ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ 25ನೇ ವಾರ್ಷಿಕೋತ್ಸವ
ಬೆಂಗಳೂರು: ರಾಜಧಾನಿಯ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಗೆ 25ನೇ ವಸಂತ. ಕರ್ನಾಟಕ ಸಂಗೀತದಲ್ಲಿ ಗಾಯನ ಮತ್ತು ಮೃದಂಗ ವಾದನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಇನ್ನೂ ಹಲವಾರು ಪ್ರಕಾರಗಳಲ್ಲಿ ತನ್ನ ಸಂಗೀತ ಕೈಂಕರ್ಯವನ್ನು ಸಲ್ಲಿಸುತ್ತಿರುವ ಕಲಾಶಾಲೆಯ 25ನೇ ಅರ್ಥಪೂರ್ಣ ವಾರ್ಷಿಕೋತ್ಸವದ ಅಂಗವಾಗಿ ಬಸವನಗುಡಿ ವಾಡಿಯಾ ಸಭಾಂಗಣದಲ್ಲಿ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್) ಪ್ರಖ್ಯಾತ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ವಾದನ ಕಛೇರಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಪ್ರಾಚಾರ್ಯ ವಿದ್ವಾನ್ ಎಚ್.ಎಸ್. ಸುಧೀಂದ್ರ ತಿಳಿಸಿದ್ದಾರೆ.
ಅಕ್ಟೋಬರ್ 25ರ ಸಂಜೆ 4ಕ್ಕೆ ವಿದುಷಿ ರೂಪಾ ಶ್ರೀಕಾಂತ ಅವರಿಂದ ಶಾಸ್ತ್ರೀಯ ಗಾಯನವಿದೆ. ಕುಮಾರಿ ಮಹತಿ ಸಹಗಾಯನವಿದ್ದು, ಪಕ್ಕವಾದ್ಯದಲ್ಲಿ ವಿದ್ವಾಂಸರಾದ ಅದಮ್ಯ ರಮಾನಂದ್ ಮೃದಂಗ, ದೀಪಾ ಶಾಸ್ತ್ರಿ ಪಿಟೀಲು ಮತ್ತು ಶ್ರೀಶೈಲ ಘಟ ಸಹಕಾರ ನೀಡಲಿದ್ದಾರೆ. ನಂತರ ಪಿ.ಸಿ. ವಿವೇಕ್, ನಂದನ್ ಜ್ಯೋಶಿಯರ್, ಮಣಿಕಂಠನ್, ಸುಪ್ರಿಯಾ ಪೂಮಗಮೆ ಮತ್ತು ಅಪರ್ಣಾ ಅವರಿಂದ ತಾಳವಾದ್ಯವಿದೆ. ಸಂಜೆ 6.45ರಿಂದ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಗಾಯನವಿದೆ. ವಿದ್ವಾನ್. ಎಚ್.ಎಸ್. ಸುಧೀಂದ್ರ ಮೃದಂಗ, ಡಾ. ಕೆ.ವಿ. ಕೃಷ್ಣ ಪಿಟೀಲು ಮತ್ತು ಡಾ. ಟ್ರಿಚ್ಚಿ ಮುರಳಿ ಘಟ ಸಹಕಾರವಿದೆ.
26ರ ಬೆಳಗ್ಗೆ 10. 15ಕ್ಕೆ ವಿದ್ಯಾರ್ಥಿಗಳಿಂದ ತಾಳವಾದ್ಯವಿದೆ. ದತ್ತ ಪ್ರಸಾದ್, ಆದಿಶೇಷ, ಅಕ್ಷಜ, ಹಿರಣ್ಮಯ ವಿ ಶರ್ಮ,ಅಭಿಷೇಕ ಬಾಲಕೃಷ್ಣ, ಲಕ್ಷ್ಮೀಶ ಭಟ್ ಶ್ರೀಪಾದ ನಾಗೇಶ್, ಸಂಜಯ್ ಸುದರ್ಶನ, ಕಿರಣ್ ಜ್ಯೋಶಿಯರ್ ಮತ್ತು ಶ್ರೀಕರ ಜನಾರ್ಧನ ಅವರು ಕಲಾ ಪ್ರದರ್ಶನ ಮಾಡಲಿದ್ದಾರೆ. ನಂತರ ‘ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹರಿದಾಸರ ಕೊಡುಗೆ ಬಗ್ಗೆ ವಿದುಷಿ. ಗೀತಾ ರಮಾನಂದ ರವರಿಂದ ಪ್ರಾತ್ಯಕ್ಷಿಕೆ ಇದೆ. ಸಂಜೆ 4.30ಕ್ಕೆ ವಿದ್ವಾನ್ ಸುಪ್ರದೀಪ್ ಅವರ ಕೊಳಲು ವಾದಕ ಕಛೇರಿ ಇದ್ದು, ಪಕ್ಕವಾದ್ಯದಲ್ಲಿ ವಿದ್ವಾನ್. ಶ್ರೀನಿವಾಸ್ ಮೃದಂಗ, ಕೇಶವ ಮೋಹನ್‌ಕುಮಾರ್ ಪಿಟೀಲು ಮತ್ತು ಹರಿಹರಪುರ ಅಭಿಜಿತ್ ಘಟ ಸಾಥ್ ನೀಡಲಿದ್ದಾರೆ. ಸಂಜೆ 6ಕ್ಕೆ ವಿದುಷಿ ಚಂದನಬಾಲಾ ಕಲ್ಯಾಣ್ ಅವರ ಶಾಸ್ತ್ರೀಯ ಸಂಗೀತ ಕಛೇರಿ ನೆರವೇರಲಿದೆ.
27ರ ಬೆಳಗ್ಗೆ 9.30ಕ್ಕೆ ಸುಸ್ವರಲಯ ಶಾಲೆ ವಿದ್ಯಾರ್ಥಿಗಳಿಂದ ತಾಳವಾದ್ಯವಿದೆ. ವಿಷ್ಣು ರಘುನಾಥನ್, ವಿಶ್ವನಾಥ, ಚಂದ್ರಮೌಳಿ, ಅವನೀಶ, ದಿಗಂತ ಭಟ್, ಸಿ. ಸುಧೀಂದ್ರ ಮತ್ತು ಅನಿರುದ್ಧ ಕೃಷ್ಣ ಕಲಾಪ್ರೌಢಿಮೆ ಪ್ರದರ್ಶಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಸಂಪ್ರದಾಯ ಭಜನೆ: ವಿದ್ವಾಂಸರಾದ ವಿನಯ್‌ಚಂದ್ರ ಮೆನನ್, ಗಣೇಶ ವೆಂಕಟೇಶ್ವರನ್, ನಟೇಶನ್ ತಂಡ. 11:15ಕ್ಕೆ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಂದ ಪ್ರಾತ್ಯಕ್ಷಿಕೆ. ವಿಷಯ: ನವತಿ ಮೇಳ ರಾಗ, ತಾಳ ಮಾಲಿಕ-ಲಕ್ಷ್ಯ ಮತ್ತು ಲಕ್ಷ್ಯಣ. ಸಂಜೆ 4.30ಕ್ಕೆ ವಿದುಷಿ ಅದಿತಿ ಪ್ರಹ್ಲಾದ್ ಅವರ ಶಾಸ್ತ್ರೀಯ ಸಂಗೀತ ಕಛೇರಿ ಸಂಪನ್ನಗೊಳ್ಳಲಿದೆ. ನಂತರ ಬೆಂಗಳೂರು ಸಹೋದರರಿಂದ(ವಿದ್ವಾನ್ ಹರಿಹರನ್-ವಿದ್ವಾನ್ ಅಶೋಕ್) ಹಾಡುಗಾರಿಕೆ ನೆರವೇರಲಿದೆ. ಕಲಾಭಿಮಾನಿಗಳು ಭಾಗವಹಿಸಬೇಕು ಎಂದು ವಿದ್ವಾನ್ ಸುಧೀಂದ್ರ ತಿಳಿಸಿದ್ದಾರೆ.