ಸ್ಟೆಂಟ್ ಹಾಕುವ ಸ್ಟಂಟು
“ಕೈ ಕೊಟ್ಟು ಬೇಡಿ ಹಾಕಿಸ್ಕೊಂಡ್ರು” ಅಂತ ಒಂದು ಗಾದೆ ಇದೆ. ವಿಶ್ವನ ಕತೆ ಅದೇ ಆಗಿತ್ತು. ಕಳೆದ ವರ್ಷ ಆ್ಯಂಜಿಯೋ ಪ್ಲಾಸ್ಟಿ ಮಾಡಿಸಿಕೊಂಡಿದ್ದ. ಈ ವರ್ಷ ಹಾರ್ಟ್ ಪ್ರಾಬ್ಲಂ ಮತ್ತೆ ಕಾಣಿಸಿಕೊಂಡಿತ್ತು. ಡಾಕ್ಟರು ವಿಶ್ವನನ್ನು ತಪಾಸಣೆಗೆ ಒಳಗು ಮಾಡಿದ್ದರು. ಇ.ಸಿ.ಜಿ. ಆಯ್ತು. ಸ್ಟೆಥಾಸ್ಕೋಪ್ ಎದೆ ಮೇಲೆ ಇಟ್ಟು, “ಜೋರಾಗಿ ಉಸಿರು ಎಳೆದುಕೊಳ್ಳಿ, ನಾನು ಹೇಳೋವರೆಗೂ ಉಸಿರು ಬಿಡ್ಬೇಡಿ” ಎಂದರು.
ವಿಶ್ವ ಕಷ್ಟ ಪಟ್ಟು ಉಸಿರನ್ನು ಹಿಡಿದುಕೊಂಡ. ಅಷ್ಟರಲ್ಲಿ ಡಾಕ್ಟರ್‌ಗೆ ಫೋನ್ ಬಂದು ಪಕ್ಕಕ್ಕೆ ಹೋದರು. ಉಸಿರು ಸಿಕ್ಕಿ ಬಿದ್ದಂತಾಗಿ ವಿಶ್ವ ಒದ್ದಾಡುತ್ತಿದ್ದ. ಜೋರಾಗಿ ಕೆಮ್ಮಿದ. ಡಾಕ್ಟರ್ ಓಡಿ ಬಂದರು.
“ಬೇಗ ಉಸಿರಾಡಿ, ನಾರ್ಮಲ್ ಬ್ರೀಥಿಂಗ್” ಎಂದರು.
ಮಡದಿ ವಿಶ್ವನ ತೊಂದರೆ ಬಗ್ಗೆ ಹೇಳಿದಳು.
“ನಮ್ಮ ಯಜಮಾನರು ಒಂದು ಕೇಜಿಯಷ್ಟು ಹೃದಯ ಭಾರ ಆಗ್ತಿದೆ ಅಂತಿದ್ದಾರೆ.”
“ಸಾಧ್ಯವಿಲ್ಲಮ್ಮ, ಕಲ್ಲು ಹೃದಯ ಆಗಲಿ, ಬೆಣ್ಣೆ ಹೃದಯ ಆಗಲಿ ೩೦೦ ಗ್ರಾಂ ಮೇಲೆ ತೂಗೊಲ್ಲ” ಡಾಕ್ಟರ್ ಖಚಿತ ಪಡಿಸಿದರು.
“ಎದೆ ಭಾರಕ್ಕೆ ಟ್ರೀಟ್‌ಮೆಂಟ್ ತಗೋಬೇಕಾ ಡಾಕ್ಟರ್?” ಎಂದಾಗ ಡಾಕ್ಟರ್ ತನ್ನ ಆಪರೇಷನ್ ಡೈರಿ ತೆಗೆದು ನೋಡಿ,
“ಈ ತಿಂಗಳ ನನ್ನ ಕೋಟಾ ಮುಗಿದಿದೆ. ಮುಂದಿನ ತಿಂಗಳು ಇದೇ ಡೇಟ್‌ಗೆ ಬನ್ನಿ” ಎಂದರು.
“ಈ ಮಾತ್ರೆಗಳು ಸಾಕಾ?” ವಿಶ್ವ ಕೇಳಿದ.
“ಬರೀ ಮಾತ್ರೆಗಳು ಸಾಲೊಲ್ಲ. ಲಾಫ್ಟರ್ ಥೆರಪಿ ಅಂತ ಒಂದಿದೆ. ದಿನಕ್ಕೆ ನೀವು ೧೫ ನಿಮಿಷ ನಗಲೇಬೇಕು ಕಡ್ಡಾಯವಾಗಿ” ಎಂದರು ಡಾಕ್ಟರ್.
“ನನ್ನ ಹೆಂಡ್ತಿ ಮುಖ ನೋಡಿದ್ರೆ ನಗೋಕೆ ಆಗೊಲ್ಲ ಡಾಕ್ಟರ್” ವಿಶ್ವ ಸತ್ಯ ನುಡಿದ.
“ರೀ, ನಿಮ್ಮ ಹೆಂಡ್ತಿ ಮುಖ ನೋಡಿ ನಗೋಕಾಗೊಲ್ಲ ಅಂದ್ರೆ ಪಕ್ಕದ್ಮನೆ ಆಂಟಿ ಮುಖ ನೋಡಿ ನಗ್ರೀ, ನಗೋದು ಮುಖ್ಯ. ಇದು ಲಾಫ್ಟರ್ ಥೆರಪಿ” ಎಂದು ಬುದ್ಧಿ ಹೇಳಿದಾಗ ವಿಶಾಲೂಗೆ ಸಿಟ್ಟು ಬಂತು. ಫೀಸ್ ಕೊಟ್ಟು ರೂಮಿನ ಬಾಗಿಲು ದಾಟುತ್ತಿರುವಾಗ ಡಾಕ್ಟರ್ ಯಾರ ಜೊತೆಯೋ ಮಾತಾಡುವುದು ಕೇಳಿಸಿತು.
“ಈ ತಿಂಗಳಲ್ಲಿ ಆಪರೇಷನ್‌ಗೆ ನಾನು ಐದು ಕೇಸ್ ಕಳಿಸಿದ್ದೀನಿ. ತಿಂಗಳ ಕೋಟಾ ಕಂಪ್ಲೀಟ್ ಆಯ್ತು. ಈಗ ವಿಶ್ವ ಅಂತ ಒಂದು ಪೇಷೆಂಟ್ ಬಂದಿತ್ತು. ಅವರನ್ನ ಮುಂದಿನ ತಿಂಗಳಿಗೆ ಹಾಕ್ಕೋತೀನಿ” ಎಂದರು.
ವಿಶ್ವನಿಗೆ ಅನುಮಾನ ಶುರುವಾಯಿತು.
ಕೋಟಾ ಸಿಸ್ಟಂ ಇದೆಯಾ? ದೊಡ್ ಆಸ್ಪತ್ರೆ ಅಂದ ಮೇಲೆ ಪ್ರತಿ ಡಾಕ್ಟರೂ ತಿಂಗಳಿಗೆ ಇಷ್ಟು ಕೇಸು ಅಂತ ಕೊಡ್ಲೇಬೇಕಾಗುತ್ತಾ ಎಂದು ಯೋಚಿಸಿದ.
ತಿಂಗಳಾದ ಮೇಲೆ ತಪಾಸಣೆಗೆ ವಿಶ್ವನ ಜೊತೆ ವಿಶಾಲು ಬಂದಳು.
“ನಿಮ್ಗೆ ಈ ಮುಂಚೆ ಸ್ಟಂಟ್ ಹಾಕಿದ್ದು ಯಾವಾಗ?” ಡಾಕ್ಟರ್ ಕೇಳಿದರು.
“ವಾಲ್ವ್ ಬಂದ್ ಆಗಿದೆ ಅಂತ ಕಳೆದ ವರ್ಷ ಸ್ಟಂಟ್ ಹಾಕ್ಸಿದ್ದೆ. ಅದಾದ್ಮೇಲೆ ಅಂಥಾ ತೊಂದ್ರೆ ಇರಲಿಲ್ಲ. ಇತ್ತೀಚೆಗೆ ಎದೆ ಭಾರ ಅಂತ ಅನ್ನಿಸ್ತಾ ಇದೆ ಡಾಕ್ಟರ್” ಎಂದ ವಿಶ್ವ.
“ಸ್ಟಂಟ್ ಅಂದ್ರೆ ಜೀವದಾನ ಮಾಡುವ ಪುಟ್ಟ ಸಲಕರಣೆ. ಬಲೂನ್ ಆ್ಯಂಜಿಯೋಪ್ಲಾಸ್ಟಿ ವಿಧಾನದಲ್ಲಿ ಬ್ಲಾಕ್ ಆದ ಹೃದಯ ರಕ್ತನಾಳಗಳನ್ನ ಓಪನ್ ಮಾಡಿ ಸ್ಟಂಟ್ ಕೂರಿಸಿದಾಗ ರಕ್ತ ಸರಾಗವಾಗಿ ಹರಿಯುತ್ತೆ.”
“ಢವಢವ ಅಂತ ಸ್ಪೀಡ್ ಇರುತ್ತ್ತೆ” ಎಂದಳು ವಿಶಾಲು.
“ಹೃದಯಕ್ಕೆ ರಕ್ತ ಪಂಪ್ ಆಗ್ತಿರೋವಾಗ ಕೆಲವು ಸಲ ಸ್ಟಂಟ್ ಜಾರಿ ಮುಂದಕ್ಕೆ ಅಥವಾ ಹಿಂದಕ್ಕೆ ಬರಬಹುದು, ಆಗ ಎದೆ ನೋವಿರುತ್ತೆ” ಎಂದರು ಡಾಕ್ಟರ್.
“ಸ್ಟಂಟ್ ಯಾಕೆ ಜಾರುತ್ತೆ ಡಾಕ್ಟರ್?” ವಿಶ್ವ ಕೇಳಿದ.
“ಜೋರಾಗಿ ಮಳೆ ಬಂದಾಗ ಮೋರೀಲಿ ಸತ್ತು ಬಿದ್ದಿರೋ ಬೆಕ್ಕು, ನಾಯಿಗಳು ಹೊಡ್ಕೊಂಡ್ ಮುಂದೆ ಹೋಗುತ್ತಲ್ಲ ಹಾಗೆ! ರಕ್ತದ ರಭಸಕ್ಕೆ ಸ್ಟಂಟ್ ಮುಂದೆ ಹೋಗಿದೆ. ಒನ್ ಮಿನಿಟ್ ಆ್ಯಂಜಿಯೋಗ್ರಾಫ್ ಮಾಡಿದ್ದೀನಿ ನೋಡಿ” ಎಂದು ಎಕ್ಸರೇ ಚಿತ್ರವನ್ನು ತೋರಿಸಿ ಹೇಳಿದರು. ಆದರೆ ಆ ಚಿತ್ರದಲ್ಲಿ ವಿಶ್ವನಿಗೆ ಹೃದಯ ಇದೆ ಎಂಬುದೇ ಗೊತ್ತಾಗಲಿಲ್ಲ. ಎಲ್ಲರ ಎಕ್ಸರೇ ರೋಗಿಗೆ ಒಂದೇ ರೀತಿ ಕಾಣುತ್ತದೆ.
“ಇಲ್ನೋಡಿ, ಇಲ್ಲಿ ಸ್ಟಂಟ್ ಕಾಣಿಸ್ತಾ ಇದೆಯಲ್ಲ, ಇದು ಸ್ವಲ್ಪ ಮುಂದೆ ಹೋಗಿದೆ. ಮುಂದೆ ಜರುಗಿದ್ದಕ್ಕೆ ಹೃದಯ ಭಾರ ಆಗ್ತಾ ಇರೋದು. ಒಂದು ಕೆಲ್ಸ ಮಾಡಿ, ಮುಂದಿನ ಸೋಮವಾರ ಆಸ್ಪತ್ರೆಗೆ ಅಡ್ಮಿಟ್ ಆಗಿ. ಆ ಹಳೇ ಸ್ಟಂಟ್‌ನ ತೆಗೆದು ಇಂಪೋರ್ಟೆಡ್ ಸ್ಟಂಟ್ ಹಾಕ್ಬಿಡ್ತೀನಿ. ೩ ಲಕ್ಷ ರೂಪಾಯಿ ಆಗಬಹುದು, ಇನ್ಶೂರೆನ್ಸ್ ಇದೆ ತಾನೇ?” ಎಂದರು.
ಆಪರೇಷನ್ ಎಂದ ಕೂಡಲೇ ವಿಶ್ವನಿಗೆ ಎದೆ ಧಸಕ್ ಎಂದಿತು.
ಮನೆಗೆ ಬಂದ ಮೇಲೆ ವಿಶ್ವನಿಗೆ ತನ್ನ ಹೃದಯದ್ದೇ ಯೋಚನೆ ಆಯಿತು.
“ಹಳೇ ಸ್ಟಂಟ್ ಹೆಂಗೆ ಮೂವ್ ಆಯ್ತು?”
“ನೀವು ಯರ‍್ಯಾರ‍್ನೋ ಹೃದಯದಲ್ಲಿ ಕೂರಿಸ್ಕೋತಾ ಇದ್ದೀರ. ಯಾವ್ದೋ ಹುಡುಗಿ ಬಂದು ಜಾಗ ಸಾಲದೆ ಸ್ಟಂಟ್‌ನ ಮುಂದೆ ತಳ್ಳರ‍್ತಾಳೆ” ಎಂದು ವಿಶಾಲು ಲೇಡಿ ಡಾಕ್ಟರಂತೆ ತೀರ್ಪು ಕೊಟ್ಟಳು.
ಸ್ಟಂಟ್ ನಿಜವಾಗಿ ಜರುಗಿದೆಯಾ ತಿಳಿದುಕೊಳ್ಳೋಣ ಎಂದು ಫ್ಯಾಮಿಲಿ ಡಾಕ್ಟರ್‌ಗೆ ಫೋನ್ ಮಾಡಿದಾಗ ಡಾಕ್ಟರ್ ಚಂದ್ರು ಮನೆಗೇ ಬಂದರು. ಎಲ್ಲಾ ರೆಕಾರ್ಡ್ಗಳನ್ನು, ಎಕ್ಸ್ರೆ ರಿಪೋರ್ಟ್‌ಗಳನ್ನು ನೋಡಿದರು.
“ಅದು ಸ್ವಲ್ಪ ಮುಂದೆ ಹೋಗಿದ್ದರಿಂದ ಎದೆ ಭಾರ ಆಗ್ತಿದೆ ಅಂತ ದೊಡ್ಡಾಸ್ಪತ್ರೆ ಡಾಕ್ಟರು ಹೇಳಿದರು. ಮೂರು ಲಕ್ಷಕ್ಕೆ ಎಸ್ಟಿಮೇಟ್ ಕೊಟ್ಟಿದ್ದಾರೆ” ಎಂದ ವಿಶ್ವ.
“ನಿಮಗೇನಾದ್ರೂ ಅನುಮಾನ ಇದೆಯಾ ಈ ಬಗ್ಗೆ?” ಡಾಕ್ಟರ್ ಚಂದ್ರು ಕೇಳಿದರು.
“ನಾನು ಹೊರಗಡೆ ರ‍್ತಿರೋ ಹಂಗೇ ಈ ತಿಂಗಳ ಕೋಟಾ ಮುಗೀತು. ಮುಂದಿನ ತಿಂಗಳಿಗೆ ಐದು ಕೇಸ್ ಕೊಡ್ತೀನಿ ಅಂತ ಡಾಕ್ಟರ್ ಹೇಳ್ತಾ ಇದ್ರು”
“ಕೇಸುಗಳು ಕಡಿಮೆ ಆದಾಗ ಆ ರೀತಿ ಕಂಪಲ್ಸರಿ ಆಪರೇಷನ್ ಮಾಡ್ಬೇಕಾಗುತ್ತೆ. ಪ್ರತಿ ಡಾಕ್ಟರೂ ಇಷ್ಟು ಕೇಸುಗಳನ್ನ ಪ್ರತಿ ತಿಂಗಳೂ ಕೊಡ್ಬೇಕು ಅಂತ ಕೆಲವು ಆಸ್ಪತ್ರೆಗಳಲ್ಲಿ ಅಲಿಖಿತ ನಿಯಮ ಇರುತ್ತೆ” ಎಂದು ಡಾಕ್ಟರ್ ಚಂದ್ರು ನಕ್ಕರು.
“ಈಗೇನು ಪ್ರೊಸೀಜರ್ ಮಾಡಿಸ್ಕೋಬೇಕೋ ಬೇಡ್ವೋ?” ವಿಶ್ವ ಕೇಳಿದ.
ಡಾಕ್ಟರ್ ಚಂದ್ರು ಬಹಳ ಯೋಚನೆ ಮಾಡಿ ತಮ್ಮ ಸೆಕೆಂಡ್ ಒಪೀನಿಯನ್ ಕೊಟ್ಟರು.
“ಬ್ಲಡ್ ಫ್ಲೋ ಸರಿ ಇರೋವಾಗ ಆಪರೇಷನ್ ಬೇಡ. ನೋವು ಬಂದರೆ ಈ ಮಾತ್ರೆ ತಗೊಳ್ಳಿ ಸಾಕು” ಎಂದು ಹೇಳಿದಾಗ ವಿಶ್ವ, ವಿಶಾಲೂಗೆ ಖುಷಿಯಾಯಿತು. ಅದೇ ವೇಳೆಗೆ ದೊಡ್ಡಾಸ್ಪತ್ರೆಯ ಡಾಕ್ಟರಿಂದ ಫೋನ್ ಬಂತು.
“ರೀ, ಸೋಮವಾರ ಓ.ಟಿ. ಖಾಲಿ ಇದೆ, ಬಂದ್ಬಿಡಿ ಆಪರೇಷನ್ ಮುಗಿಸ್ತೀನಿ. ದೀಪಾವಳಿಗೆ ೧೦ ಪರ್ಸೆಂಟ್ ಡಿಸ್ಕೌಂಟ್ ಇದೆ” ಎಂದರು.
“ಇಲ್ಲ ಡಾಕ್ಟರ್, ನನ್ನ ಹೃದಯಾನ ಚೆಕಪ್‌ಗೆ ಅಂತ ಪೂನಾ ಲ್ಯಾಬ್‌ಗೆ ಕಳಿಸಿದ್ದೀನಿ. ಅಲ್ಲಿಂದ ರಿಪೋರ್ಟ್ ಬಂದ ಮೇಲೆ ನೋಡೋಣ” ಎಂದ ವಿಶ್ವ.
ದೊಡ್ಡಾಸ್ಪತ್ರೆ ಡಾಕ್ಟರ್‌ಗೆ ಹಾರ್ಟ್ ಅಟ್ಯಾಕ್ ಆಗಿ ಕುಸಿದು ಕೂತರು.