For the best experience, open
https://m.samyuktakarnataka.in
on your mobile browser.

ಸ್ಕೂಬಾ ಡೈವ್-ನೋಡಿ ಲೈವ್…

02:00 AM Feb 27, 2024 IST | Samyukta Karnataka
ಸ್ಕೂಬಾ ಡೈವ್ ನೋಡಿ ಲೈವ್…

ಸೋದಿ ಮಾಮಾ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದ್ದನ್ನು ಕಣ್ಣು ಪಿಳುಕಿಸದ ಹಾಗೆ ನೋಡಿದ ರಷ್ಯಾ ಪುಟ್ಯಾ, ಅಮೆರಿಕ ಬುಡ್ಡೇಸಾಬ, ಚೀನಾದ ಜಿಂಗೇಸಿ ಮುಂತಾದವರು ನಾವು ಡೈವ್ ಯಾಕೆ ಹೊಡೆಯಬಾರದು… ಸೋದಿ ಮಾಮಾ ಡೈವ್ ಹೊಡೆದಿದ್ದನ್ನು ಕೋಟಿಗಟ್ಟಲೇ ಜನರು ನೋಡಿ ವರ‍್ಹೆ ವಾ ಎಂದು ಅನ್ನುತ್ತಿದ್ದಾರೆ ನಾವೂ ಸಹ ಹಾಗೆ ಡೈವ್ ಹೊಡೆಯೋಣ… ಲೈವ್ ಇಡೋಣ ಎಂದು ಕಾನ್ಫರನ್ಸ್ ಕಾಲ್ ಹಾಕಿಕೊಂಡು ಮಾತನಾಡಿಕೊಂಡರು. ಹೌದೂ ಸೋದಿ ಮಾಮಾ ಹಾಗೆಯೇ ಡೈವ್ ಹೊಡೆದಿಲ್ಲ ಅವರು ತಿಂಗಾಳನುಗಟ್ಟಲೇ ಟ್ರೈನಿಂಗ್ ತೆಗೆದುಕೊಂಡಿದ್ದಾರೆ… ಪ್ರಾಕ್ಟೀಸ್ ಇಲ್ಲದೇ ಹಾಗೆ ಮಾಡುವುದು ತುಂಬ ಕಷ್ಟ ಎಂದು ಪುಟ್ಯಾ ಹೇಳುತ್ತಿದ್ದಂತೆ… ನೋ ವೇ ಹಂಗೇನಿಲ್ಲ… ಊರಿನ ಹಳ್ಳದಲ್ಲಿ ಈಜಾಡಿ ಆತನಿಗೆ ರೂಢಿ ಆಗಿದೆ. ನಮಗೂ ಹಾಗೆ ಆಗುತ್ತಿತ್ತೇನೋ ಆಧರೆ ಇಲ್ಲಿ ಹಳ್ಳಗಳು ಇಲ್ಲ ಎಂದು ಬುಡ್ಡೇಸಾಬ ಹೇಳಿದ. ಸುಮ್ಮನೇ ಯಾಕೆ ಅವರನ್ನೇ ಕೇಳಿಬಿಡೋಣ ಎಂದು ಸೋದಿ ಮಾಮಾರಿಗೆ ಕಾನ್ಫರನ್ಸ್ ಕಾಲ್ ಹಾಕಿದ ಜಿಂಗೇಸಿ.
ಹಾಯ್ ಜಿಂಗೇಸಿ ಕೈಸೇ ಹೋ… ಕ್ಯಾ ಚಲ್ ರಹಾ ಹೈ… ಅಂದಾಗ ಆತ ಚಿವುಸಿ ಕವುಷಿ ಚಫ್ ಸಷಿರೇ ಎಂದು ಹೇಳಿದಾಗ… ಏನಂತಾನೋ ಏನೋ ಇಂವ ಎಂದಾಗ ಬುಡ್ಡೇಸಾಬ ಹಲೋ ಮಾಮೋರೆ ಎಂದು ಹೇಳಿದ.. ನಂತರ ಪುಟ್ಯಾನೂ ಸಹ ನಮಸ್ಕಾರಾ ಎಂದು ಜೋರಾಗಿ ಹೇಳಿದಾಗ… ಅಯ್ಯೋ ಪುಟ್ಯಾನೂ ಇದಾನೆ.. ಏನ್ ಸಮಾಚಾರ… ಎಲ್ರೂ ಏನ್ ಸೇರ್ಕೋಂಡು ಏನ್ ಮಾಡ್ತಿದೀರಿ? ಎಂದಾಗ… ಏನಿಲ್ಲ ನೀವು ಸ್ಕೂಬಾ ಡೈವ್ ಹೊಡಿದಿರಲ್ಲವೇ? ಅದು ಹೇಗೆ ಎಂದು ಕೇಳೋಣ ಅಂದುಕೊಂಡಿದ್ದೆವು ಎಂದು ಹೇಳಿದರು… ನನಗೆ ಟೈಮಿಲ್ಲ ಮತ್ತೊಂದು ಬಾರಿ ಹೇಳುವೆ ಎಂದು ಸೋದಿ ಮಾಮಾ ಹೇಳಿದರೂ… ನೋ..ನೋ ನೀವು ಹೇಳಲೇಬೇಕು ಎಂಬ ಹಕ್ಕೊತ್ತಾಯ ನಮ್ಮದು ಎಂದಾಗ… ಅಯ್ಯೋ ನಿಮದೊಂದು ಎಂದು ಹೇಳಿ ಕೇಳ್ರೀ ಹಾಗಾದರೆ ಎಂದು ಸೋದಿಮಾಮಾ ಸ್ಕೂಬಾಕಥೆ ಹೇಳತೊಡಗಿದರು…. ನಾನು ಇನ್ನೂ ಚಿಕ್ಕವನಿದ್ದೆ… ಆಗ ನಮ್ಮೂರಿನ ಗಚ್ಚಿನಬಾವಿಯಲ್ಲಿ ಈಜು ಕಲಿಯಲು ಹೋಗುತ್ತಿದ್ದೆವು. ನಾನು ಬಾವಿಯ ದಂಡೆಗೆ ಕಲ್ಲಿನ ಆಸರೆಯಿಂದ ನೀರಿನಲ್ಲಿ ಕಾಲು ಬಡಿಯುತ್ತಿದ್ದೆ. ಆಗ ಕೆಲವು ಆಗದೇ ಇದ್ದವರು ನನ್ನ ಕೈ ಬಿಡಿಸಲು ಯತ್ನಿಸುತ್ತಿದ್ದರು. ಒಂದು ಸಾರಿ ಯಾರೋ ತಮ್ಮ `ಕೈ' ಯಿಂದ ನನ್ನ ಕೈ ಬಿಡಿಸಿದರು. ನಾನು ಸೀದಾ ಬಾವಿಯ ತಳಕ್ಕೆ ಹೋದೆ… ಉಸಿರು ಗಟ್ಟಿ ಹಿಡಿದು ನೀರಿನ ಒಳಗಡೆ ಕಣ್ಣು ತೆಗೆದರೆ ಅಬ್ಬ…! ಅಲ್ಲಿ ಏನೇನೆಲ್ಲ ಇದ್ದವು. ಮತ್ತೆ ಕೈ ನೆಲಕ್ಕೆ ಬಡಿದಾಗ ಮೇಲೆ ಬಂದೆ… ಹಾಗೆ ರೂಢಿ ಆಯಿತು. ನಂತರದಲ್ಲಿ ಬಾವಿಯಿಂದ ಕೆರೆಗೆ, ಕೆರೆಯಿಂದ ನದಿಗೆ, ನದಿಯಿಂದ ಸಮುದ್ರದ ಆಳಕ್ಕೆ ಹೋಗಲು ಪ್ರಾಕ್ಟೀಸ್ ಮಾಡಿದೆ.. ಅದು ರೂಢಿ ಆಯಿತು. ಅದಕ್ಕೆ ಸ್ಕೂಬಾಡೈವ್ ಎಂದು ಹೆಸರಿಟ್ಟು ಲೈವ್ ಕೊಟ್ಟರು. ನೀವೂ ಪ್ರಾಕ್ಟೀಸ್ ಮಾಡಿ ಬರುತ್ತದೆ ನನಗೆ ಕೆಲಸವಿದೆ ಬೈ..ಬೈ ಎಂದು ಮೊಬೈಲ್ ಶುಚ್ಡಾಫ್ ಮಾಡಿದರು.