ಸುಬ್ಬ-ಸುಬ್ಬಿ ಕಥೆ…
ಒಂದೂರಿನಲ್ಲಿ ಸುಬ್ಬಾ-ಸುಬ್ಬಿ ಎಂಬ ಇಬ್ಬರು ಇದ್ದರು ಎಂದು ಕಂಟ್ರಂಗಮ್ಮತ್ತಿ ಕಥೆ ಹೇಳಲು ಶುರುಮಾಡಿದಳು. ಎಲ್ಲರೂ ಬಾಯಿ ತೆರೆದುಕೊಂಡು ಆಕೆ ಹೇಳುವ ಕಥೆ ಕೇಳತೊಡಗಿದರು. ಆ ಸುಬ್ಬನಿಗೆ ಲಗ್ನವಾಗಿತ್ತು.. ಸುಬ್ಬಿಗೂ ಮದುವೆಯಾಗಿತ್ತು. ಆದರೆ ಆತನ ಹೆಂಡತಿ ಬೇರೆ… ಈಕೆಯ ಗಂಡ ಬೇರೆ. ಸುಬ್ಬ ಚಾಲಾಕಿ ಆದರೆ ಸುಬ್ಬಿ ಬಲೇ ಚಾಲಾಕಿ. ಇಬ್ಬರೂ ಚಾಲಾಕಿಗಳು ಚಾಲೂಗಿರಿ ಮಾಡಿಕೊಂಡೇ ಇದ್ದರು. ಸುಬ್ಬಿಗೆ ಏನು ಬೇಕೋ ಅದನ್ನೆಲ್ಲ ಕೊಡೆಸುತ್ತಿದ್ದ ಸುಬ್ಬ ಒಂದೇನಾದರೂ ಕೊಡಿಸದಿದ್ದರೆ ಸುಬ್ಬಿ ಬಲು ಸಿಟ್ಟಿಗೇಳುತ್ತಿದ್ದಳು. ಸುಬ್ಬ ಫೋನು ಮಾಡಿದರೂ ಕೂಡ ಫೋನೆತ್ತುತ್ತಿರಲಿಲ್ಲ. ಗಾಬರಿಯಾ ಗುತ್ತಿದ್ದ ಸುಬ್ಬ ಮನೆಗೆ ಬಂದು ರಮಿಸಿದಾಗಲೇ ಸುಬ್ಬಿಯ ಸಿಟ್ಟು ಇಳಿಯುತ್ತಿತ್ತು. ಸುಬ್ಬನ ಓರಿಜನಲ್ ಹೆಂಡತಿ ಆವಾಗಾವಾಗ ಸಿಟ್ಟಿಗೇಳುತ್ತಿದ್ದಳು ನಿಜ. ಆಗೆಲ್ಲ ಸುಬ್ಬ ಬಾಯಿಗೆ ಬಂದಂತೆ ಬೈಯ್ದು ಸುಮ್ಮ ನಾಗಿಸುತ್ತಿದ್ದ. ಸುಬ್ಬಿ ಮಾತ್ರ ಮಹಾರಾಣಿಯ ಹಾಗೆ ಇದ್ದಳು. ಸುಬ್ಬಿ ಬಾಯಲ್ಲಿ ಬರುವ ಮುನ್ನವೇ ಸುಬ್ಬ ಅದನ್ನು ಕೊಡಿಸಿ… ನೀ ಏನೇ ಕೇಳಿದರೂ ಇಲ್ಲ ಅನ್ನಲ್ಲ ಸುಬ್ಬೀ ಅನ್ನುತ್ತಿದ್ದ. ಆಗ ಸುಬ್ಬಿ ವಯ್ಯಾರ ದಿಂದ ನುಲಿಯುತ್ತಿದ್ದಳು. ಈ ಸುಬ್ಬ ಸುಬ್ಬಿಯನ್ನು ಇಷ್ಟೇಕೆ ಹಚ್ಚಿಕೊಂಡಿದ್ದಾನೆ..? ಸುಬ್ಬಿಗಿಂತ ಚೆನ್ನಾಗಿ ಇದ್ದವರು ಬೇಕಾದಷ್ಟು ಇದ್ದರು ಅದೆಲ್ಲ ಬಿಟ್ಟು ಸುಬ್ಬ ಈಕೆಯನ್ನು ಛೆ..ಛೆ ಎಂದು ಅವರಿವರು ಮಾತನಾಡಿಕೊಂಡರೂ ಸುಬ್ಬ-ಸುಬ್ಬಿ ಮಾತ್ರ ಇದಕ್ಕೆಲ್ಲ ಸೊಪ್ಪು ಹಾಕದೇ ನಾನು ಡೋಂಟ್ ಕೇರ್ ಮಾಸ್ಟರ್… ಸುಬ್ಬಿ ಡೋಂಟ್ ಕೇರ್ ಟೀಚರ್ ಅಂದು ನಗುತ್ತಿದ್ದ. ಸುಬ್ಬನ ಹಿಂದೆ ಸುಬ್ಬಿ ಬಿದ್ದಿದ್ದಾಳೆ ಎಂದು ಅನೇಕರು ಸಿಟ್ಟಿಗೇಳುತ್ತಿದ್ದರು. ಆ ಸೊಣಕಲು ಸೀಗ ಸುಬ್ಬಿಗೆ ಏನೇನೋ ಅಂದನೆಂದು ಗೊತ್ತಾದಾಗ ಸಿಟ್ಟಿಗೆದ್ದ ಸುಬ್ಬ ಎಳೆದುಕೊಂಡು ಬನ್ನಿ ಅವನನ್ನು ಎಂದು ದಪ್ಪಿನಾಟದ ಛತ್ರಪತಿ ರಾಜನಂತೆ ಅಪ್ಪಣೆ ಕೊಟ್ಟ. ಸೇವಕರೆಲ್ಲ ಎಳೆದುಕೊಂಡು ಬಂದರು. ಸುಬ್ಬಿಯ ಮುಂದೆ ಸೊಣಕಲು ಸೀಗನನ್ನು ಝಾಡಿಸಿ.. ಝಾಡಿಸಿ ಒದ್ದು ಕೆಡವಿದಾಗ ಅಯ್ಯೋ ಅಮ್ಮಾ ಅಂದು ಸೊಣಕಲ ಸೆಟೆದುಹೋದ. ಈಗ ಸುಬ್ಬ-ಸುಬ್ಬಿ ಎಲ್ಲಿರಬೇಕೋ ಅಲ್ಲಿದ್ದಾರೆ. ಮಾರಲ್ ಆಫ್ ದ ಸ್ಟೋರಿ ಏನಪಾ ಅಂದರೆ… ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ…ಇದಕ್ಕೆ ಸುಬ್ಬ-ಸುಬ್ಬಿ ಸ್ಟೋರಿನೇ ಸಾಕು ಎಂದು ಕಥೆ ಮುಗಿಸಿದಳು. ಬಹಳಷ್ಟು ಜನರು ಕಣ್ಣೀರು ಒರೆಸಿಕೊಳ್ಳುತ್ತ ಅಲ್ಲಿಂದ ನಿರ್ಗಮಿಸಿದರು.