ಸೋಲಾರ್ ಪ್ಲಸ್ ಬ್ಯಾಟರಿ ಕ್ರಾಂತಿಕಾರಿ ಹೆಜ್ಜೆ
ಮುಂದಿನ ದಿನಗಳಲ್ಲಿ ಕೇವಲ ಸೋಲಾರ್ ಮಾತ್ರ ಬರುವುದಿಲ್ಲ. ಅದರೊಂದಿಗೆ ಬ್ಯಾಟರಿ ಇದ್ದೇ ಇರುತ್ತದೆ. ಅಂದರೆ ಹಗಲು ವೇಳೆ ನಮಗೆ ಬೇಕಾದಷ್ಟು ಸೋಲಾರ್ ಬಳಸಿಕೊಳ್ಳುವುದು. ಹೆಚ್ಚುವರಿ ವಿದ್ಯುತ್ ಬ್ಯಾಟರಿಯಲ್ಲಿ ದಾಸ್ತಾನು ಆಗಿರುತ್ತದೆ. ರಾತ್ರಿ ಸೋಲಾರ್ ಇರುವುದಿಲ್ಲ. ಆಗ ಬ್ಯಾಟರಿಯಲ್ಲಿರುವ ವಿದ್ಯುತ್ ಬಳಸುವುದು. ಈ ಪದ್ದತಿ ಅಮೆರಿಕ ಮತ್ತಿತರ ದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಈಗ ನಮ್ಮಲ್ಲೂ ಕಾಲಿಟ್ಟಿದೆ. ಪಾವಗಡದಲ್ಲಿ ಬ್ಯಾಟರಿ ಅಳವಡಿಕೆಯ ಸೌರ ಫಲಕ ತಲೆ ಎತ್ತಲಿದೆ. ಇದರಿಂದ ಅತಿ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಬಹುದು.
ವಿದ್ಯುತ್ ಎಲ್ಲವೂ ನಿಲ್ಲುವುದಿಲ್ಲ
ವಿದ್ಯುತ್ ಒಂದು ಶಕ್ತಿ ಅದು ಎಲ್ಲೂ ಒಂದು ಕಡೆ ನಿಲ್ಲುವುದಿಲ್ಲ. ಅದನ್ನು ಮತ್ತೊಂದು ರೂಪದಲ್ಲಿ ದಾಸ್ತಾನು ಮಾಡಿ ಬಳಸಬಹುದೇ ಹೊರತು ವಿದ್ಯುತ್ ರೂಪದಲ್ಲೇ ಇಡಲು ಬರುವುದಿಲ್ಲ. ನಾವು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು, ನೈಸರ್ಗಿಕ ಅನಿಲ. ಅಣು ಶಕ್ತಿ. ಜಲ, ಸೋಲಾರ್, ಪವನ, ತ್ಯಾಜ್ಯ ವಸ್ತುಗಳನ್ನು ಬಳಸುತ್ತೇವೆ. ವಿದ್ಯುತ್ ಎಷ್ಟು ಬೇಕೋ ಅಷ್ಟು ಉತ್ಪಾದನೆ ಮಾಡಬೇಕು. ಅದನ್ನು ಕೂಡಲೇ ಬಳಸಿಕೊಳ್ಳಬೇಕು. ಅದರಿಂದ ವಿದ್ಯುತ್ ಉತ್ಪಾದನೆ ಮತ್ತು ಬಳಕೆ ನಿರಂತರ ನಡೆಯುವ ಪ್ರಕ್ರಿಯೆ. ಇದಕ್ಕಾಗಿ ನಾವು ಇಡೀ ದೇಶದಲ್ಲಿ ವಿದ್ಯುತ್ ಜಾಲ ಇಟ್ಟುಕೊಂಡಿದ್ದೇವೆ. ನಮ್ಮ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಹಾಗೂ ಬಳಸುತ್ತೇವೆ. ಈ ರೀತಿ ಉತ್ಪಾದನೆ-ವಿತರಣೆ ನಡೆಯುವುದರಿಂದ ಉತ್ಪಾದನೆಗೆ ಆಗುವ ವೆಚ್ಚವನ್ನು ಲೆಕ್ಕ ಹಾಕಿ ಅದರಂತೆ ಗ್ರಾಹಕರಿಂದ ಹಣ ಪಡೆಯುತ್ತೇವೆ. ಜಲ ವಿದ್ಯುತ್ ಮಳೆಗಾಲದಲ್ಲಿ ಹೆಚ್ಚು ಲಭ್ಯ. ಬೇಸಿಗೆ ಕಾಲದಲ್ಲಿ ಮಳೆ ಇರುವುದಿಲ್ಲ. ವಿದ್ಯುತ್ ಬೇಕೆ ಬೇಕು. ಅದಕ್ಕಾಗಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಮಾಡಿ ಬಳಸುತ್ತೇವೆ. ಈ ರೀತಿ ಹರಿದು ಹೋಗುವ ನೀರನ್ನು ಮತ್ತೆ ಮೇಲಕ್ಕೆ ಪಂಪ್ ಮಾಡಿ ಮತ್ತೆ ವಿದ್ಯುತ್‌ಗೆ ಬಳಸಲು ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿ ಕೊಂಡಿದ್ದೇವೆ. ಶರಾವತಿಯಲ್ಲಿ ಈ ವ್ಯವಸ್ಥೆ ಸ್ಥಾಪಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಇದಕ್ಕೆ ಪರಿಸರವಾದಿಗಳು ವಿರೋಧವೂ ಇದೆ. ಇದಕ್ಕೆ ಬದಲಾಗಿ ಉತ್ಪಾದನೆಯಾದ ವಿದ್ಯುತ್ತನ್ನು ಬ್ಯಾಟರಿಯಲ್ಲಿ ಎಲ್ಲಿ ಬೇಕಾದರೂ ವಿದ್ಯುತ್ ದಾಸ್ತಾನು ಮಾಡಿ ನಮಗೆ ಬೇಕಾದಾಗ ಬಳಸಬಹುದು. ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ.
ಸೋಲಾರ್ ಪ್ಲಸ್ ಬ್ಯಾಟರಿ
ಲೀಥಿಯಂ ಬ್ಯಾಟರಿಗಳು ಬಂದ ಮೇಲೆ ಈಗ ಪಾವಗಡದಂತ ಸೋಲಾರ್ ಜತೆ ಅಲ್ಲೇ ಬ್ಯಾಟಿರಿಗಳನ್ನು ಅಳವಡಿಸಿ ಸೂರ್ಯ ಮುಳುಗಿದ ಮೇಲೂ ಬ್ಯಾಟರಿ ಮೂಲಕ ವಿದ್ಯುತ್ ನೀಡಬೇಕು. ಕ್ರೆಡಿಲ್ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ಯೂನಿಟ್‌ಗೆ ೧-೨ ರೂ. ಹೆಚ್ಚುವರಿ ವಿದ್ಯುತ್ ದರ ಬೀಳಲಿದೆ. ಜಲ ವಿದ್ಯುತ್ ಕೇಂದ್ರಗಳಲ್ಲಿ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿದರೂ ಇಷ್ಟು ಕಡಿಮೆ ದರಕ್ಕೆ ವಿದ್ಯುತ್ ಲಭಿಸುವುದಿಲ್ಲ. ಇದುವರೆಗೆ ನಾವು ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಿದ್ದೇವೆ. ಬ್ಯಾಟರಿ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಅದರಿಂದ ಸೋಲಾರ್ ವಿದ್ಯುತ್ ಕೂಡಲೇ ಬಳಕೆಯಾಗಿ ಬಿಡಬೇಕು ಎಂದು ಕೆಇಆರ್‌ಸಿ ಸೋಲಾರ್ ವಿದ್ಯುತ್ ಖರೀದಿಯನ್ನು ಕಡ್ಡಾಯಗೊಳಿಸಿತ್ತು. ಈಗ ಅದರ ಅಗತ್ಯವಿಲ್ಲ. ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡಬಹುದು.
ಅಮೆರಿಕ ಮಾದರಿ
ಅಮೆರಿಕದಲ್ಲಿ ಈ ಪ್ರಯೋಗ ಫಲಕಾರಿಯಾಗಿದೆ. ಲೀಥಿಯಂ ಲೋಹವನ್ನು ಬಳಸಲಾಗುತ್ತಿದೆ. ಇದರೊಂದಿಗೆ ಜಿಂಕ್, ನಿಕ್ಕಲ್ ಮತ್ತು ಘನೀಕೃತ ಉಪ್ಪು ಬಳಕೆಯಾಗುತ್ತಿದೆ. ಲೀಥಿಯಂ ಅತ್ಯಂತ ಹಗುರ ಲೋಹ. ಅಲ್ಲದೆ ಬಹಳ ಬೇಗನೆ ವಿದ್ಯುತ್ ಹೀರಿಕೊಳ್ಳುತ್ತದೆ. ಅಷ್ಟೆ ಸುಲಭವಾಗಿ ವಿದ್ಯುತ್ ಬಿಡುತ್ತದೆ. ಅದರಿಂದ ರಿಚಾರ್ಜ್ ಸುಲಭ. ಅಮೆರಿಕದಲ್ಲಿ ೧೦೦ ಮೆಗಾವ್ಯಾಟ್ ಸೋಲಾರ್ ಎಂದರೆ ೬೦ ಮೆಗಾವ್ಯಾಟ್ ಬ್ಯಾಟರಿ ವಿದ್ಯುತ್ ಎಂದು ಲೆಕ್ಕ ಹಾಕಲಾಗುವುದು. ಬ್ಯಾಟರಿ ವಿದ್ಯುತ್ ಬಳಕೆ ಪ್ರತಿ ಗಂಟೆಗೆ ಲೆಕ್ಕಕ್ಕೆ ಬರುತ್ತದೆ. ಎಷ್ಟು ಗಂಟೆ ವಿದ್ಯುತ್ ಬೇಕು ಎನ್ನುವುದರ ಮೇಲೆ ಬ್ಯಾಟರಿ ನಿಗದಿಯಾಗುತ್ತದೆ. ಹೆಚ್ಚು ಕಾಲ ಬ್ಯಾಟರಿ ಬಳಸಿದರೆ ವೆಚ್ಚ ಕಡಿಮೆಯಾಗುತ್ತದೆ. ಬ್ಯಾಟರಿಯಲ್ಲಿ ಇನ್ವರ್ಟರ್ ಹೊರತುಪಡಿಸಿದರೆ ವೈರಿಂಗ್ ಮತ್ತು ಇತರ ಉಪಕರಣಗಳಿರುತ್ತವೆ. ೬೦ ಮೆಗಾವ್ಯಾಟ್ ಬ್ಯಾಟರಿ ಬಳಸಿದರೆ ಅದನ್ನುಪ್ರತಿ ಗಂಟೆ ಎಷ್ಟು ಬಳಸುವುದರ ಮೇಲೆ ಉತ್ಪಾದನಾ ವೆಚ್ಚ ನಿರ್ಧಾರವಾಗುತ್ತದೆ. ೬೦ ಮೆಗಾವ್ಯಾಟ್ ೪ ಗಂಟೆ ಬಳಸಬಹುದು. ೮ ಗಂಟೆಯೂ ಬಳಸಬಹುದು. ನಮ್ಮ ಅಗತ್ಯಕ್ಕೆ ತಕ್ಕಂತೆ ಬ್ಯಾಟರಿಗಳನ್ನು ಅಳವಡಿಸಿಕೊಳ್ಳಬಹುದು. ಸೋಲಾರ್‌ನಿಂದ ಚಾರ್ಜ್ ಆಗುವ ಬ್ಯಾಟರಿಗಳಿಂದ ಪಡೆಯುವ ವಿದ್ಯುತ್ ಅತ್ಯಂತ ಕಡಿಮೆ ದರಕ್ಕೆ ಲಭಿಸುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರವು ಸಿಗುತ್ತಿದೆ.
ಕ್ರೆಡಿಲ್ ಸಂಸ್ಥೆ ಪಾವಗಡದಲ್ಲಿ ಬ್ಯಾಟರಿ ಹೊಂದಿದ ಸೋಲಾರ್ ಕೇಂದ್ರಕ್ಕೆ ಚಾಲನೆ ನೀಡಿದೆ. ಇದರಲ್ಲಿ ಸೋಲಾರ್ ನಿಂದ ೨ ಮೆಗಾವ್ಯಾಟ್ ಹಾಗೂ ಬ್ಯಾಟರಿ ಮೂಲಕ ೨ ಮೆಗಾವ್ಯಾಟ್ ವಿದ್ಯುತ್ ಲಭಿಸಲಿದೆ. ಅದೇರೀತಿ ಕಲಬುರ್ಗಿಯಲ್ಲಿ೧೦೦ ಮೆಗಾವ್ಯಾಟ್ ಸೋಲಾರ್ ೧೩೦ ಮೆಗಾವ್ಯಾಟ್ ಬ್ಯಾಟರಿ ಮೂಲಕ ವಿದ್ಯುತ್ ಪಡೆಯುವ ಕೇಂದ್ರ ಮತ್ತು ಪಾವಗಡ ಸಮೀಪ ಮತ್ತೊಂದು ಗ್ರಾಮದಲ್ಲಿ ೨೫೦ ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ತಲೆ ಎತ್ತಲಿಲ್ಲ. ಬ್ಯಾಟರಿ ಮೂಲಕ ಬರುವ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಕೇವಲ ೧-೨ ರೂ. ಮಾತ್ರ. ಸೋಲಾರ್ ಮತ್ತು ಲೀಥಿಯಂ ಬ್ಯಾಟರಿ ಡಿ.ಸಿ. ಕರೆಂಟ್‌ನಲ್ಲಿ ಕೆಲಸ ಮಾಡುತ್ತದೆ. ಆ ವಿದ್ಯುತ್ ಬಳಸಬೇಕು ಎಂದರೆ ಅದನ್ನು ಎ.ಸಿ. ರೂಪಕ್ಕೆ ಪರಿವತಿಸಬೇಕು. ಇದಕ್ಕೆ ಇನ್ವರ್ಟರ್ ಬಳಸುವುದು ಅನಿವಾರ್ಯ. ಇದು ೨೪ ಗಂಟೆ ಬಳಕೆಯಾಗುವುದರಿಂದ ಇದನ್ನು ಆಗಾಗ್ಗೆ ಬದಲಿಸುವುದು ಅಗತ್ಯ. ಇದಕ್ಕೆ ಹಾಗೂ ಬ್ಯಾಟರಿಗೆ ಹೆಚ್ಚು ಬಂಡವಾಳ ಬೇಕು. ಇವುಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಬಹುದು. ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಪಡೆಯುತ್ತಿರುವವರು ಈಗ ಸೋಲಾರ್ ಪ್ಲಸ್ ಬ್ಯಾಟರಿ ವಿದ್ಯುತ್‌ಗೆ ಹೋಗುತ್ತಿದ್ದಾರೆ.
ಇದರಿಂದ ಈಗಿನ ಎಸ್ಕಾಂಗಳಿಗೆ ನಷ್ಟವಾಗುವುದು ನಿಶ್ಚಿತ. ಮುಕ್ತ ಮಾರುಕಟ್ಟೆಗೆ ಹೋಗುವವರು ಕಡಿಮೆ ದರದಲ್ಲಿ ವಿದ್ಯುತ್ ಪಡೆಯುತ್ತಾರೆ. ಅವರು ವೀಲಿಂಗ್ ದರವನ್ನು ಎಸ್ಕಾಂಗಳಿಗೆ ಪಾವತಿಸಲು ಹಿಂಜರಿಯುವುದಿಲ್ಲ. ಈ ಎಲ್ಲ ಹಣ ನೀಡಿದರೂ ಎಸ್ಕಾಂ ವಿದ್ಯುತ್ ದರಕ್ಕಿಂತ ಪ್ರತಿ ಯೂನಿಟ್‌ಗೆ ೨ ರೂ. ಉಳಿಯುವುದು ಖಂಡಿತ. ಇಡೀ ರಾಜ್ಯದಲ್ಲಿ ಎಲ್ಲ ಕಡೆ ವಿದ್ಯುತ್ ಬಳಕೆ ಒಂದೇ ಸಮನಾಗಿರುವುದಿಲ್ಲ. ವಿದ್ಯುತ್ ಬೇಡಿಕೆ ಅಧಿಕ ಇರುವ ಕಡೆ ಸೋಲಾರ್ ಮತ್ತು ಬ್ಯಾಟರಿ ವಿದ್ಯುತ್ ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಿಕೊಂಡಲ್ಲಿ ವಿದ್ಯುತ್‌ನಷ್ಟ ಮತ್ತು ವಿತರಣ ಜಾಲದಲ್ಲಾಗುವ ವ್ಯತ್ಯಯವನ್ನು ತಪ್ಪಿಸಬಹುದು.
ಈಗ ಶರಾವತಿಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳುವ ಬದಲು ಬೆಳಗಾವಿ. ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಸಮೀಪ ಸೋಲಾರ್ ಪ್ಲಸ್ ಬ್ಯಾಟರಿ ಸ್ಟೋರೇಜ್ ಕೇಂದ್ರಗಳನ್ನು ಸ್ಥಾಪಿಸಬಹುದು. ಇದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚುವರಿ ವಿದ್ಯುತ್ ಲಭಿಸಲಿದೆ. ಇದಕ್ಕೆ ಹೆಚ್ಚುಸ್ಥಳವೂ ಬೇಕಿಲ್ಲ. ಅದರಲ್ಲೂ ಬಂಜರು ಭೂಮಿಯನ್ನು ಇದಕ್ಕೆ ಬಳಸಿಕೊಳ್ಳಬಹುದು. ನಮ್ಮ ರಾಜ್ಯದ ಹಲವು ಕಡೆ ವರ್ಷದಲ್ಲಿ ೩೦೦ ದಿನ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅವಕಾಶಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕೇ ಹೊರತು ಬೇರೇನೂ ಅಲ್ಲ.