ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೋತಿದ್ದು ಪ್ರಕರಣ: ಗೆದ್ದಿದ್ದು ಕಾನೂನು

03:30 AM May 11, 2024 IST | Samyukta Karnataka

ಕೆಲವೊಂದು ಪ್ರಕರಣಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಅವುಗಳ ಹಣೆಬರಹ ಗೊತ್ತಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಪ್ರಕರಣದ ನ್ಯೂನತೆಗಳನ್ನು ಮೊದಲೇ ಕಕ್ಷಿದಾರರಿಗೆ ತಿಳಿಸಿಕೊಡುವುದು ಒಳಿತು. ಅವರು ಜಯ ಅಪಜಯಗಳಿಗೆ ಮಾನಸಿಕವಾಗಿ ಸಿದ್ಧರಾಗಿಬಿಡುತ್ತಾರೆ. ಪ್ರಕರಣಗಳಲ್ಲಿ ಒಂದು ಅಗೋಚರವಾದ ಭರವಸೆ ಮೂಡುತ್ತದೆ. ಇಂತಹ ಸವಾಲುಗಳಿಗೆ ಮೈವೊಡ್ದುವುದು, ಎದುರಿಸುವುದು, ಕಕ್ಷಿದಾರರನ್ನು ಸಿದ್ಧಪಡಿಸುವುದು ವೃತ್ತಿ ಅನಿವಾರ್ಯತೆ. ಪ್ರಾರಂಭದಲ್ಲಿ ನ್ಯೂನತೆ ಗುಣಗಳ ಪ್ರಕರಣಗಳು, ದಾರಿ ಸರಿದಂತೆ, ಸಂಗತಿಗಳ ತಿರುವುಗಳು, ಹೊಸ ಕಾನೂನಿನ ಅಂಶದಿಂದ ಗಟ್ಟಿಗೊಳ್ಳುತ್ತವೆ. ಒಮ್ಮೊಮ್ಮೆ ಕಕ್ಷಿದಾರ ಅಶಕ್ತ ಕೇಸು ದಿನಕಳೆದಂತೆ ಗಟ್ಟಿಯೆ ಎಂದು ನಂಬುವ ಅಪಾಯ ಇದೆ.
ನಾನು ಅವಳಿಗೆ ಮೊದಲೇ ಹೇಳಿದೆ. ನೋಡಮ್ಮ ನಿನಗೆ ಹಾಗೂ ನಿನ್ನ ಮಕ್ಕಳಿಗೆ, ನಿನ್ನ ಗಂಡನ ಆಸ್ತಿಯಲ್ಲಿ ಹಕ್ಕು ನಿರೂಪಿಸುವುದು ಅಷ್ಟು ಸುಲಭದ ಮಾತಲ್ಲ. ಸುಮ್ಮನೆ ನಿನಗೆ ಹಾಗೂ ನಿನ್ನ ಮಕ್ಕಳಿಗೆ ಪ್ರತಿ ತಿಂಗಳು ಜೀವನಾಂಶ ಕೋರಿ ಇಲ್ಲವೆ ನಿನಗೆ ನಿನ್ನ ಗಂಡ ಎಸಗಿದ ದೌರ್ಜನ್ಯಕ್ಕೆ ಪರಿಹಾರವನ್ನು ಕೇಳುವುದು ವಿಹಿತ ಅಂತ ಮನವರಿಕೆ ಮಾಡಿದೆ. ಅವಳಿಗೆ ಒಂದೇ ಹಠ ಆಸ್ತಿಯ ಮೇಲೆ ಕೇಸು ಮಾಡಲೇಬೇಕು. ನಾವಿಷ್ಟು ತಿಳಿಸಿ ಹೇಳಿದ ಮೇಲೆಯೂ ಅದಕ್ಕೆ ಸಿದ್ಧರಾಗಿಯೇ ಇರುವ ಕಕ್ಷಿದಾರರ ಇಚ್ಛೆಯಂತೆ ಮುಂದುವರಿಯುವುದು ಅನಿವಾರ್ಯ. ನಾನು ನಿರಾಕರಿಸಿದರೆ ಅವರೇನು ಕೇಸು ಮಾಡುವುದನ್ನು ಬಿಡುವುದಿಲ್ಲ, ಇನ್ನೊಬ್ಬ ವಕೀಲರನ್ನು ಹುಡುಕುತ್ತಾರೆ. ಕಕ್ಷಿದಾರರ ಪರವಾಗಿ ಒಂದು ಚಿಕ್ಕ ಆಶಾಕಿರಣ ಇತ್ತು. ನ್ಯಾಯಾಲಯ ನಂಬುವದು ಅಷ್ಟು ಸರಳವಿರಲಿಲ್ಲ. ಕೇಸು ದಾಖಲಿಸುವುದೆಂದು ನಿರ್ಧಾರವಾಯಿತು.
ಅವಳು ಹೇಳಿದ ಸಂಗತಿಗಳನ್ನು ಅವಳ ಮಾತಿನಲ್ಲಿಯೇ ಕೇಳಿ. "ಸರ್ ನನ್ನ ಮದುವೆಯಾಗಿ ೪೦ ವರ್ಷಗಳಾದವು. ನನಗೆ ಇಬ್ಬರು ಗಂಡು ಮಕ್ಕಳು. ನನ್ನ ಗಂಡನಿಗೆ ಮತ್ತು ನನಗೆ ಮಾನಸಿಕವಾಗಿ ಹೊಂದಾಣಿಕೆ ಆಗಲಿಲ್ಲ. ಸುಮಾರು ಹತ್ತು ವರ್ಷಗಳಿಂದ ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ. ನನ್ನ ಗಂಡನಿಗೆ, ಅಣ್ಣ ತಮ್ಮಂದಿರ ಪಾಲಿನಿಂದ ಬಂದ ಒಂದು ಎಕರೆ ಜಮೀನು ಇದ್ದಿತು. ಅದನ್ನು ಮಾರಾಟ ಮಾಡಿ ಎರಡು ಮನೆಗಳನ್ನು ಕ್ರಯ ತೆಗೆದುಕೊಂಡಿದ್ದಾನೆ. ಆ ಎರಡು ಮನೆಗಳನ್ನು ಇಬ್ಬರಿಗೆ ಮಾರಾಟ ಮಾಡಿದ್ದಾನೆ. ಮನೆಗಳನ್ನು ತೆಗೆದುಕೊಂಡವರು ನಮಗೆ ಗೊತ್ತಿದ್ದವರು. ನನ್ನನ್ನು ಹಾಗೂ ನನ್ನ ಮಕ್ಕಳ ಪರವಾನಿಗೆ ಕೇಳಲಿಲ್ಲ. ನಮಗೆ ಆಸ್ತಿಗಳಲ್ಲಿ ಪಾಲು ಕೊಡಿಸಬೇಕು. ನನ್ನ ಗಂಡ ಪಿತ್ರಾರ್ಜಿತ ಹೊಲ ಮಾರಿ ಬಂದ ಹಣದಿಂದ, ಮನೆಗಳನ್ನು ಖರೀದಿಸಿದ್ದಾನೆ. ಆ ಮನೆಗಳಲ್ಲಿ ನಮಗೆ ಹಕ್ಕು ಇದೆ". ಅವಳು ತನಗೆ ತಿಳಿದಷ್ಟು ಕಾನೂನಿನ ಅಂಶ ಸೇರಿಸಿ ತನ್ನ ಮನಸ್ಸನ್ನು ಹಗುರ ಮಾಡಿಕೊಂಡಳು. ಆದರೆ ಇವಳಿಗೆ ಪಾಲು ಕೊಡಿಸುವುದು ನನಗೆ ಭಾರ ಎನಿಸಿತು.
ಅವಳು ನನ್ನ ಮುಂದೆ ಹರವಿ ಇಟ್ಟ ದಾಖಲೆಗಳನ್ನು ಪರಿಶೀಲಿಸಿದೆ. ಇವಳ ಗಂಡ ೨೦೧೫ರಲ್ಲಿ ಎರಡು ಮನೆಗಳನ್ನು ಖರೀದಿಸಿದ್ದನು. ಮನೆಯ ಸರಕಾರಿ ದಾಖಲೆಯಲ್ಲಿ ಹೆಸರು ದಾಖಲಾಗಿತ್ತು. ಆನಂತರ ೨೦೧೯ರಲ್ಲಿ ಎರಡು ಮನೆಗಳನ್ನು ಇಬ್ಬರಿಗೆ ಮಾರಾಟ ಮಾಡಿದ್ದನು. ಖರೀದಿದಾರರ ಹೆಸರುಗಳು ಮನೆಗಳ ಸರಕಾರಿ ದಾಖಲೆಯಲ್ಲಿ ದಾಖಲಾಗಿದ್ದವು. ಅವರು ಸ್ವಾಧೀನದಲ್ಲಿ ಇದ್ದರು. ಈ ಸಂಬಂಧಿ ನಗರ ಸಭೆಯ ದಾಖಲಾತಿಗಳನ್ನು ಪರಿಶೀಲಿಸಿದೆ. ಇಷ್ಟು ಪರಿಶೀಲನೆಯಿಂದ ಎರಡು ಮನೆಗಳು ಗಂಡನ ಸ್ವಯಾರ್ಜಿತ ಆಸ್ತಿಗಳು ಅನ್ನೋದನ್ನು ಹೇಳುತ್ತಿದ್ದವು. ಕಕ್ಷಿದಾರಳು ಹೇಳಿದಂತೆ ಗಂಡನು ತನ್ನ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ ಯಾವುದೇ ದಾಖಲಾತಿ ಇರಲಿಲ್ಲ. ಅವುಗಳನ್ನು ತಂದುಕೊಡಲು ಕಕ್ಷಿದಾರಳಿಗೆ ತಿಳಿಸಿದೆ. ಆಸ್ತಿಗಳು ಬೇರೆ ಜಿಲ್ಲೆಯ ಹಳ್ಳಿಯಲ್ಲಿದ್ದು, ಅವುಗಳ ದಾಖಲಾತಿಯನ್ನು ಅವರ ಸಹೋದರ ತಂದು ಕೊಡುವುದಾಗಿ ತಿಳಿಸಿದ್ದಾನೆ ಎಂದು ಹೇಳಿ, ಮೊದಲು ದಾವೆಯನ್ನು ದಾಖಲಿಸಿ ಅಂತ ಒತ್ತಾಯಪಡಿಸಿದಳು.
ಕಕ್ಷಿದಾರಳ ಆಸೆಯಂತೆ, ಕಕ್ಷಿದಾರಳು ಹಾಗೂ ಅವಳ ಇಬ್ಬರು ಮಕ್ಕಳು ವಾದಿಯೆಂದು, ಕಕ್ಷಿದಾರಳ ಗಂಡ ಮತ್ತು ಇಬ್ಬರು ಖರೀದಿದಾರರನ್ನು ಪ್ರತಿವಾದಿಯರನ್ನಾಗಿ ಮಾಡಿ, ವಿಭಾಗ ಮತ್ತು ಪ್ರತ್ಯೇಕ ಸ್ವಾಧೀನಕ್ಕೆ ಪ್ರಾರ್ಥಿಸಿ ಸಿವಿಲ್ ದಾವೆಯನ್ನು ದಿವಾಣಿ ನ್ಯಾಯಾಲಯದಲ್ಲಿ ಅಳುಕಿನೊಂದಿಗೆ ದಾಖಲಿಸಿದೆ.
ಪ್ರತಿವಾದಿಯರಿಗೆ ನ್ಯಾಯಾಲಯದಿಂದ ಸಮನ್ಸ್ ತಲುಪಿದವು. ವಕೀಲರ ಮುಖಾಂತರ ಪ್ರತಿವಾದಿಯರು ಹಾಜರಾದರು. ಪ್ರತಿವಾದಿಯರು ತಮ್ಮ ದೀರ್ಘವಾದ ಕೈಫಿಯತ್/ತಕರಾರನ್ನು ಸಲ್ಲಿಸಿ, ದಾವಾ ಮನೆಯಲ್ಲಿ ವಾದಿಯರಿಗೆ ಯಾವುದೇ ಹಕ್ಕು ಇರುವುದಿಲ್ಲ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಒಂದನೇ ವಾದಿ ವಿನಾಕಾರಣ ತನ್ನ ಗಂಡನ ಜೊತೆ ಜಗಳ ಮಾಡಿ ತನ್ನ ತವರುಮನೆ ಸೇರಿಕೊಂಡಿದ್ದಾಳೆ. ಆನಂತರ ಮರಳಿರುವುದಿಲ್ಲ. ಒಂದನೇ ಪ್ರತಿವಾದಿ ದಾವೆ ಮನೆಗಳನ್ನು ೨೦೧೫ರಲ್ಲಿ ಪ್ರತಿ ಮನೆಗೆ ರೂ. ಇಪ್ಪತ್ತೈದು ಲಕ್ಷ ಹಣ ಕೊಟ್ಟು ಖರೀದಿಸಿ, ಸ್ವಾಧೀನದಲ್ಲಿ ಇದ್ದನು. ತನ್ನ ಆರೋಗ್ಯ ಕೈಕೊಟ್ಟಿರುವುದರಿಂದ ಸಾಲ ಮಾಡಿ, ವೈದ್ಯಕೀಯ ಖರ್ಚು ಮಾಡಿ ಸಾಲದಲ್ಲಿ ಒದ್ದಾಡುತ್ತಿದ್ದನು. ಅನಿವಾರ್ಯವಾಗಿ ಗಂಡನು ಎರಡನೆ ಮತ್ತು ಮೂರನೆ ಪ್ರತಿವಾದಿಯರಿಗೆ ಪ್ರತಿ ಮನೆಗೆ ರೂ. ಮೂವತ್ತೈದು ಲಕ್ಷ ಹಣಕ್ಕೆ ಮಾರಾಟ ಮಾಡಿರುತ್ತಾನೆ. ಖರೀದಿದಾರರು ದುಡ್ಡು ಕೊಟ್ಟು ಹಕ್ಕಿನ ಬಗ್ಗೆ ಪರಿಶೀಲನೆ ಮಾಡಿ, ವಾದಿಯರಿಗೆ ತಿಳಿಸಿ ಖರೀದಿಸಿದ ಬೋನಾಫೈಡ್ ಪರಚೆಜರ/ಅಮಾಯಕ ಖರೀದಾರರು ಇರುತ್ತಾರೆ. ಖರೀದಿದಾರರು ಲಕ್ಷಾಂತರ ಹಣ ಖರ್ಚು ಮಾಡಿ ಮನೆ ನವೀಕರಿಸಿದ್ದಾರೆ, ಆದ್ದರಿಂದ ದಾವೆ ವಜಾಗೊಳಿಸಲು ವಿನಂತಿಸಿದರು.
ನನ್ನ ಊಹೆಗೆ ತಕ್ಕಂತೆ ಪ್ರತಿವಾದಿಯರು ತಮ್ಮ ಪ್ರತಿವಾದ ಮಾಡಿದ್ದರು. ಇತ್ತೀಚಿಗೆ ಸಿವಿಲ್ ಪ್ರೊಸಿಜರ್ ಕೋಡ್ ತಿದ್ದುಪಡಿಯಂತೆ ಯಾವುದೇ ಪ್ರಕರಣದಲ್ಲಿ ಸಂಧಾನಕ್ಕೆ ಸಹಾಯವಾಗುವ ಅಂಶ ಇದ್ದರೆ ಉಭಯ ಪಾರ್ಟಿಗಳನ್ನು ಸಂಧಾನಕ್ಕೆ ಒಲಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಸಂಧಾನಕ್ಕೆ ವಾದಿ ಪ್ರತಿವಾದಿಯರು ಒಪ್ಪಲಿಲ್ಲ. ಸಂಧಾನ ವಿಫಲವಾಯಿತು. ವಿಚಾರಣೆಗೆ ನ್ಯಾಯಾಲಯ ಪ್ರಕರಣ ಮುಂದೂಡಿತು.
ಮೊದಲಿಗೆ ವಾದಿಯ ಪರ ಸಾಕ್ಷಿ ವಿಚಾರಣೆ ಆಗಬೇಕು. ಹಲವಾರು ಸಲ ಪಿತ್ರಾರ್ಜಿತ ಆಸ್ತಿಗಳ ಮಾರಾಟದ ಕ್ರಯಪತ್ರ ದಾಖಲೆ ತರಲು ಹೇಳಿದ್ದೆ, ತಂದಿರಲಿಲ್ಲ. ಕೊನೆಗೆ ವಾದಿ ದಾಖಲಾತಿ ಕೈಯಲ್ಲಿಟ್ಟಳು. ಏನೋ ಮುಳುಗುವವನಿಗೆ ಹುಲ್ಲು ಆಸರೆ ದೊರಕಿದಂತಾಯಿತು. ವಾದಿ ಪರ ಹೆಂಡತಿ, ಇಬ್ಬರು ಸಾಕ್ಷಿದಾರರ ಮುಖ್ಯ ವಿಚಾರಣೆ ಪ್ರಮಾಣಪತ್ರ ಹಾಜರುಪಡಿಸಿದೆ. ಪ್ರತಿ ವಾದಿ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್ ಮಾಡಿದರು. ಪ್ರತಿವಾದಿ ಪರವಾಗಿ ಖರೀದಾರರ ಮುಖ್ಯ ವಿಚಾರಣೆ ಪ್ರಮಾಣಪತ್ರ ಹಾಜರುಪಡಿಸಿದರು, ನಾನು ಅವರನ್ನು ದೀರ್ಘವಾಗಿ ಕ್ರಾಸ್ ಎಕ್ಸಾಮಿನೇಷನ್ ಮಾಡಿದೆ. ನ್ಯಾಯಾಲಯವು ವಾದಿ ಪ್ರತಿವಾದಿಯರ ವಾದವನ್ನು ಆಲಿಸಿ ತೀರ್ಪಿಗಾಗಿ ಪ್ರಕರಣವನ್ನು ಮುಂದೂಡಿತು. ಕೇಸು ಎಷ್ಟೇ ಅಶಕ್ತ ಇದ್ದರೂ ನಮ್ಮ ಮನದಲ್ಲಿ ಯಶಸ್ಸು ಇಣುಕುತ್ತದೆ.
ಅಂತಿಮ ತೀರ್ಪು: ನ್ಯಾಯಾಲಯವು, ದಾವೆ ಆಸ್ತಿ, ಒಂದನೆ ಪ್ರತಿವಾದಿಯು ಪಿತ್ರಾರ್ಜಿತ ಆಸ್ತಿ ಎರಡು ಸಾವಿರ ರೂಪಾಯಿಗೆ ಮಾರಾಟ ಮಾಡಿ ಬಂದ ಹಣದಿಂದ ಮೂವತ್ತು ವರ್ಷದ ನಂತರ ದಾವೆ ಮನೆಗಳನ್ನು ಖರೀದಿಸಿದ್ದು, ಆದ್ದರಿಂದ ದಾವೆ ಸ್ವತ್ತು ಗಂಡನ ಸ್ವಯಾರ್ಜಿತ ಆಸ್ತಿ ಅನ್ನುವುದನ್ನು ನಂಬಲು ಅಸಾಧ್ಯ. ಪ್ರತಿವಾದಿ ೩, ೪ ಇವರು ಪ್ರತಿ ಮನೆಗೆ ಮೂವತ್ತೈದು ಲಕ್ಷಕ್ಕೆ ಗಂಡನಿಂದ ಖರೀದಿಸಿದ ಬೋನಾಫೈಡ್ ಪರಚೇಜರ್/ಅಮಾಯಕ ಖರೀದಾರರು ಇದ್ದು, ಮನೆಯನ್ನು ಲಕ್ಷಾಂತರ ಹಣ ಖರ್ಚು ಮಾಡಿ ನವೀಕರಣ ಮಾಡಿದ್ದಾರೆ. ದಾವೆ ಆಸ್ತಿ ಗಂಡನ ಸ್ವಯಾರ್ಜಿತ ಆಸ್ತಿ ಇದ್ದು ಈಗಾಗಲೇ ಮಾರಾಟವಾಗಿದೆ ಎಂದು ಅಭಿಪ್ರಾಯಪಟ್ಟು ದಾವೆಯನ್ನು ವಜಾಗೊಳಿಸಿ ಜಡ್ಜ್ಮೆಂಟ್ ಆದೇಶ ಮಾಡಿತು.
ವಾದಿಯರು, ನ್ಯಾಯಾಲಯದ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುವ ಹಠಕ್ಕೆ ಬಿದ್ದರು. ಅಷ್ಟರಲ್ಲಿ ಹಿರಿಯರು ಉಭಯತರಿಗೆ ಬುದ್ಧಿ ಹೇಳಿ, ವಾದಿಯರ ಜೀವನ ನಿರ್ವಹಣೆಗಾಗಿ ಹಣವನ್ನು ಪ್ರತಿವಾದಿಯರಿಂದ ಕೊಡಿಸಿದರು. ಕಾನೂನಿಗೆ ಕಣ್ಣಿಲ್ಲ ನಿಜ, ಮಾನವೀಯತೆಗೆ, ಹೃದಯಕ್ಕೆ, ಭಾವನೆಗೆ ಹಲವು ಕಣ್ಣಿವೆ.

Next Article