For the best experience, open
https://m.samyuktakarnataka.in
on your mobile browser.

ಸೈಯದ್ ಶಹಾ ಖುಸ್ರೊ ಹುಸೇನಿ ಅಂತಿಮ ದರ್ಶನ: ಗಣ್ಯರ ಸಂತಾಪ

02:13 PM Nov 07, 2024 IST | Samyukta Karnataka
ಸೈಯದ್ ಶಹಾ ಖುಸ್ರೊ ಹುಸೇನಿ ಅಂತಿಮ ದರ್ಶನ  ಗಣ್ಯರ ಸಂತಾಪ

ಕಲಬುರಗಿ : ಕಲಬುರಗಿ ಯ ಖಾಜಾ ಬಂದೇನವಾಜ ದರ್ಗಾದ ಗುರುಗಳಾದ ಸಜ್ಜಾದ ಡಾ. ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ

ಸಿಎಂ ಸಿದ್ದರಾಮಯ್ಯ ಸಂತಾಪ: ಹಿರಿಯ ಧಾರ್ಮಿಕ ಮುಖಂಡರು, ಕಲಬುರಗಿಯ ಹಜ್ರತ್ ಖಾಜಾ ಬಂದೇನವಾಜ ದರ್ಗಾದ ಗುರುಗಳು ಆದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಬಂದೇನವಾಜ ದರ್ಗಾವನ್ನು ಹಿಂದೂ - ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು. ಸದಾಕಾಲ ಸಮಾಜದ ಒಳಿತನ್ನೇ ಬಯಸುತ್ತಿದ್ದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ಅಗಲಿಕೆಯಿಂದ ನೊಂದಿರುವ ಅವರ ಬಂಧು ಮಿತ್ರರಿಗೆ, ಅನುಯಾಯಿಗಳಿಗೆ ನನ್ನ ಸಂತಾಪಗಳು.

ಸಚಿವ ಪ್ರಿಯಾಂಕ ಖರ್ಗೆ ಸಂತಾಪ : ನಾಡಿನ ಸೂಫಿ ಪರಂಪರೆಗೆ, ಭಾವೈಕ್ಯತೆಯ ಪರಂಪರೆಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಅವರೊಂದಿಗಿನ ಒಡನಾಟವು ನನ್ನಲ್ಲಿ ಸ್ಫೂರ್ತಿ ತುಂಬುತ್ತಿತ್ತು, ಸೂಫಿ ತತ್ವಗಳಿಂದ ಸಮಾಜಕ್ಕೆ ಆದ್ಯಾತ್ಮಿಕ ಮಾರ್ಗದರ್ಶನ ನೀಡುವುದರ ಜೊತೆಜೊತೆಗೆ ವೈಜ್ಞಾನಿಕ ಮನೋಭಾವದಿಂದಲೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಅವರ ವಿಶಿಷ್ಠ ಸಾಧನೆಯಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣದಿಂದ ಸಮಾಜದ ಏಳಿಗೆಗೆ ಶ್ರಮಿಸಿದ ಅವರ ಸಮಾಜಮುಖಿ ಕಾಳಜಿಯು ಸದಾ ಸ್ಮರಣಿಯವಾದುದು. ಶರಣ ಗುಡಿಯೊಂದಿಗೆ ಬಂದೇನವಾಜ ದರ್ಗಾವನ್ನು ಬೆಸೆದು ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಅವರ ಕಾರ್ಯಗಳು ನೆನಪಿನಲ್ಲಿ ಉಳಿಯುವಂತಹವು. ಅವರ ಅಗಲಿಕೆಯಿಂದ ದುಃಖಿತನ್ನಾಗಿದ್ದೇನೆ, ಅವರ ಬಂಧುಗಳು, ಅನುಯಾಯಿಗಳ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.

ಎಂ. ಬಿ. ಪಾಟೀಲ್‌ ಸಂತಾಪ : ಇಂದು ದೈವಾಧೀನರಾದ ಪೂಜ್ಯ ಸಯ್ಯದ್ ಶಾ ಖುಸ್ರೊ ಹುಸೇನಿ ಅವರು ನನಗೆ ಆತ್ಮೀಯರಾಗಿದ್ದರು. ಹಲವು ಭಾರಿ ಭೇಟಿಮಾಡಿ, ಮಾತುಕಥೆ ನಡೆಸಿದ್ದು ಮರೆಯಲಾಗದು. ಅವರ ಹೃದಯ ವೈಶಾಲ್ಯತೆ, ಸ್ನೇಹಪರ ವ್ಯಕ್ತಿತ್ವ ಮನಕ್ಕೆ ಹತ್ತಿರವಾಗಿದೆ. ಅವರ ಮಾತುಗಳಿಂಧ ಪ್ರಭಾವಿತನಾಗಿರುವೆ. ಪೂಜ್ಯರು ಪೀಠಾಧಿಪತಿಗಳಾಗಿರುವ ಕಲಬುರಗಿಯ ಹಜರತ್ ಖ್ವಾಜ ಬಂದೇನವಾಜ್ ದರ್ಗಾಕ್ಕೆ ಜಿಲ್ಲೆಯ ಶಾಸಕರು, ಮುಖಂಡರೊಂದಿಗೆ ತೆರಳಿ, ಪ್ರಾರ್ಥನೆ ಸಲ್ಲಿಸಿದ್ದು ನನ್ನ ಮನದಲ್ಲಿ ಸದಾ ಹಸಿರಾಗಿಯೇ ಇರಲಿದೆ.

ಡಾ.ಅಜಯ್ ಸಿಂಗ್ ಸಂತಾಪ : ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ವಿದ್ವಾಂಸಕರಾಗಿದ್ದ ಡಾ. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರ ನಿಧನಕ್ಕೆ ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರು, ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಅವರ 23ನೇ ವಂಶಸ್ಥರಾಗಿದ್ದರು. ತಮ್ಮ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಕಲ್ಯಾಣ ಕರ್ನಾಟಕವಲ್ಲದೇ, ರಾಜ್ಯದಲ್ಲಿ ಹೆಸರುವಾಸಿಯಾಗಿದ್ದರು. ಮಹಾನ್ ವಿದ್ವಾಂಸರಾಗಿದ್ದ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅಗಲಿಕೆ ಇಡಿ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದ್ದಾರೆ. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಕೆಬಿಎನ್ ವಿವಿ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸಿದರು. ಅವರ ಈ ಸಾಧನೆಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗುಲಬರ್ಗಾ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹುಸೈನಿ ಅವರ ಅಗಲಿಕೆ ಕಲ್ಯಾಣ ಕರ್ನಾಟಕ ಭಾಗದ ಬಹುದೊಡ್ಡ ನಷ್ಟವಾಗಿದೆ ಎಂದು ಡಾ. ಅಜಯ್ ಸಿಂಗ್ ಮರುಗಿದ್ದಾರೆ.