ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೈಬರ್ ಕ್ರೈಂ ಎಂಬ ನಯವಂಚನೆ

03:00 AM Aug 11, 2024 IST | Samyukta Karnataka

ಬ್ಯಾಂಕ್ ಸೇವೆಯಲ್ಲಿ ಆಧುನಿಕ ತಾಂತ್ರಿಕತೆಯ ಅಳವಡಿಕೆಯಿಂದ ಸಾಕಷ್ಟು ಸುಧಾರಣೆ ಬಂದಿದೆ. ಗ್ರಾಹಕರಿಗೆ ಬ್ಯಾಂಕಿಗೆ ಹೋಗದೇ ಕುಳಿತಲ್ಲಿಂದಲೇ ಹಣ ಪಡೆದುಕೊಳ್ಳುವ ಅಥವಾ ವರ್ಗಾಯಿಸುವ ಸೌಲಭ್ಯವಿದೆ. ನೆಟ್ ಬ್ಯಾಂಕಿಂಗ್, ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್‌ನಿಂದಾಗಿ ಜನರಿಗೆ ಬ್ಯಾಂಕಿಗೆ ಅಲೆದಾಡುವ ತೊಂದರೆ ತಪ್ಪಿದೆ. ಅಲ್ಲಿ ಉದ್ದನೇ ಸಾಲಿನಲ್ಲಿ ನಿಂತುಕೊಳ್ಳುವ ತಾಪತ್ರಯ ತಪ್ಪಿದೆ.
ಆಧುನಿಕತೆ ಬಂದಂತೆ, ತಾಂತ್ರಿಕತೆ ಬೆಳೆದಂತೆ ಜನರ ನಡವಳಿಕೆಯಲ್ಲಿಯೂ ಬದಲಾವಣೆ ಕಾಣಿಸಿಕೊಂಡಿದೆ. ಕಳ್ಳರು, ದರೋಡೆಕೋರರು ತಮ್ಮ ಕೆಲಸಗಳಲ್ಲಿ ನಯನಾಜೂಕತೆಯನ್ನು ಅಳವಡಿಸಿಕೊಂಡಿದ್ದಾರೆ! ತಮ್ಮ ಕೃತಿಗಳಿಗೆ ಬೇಕಾಗುವಷ್ಟು ತಂತ್ರಜ್ಞಾನವನ್ನೂ ಪಡೆದುಕೊಂಡಿದ್ದಾರೆ. ಅನಾದಿಕಾಲದ ನಯವಂಚಕರೆ ಈಗ ಸೈಬರ್ ಕಳ್ಳರಾಗಿದ್ದಾರೆ! ಪೊಲೀಸ್ ಖಾತೆಯಲ್ಲಿ ಈಗ ಅವರಿಗಾಗಿಯೇ ಮೀಸಲಾದ ವಿಭಾಗವೊಂದಿದೆ. ಸೈಬರ್ ಕ್ರೈಂ ವಿಭಾಗದಲ್ಲಿ ಕೆಲಸ ನಿರ್ವಹಿಸಲು ತಂತ್ರಜ್ಞರು ಬೇಕಾಗಿದ್ದಾರೆ. ಮಾತುಗಳಲ್ಲೇ ಮರಳು ಮಾಡಿ, ಮಾಹಿತಿ ಪಡೆದು, ಪಡೆದ ಮಾಹಿತಿಯಿಂದಲೇ ಕನ್ನ ಹಾಕುವ ಕುಶಲತೆ ಅವರಲ್ಲಿದೆ. ಅದಕ್ಕಾಗಿ ಅವರು ತರಹೇವಾರಿ ಮಾರ್ಗಗಳನ್ನು ಹುಡುಕುತ್ತಾರೆ. ಭೌತಿಕವಾಗಿ ಕಾಣಿಸಿಕೊಳ್ಳದೇ ಫೋನ್ ಮೂಲಕವೇ ತಮ್ಮೆಲ್ಲ ಕಾರ್ಯವನ್ನು ಸಾಧಿಸುತ್ತಾರೆ. ಬ್ಯಾಂಕಿನ ನೌಕರದಾರರೆಂದು ಹೇಳುತ್ತಲೋ, ಇನ್ಸೂರೆನ್ಸ್ ಏಜೆಂಟರೆಂದೋ ಅಥವಾ ಇನ್ಕಮ್ ಟ್ಯಾಕ್ಸ್/ಇನ್ವೆಸ್ಟಿಗೇಷನ್ ಏಜೆನ್ಸಿ ಎಂದೋ ಸೇವೆಯ ನೆಪದಲ್ಲಿಯೋ, ತನಿಖೆ ಹೆಸರಿನಲ್ಲಿಯೋ ಮೋಸ ಮಾಡುತ್ತಾರೆ.
ನಿತ್ಯ ಸಾವಿರಾರು ಅಮಾಯಕ ಜನ ಇವರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕ್, ಸರಕಾರ, ಪೊಲೀಸು ಆಗಾಗ ಈ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡರೂ ಸೈಬರ್ ಅಪರಾಧಗಳ ಪ್ರಮಾಣ ಕಡಿಮೆ ಆಗಿಲ್ಲ. ಏಕೆಂದರೆ ಕಳ್ಳರೂ ಹುಷಾರಾಗಿದ್ದಾರೆ. ಪ್ರತಿಸಲವೂ ಹೊಸ ಹೊಸ ಉಪಾಯಗಳನ್ನು ಹೂಡುತ್ತಾರೆ. ಅವುಗಳ ಮರ್ಮ ಜನರಿಗೆ ಗೊತ್ತಾಗುವುದರೊಳಗೇ ಸಾಕಷ್ಟು ಜನ ಯಾಮಾರಿರುತ್ತಾರೆ. ವರುಷ-ವರುಷವೂ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲೇ ಇಂತಹ ಪ್ರಕರಣಗಳು ೫ರಷ್ಟು ಹೆಚ್ಚಿವೆ! ಬರೀ ನಮ್ಮ ದೇಶದಲ್ಲೇ ೬೪ ಬ್ಯಾಂಕುಗಳ ೨೯,೦೦೦ ಪ್ರಕರಣಗಳಲ್ಲಿ ಸಾರ್ವಜನಿಕರ ಸುಮಾರು ೧,೫೦೦ ಕೋಟಿ ರೂ. ಕಳ್ಳರ ಪಾಲಾಗಿದೆ. ಇವು ಅಧಿಕೃತವಾಗಿ ವರದಿಯಾದ ಪ್ರಕರಣಗಳಷ್ಟೇ. ವರದಿಯಾಗದಿರುವ ರೂ. ೧ ಲಕ್ಷಕ್ಕಿಂತ ಕಡಿಮೆ ಮೊತ್ತದ ಮೋಸದ ಪ್ರಕರಣಗಳನ್ನು ಪರಿಗಣಿಸಿದರೆ ವಂಚಕರ ಕರಾಮತ್ತಿನ ಪ್ರಮಾಣದ ಅಗಾಧತೆಯ ಅರಿವಾಗುತ್ತದೆ. ಇದರ ಅರ್ಥ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆ, ವಂಚಕರ ಸಂಖ್ಯೆ, ವಂಚನೆಯ ಮೊತ್ತ ಮತ್ತು ವಂಚನೆಯ ವೈವಿಧ್ಯತೆಗಳು ಅತೀ ವೇಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದಾಯಿತು. ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು ಉಳಿದ ರಾಜ್ಯಗಳಲ್ಲಿ ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿ ವಂಚನೆಗಳಾಗಿವೆ.
ಇತ್ತೀಚೆಗೆ ಸಚಿವರೊಬ್ಬರು ಸರ್ಕಾರಿ ಹಣವನ್ನು ದೋಚುವ ಚೋರರು ಬ್ಯಾಂಕುಗಳಲ್ಲೇ ಇದ್ದಾರೆ. ಇದರಿಂದ ಅನೇಕ ಅಚಾತುರ್ಯಗಳು ನಡೆಯುತ್ತಿವೆ. ಇದರಿಂದ ಬ್ಯಾಂಕ್‌ಗಳ ವಿಶ್ವಾಸಾರ್ಹತೆಗೆ ಧಕ್ಕೆ ಆಗಿದೆ ಎಂದರು, ಇದೊಂದು ನಿಜಕ್ಕೂ ಗಂಭೀರವಾದ ವಿಚಾರ. ದೇಶದ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಮಂಡಳಿ ಮತ್ತು ನಿಗಮಗಳಲ್ಲಿ ಈ ರೀತಿಯ ಮೋಸಗಳು ನಡೆಯುತ್ತಿದ್ದರೆ ಯಾರನ್ನು ನಂಬುವುದು? ಇದರಿಂದ ಸರಕಾರಿ ಇಲಾಖೆಗಳು, ಅಧಿಕಾರಿಗಳು ತೀವ್ರ ಎಚ್ಚರಿಕೆಯಿಂದ ವ್ಯವಹರಿಸಬೇಕೆಂದು ಹೇಳಿದ ಸಚಿವರ ಮಾತಿನಲ್ಲಿ ಸತ್ಯಾಂಶವಿದೆ. ಸರಕಾರಿ ಇಲಾಖೆಗಳ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ದೋಚುವ ಯತ್ನಗಳು ನಡೆಯುತ್ತಿರುವುದು ವರದಿಯಾಗಿವೆ. ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ಹಣವನ್ನು ನುಂಗುವ ಪ್ರಸಂಗಗಳು ನಡೆಯುತ್ತಿವೆ. ಇದು ದೇಶದ ಆರ್ಥಿಕತೆಗೆ ಒಂದು ದೊಡ್ಡ ಸವಾಲಾಗುತ್ತದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಗ್ರಾಹಕರಿಗೆ ನಿಂತ ನೆಲವೇ ಕುಸಿದಂತಾಗುತ್ತದೆ.
ತಂತ್ರಜ್ಞರು, ಪೊಲೀಸರು, ಪತ್ತೇದಾರಿ ವ್ಯಕ್ತಿಗಳು ಚಾಪೆಯ ಕೆಳಗೆ ನುಸುಳಿದರೆ ಸೈಬರ್ ವಂಚಕರು ರಂಗೋಲಿ ಕೆಳಗೆ ತೂರುತ್ತಾರೆ. ಇವರ ತಂತ್ರಗಳಿಗೆ ಅವರು ಪ್ರತಿತಂತ್ರ ರೂಪಿಸುವಲ್ಲಿ ಪರಿಣಿತರಾಗಿದ್ದಾರೆ. ಹೀಗಾಗಿ ಇವರೆಲ್ಲ ನಿರಂತರವಾಗಿ ತಾಂತ್ರಿಕವಾಗಿ ಅಪ್ಡೇಟ್ ಆಗುವ ಅವಶ್ಯಕತೆ ಇದೆ. ಏಕೆಂದರೆ ಸೈಬರ್ ವಂಚಕರು ನಿರಂತರವಾಗಿ ಹೊಸ ಹೊಸ ಹೊಂಚನ್ನು ಹೂಡುತ್ತಾರೆ. ಸುಲಭದರಲ್ಲೇ, ಶೀಘ್ರವಾಗಿ ಸಾಲಕೊಡುವ ಆಪ್‌ಗಳು, ಬರೀ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ವಿವರ ಪಡೆದು ಲಕ್ಷಗಟ್ಟಲೇ ಸಾಲ ಕೊಡುವ ಭರವಸೆ ನೀಡುತ್ತವೆ. ಆ ಪ್ರಕ್ರಿಯೆಯಲ್ಲಿ ವೈಯಕ್ತಿಕ ಮಾಹಿತಿ ಕದಿಯುತ್ತಾರೆ. ಖಾತೆಗಳಿಂದ ಹಣಕ್ಕೆ ಕನ್ನ ಹಾಕುತ್ತಾರೆ. ಹೆಚ್ಚಿನ ಬಡ್ಡಿ ಆಕರಿಸಿ ಕಿರಿಕಿರಿ ಮಾಡುತ್ತಾರೆ. ವೈಯುಕ್ತಿಕ ಫೋಟೋ ಮಾಹಿತಿಯನ್ನು ತಮಗೆ ಬೇಕಾದ ಹಾಗೆ ಮಾರ್ಪಡಿಸಿ ಬ್ಲಾಕ್‌ಮೇಲ್ ಮಾಡುತ್ತಾರೆ. ವಾಟ್ಸ್ಅಪ್ ಮುಂತಾದ ಜಾಲತಾಣಗಳಲ್ಲಿ ಹರಿಬಿಟ್ಟು ಮಾನ ತೆಗೆಯುತ್ತಾರೆ. ಮಾನಸಿಕ ಹಿಂಸೆ ಕೊಡುತ್ತಾರೆ. ಇದರಿಂದ ನೊಂದ ಅನೇಕ ಜನರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಅನೇಕ ಬ್ಯಾಂಕುಗಳು, ಫೈನಾನ್ಸ್ ಕಂಪನಿಗಳು ದಿವಾಳಿ ಆಗಿವೆ.
ಹಾಗಾದರೆ ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೆಂತಿಲ್ಲ. ಭಾರತೀಯ ರಿಜರ್ವ್ ಬ್ಯಾಂಕು ಮತ್ತು ತಾಂತ್ರಿಕ ಪರಿಣಿತರು ಹೇಳುವ ಹಾಗೆ ನಾವು ಕಂಪ್ಯೂಟರ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಆಗಾಗ ಅಪ್ಡೇಟ್ ಮಾಡುತ್ತಿರಬೇಕು. ಬ್ಯಾಂಕ್ ಖಾತೆಗಳ ನವೀಕರಣ, ಕೆವೈಸಿ ಅಪ್ಡೇಟ್, ವಿವಿಧ ಕರ ರಿಯಾಯಿತಿ ಸ್ಕೀಮ್‌ಗಳು, ಇತ್ಯಾದಿ ನೆಪ ಮಾಡಿಕೊಂಡು ಬರುವ ಕರೆಗಳನ್ನು ನಂಬಬಾರದು ಮತ್ತು ಸ್ವೀಕರಿಸಬಾರದು. ರಿಸರ್ವ್ ಬ್ಯಾಂಕ್ ಮೊದಲು ಮಾಡಿ ಎಲ್ಲ ಬ್ಯಾಂಕ್‌ಗಳು ಈ ರೀತಿ ಕರೆಗಳನ್ನು ಮಾಡುವುದಿಲ್ಲವೆಂದು ಸೃಷ್ಟಿಗಾಗಿ ಹೇಳಿವೆ. ಅದೇನೇ ಇದ್ದರೂ ಬ್ಯಾಂಕಿಗೇ ಖುದ್ದಾಗಿ ಹೋಗಿ ವಿಚಾರಿಸುವುದಾಗಿ ಹೇಳಬೇಕು. ಆದರೆ ಯಾವುದೇ ಮಾಹಿತಿಯನ್ನು ಕೊಡಬಾರದು. ಪ್ಯಾನ್ ನಂಬರ್, ಆಧಾರ್ ನಂಬರ್, ಸೆಲ್ ನಂಬರ್, ಒಟಿಪಿ ನಂಬರ್‌ನಂತಹ ಯಾವುದೇ ವೈಯಕ್ತಿಕ ವಿವರಗಳನ್ನು ಕೊಡಬಾರದು. ಸೈಬರ್ ಮೋಸಕ್ಕೆ ಬಲಿ ಆಗಿದ್ದು ಗೊತ್ತಾದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಕೂಡಲೇ ಕಾರ್ಡ್ ಬ್ಲಾಕ್ ಮಾಡುವುದು. ಸಹಾಯವಾಣಿ ೧೯೩೦ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಅವಾಗವಾಗ ಬ್ಯಾಂಕ್ ಖಾತೆಯ ನಿರ್ವಹಣೆಗಾಗಿರುವ ಪಾಸ್ವರ್ಡ್ ಬದಲಿಸಬೇಕು ಮತ್ತು ಗೌಪ್ಯವಾಗಿಡಬೇಕು. ರೈಲು, ಆಸ್ಪತ್ರೆ, ಸಾರ್ವಜನಿಕ ಕಚೇರಿಗಳು/ಸ್ಥಳಗಳಲ್ಲಿರುವ ಇಂಟರ್‌ನೆಟ್ ಸಂಪರ್ಕ ಅಥವಾ ವೈಫೈ ಪಡೆದುಕೊಳ್ಳದಿರುವುದು ಒಳ್ಳೆಯದು.
ಪ್ರಚಂಡ ಶಸ್ತಾçಸ್ತçಗಳು, ಜ್ಞಾನ ಭಂಡಾರವನ್ನು ಮನುಷ್ಯ ಸೃಷ್ಟಿಸಬಹುದು. ಆದರೆ ಅವುಗಳು ಯಾರ ಕೈಯಲ್ಲಿರುತ್ತವೆ ಎನ್ನುವುದೂ ಮುಖ್ಯ. ಅವರು ಅವುಗಳನ್ನು ಯಾವುದಕ್ಕಾಗಿ, ಎಲ್ಲಿ, ಯಾವಾಗ ಹೇಗೆ ಉಪಯೋಗಿಸುತ್ತಾರೆ ಎನ್ನುವುದು ಮುಖ್ಯ. ಅಧಿಕಾರದ ಹಪಾಪಿ ಇರುವ, ಸಾಮ್ರಾಜ್ಯ ವಿಸ್ತಾರವಾದಿಗಳ, ಏನಕೇನ ಕಾರಣೇನ ಬಲಿಷ್ಠರಾಗಿ ಜಗವನಾಳುವ ದುರಾಕಾಂಕ್ಷೆವುಳ್ಳ ಜನರು/ನಾಯಕರ ಕೈಯಲ್ಲಿ ಇಂತಹ ಅಸ್ತçಗಳಿದ್ದರೆ ಏನಾಗಬೇಡ? ತಮ್ಮದಲ್ಲದ ಧರ್ಮ, ಜನಾಂಗ, ದೇಶಗಳೆಲ್ಲವನ್ನು ಕಾರಣವಿಲ್ಲದೆಯೂ ದ್ವೇಷಿಸುವ ಸ್ವಾರ್ಥಿ ಧರ್ಮಾಂಧ, ಜನಾಂಗ ದ್ವೇಷೀ ನಾಯಕರ ಬಳಿ ಇಂತಹ ಅಸ್ತçಗಳಿದ್ದರೆ ಪರಿಣಾಮ ಒಳ್ಳೆಯದಾಗಿರಲು ಸಾಧ್ಯವಿಲ್ಲ. ಇರಾನ್-ಇರಾಕ್, ರಶಿಯಾ-ಉಕ್ರೇನ್‌ಗಳ ನಡುವಿನ ಯುದ್ಧ, ಇತ್ತೀಚಿನ ಬಾಂಗ್ಲಾ ವಿಪ್ಲವ, ಜಗತ್ತಿನಾದ್ಯಂತ ಹರಡಿರುವ ಉಗ್ರಗಾಮಿಗಳ ಅಮಾನವೀಯ ಚಟುವಟಿಕೆಗಳು ನಮ್ಮ ಕಣ್ಣಮುಂದೆ ಇವೆ.
ಡಿಜಿಟಲ್ ಒಂದು ಮಾಧ್ಯಮ ಮಾತ್ರ. ಅದರ ಮೂಲಕ ವ್ಯವಹಾರವನ್ನು ಶೀಘ್ರವಾಗಿ, ಪರಿಣಾಮಕಾರಿಯಾಗಿ ಮಾಡಬಹುದು. ಆದರೆ ಅದನ್ನು ವಿನ್ಯಾಸ ಮಾಡಿದವರು ಮನುಷ್ಯರೇ. ಹೀಗಾಗಿ ಅದು ಅವನ ಅಂಕಿತದಲ್ಲಿರಬೇಕು. ಅವನು ಅದರ ಅಂಕಿತದಲ್ಲಿ ಅಲ್ಲ. ಅದಕ್ಕಾಗಿ ಅವನು ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಗಳನ್ನು ಖಂಡಿತವಾಗಿ ತೆಗೆದುಕೊಳ್ಳಬೇಕು. ವಿವೇಚನೆಯಿಂದ, ವಿವೇಕದಿಂದ ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್‌ನ್ನು ಉಪಯೋಗಿಸಿಕೊಳ್ಳಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅದೇ ಆಧುನಿಕ ತಾಂತ್ರಿಕತೆಯನ್ನು ಉಪಯೋಗಿಸಿ ಕಳ್ಳ ಖದೀಮರನ್ನು ಕಟ್ಟಿಹಾಕುವ ಕೆಲಸವಾಗಬೇಕು. ವಂಚನೆಯ ಸಂಶಯ ಬರುತ್ತಿದ್ದಂತೆ ಅಕೌಂಟ್‌ಗಳ ಹಣ ಚಲಾವಣೆ ಆಗದಂತೆ ನಿರ್ಬಂಧವಾಗಬೇಕು. ಡಿಜಟಲೀಕರಣದ ಈ ಯುಗದಲ್ಲಿ ಕಾರ್ಯವೇಗ, ಕ್ಷಮತೆಯನ್ನು ವ್ಯವಸ್ಥಿತವಾಗಿ ಸ್ಥಾಪಿಸುವುದರ ಜೊತೆ ಜೊತೆಗೆ ಇಂತಹ ಸೈಬರ್ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಯುವ ಬಗೆಗೂ ಯೋಚಿಸುವ ಅವಶ್ಯಕತೆ ಇದೆ. ಅದಕ್ಕಾಗಿ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರೂ ದಕ್ಷತೆ, ಪ್ರಾಮಾಣಿಕತೆ ಮತ್ತು ಬದ್ಧತೆಗಳನ್ನು ಮೆರೆಯಬೇಕಾಗುತ್ತದೆ.

Next Article