೊದಲ ಮೂರು ತಿಂಗಳಲ್ಲಿ ತಾಜಾ ಹಣ್ಣುಗಳಿದ್ದವು. ನಾಸಾ ಪ್ರಕಾರ, ಪ್ರತಿಯೊಬ್ಬ ಗಗನಯಾನಿಗೂ ದಿನಂಪ್ರತಿ ೧.೭ ಕಿಲೋ ತೂಕದ ಆಹಾರ ನೀಡಲಾಗುತ್ತದೆ. ಈ ಆಹಾರವನ್ನು ಭೂಮಿಯಲ್ಲಿ ತಯಾರಿಸಿದರೂ ಬಾಹ್ಯಾಕಾಶದಲ್ಲಿ ಅದನ್ನು ಮತ್ತೆ ಬೇಯಿಸಬೇಕಾಗುತ್ತದೆ. ಗಗನಯಾನಿಗಳು ತಾವೇ ಆಹಾರ ಸಿದ್ಧಪಡಿಸಿ ಅಯಸ್ಕಾಂತೀಯ ಟ್ರೇಯಲ್ಲಿಟ್ಟು ತಿನ್ನುತ್ತಾರೆ.