For the best experience, open
https://m.samyuktakarnataka.in
on your mobile browser.

ಸೋಲಾರ್‌ಗೆ ಕಾರ್ಬನ್ ಕ್ರೆಡಿಟ್ ಮಾರ್ಕೆಟ್ ಏಕಿಲ್ಲ

03:32 AM Oct 25, 2024 IST | Samyukta Karnataka
ಸೋಲಾರ್‌ಗೆ ಕಾರ್ಬನ್ ಕ್ರೆಡಿಟ್ ಮಾರ್ಕೆಟ್ ಏಕಿಲ್ಲ

ಕರ್ನಾಟಕ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಆದರೆ ಸೋಲಾರ್ ನಿಂದ ಉಳಿತಾಯವಾಗುವ ಇಂಗಾಲಾಮ್ಲಕ್ಕೆ ಸಿಗಬೇಕಾದ ಸರ್ಟಿಫಿಕೇಟ್ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಕಾರ್ಬನ್ ಕ್ರೆಡಿಟ್‌ಗೆ ಪ್ರತ್ಯೇಕ ಎಕ್ಸ್‌ಚೇಂಜ್ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಆದರೆ ಸೂಕ್ತ ನಿಯಮಗಳನ್ನು ಇನ್ನೂ ರಚಿಸಿಲ್ಲ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ರೆಡಿಟ್ ಪಡೆಯಬೇಕು. ಇದು ಸುಲಭದ ಕೆಲಸವಲ್ಲ. ಪ್ರತಿ ದೇಶವೂ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ನಮ್ಮ ಸಿಡಿಎಂ ವ್ಯವಸ್ಥೆಯಂತೆ ನೋಂದಾಯಿಸಿಕೊಳ್ಳುವುದೇ ಕಷ್ಟ. ಅಲ್ಲದೆ ರಷ್ಯಾ-ಉಕ್ರೇನ್ ಯುದ್ಧದಿಂದ ಕಾರ್ಬನ್ ಕ್ರೆಡಿಟ್ ೬೦-೭೦ ಸೆಂಟ್‌ಗೆ ಇಳಿದಿದೆ. ಹಿಂದೆ ಇದು ೬-೭ ಡಾಲರ್ ಇತ್ತು. ಹೀಗಾಗಿ ಯಾರೂ ಕಾರ್ಬನ್ ಕ್ರೆಡಿಟ್ ಪಡೆಯಲು ಬಯಸುತ್ತಿಲ್ಲ.
ಕರ್ನಾಟಕದಲ್ಲಿ ೨೫ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಪಡೆಯಬಹುದು. ಈಗ ೧೦ ಗಿಗಾವ್ಯಾಟ್ ವಿದ್ಯುತ್ ಪಡೆಯಲು ಸಾಧ್ಯವಾಗಿದೆ. ವರ್ಷದಲ್ಲಿ ೩೦೦ ದಿನಗಳು ಸೂರ್ಯನ ಶಾಖ ಲಭ್ಯವಿದೆ. ಸೂರ್ಯನ ಕಿರಣ ೫.೪ ರಿಂದ ೬ ಕೆವಿ ಪ್ರತಿದಿನ ಲಭ್ಯ. ಪಾವಗಡ ಒಂದರಲ್ಲೇ ೨೦೫೦ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಪಡೆಯುತ್ತಿದ್ದೇವೆ. ಇದಕ್ಕೆ ಮತ್ತೆ ೩ ಗಿಗಾವ್ಯಾಟ್ ಸೋಲಾರ್ ಸೇರ್ಪಡೆ ಮಾಡುತ್ತಿದ್ದೇವೆ. ೨೦೨೭ರೊಳಗೆ ಮತ್ತೆ ೧೦೦೦ ಮೆಗಾವ್ಯಾಟ್ ಗ್ರಿಡ್ ಸಂಯೋಜಿತ ಸೋಲಾರ್ ಸೇರ್ಪಡೆ ಮಾಡುವ ಉದ್ದೇಶವಿದೆ. ಖಾಸಗಿ ರಂಗದಲ್ಲೂ ಸೋಲಾರ್ ಘಟಕಗಳು ತಲೆ ಎತ್ತಲಿವೆ. ಬೀದರ್, ಕೊಪ್ಪಳ ಮತ್ತು ಗದಗದಲ್ಲಿ ದೊಡ್ಡ ಸೋಲಾರ್ ಪಾರ್ಕ್‌ಗಳು ತಲೆಎತ್ತಲಿವೆ.
ಇಂಗಾಲಾಮ್ಲ
ವಾತಾವರಣದಲ್ಲಿ ಇಂಗಾಲಾಮ್ಲ ಪ್ರಮಾಣ ಅಧಿಕಗೊಂಡಲ್ಲಿ ಉಸಿರಾಟಕ್ಕೆ ತೊಂದರೆ. ದೆಹಲಿಯಲ್ಲಿ ಈಗ ಇದೇ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿಯ ಸರ್ಕಾರಕ್ಕೆ ಇಂಗಾಲಾಮ್ಲ ಕಡಿಮೆ ಮಾಡುವುದು ಹೇಗೆ ಎಂಬುದು ತಿಳಿಯುತ್ತಿಲ್ಲ. ಹಿಂದೆ ಇಂಗಾಲಾಮ್ಲ ಕಡಿಮೆ ಮಾಡಬೇಕು ಎಂದರೆ ಅರಣ್ಯ ಬೆಳೆಸಬೇಕಿತ್ತು. ಅದಕ್ಕೆ ಯಾವ ಕೈಗಾರಿಕೆ ಹೆಚ್ಚು ಇಂಗಾಲಾಮ್ಲ ಹೊರಸೂಸುತ್ತದೋ ಆ ಕಂಪನಿ ಕಾರ್ಬನ್ ಕ್ರೆಡಿಟ್ ಖರೀದಿ ಮಾಡಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಉತ್ತಮ ಮಾರುಕಟ್ಟೆ ಇತ್ತು. ಇದಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಹುಟ್ಟುಕೊಂಡಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಹೋಗಿದ್ದರಿಂದ ಯಾವ ಈ ಕಾರ್ಬನ್ ಕ್ರೆಡಿಟ್ ಖರೀದಿ ಮಾಡಲು ಮುಂದೆ ಬರುತ್ತಿಲ್ಲ.
ಇಂಗಾಲಾಮ್ಲ ಕಡಿಮೆ ಮಾಡಲು ಕಾಡನ್ನು ಬೆಳೆಸಬೇಕು ಎಂಬ ಭಾವನೆ ಇತ್ತು. ಈಗ ಸೋಲಾರ್ ಬಂದ ಮೇಲೆ ನಿಲುವು ಬದಲಾಗಿದೆ. ಸೋಲಾರ್ ಫಲಕ ಒಂದು ಎಕರೆಯಲ್ಲಿ ತಲೆಎತ್ತಿದರೆ ೧೭೫-೧೯೮ ಮೆಟ್ರಿಕ್ ಟನ್ ಇಂಗಾಲಾಮ್ಲ ವಾತಾವರಣಕ್ಕೆ ಹೋಗುವುದು ಪ್ರತಿ ವರ್ಷ ಕಡಿಮೆಯಾಗುತ್ತದೆ. ಇದು ಅಲ್ಪಕಾಲಾವಧಿಯಲ್ಲಿ ಅರಣ್ಯಕ್ಕಿಂತ ಉತ್ತಮ ಎಂಬ ಅಭಿಪ್ರಾಯವೂ ಇದೆ. ಆದರೆ ದೀರ್ಘಕಾಲಿಕವಾಗಿ ಮರಗಳನ್ನು ಬೆಳೆಸುವುದು ಉತ್ತಮ. ಒಂದು ಮರ ತನ್ನ ಹೊಟ್ಟೆಯಲ್ಲಿ ೪೮ ಪೌಂಡ್ ಇಂಗಾಲಾಮ್ಲವನ್ನು ತಾನು ಬದುಕಿರುವವರೆಗೆ ಇಟ್ಟುಕೊಂಡಿರುತ್ತದೆ. ಅದು ಸಾವನ್ನು ಕಂಡಾಗ ಅದರಲ್ಲಿದ್ದ ಇಂಗಾಲಾಮ್ಲ ವಾತಾವರಣ ಸೇರುತ್ತದೆ. ಒಂದು ಕೆವಿಎಚ್ ವಿದ್ಯುತ್ ಉತ್ಪಾದನೆಯಾದಲ್ಲಿ ೦.೮೫-೧.೧ ಕೆಜಿ ಇಂಗಾಲಾಮ್ಲ ಹೊರ ಬರುತ್ತದೆ. ಇದನ್ನು ತಡೆಗಟ್ಟಬೇಕು ಎಂದರೆ ಸೋಲಾರ್ ವಿದ್ಯುತ್ ಉತ್ಪಾದಿಸಬೇಕು. ೧೮೨೪ ಸೋಲಾರ್ ಫಲಕ ಅಳವಡಿಸಿದರೆ ಪ್ರತಿ ವರ್ಷ ೧೨೫೦ ಟನ್ ಇಂಗಾಲಾಮ್ಲವನ್ನು ಉಳಿತಾಯ ಮಾಡಬಹುದು. ಇದಕ್ಕೆ ೫೭,೫೦೦ ಮರಗಳನ್ನು ನೆಡಬೇಕು. ಸೋಲಾರ್ ಫಲಕಗಳು ವಾರ್ಷಿಕ ೧೨.೫ಲಕ್ಷ ಯೂನಿಟ್ ಪ್ರತಿ ವರ್ಷ ನೀಡುತ್ತದೆ. ಮರಗಳು ಮಳೆ ಬರಲು ಕಾರಣವಾಗುತ್ತದೆ. ಅಲ್ಲದೆ ಭೂಕುಸಿತವನ್ನು ತಡೆಗಟ್ಟುತ್ತದೆ. ಸೌರ ಫಲಕ ಈ ಕೆಲಸ ಮಾಡುವುದಿಲ್ಲ. ಒಂದು ಟನ್ ಇಂಗಾಲಾಮ್ಲ ಕಡಿಮೆ ಮಾಡಬೇಕು ಎಂದರೆ ೩೧-೪೬ ಮರಗಳನ್ನು ನೆಡಬೇಕು.
ಜಗತ್ತಿನಲ್ಲಿ ಸೂರ್ಯನ ಬೆಳಕು
ಇಡೀ ಭೂಮಿಯ ಮೇಲೆ ೧೭೪ ಪೇಟಾ ವ್ಯಾಟ್ ಸೂರ್ಯ ಬೆಳಕು ಬೀಳುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಶೇ. ೩೦ ಮತ್ತೆ ಬಾಹ್ಯಾಕಾಶಕ್ಕೆ ಹೋಗುತ್ತದೆ. ಉಳಿದದ್ದು ಮೋಡ, ಸಮುದ್ರ, ಭೂಮಿಯಲ್ಲಿ ಸೇರಿಕೊಳ್ಳುತ್ತದೆ. ಸೌರಫಲಕದ ಮೂಲಕ ಇದನ್ನು ಹಿಡಿದಿಟ್ಟುಕೊಂಡು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತಿದ್ದೇವೆ. ಇದರಿಂದ ಶುದ್ಧ ನೀರು ಮತ್ತು ಶುದ್ಧ ಗಾಳಿ ಎರಡನ್ನೂ ಪಡೆಯಬಹುದು.
ಕಾರ್ಬನ್ ಸರ್ಟಿಫಿಕೇಟ್
೨೦೧೫ರಿಂದ ೨೦೨೪ ವರೆಗೆ ಬೇರೆ ಕಂಪನಿಗಳು ಒಟ್ಟು ೧೦೬ ದಶಲಕ್ಷ ಟನ್ ಇಂಗಾಲಾಮ್ಲಕ್ಕೆ ಕ್ರೆಡಿಟ್ ಸರ್ಟಿಫಿಕೇಟ್ ಪಡೆದುಕೊಂಡಿವೆ. ಕೇಂದ್ರ ಸರ್ಕಾರ ಸೋಲಾರ್ ವಿದ್ಯುತ್ ಅಳವಡಿಕೆಗೆ ಸಹಾಯಧನ ನೀಡುತ್ತಿದೆ. ಅದೇ ರೀತಿ ಕರ್ನಾಟಕ ಸರ್ಕಾರ ಕೂಡ ಎಲ್ಲ ರೀತಿಯಲ್ಲಿ ಸೋಲಾರ್‌ಗೆ ನೆರವು ನೀಡುತ್ತಿದೆ. ಅದಕ್ಕೆ ಮೊದಲು ಎಲ್ಲ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಸೋಲಾರ್ ಫಲಕ ಅಳವಡಿಸಬೇಕು. ಈ ವಿಷಯದಲ್ಲಿ ರೈಲ್ವೆ ಇಲಾಖೆಯಿಂದ ರಾಜ್ಯ ಸರ್ಕಾರ ಕಲಿಯಬೇಕು. ರೈಲ್ವೆ ಇಲಾಖೆ ಎಲ್ಲ ನಗರಗಳ ರೈಲ್ವೆ ಪ್ಲಾಟ್‌ಫಾರಂಗಳ ಮೇಲೆ ಸೋಲಾರ್ ಫಲಕ ಅಳವಡಿಸಿದೆ. ಇದರಿಂದ ಬರುವ ವಿದ್ಯುತ್ ಅಲ್ಲೇ ಬಳಕೆಯಾಗುತ್ತಿದೆ. ಶ್ರವಣಬೆಳಗೊಳದ ಫ್ಲಾಟ್ ಫಾರಂ ಮೇಲೆ ಹಾಕಿರುವ ಸೌರ ಫಲಕದಿಂದ ಬರುತ್ತಿರುವ ವಿದ್ಯುತ್ ಅಲ್ಲಿಗೆ ಸಾಕಾಗುವುದರಿಂದ ಬೇರೆ ವಿದ್ಯುತ್ ಬಳಸುತ್ತಿಲ್ಲ. ಇದೇ ರೀತಿ ಎಲ್ಲ ರೈಲ್ವೆ ನಿಲ್ದಾಣಗಳು ಸ್ವಾವಲಂಬಿಯಾದರೆ ವಿದ್ಯುತ್ ಸಮಸ್ಯೆ ಇರುವುದಿಲ್ಲ. ಈಗ ರೈಲ್ವೆ ಎಂಜಿನ್ ಕೂಡ ವಿದ್ಯುತ್‌ನಲ್ಲೇ ಸಂಚರಿಸುತ್ತಿದೆ.
ಕೆರೆ ಮತ್ತು ಸರೋವರ, ಜಲಾಶಯಗಳಲ್ಲಿ ನೀರಿನ ಮೇಲೆ ಸೌರಫಲಕ ತೇಲುವಂತೆ ಮಾಡಬಹುದು. ಇದರಿಂದ ಹೆಚ್ಚು ವಿದ್ಯುತ್ ಪಡೆಯಲು ಸಾಧ್ಯ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಅಧಿಕಗೊಳ್ಳುತ್ತಿದೆ. ಇದಕ್ಕೆ ಚಾರ್ಜಿಂಗ್ ಕೇಂದ್ರಗಳನ್ನು ಸೋಲಾರ್‌ನಿಂದ ನಡೆಯುವಂತೆ ಮಾಡಬಹುದು. ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸುವುದೂ ಕಾರ್ಬನ್ ಕ್ರೆಡಿಟ್‌ಗೆ ಬರುವಂತೆ ಆಗಬೇಕು. ಮನೆಗಳ ಮೇಲೆ ಅಳವಡಿಸಿದ ಸೌರಫಲಕಗಳಿಗೆ ನೆಟ್ ಮತ್ತು ಗ್ರಾಸ್ ಮೀಟರ್ ಅಳವಡಿಸುವುದು ಸೂಕ್ತ. ಗ್ರಾಹಕನಿಂದ ಗ್ರಾಹಕನಿಗೆ ಸೋಲಾರ್ ವಿದ್ಯುತ್ ನೀಡಲು ಅವಕಾಶವಿದೆ. ಪ್ರಧಾನಿ ಸೋಲಾರ್ ಪಂಪ್‌ಸೆಟ್ ಯೋಜನೆಯಲ್ಲಿ ೧೦ ಸಾವಿರ ರೈತರಿಗೆ ಐಪಿ ಸೆಟ್ ನೀಡಬಹುದು.
ಕರ್ನಾಟಕ ಸರ್ಕಾರ
ಸೋಲಾರ್ ವಿದ್ಯುತ್ ಓಪನ್ ಅಕ್ಸೆಸ್ ಮತ್ತು ಕ್ಯಾಪ್ಟಿವ್ ಬಳಕೆಗೆ ಹೊಂದಿದರೆ ಅದಕ್ಕೆ ರಾಜ್ಯ ಸರ್ಕಾರ ಹಲವು ರಿಯಾಯಿತಿಗಳನ್ನು ನೀಡಿದೆ. ಇದು ಬೇರೆ ರಾಜ್ಯಗಳಲ್ಲಿ ಇಲ್ಲ. ಸೋಲಾರ್ ವಿದ್ಯುತ್ ಮಾರಾಟ ಮಾಡುವವರಿಗೆ ೮ ವರ್ಷ ಸ್ಟಾಂಪ್ ಶುಲ್ಕ ಇಲ್ಲ. ವಿದ್ಯುತ್ ತೆರಿಗೆ ಇಲ್ಲ. ವಹಿವಾಟು ಆದಾಯದಲ್ಲಿ ಶೇ. ೨.೨೫ ಬಂಡವಾಳ ಹೂಡಿಕೆಗೆ ಬಳಸಿಕೊಳ್ಳಬಹುದು. ಸವಕಳಿ ರಿಯಾಯಿತಿ ಶೇ. ೪೦ವರೆಗೆ ಇದೆ ೧ ಮೆ.ವ್ಯಾಟ್ ಸೋಲಾರ್ ವಿದ್ಯುತ್‌ಗೆ ಯಾವ ತೆರಿಗೆಯೂ ಇಲ್ಲ. ಇದರಿಂದ ಹೊರಗಿನಿಂದ ಸೋಲಾರ್ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮಿಗಳು ಬರುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯವಾಗಿದೆ.