ಸುಳ್ಳಿನ ಕೋಟೆ ಕಟ್ಟುವವರಿಗೆ ಹೆದರಿ ಪಕ್ಷ ಬಿಡುವುದಿಲ್ಲ
ಬಳ್ಳಾರಿ: ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಯಾರೋ ಹೇಳಿದಂತೆ ನಾನು ಹಾದಿ-ಬೀದಿಯಿಂದ ಬಂದವನಲ್ಲ; ನಮ್ಮ ಕುಟುಂಬಕ್ಕೂ ರಾಜಕೀಯ ಇತಿಹಾಸವಿದ್ದು, ಸುಳ್ಳಿನ ಕೋಟೆ ಕಟ್ಟುವವರಿಗೆ ಹೆದರಿ ಪಕ್ಷ ಬಿಡುವುದಿಲ್ಲ. ನನ್ನ ಚರಿತ್ರೆಗೆ ಕಪ್ಪು ಮಸಿ ಬಳೆಯಲು ಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು, ಅವರ ಆಪ್ತ ಸ್ನೇಹಿತ ಜನಾರ್ದನರೆಡ್ಡಿ ವಿರುದ್ಧ ಗುಟುರು ಹಾಕಿದರು.
ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮತ್ತು ಜನಾರ್ದನರೆಡ್ಡಿ ನಡುವೆ ೪೦ ವರ್ಷದ ಸ್ನೇಹವಿತ್ತು. ಆತನಿಗೆ ಎಂದು ನಾನು ಅನ್ಯಾಯ, ಮೋಸ ಮಾಡಿಲ್ಲ. ರೆಡ್ಡಿ ಜೈಲಿನಲ್ಲಿದ್ದಾಗ ದೆಹಲಿಯ ವರಿಷ್ಟರ ಕಾಲು-ಕೈ ಹಿಡಿದು ಬಿಡುಗಡೆಗೆ ಮನವಿ ಮಾಡಿದ್ದೆ. ಆತನ ಬಳಿ ನಾನು ಎಂದೂ ಮೆದುಳಿನಿಂದ ಮಾತನಾಡಿದವನಲ್ಲ; ಹೃದಯದಿಂದ ಮಾತನಾಡಿದ್ದೆ. ಆದರೆ ಆತ ಇಷ್ಟು ದಿನ ನನ್ನೊಂದಿಗೆ ಮೆದುಳಿನಿಂದ ವ್ಯವಹರಿಸಿದ ಎನ್ನುವುದು ಅರಿವಾಗಿದೆ. ನನ್ನನ್ನೇ ಟಾರ್ಗೆಟ್ ಮಾಡಿದ ರೆಡ್ಡಿ ಜತೆ ಮರು ಹೊಂದಾಣಿಕ ಕಷ್ಟ. ಮನಸ್ಸು ಮರಿದು ಹೋದ ಮೇಲೆ ಮತ್ತೆ ಒಂದುಗೂಡುವುದು ಅಸಾಧ್ಯ ಎಂದ ಶ್ರೀರಾಮುಲು ಹಳೆಯ ವಿಚಾರಗಳಿಗೆ ಬಣ್ಣ ಹಚ್ಚಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸೂರ್ಯನಾರಾಯಣರೆಡ್ಡಿ ಅವರ ಹೆಸರನ್ನು ಇಲ್ಲಿ ಎಳೆದು ತಂದು ರಾಜಕೀಯವಾಗಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾನೆ ಎಂದರು.
ಸುಳ್ಳಿನ ಕೋಟೆ ಕಟ್ಟಲು ನಿಸ್ಸೀಮ: ಮೊದಲಿನಿಂದಲೂ ಸುಳ್ಳಿನ ಮೇಲೆ ಕೋಟೆ ಕಟ್ಟುವ ಗುಣ ಶಾಸಕ ಜಿ.ಜನಾರ್ದನರೆಡ್ಡಿ ಸ್ವರೂಪವಾಗಿದೆ. ಈಗಲೂ ಅದನ್ನೇ ಮುಂದುವರೆಸಿರುವ ರೆಡ್ಡಿ ನನ್ನ ವಿರುದ್ದ ಕಥೆ ಕಟ್ಟುತ್ತಿದ್ದಾರೆ. ಜಾರಕಿಹೊಳಿ ಮಣಿಸಲು ರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಹೂಡಿದ ತಂತ್ರ ಎಂಬುದು ಸುಳ್ಳು. ಜಾರಕಿಹೊಳಿ ಮಣಿಸುವುದಕ್ಕೆ ನಾನು ಯಾರು? ಈ ಊರಿನ ರಾಜ ಮತ್ತೊಂದು ಊರಿನಲ್ಲಿ ಗುಲಾಮ. ಅದರಂತೆ ಬಿಜೆಪಿಯಲ್ಲಿ ನಾನು ಪ್ರಭಾವಿ ಹಾಗೂ ಸಮುದಾಯ ನಾಯಕನೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ೧೩೭ ಶಾಸಕರಿದ್ದಾರೆ ಈಗ ನನ್ನ ಅವಶ್ಯಕತೆ ಅವರಿಗೇಕೆ ಬರುತ್ತೇ? ಎಂದು ಪ್ರಶ್ನಿಸಿದ ಶ್ರೀರಾಮುಲು, ಶಾಸಕರಾದ ರಮೇಶ ಜಾರಕಿಹೊಳಿ, ಬಸವನಗೌಡ ಪಾಟೀಲ್ ಯತ್ನಾಳ್ ಇಬ್ಬರು ನನಗೆ ಒಳ್ಳೆಯ ಸ್ನೇಹಿತರೆ. ಆದರೆ, ಅವರು ನಡೆಸಿದ ಒಂದು ಸಭೆಗಳಿಗೂ ನಾನು ಹಾಜರಾಗಿಲ್ಲ ಎಂದರು.
ರೆಡ್ಡಿ ಮ್ಯಾಜಿಕ್‌ನಿಂದ ಗೆದ್ದಿಲ್ಲ: ಜನಾರ್ದನರೆಡ್ಡಿ ಜೈಲಿನಲ್ಲಿ ಇದ್ದ ವೇಳೆಯೂ ಕೂಡ ಬಿಜೆಪಿಯನ್ನು ಕಟ್ಟಿರುವೆ. ಯಾರ ಕೃಪಾ ಕಟಾಕ್ಷದಿಂದ ನಾನು ಬೆಳೆದಿಲ್ಲ. ಮೊಳಕಾಲ್ಮೂರುನಿಂದ ಸ್ಫರ್ಧಿಸಿದ ವೇಳೆ ರೆಡ್ಡಿ ಏನೂ ಮ್ಯಾಜಿಕ್ ಮಾಡಿ ನನ್ನನ್ನು ಗೆಲ್ಲಿಸಿರಲಿಲ್ಲ. ಅಲ್ಲಿ ನನ್ನ ಶ್ರಮವೂ ಇತ್ತು. ಪಕ್ಷದ ಶ್ರಮವೂ ಇತ್ತು. ನಾನು ಅಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ಚಿತ್ರದುರ್ಗದ ಐದು ಕ್ಷೇತ್ರಗಳಲ್ಲಿ ಗೆಲುವಾಗಿತ್ತು. ಬದಾಮಿಯಲ್ಲೂ ಅಷ್ಟೆ. ಪಕ್ಷ ನನ್ನ ಸಾರ್ಮರ್ಥ್ಯ ತಿಳಿದು ಎರಡು ಕಡೆ ಟಿಕೆಟ್ ನೀಡಿತ್ತು. ಬಾದಾಮಿಯಲ್ಲಿ ನಮ್ಮ ಸಮುದಾಯವರೇ ಇರಲಿಲ್ಲ, ಆದರೂ ಪಕ್ಷದ ನಿರ್ಣಯದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋತೆ. ನಾನು ಸೋತರೂ ಸುತ್ತಲಿನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು ಎನ್ನುವುದನ್ನು ನೆನಪಿಸಿದರು.
ಎರಡೇ ಎಪಿಸೋಡ ಸಾಕು: ನನ್ನನ್ನು ಕ್ರಿಮಿನಲ್ ಆಗಿ ಬಿಂಬಿಸಲು ಅವನು(ರೆಡ್ಡಿ) ಯತ್ನಿಸುತ್ತಿದ್ದಾನೆ. ನನ್ನನ್ನು ತಾನೇ ಬೆಳೆಸಿದ್ದೇನೆ ಎಂದು ಹೇಳುತ್ತಿದ್ದಾನೆ. ಆದರೆ ರಾಮುಲು ಯಾರು? ಹೇಗೆ ಬೆಳೆದ ಎನ್ನುವುದು? ಬಳ್ಳಾರಿ ಜನರಿಗೆ ಗೊತ್ತಿದೆ. ಯಾರು ಯಾರನ್ನು ಬೆಳೆಸಲು ಆಗಲ್ಲ ಅವರ ಹಣೆಬರಹ ಚೆನ್ನಾಗಿರಬೇಕು ಎಂದು ರೆಡ್ಡಿ ಮಾತಿಗೆ ತಿರುಗೇಟು ನೀಡಿದ ಬಿ.ಶ್ರೀರಾಮುಲು, ನನ್ನ ಬಗ್ಗೆ ಆರೋಪ ಹೊರಿಸಲು ೪೨ ಎಪಿಸೋಡ್ ಇವೆ ಎಂದು ರೆಡ್ಡಿ ಹೇಳಿದ್ದಾರೆ. ಆದರೆ ಆತನ ಎಲ್ಲ ಕ್ರಿಮಿನಲ್ ಕತೆಗಳನ್ನು ಎರಡ್ಮೂರು ಎಪಿಸೋಡ್‌ಗಳಲ್ಲೇ ದಾಖಲೆ ಸಮೇತ ನಾನು ತೆಗೆದು ಇಡುವೆ ಎಂದು ರಾಮುಲು ಆಕ್ರೋಶ ಹೊರ ಹಾಕಿದರು.
ರೋಗವಿದೆ ಎಂದು ಹೇಳಿದ್ದ: ಜನಾರ್ದನರೆಡ್ಡಿ ಮೊದಲ ಬಾರಿಗೆ ಜೈಲಿನಿಂದ ಹೊರಗಡೆ ಬಂದಾಗ ಜಿಲ್ಲೆಗೆ ಭವ್ಯ ಸ್ವಾಗತದ ಮೂಲಕ ರೆಡ್ಡಿಯನ್ನು ಸ್ವಾಗತಿಸಿದೆ. ಇತ್ತೀಚೆಗೆ ಭೇಟಿ ನೀಡಿದಾಗ ನಾನು ಹೋಗಲಿಲ್ಲ. ಆದರೆ, ಅವರೇ ಮಾಧ್ಯಮವರ ಮುಂದೆ ರಾಮುಲುಗೆ ಆರೋಗ್ಯ ಸರಿ ಇಲ್ಲ. ಗಂಭೀರ ಕಾಯಿಲೆ ಇದೆ ಎಂದು ಹೇಳಿಕೆ ನೀಡಿದ್ದರು ಇದು ನನಗೆ ತುಂಬಾ ನೋವು ಉಂಟು ಮಾಡಿತ್ತು. ಅಲ್ಲಿಂದಲೇ ಇಬ್ಬರಲ್ಲಿ ಭಿನ್ನಭಿಪ್ರಾಯ ಮೂಡಿತು. ಎಲ್ಲರನ್ನೂ ಮುಗಿಸಬೇಕು ಎನ್ನುವುದೇ ರೆಡ್ಡಿ ಕಾಯಿಲೆ. ಎಲ್ಲವನ್ನೂ ನಾನೇ ಮಾಡಿರುವೆ ಎಂದು ಹೇಳಿ ಜನರನ್ನು ತಮ್ಮಕಡೆ ವಾಲಿಸಿಕೊಂಡಿದ್ದಾರೆ. ಬಂಗಾರು ಹನುಮಂತು ಬಹಳ ಸ್ಪಿಡ್ ಇದ್ದಾನೆ, ಸ್ಪೀಡ್ ಆಗಿ ಹೋದರೆ ಆಕ್ಸಿಡೆಂಟ್ ಆಗುತ್ತದೆ. ಅವನ ಜತೆಗೆ ರೆಡ್ಡಿ ಸೇರಿಕೊಂಡು ಹೀಗೆ ಆಗಿದ್ದಾನೆ ಎಂದು ಕಿಡಿಕಾರಿದ ರಾಮುಲು ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಎರಡು ತುಂಡು ಆಗಿ ಮಾಡಲು ರೆಡ್ಡಿ ಹೊರಟಿದ್ದಾನೆ. ಕಂಪ್ಲಿಯಲ್ಲಿ ಸುರೇಶಬಾಬು, ಸಿರುಗುಪ್ಪದಲ್ಲಿ ಸೋಮಲಿಂಗಪ್ಪ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾನೆ. ನನ್ನನ್ನು ಸೇರಿ ಎಲ್ಲರನ್ನು ಮುಗಿಸಲು ರೆಡ್ಡಿ ಪ್ಲ್ಯಾನ್ ಮಾಡಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.