ಸೈಲೆಂಟ್ ಕಿಲ್ಲರ್ ಖ್ಯಾತಿಯ ಅಧಿಕ ರಕ್ತದೊತ್ತಡ(ಬಿ.ಪಿ)
ಈ ಭುವಿಯಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಾನವ ಜೀವಿಯನ್ನು ಕಣ್ಣಿಗೆ ಕಾಣುವ ಅಥವಾ ಕಾಣದ ಹಲವಾರು ಸಮಸ್ಯೆಗಳಲ್ಲಿ ಅರೋಗ್ಯ ಸಮಸ್ಯೆ ಬಹು ಮುಖ್ಯವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಮನುಷ್ಯ ತನ್ನ ಆರೋಗ್ಯವನ್ನು ಕಾಪಾಡುವುದಕ್ಕೆ ಹರಸಾಹಸಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಇದೀಗ ಸೈಲೆಂಟ್ ಕಿಲ್ಲರ್ ಎಂದೇ ಪ್ರಸಿದ್ಧಿ ಆಗಿರುವ ಪರಿದಮನಿ ಹೃದಯರೋಗ, ಸಕ್ಕರೆ ಕಾಯಿಲೆ, ಅಸ್ಥಿ ರಂದ್ರತೆ, ನಿದ್ದೆಯಲ್ಲಿ ಉಸಿರು ಕಟ್ಟುವಿಕೆ, ಪಿತ್ತ ಜನಕಾಂಗ ಕಾಯಿಲೆಯ ಜೊತೆಯಲ್ಲಿ ಅಧಿಕ ರಕ್ತದೊತ್ತಡ (ಬಿ.ಪಿ) ಯೂ ಒಂದು.
ಈಗಿನ ಆಧುನಿಕ ಜಗತ್ತಿನಲ್ಲಿ ಮಾನವನ ಜೀವನಶೈಲಿಯ ಬದುಕು ಬಹಳ ಒತ್ತಡದಿಂದ ಕೂಡಿದೆ. ಪ್ರತಿಯೊಂದು ಕೆಲಸದ ವಿಭಾಗಗಳಲ್ಲಿ ಕಂಪ್ಯೂಟರ್‌ಗಳ ಬಳಕೆ, ಪ್ರತಿನಿತ್ಯ ಅನಿಯಮಿತ ಮೊಬೈಲ್ ಬಳಕೆ, ದಿನನಿತ್ಯದ ವ್ಯಾಪಾರ ವಹಿವಾಟು, ಕುಟುಂಬ ಜಂಜಾಟಗಳಿಂದ ಮನಸ್ಸು ಮತ್ತು ದೇಹ ಜರ್ಜರಿತಗೊಂಡು ದೇಹದ ರಕ್ತ ಪರಿಚಲನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಹೀಗಾಗಿ ಅಧಿಕ ಒತ್ತಡದಿಂದ ನಮ್ಮ ದೇಹದಲ್ಲಿ ರಕ್ತದೊತ್ತಡವು ಅಸಹಜವಾಗಿ ಹೆಚ್ಚಾದಾಗ ಉಂಟಾಗುವ ಸ್ಥಿತಿಯೇ ರಕ್ತದೊತ್ತಡ (ಬಿಪಿ) ದೇಹದ ಚಿಕ್ಕ ರಕ್ತನಾಳಗಳು ಕಿರಿದಾದಾಗ ಅಧಿಕದೊತ್ತಡ ಸಂಭವಿಸುತ್ತದೆ.
ಈಗೀಗ ಸರ್ವೇ ಸಾಮಾನ್ಯ ಎನ್ನುವಂತೆ ವಯಸ್ಸು ೩೦-೩೫ ದಾಟುವ ಮುನ್ನವೇ ಬಿ.ಪಿ ಬಂದುಬಿಡುತ್ತದೆ. ಯಾಕಾಗಿ ಬಿ.ಪಿಯನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತಾರೆ, ಯಾವುದೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳದೆ ಮನುಷ್ಯನ ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತದೆ. ಬಿ.ಪಿ ದಿನದ ಸಮಯವನ್ನು ಅವಲಂಬಿಸಿ ಏರುಪೇರಾಗಬಹುದು, ಸಾಮಾನ್ಯವಾಗಿ ಬಿ.ಪಿ ಬೆಳಗ್ಗೆ ಸಮಯದಲ್ಲಿ ಕಡಿಮೆ ಇರುತ್ತದೆ. ದಿನವಿಡೀ ಮಾಡುವ ಕೆಲಸದ ಮೇಲೆ ಏರುಪೇರಾಗುತ್ತದೆ ಮತ್ತು ರಾತ್ರಿ ಸಮಯದಲ್ಲಿ ಕಡಿಮೆಯಿರುತ್ತದೆ. ರಕ್ತದೊತ್ತಡವನ್ನು ಪರೀಕ್ಷಿಸುವಾಗ ಇವುಗಳನ್ನು ಪರಿಗಣಿಸುವುದು ಮುಖ್ಯವಾಗಿದೆ.
ಅಸ್ತಮಾ, ಜನನ ನಿಯಂತ್ರಣ ಅಥವಾ ಈಸ್ಟ್ರೋಜನ್ ನಿಯಂತ್ರಣಕ್ಕೆ ಸಂಬಂಧಿಸಿದ ಔಷಧಿಗಳು ಸೇರಿದಂತೆ ಕೆಲವು ಔಷಧಿಗಳು ರಕ್ತ ಒತ್ತಡವನ್ನು ಹೆಚ್ಚಿಸಲು ಕಾರಣವಾಗಬಹುದು, ನಿದ್ರೆಯಲ್ಲಿ ಉಸಿರು ಕಟ್ಟುವಿಕೆ, ಥೈರಾಯಿಡ್ ಸಮಸ್ಯೆಗಳು ಮತ್ತು ಕೆಲವು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಕಾರಣದಿಂದಾಗಿ ರಕ್ತದೊತ್ತಡ ಏರುಪೇರಾಗಬಹುದು. ಮಹಿಳೆಯರು ಗರ್ಭಧರಿಸಿದ ಸಮಯದಲ್ಲಿ ಬಿಪಿ ಬಾರದಂತೆ ಎಚ್ಚರ ವಹಿಸುವುದು ಉತ್ತಮ. ಅಧಿಕ ಟೆನ್ಶನ್, ಹೆಚ್ಚಿನ ದೇಹ ತೂಕ, ಹೊಟ್ಟೆಯ ಬೊಜ್ಜು ಅಥವಾ ವಂಶಪಾರಂಪರಿಕವಾಗಿ ತಂದೆ ತಾಯಿಗೆ ಬಿ.ಪಿ ಇದ್ದರೂ ಮಕ್ಕಳಿಗೆ, ದೊಡ್ಡವರಿಗೂ ಬಿಪಿ ಬರುವ ಸಂಭವ ಇರುತ್ತದೆ. ಯಾವುದೇ ದೈಹಿಕ ಶ್ರಮ ಇಲ್ಲದೆ ತೂಕ ಹೆಚ್ಚಾದಾಗ ಮಹಿಳೆಯರಲ್ಲಿ ಮೊದಲು ಪಿಸಿಓಡಿ ಶುರುವಾಗುತ್ತದೆ. ನಂತರ ಬಿ.ಪಿ, ಸಕ್ಕರೆ ಕಾಯಿಲೆ ಎಲ್ಲವೂ ಪ್ರಾರಂಭವಾಗುವ ಲಕ್ಷಣಗಳು ಹೆಚ್ಚು. ಇದರಿಂದ ಕೆಲವರಿಗೆ ಥೈರಾಯಿಡ್ ಸಮಸ್ಯೆಗಳು ಪ್ರಾರಂಭವಾಗುತ್ತದೆ.
ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಲಕ್ಷಣ ರಹಿತವಾಗಿರುತ್ತದೆ. ಅಂದರೆ ಇದು ಅನೇಕ ವ್ಯಕ್ತಿಗಳಲ್ಲಿ ಗಮನಾರ್ಹ ಲಕ್ಷಣಗಳನ್ನು ಉಂಟು ಮಾಡುವುದಿಲ್ಲ. ರೋಗ ಲಕ್ಷಣಗಳು ಮತ್ತು ಚಿಹ್ನೆಗಳು ಕೆಲವು ಸಂದರ್ಭಗಳಲ್ಲಿ ಉದ್ಭವಿಸಬಹುದು.
ತೀವ್ರ ತಲೆನೋವು, ಆಯಾಸ, ದೃಷ್ಟಿ ಸಮಸ್ಯೆಗಳು, ಎದೆ ನೋವು, ಉಸಿರಾಟದ ತೊಂದರೆ ಮತ್ತು ಅನಿಯಮಿತ ಹೃದಯ ಬಡಿತ. ಇವುಗಳು ರಕ್ತದ ಒತ್ತಡದ ಲಕ್ಷಣಗಳೆನ್ನಬಹುದು. ಬಿ.ಪಿಯನ್ನು ನಿಯಂತ್ರಣದಲ್ಲಿಡಲು ತಮ್ಮ ಜೀವನಶೈಲಿಯ ಬದಲಾವಣೆಗಳು ತುಂಬಾ ಮಹತ್ವವನ್ನು ವಹಿಸುತ್ತದೆ ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಮನೆ ಮದ್ದಿನಿಂದ ಪ್ರಾರಂಭ ಮಾಡಿದರೆ ಆರೋಗ್ಯಕ್ಕೆ ಉತ್ತಮ.
ವೈದ್ಯರ ಬಳಿ ಬಿ.ಪಿ ಇರುವ ಬಗ್ಗೆ ತಿಳಿದುಕೊಂಡು ಪ್ರಾರಂಭ ಹಂತದಲ್ಲಿ ಇದ್ದಾಗ ತಕ್ಷಣ ಸಂಬಂಧಪಟ್ಟ ಮಾತ್ರೆಗಳನ್ನು ತೆಗೆದುಕೊಳ್ಳದೇ ವೈದ್ಯರಿಗೆ ಮಾಹಿತಿ ನೀಡಿ ಮೊದಲು ಮಾನಸಿಕ ಟೆನ್ಶನ್ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಮನಸ್ಸು ಶಾಂತವಾಗಿ ಇರುವಂತೆ ನೋಡಿಕೊಳ್ಳಬೇಕು. ದಿನನಿತ್ಯದ ಊಟದಲ್ಲಿ ಉಪ್ಪನ್ನು ತುಂಬಾ ಕಡಿಮೆ ಮಾಡುವುದು. ಮುಂಜಾನೆ ಐದು ಗಂಟೆಗೆ ಎದ್ದು ನೀರು ಸೇವಿಸಿ ಕನಿಷ್ಠ ಆರು ಕಿ.ಮೀ. ಮಧ್ಯಮ ನಡಿಗೆ ಮಾಡಿ ನಂತರ ದೇಹಕ್ಕೆ ಬೇಕಾದ ಕನಿಷ್ಠ ವ್ಯಾಯಾಮ ಮಾಡುವುದರಿಂದ ದೇಹವು ಉಲ್ಲಾಸಭರಿತವಾಗಿ ರಕ್ತ ಪರಿಚಲನೆ ಸುಗಮವಾಗುತ್ತದೆ. ಮನೆಯಲ್ಲಿಯೇ ದಿನನಿತ್ಯ ಒಂದು ಗಂಟೆ ಯೋಗ ಮಾಡುವುದರಿಂದ ದೇಹದಲ್ಲಿ ದೃಢತೆ, ಶಕ್ತಿ ಹೆಚ್ಚಾಗುತ್ತದೆ. ಇದರಿಂದ ದೇಹ ಹಾಗೂ ಮನಸ್ಸಿನ ನಡುವೆ ಸಮತೋಲನ ಉಂಟಾಗಿ ಅಧಿಕ ರಕ್ತದೊತ್ತಡವೂ ಕಡಿಮೆಯಾಗುತ್ತದೆ.
ಇತ್ತೀಚೆಗೆ ಮಕ್ಕಳಲ್ಲೂ ರಕ್ತದೊತ್ತಡ ಪ್ರಾರಂಭವಾಗಿದೆ. ಈಗಾಗಲೇ ರಕ್ತದೊತ್ತಡ ಬಂದಿರುವ ೬ ರಿಂದ ೧೬ ವರ್ಷ ವಯಸ್ಸಿನ ಮಕ್ಕಳ ಮೇಲೆ ಅಧ್ಯಯನ ನಡೆಸಲಾಗಿದೆ. ಅದರ ಪೈಕಿ ಶೇ. ೯೦ರಷ್ಟು ಮಕ್ಕಳಿಗೆ ಬಿಪಿ ಬರಲು ಅವರ ಜೀವನಶೈಲಿ ಮತ್ತು ಆಹಾರ ಕ್ರಮವೇ ಕಾರಣ. ಇನ್ನು ನಿರ್ದಿಷ್ಟವಾಗಿ ಹೇಳುವುದಾದರೆ ಚಟುವಟಿಕೆ ರಹಿತ ಜೀವನಶೈಲಿ ಒಂದು ಪ್ರಮುಖ ಕಾರಣ. ಹಾಗೆಯೇ ಸಕ್ಕರೆ ಮತ್ತು ಉಪ್ಪು ಹೆಚ್ಚು ಇರುವ ಆಹಾರಗಳನ್ನು ಸೇವಿಸುವುದರಿಂದ ಹಾಗೂ ಹಾರ್ಮೋನ್ ಏರಿಳಿತದಿಂದ ದೇಹ ತೂಕ ಇರುವ ಮಕ್ಕಳಿಗೆ ಬಿ.ಪಿ ಬರುವ ಸಾಧ್ಯತೆಗಳು ಹೆಚ್ಚಿದೆ. ಶೇ. ೧೫ರಷ್ಟು ಧಡೂತಿ ಮಕ್ಕಳಲ್ಲಿ ಬಿಪಿ ಬರುವ ಸಾಧ್ಯತೆಗಳು ಹೆಚ್ಚು.
ಮಕ್ಕಳು ಏನು ಆಹಾರ ಸೇವಿಸಬೇಕು?: ಮಕ್ಕಳು ತಾಜಾ ತರಕಾರಿ ಹಣ್ಣು ಫೈಬರ್ ಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಹೆಚ್ಚಾಗಿ ಉಪ್ಪು ಬಳಸುವ ಆಹಾರ, ಗ್ಯಾಸ್ ಇರುವ ಪಾನೀಯಗಳು, ವಿಪರೀತ ಸಕ್ಕರೆ ಹಾಕಿದ ಪಾನೀಯಗಳಿಂದ ದೂರ ಇರಬೇಕು. ಸ್ಯಾಚುರೇಟೆಡ್ ಫ್ಯಾಟ್ ಅಥವಾ ಕೊಬ್ಬು ಇರುವ ಆಹಾರದ ಸೇವನೆ ಕಡಿಮೆ ಮಾಡಬೇಕು. ಮಾಂಸಾಹಾರಿಗಳು ಬಳಸುವ ಕುರಿ ಮಾಂಸದಲ್ಲಿ ನೆಣದಾಳು ಹೆಚ್ಚಾಗಿ ಇರುತ್ತದೆ ಹಾಗೂ ಕೋಳಿ ಮಾಂಸ ಚರ್ಮದಲ್ಲೂ ಇರುತ್ತದೆ. ಕೋಳಿ ಮಾಂಸ ತರುವಾಗ ಸ್ಕಿನ್ ಔಟ್ ಮಾಡಿಸುವುದು ಉತ್ತಮ.
ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಿ, ಜಾಗಿಂಗ್ ಮಾಡುವುದು, ಸೈಕಲ್ ತುಳಿತ ಮತ್ತು ದಿನ ನಿತ್ಯದ ಈಜು ಉತ್ತಮ ಆರೋಗ್ಯಕ್ಕೆ ರಾಮಬಾಣ. ಮಕ್ಕಳಿಗೆ ಆಟ ಮತ್ತು ಪಾಠ ಬಹಳ ಮುಖ್ಯ. ಪಾಠ ಬಿಟ್ಟು ಉಳಿದ ಹೆಚ್ಚಿನ ಸಮಯವನ್ನು ಮಕ್ಕಳು ಆಟ ಹಾಗೂ ಇತರ ದೈಹಿಕ ಚಟುವಟಿಕೆಯಲ್ಲಿರುವುದು ಉತ್ತಮ.
ಮೊದಲಿಗೆ ಸೋಡಿಯಂ ಕಡಿಮೆ ಇರುವ ಆರೋಗ್ಯಕರ ಆಹಾರ ದೇಹಕ್ಕೆ ಉತ್ತಮ. ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಅಥವಾ ಕ್ಯಾರೆಟ್ ಜ್ಯೂಸ್, ಹಾಗಲಕಾಯಿ ಜ್ಯೂಸ್ ಈ ರೀತಿಯಲ್ಲಿ ಜ್ಯೂಸ್ ಕುಡಿಯುವುದರಿಂದ ಕ್ರಮೇಣ ಬಿಪಿ ಹತೋಟಿಗೆ ಬರುತ್ತೆ. ದಿನಾಲು ೧೫ ನಿಮಿಷ ಆದರೂ ಪ್ರಾಣಾಯಾಮ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಬಿಪಿಯನ್ನು ಹತೋಟಿಗೆ ತರಬಹುದು ಅಲ್ಲದೆ ಹೊಟ್ಟೆ ಬೊಜ್ಜು ಕರಗಲು ಸಹಾಯಕ. ಪ್ರತಿನಿತ್ಯ ಶುದ್ಧ ನೀರನ್ನು ಹೆಚ್ಚು ಕುಡಿಯಬೇಕು. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆ ಆದಾಗ ಅದರ ಮುಖಾಂತರ ದೇಹದಲ್ಲಿ ಕೂಡಿಕೊಂಡ ಉಪ್ಪಿನ ಅಂಶ ಹೊರ ಹೋಗುತ್ತದೆ, ಬೆಳ್ಳುಳ್ಳಿ, ಲವಂಗವನ್ನು ನಿಮ್ಮ ಊಟದೊಂದಿಗೆ ಸೇರಿಸಿ. ಪ್ರತಿದಿನ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಹೆಸರು ಬೇಳೆ ಸೂಪ್ ಅಥವಾ ಹೆಸರುಕಾಳಿನ ಪಲ್ಯ ಮಾಡಿ ಸೇವನೆ ಮಾಡುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆಲ್ಕೋಹಾಲ್ ಸೇವನೆ ಇದ್ದರೆ ಕಡಿಮೆ ಮಾಡುವುದು, ಧೂಮಪಾನವನ್ನು ತ್ಯಜಿಸುವುದು ರಕ್ತದ ಒತ್ತಡಕ್ಕೆ ಉತ್ತಮ.
ಬಿ.ಪಿಯನ್ನು ದಿನಾಲೂ ಟ್ರಾ÷್ಯಕ್ ಮಾಡಲು ಸ್ವಯಂ ಮೇಲ್ವಿಚಾರಣೆ ಸಾಧನವನ್ನು ಮನೆಯಲ್ಲಿಟ್ಟು ವಾರಕ್ಕೆರಡು ಬಾರಿ ಪರೀಕ್ಷಿಸಿಕೊಂಡಲ್ಲಿ ದೇಹದ ಸ್ಥಿತಿಗತಿಯನ್ನು ಅವಲೋಕಿಸಿಕೊಳ್ಳಬಹುದು.
ನಿಮ್ಮ ದೇಹದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿ. ನೀವು ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಗುರಿಯಾದಲ್ಲಿ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಸೂಕ್ತ ವೈದ್ಯರಿಂದ ವೈಯಕ್ತಿಕ ಸಲಹೆಗಳನ್ನು ಪಡೆದು ಚಿಕಿತ್ಸೆ ಪಡೆಯುವುದು ಒಳಿತು.