ಸೋದಿಮಾಮಾ ತಪಸ್ಸು ಅಲೈಕನಕನ ಮನಸ್ಸು
ಸೋದಿಮಾಮರೇಕೆ ಅಲ್ಲಿ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದಾರೆ? ಎನ್ನುವುದರ ಬಗ್ಗೆ ತೀರ ತಲೆಕೆಡೆಸಿಕೊಂಡ ಅಲೈಕನಕ ಅವರಿವರನ್ನು ಕೇಳಿದರೂ ಸೋದಿಮಾಮಾ ಯಾವ ಕಾರಣಕ್ಕಾಗಿ ತಪಸ್ಸಿಗೆ ಕುಳಿತಿದ್ದಾರೆ ಎಂದು ಹೇಳಲಿಲ್ಲ. ಕರಿಲಕ್ಷಂಪತಿ ಮಾತ್ರ…ಅಯ್ಯೋ ಅದೆಲ್ಲ ಹೇಳಲು ಬರುವುದಿಲ್ಲ ಕಂದಾ…ಎಂದು ಸಸ್ಪೆನ್ಸ್ ಆಗಿ ಹೇಳಿದ್ದ. ಸೋದಿಮಾಮಾ ಯಾವತ್ತೂ ಹಾಗೆಯೇ…ಒಂದೆರಡು ದಿನ ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷನಾಗಿ ಕಷ್ಟ-ಸುಖ ಮಾತನಾಡಿ ಕೇಳು ನಿನಗೇನು ಬೇಕು ಅಂದಾಗ ಸೋದಿಮಾಮಾ ಹೇಳುತ್ತಾನೆ. ಏನು ಕೇಳಿಕೊಂಡೆ ಎಂದು ಜನರ ಮುಂದೆ ಹೇಳುವುದಿಲ್ಲ. ಯಾಕೆಂದರೆ ಯಾರ ಮುಂದೆ ಹೇಳಬಾರದು ಎಂದು ದೇವರು ಮೊದಲೇ ಕಂಡೀಷನ್ ಹಾಕಿರುತ್ತಾರೆ ಎನ್ನುವ ಸುದ್ದಿಗಳೂ ಹಬ್ಬಿದ್ದವು. ಇದ್ಯಾವುದರ ಬಗ್ಗೆಯೂ ತಲೆ ಕೆಡೆಸಿಕೊಳ್ಳದ ಅಲೈಕನಕ ನನಗೆ ಪಕ್ಕಾ ಸುದ್ದಿ ಬೇಕು. ಅವರಿವರು ಹೇಳುವುದನ್ನು ನಾನು ಕೇಳುವುದಿಲ್ಲ ಎಂದು ಸಂಕಲ್ಪ ಮಾಡಿಕೊಂಡ. ಕೊನೆಗೆ ಡಿವಿರಾಚಾರಿಯನ್ನು ಕೇಳಿದಾಗ…ಅಲ್ಲಿ ಅವರು ತಪಸ್ಸಿಗೆ ಕುಳಿತಂತೆ ಇಲ್ಲಿ ನೀನು ಕುಳಿತುಕೋ…ಧ್ಯಾನದಲ್ಲಿ ದೇವರನ್ನು ನೆನಪಿಸಿಕೋ…ಒಂದುವೇಳೆ ದೇವರು ಪ್ರತ್ಯಕ್ಷನಾದರೆ ಆತನನ್ನೇ ಕೇಳುವುದು ಉತ್ತಮ. ಇಲ್ಲ ಅಂದರೆ ಅವರು ಅಲ್ಲಿ ಯಾಕೆ ತಪಸ್ಸು ಮಾಡುತ್ತಿದ್ದಾರೆ ಎಂಬುದು ತಲೆಗೊಂದು ಮಾತು ಕೇಳಬೇಕಾಗುತ್ತದೆ ಎಂದು ತರ್ಕಬದ್ದವಾಗಿ ಹೇಳಿದಾಗ…ಅಲೈಕನಕನಿಗೆ ಅದೇ ಸರಿ ಅನಿಸಿತು. ಊರಮುಂದಿನ ಎರಡು ಆಲದ ಮರಗಳ ನಡುವೆ ಅಮವಾಸ್ಯೆ ದಿನ ತಪಸ್ಸಿಗೆ ಕೂಡುವುದು ಎಂದು ನಿರ್ಧರಿಸಿದ. ಕೂಡಲೇ ಮುದಿಗೋವಿಂದಪ್ಪನ ಅಂಗಡಿಯಲ್ಲಿ ಎರಡು ತೆಂಗಿನಕಾಯಿ, ಊದಿನಕಡ್ಡಿ, ಕುಂಕುಮದ ಪಾಕೇಟುಗಳನ್ನು ಉದ್ರಿಯಾಗಿ ತಂದಿಟ್ಟುಕೊಂಡ. ತಪಸ್ಸು ಮಾಡುವ ಸ್ಥಳದಲ್ಲಿ ರಂಗವ್ವ ದೊಡ್ಡದಾಗಿ ರಂಗೋಲಿ ಬಿಡಿಸಿದ್ದಳು. ಅದರ ಮೇಲೆ ಚಾಪೆ ಹಾಸಿಕೊಂಡು. ಹಿತ್ತಾಳೆತಂಬಿಗೆಯಲ್ಲಿ ನೀರು ಇಟ್ಟುಕೊಂಡ. ತೆಂಗಿನಕಾಯಿ ಒಡೆದು ಮುಂದೆ ಇಟ್ಟುಕೊಂಡ. ಅಂಗಿಬಿಚ್ಚಿ ವಿಭೂತಿ ಬಡಿದುಕೊಂಡು ಚೆಂಡುವಿನ ಹಾರ ಹಾಕಿಕೊಂಡ. ರಾತ್ರಿ ಹುಳಹುಪ್ಪಡಿಗಳು ಬರಬಾರದು ಎಂದು ಸಿಕ್ಕಾಪಟ್ಟೆ ಊದಿನಕಡ್ಡಿ ಹಚ್ಚಿದ. ಉದಿನಕಡ್ಡಿ ಹೊಗೆ ಮರದಲ್ಲಿರುವ ಜೇನುಗೂಡಿಗೆ ತಾಗಿ ಹುಳುಗಳೆಲ್ಲ ಅಲೈಕನಕನ ಮೇಲೆ ದಾಳಿ ಮಾಡಿ ಎಲ್ಲೆಂದರಲ್ಲಿ ಕಚ್ಚಿದವು. ಅಲ್ಲಿಂದ ಓಡಿಬಂದು ಮಲಗಿದ ಕನಕ ಇನ್ನೂ ಎದ್ದಿಲ್ಲ.