For the best experience, open
https://m.samyuktakarnataka.in
on your mobile browser.

ಸ್ತನ ಕ್ಯಾನ್ಸರ್: ಜಗತ್ತಿನಲ್ಲಿ ಭಾರತಕ್ಕೆ ಪ್ರಥಮ ಸ್ಥಾನ

04:00 AM Jul 23, 2024 IST | Samyukta Karnataka
ಸ್ತನ ಕ್ಯಾನ್ಸರ್  ಜಗತ್ತಿನಲ್ಲಿ ಭಾರತಕ್ಕೆ ಪ್ರಥಮ ಸ್ಥಾನ

ಸ್ತನ ಕ್ಯಾನ್ಸರ್ ನಮ್ಮ ದೇಶದಲ್ಲಿ ಯಾವ ವೇಗದಲ್ಲಿ ಹೆಚ್ಚುತ್ತಿದೆ ಎಂದರೆ ಪ್ರಸ್ತುತ ದೇಶದಲ್ಲಿ ಒಂದೇ ವರ್ಷದಲ್ಲಿ ೧೦ ಲಕ್ಷ ಪ್ರಕರಣಗಳಷ್ಟು ಪತ್ತೆಯಾಗುತ್ತಿವೆ. ದೇಶದಲ್ಲಿ ಹೆಣ್ಣು ಮಕ್ಕಳನ್ನು ಕಾಡುವ ಕ್ಯಾನ್ಸರ್‌ಗಳ ಪೈಕಿ ಗರ್ಭಕರುಳಿನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದ್ದರೆ ಬ್ರೆಸ್ಟ್ ಕ್ಯಾನ್ಸರ್(ಸ್ತನ ಕ್ಯಾನ್ಸರ್) ಎರಡನೇ ಸ್ಥಾನದಲ್ಲಿದೆ. ಎರಡು ಮೂರು ದಶಕಗಳ ಹಿಂದೆ ಸಾಮಾನ್ಯವಾಗಿ ೫೦-೬೦ರ ವಯಸ್ಸಿನವರಲ್ಲಿ ಕಂಡುಬರುತ್ತಿದ್ದ ಈ ಅರ್ಬುಧರೋಗ ಇತ್ತೀಚೆಗೆ ಸಣ್ಣ ವಯಸ್ಸಿನವರನ್ನು ಅಂದರೆ ೩೦-೪೦ ವಯಸ್ಸಿನ ಹೆಂಗಸರಲ್ಲೂ ಕಾಣಿಸಿಕೊಳ್ಳುತ್ತಿದೆ. ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಅಂಕಿ ಅಂಶಗಳನ್ನು ನೋಡಿದರೆ ಜಗತ್ತಿನಲ್ಲಿ ಭಾರತವೇ ಪ್ರಥಮ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯವಾಗಿದೆ. ನಮ್ಮಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರಲ್ಲಿ ಶೇಕಡ ೫೦ರಷ್ಟು ಮರಣವನ್ನುಪ್ಪುತ್ತಿದ್ದಾರೆ. ಸ್ತನ ಕ್ಯಾನ್ಸರ್ ತುಂಬಾ ವಿಳಂಬವಾಗಿ ಪತ್ತೆಯಾಗುವುದೇ ಇದಕ್ಕೆ ಮುಖ್ಯ ಕಾರಣ. ನಾಚಿಕೆಯಿಂದಲೂ, ಭಯದಿಂದಲೂ, ಅಜ್ಞಾನದಿಂದಲೂ ಅಥವಾ ಗಂಟುಗಳಲ್ಲಿ ನೋವಿಲ್ಲದಿರುವುದಿಂದಲೂ ಮಹಿಳೆಯರು ಇದನ್ನು ಪ್ರಾಥಮಿಕ ಹಂತದಲ್ಲಿ ಕಡೆಗಣಿಸಿ ತಜ್ಞರ ಬಳಿ ತಡವಾಗಿ ಹೋಗುವುದರಿಂದ ರೋಗ ಗಂಭೀರ ಸ್ಥಿತಿ ತಲುಪಿದ ಮೇಲೆ ಪತ್ತೆಹಚ್ಚಿದಲ್ಲಿ ಕಾಲ ಮಿಂಚಿರುತ್ತದೆ.
ಪ್ರತಿಯೊಬ್ಬರ ಜೀವನಯಾತ್ರೆ ಆರಂಭಗೊಳ್ಳುವುದೇ ತಾಯಿಯ ಸ್ತನಪಾನ ಎಂಬ ಅಮೃತದಿಂದ. ಋತುಸ್ರಾವ ಗರ್ಭಾಶಯದ ಬೆಳವಣಿಗೆ ಸ್ತನಗಳ ಬೆಳವಣಿಗೆ ಮತ್ತು ಕಾರ್ಯಗಳೆಲ್ಲವೂ ಒಂದಾನೊಂದು ಅವಲಂಬಿಸಿವೆ. ಸ್ತನವೊಂದು ಸಂತಾನೋತ್ಪದಕ ಅಂಗಗಳಲ್ಲಿ ಒಂದು. ಸಾಮಾನ್ಯವಾಗಿ ೧೨ ವರ್ಷಗಳ ಮೇಲ್ಪಟ್ಟು ಸ್ತನಗಳ ಬೆಳವಣಿಗೆ ಕಾಣಿಸಿಕೊಂಡು ೭೦ ವರ್ಷಗಳಲ್ಲಿ ತನ್ನೆಲ್ಲ ರಚನೆ ಕಾರ್ಯಗಳಿಂದ ವಿಮುಕ್ತವಾಗುವುದರಿಂದ ಈ ಕಾಲವ್ಯವಸ್ಥೆಯಲ್ಲಿ ಅರ್ಬುಧರೋಗ ಕಂಡುಬರುವುದು. ಸಾಮಾನ್ಯವಾಗಿ ೪೦ ವರ್ಷ ಮೇಲ್ಪಟ್ಟ ೭೦ ವರ್ಷಗಳ ಒಳಗಿನ ಹೆಂಗಸರನ್ನು ಆವರಿಸುವ ರೋಗವಿದು. ಋತುಸ್ರಾವದ ಸಮಯದಲ್ಲಿ ಗರ್ಭಾಶಯದ ತೊಂದರೆಯಿಂದಾಗಿ ಮುಟ್ಟು ನಿಲ್ಲುವ ಮೊದಲೇ ಗರ್ಭಾಶಯವನ್ನು ತೆಗೆಯಬೇಕಾದ ಅನಿವಾರ್ಯತೆಯನ್ನು ನಾವಿಂದು ಕಾಣುತ್ತಿದ್ದೇವೆ. ಮುಟ್ಟು ನಿಲ್ಲುವಾಗ ಆಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದ ಹೆಂಗಸರು ಈ ರೋಗಕ್ಕೆ ಬಹುಬೇಗನೇ ತುತ್ತಾಗುವುದನ್ನು ಕಾಣಬಹುದು. ಸಾಮಾನ್ಯವಾಗಿ ನಿಗದಿತ ಸಮಯಗಳಲ್ಲಿ ಋತುಸ್ರಾವ ಆಗುವ ಹೆಣ್ಣು ಮಕ್ಕಳಲ್ಲಿ ಹಾಗೂ ಹಾಲುಣಿಸುವ ತಾಯಂದಿರಿಗೆ ಈ ರೋಗ ಕಾಡುವುದಿಲ್ಲ.
ಇದರ ಸಂಬಂಧಪಟ್ಟ ಲಕ್ಷಣಗಳು: ಸ್ತನಗಳಲ್ಲಿ ಗಡ್ಡೆಯಾದಂತಹ ಅನುಭವ ಅಥವಾ ಅನೇಕ ಗಂಟುಗಳು ಕೈ ಸ್ಪರ್ಶಕ್ಕೆ ಸಿಗುವಷ್ಟು ಬದಲಾವಣೆ ಅಥವಾ ಗಂಟುಗಳು ಸ್ಪರ್ಶಕ್ಕೆ ಸಿಗದೇ ಇರುವುದು. ಸ್ತನ ಚರ್ಮದ ಮೇಲ್ಭಾಗದ ಪದರ ದಪ್ಪ ಮತ್ತು ಒರಟಾಗುವಿಕೆ. ಇಡೀ ಸ್ತನ ಅಥವಾ ಅದರ ಸುತ್ತಲೂ ಬಾವು. ಸ್ತನಗಳ ತೊಟ್ಟು ಒಳ ಸರಿಯುವುದು. ತೊಟ್ಟಿನಿಂದ ಸ್ರಾವ, ತಿಳಿಹಳದಿ, ಬಿಳಿರಕ್ತ, ವರ್ಣಸ್ರಾವ, ಇದು ಮೊಲೆಹಾಲಿಗಿಂತ ಬೇರೆ ಸ್ವರೂಪದ್ದು. ಸ್ತನದ ಚರ್ಮದಲ್ಲಿ ಅಸಹನೀಯ ನವೆಯ ಅನುಭವ. ಚರ್ಮ ಅಲ್ಲಲ್ಲಿ ಗುಳಿ ಬೀಳುವುದು, ಚರ್ಮದ ಪದರ ಹರಿದಂತೆ ಹಳದಿ, ಕೇಸರಿ ಛಾಯೆಯ ಬದಲಾವಣೆ. ಸಂಪೂರ್ಣ ಸ್ತನ ಅಥವಾ ತೊಟ್ಟಿನ ಭಾಗ ಮಾತ್ರ ನೋವಾಗುವುದು, ಜುಂಜುಂ ಅನಿಸುವುದು. ಕೆಂಪು ವರ್ಣಕ್ಕೆ ತಿರುಗುವುದು ಬಿಳಿಯಾದ ಕುರುವಿನಂತಹ ಹುಣ್ಣುಗಳು ತೋರಬಹುದು. ಕಂಕುಳವರೆಗೆ ಸ್ಪರ್ಶಕ್ಕೆ ಸಿಗುವ ಗಂಟುಗಳು ಕೈಗಳನ್ನೆತ್ತಿದಾಗ ಆ ಭಾಗಗಳಲ್ಲಿ ಸೆಳೆತ. ಇವುಗಳು ಸೇರಿದಂತೆ ಸ್ತನ ಕ್ಯಾನ್ಸರ್ ಉಳ್ಳ ರೋಗಿಗಳಲ್ಲಿ ಕಂಡುಬರುವ ಲಕ್ಷಣಗಳು. ಬಿಟ್ಟು ಬಿಟ್ಟು ಜ್ವರ, ಬಳಲಿಕೆ, ಬಾಯಾರಿಕೆ, ಹಸಿವೆ ಕಡಿಮೆ ಎನಿಸುವುದು, ಎದೆ ಉರಿ, ಹಸ್ತಪಾದಗಳ ಉರಿ.
ಈ ಸಂಬಂಧ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ರಕ್ತ ಪರೀಕ್ಷೆ ಹಾರ್ಮೋನ್ ರಿಜೇಪವ್ವರ್ ಪರೀಕ್ಷೆ ಮತ್ತು ಹೆಚ್‌ಇಆರ್-೨ ಪರೀಕ್ಷೆ, ಈ ರಕ್ತ ಪರೀಕ್ಷೆಗಳು ಕ್ಯಾನ್ಸರ್‌ಕಾರಕ ಪ್ರೋಟೀನ್ ಮತ್ತು ಜೀವಕೋಶರಕ್ತದಲ್ಲಿರುವ ಮಟ್ಟವನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ. ಮಮೋಗ್ರಾಮ್ ಸ್ತನಗಳ ಅಲ್ಟ್ರಾಸೌಂಡ್, ಸ್ತನಜೀವಕೋಶಗಳ ಬೈಯಪ್ಸಿ ಅಥವಾ ಪೈನ್ ನೀಡಲು ಅಸ್ಪಿರೇಷನ್ ಟೆಸ್ಟ್ (ಎಫ್.ಎನ್.ಎ.ಟಿ.) ಬ್ರೆಸ್ಟ್ ಎಂ.ಆರ್.ಐ. ಪರೀಕ್ಷೆಗಳಿಂದ ಸದರಿ ರೋಗವನ್ನು ಕಂಡುಹಿಡಿಯಬಹುದಾಗಿದೆ.
ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು?: ಸ್ತನವನ್ನು ಬೆಳವಣಿಗೆ ಮಾಡುವ ಜೀವ ಕೋಶಗಳಲ್ಲಿ ದೇಹದ ವೈಪರೀತ್ಯದಿಂದ ಅತಿಯಾಗಿ ಉತ್ಪತ್ತಿಯಾಗುವ ಅಂಗಾಂಶಗಳು ಸ್ತನಗಳನ್ನು ಉರಿಬಾವುವಿಗೆ ಒಳಪಡಿಸಿ ಗ್ರಂಥಿಗಳಲ್ಲಿ ಸ್ರಾವಗೊಂಡು ಗಂಟುಗಳು ಉತ್ಪತ್ತಿಯಾಗುತ್ತವೆ. ಈ ಎಲ್ಲಾ ಅಂಗಾಂಶಗಳು ರಚನಾತ್ಮಕ ಮತ್ತು ಕ್ರಿಯಾತ್ಮಕ ವೈಪರೀತ್ಯಗಳು ಸಹಜವಾಗಿ ದೇಹದಲ್ಲಿಯೇ ಇರುವ ಉಷ್ಣಾಂಶ(ಪಿತ್ತ) ಮತ್ತು ಜೀವಕೋಶಗಳನ್ನು ವೃದ್ಧಿಗೊಳಿಸಿ ಮಾರ್ಪಾಡುಗಳನ್ನು ತರುತ್ತವೆ. ಪ್ರತಿ ಮಾಸ ದೇಹದಿಂದ ಹೊರಹೋಗುವ ಮುಟ್ಟು, ಸ್ತ್ರೀ ಶರೀರದ ಸ್ತನಗಳ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಅಸಹಜ ಮುಟ್ಟು ಸಾಮಾನ್ಯವಾಗಿ ಕಂಡುಬರುವ ಕಾರಣ. ಶರೀರದ ರಚನೆ ಮತ್ತು ಕ್ರಿಯೆಗಳ ನಿಯಂತ್ರಣ ವ್ಯವಸ್ಥೆಗಳು ನಾವೇ ಸೇವಿಸುವ ಆಹಾರ, ಸಕಲ ನಿದ್ರೆ, ದೈನಂದಿನ ವ್ಯವಹಾರಗಳ ಮೇಲೆ ಅವಲಂಬಿಸಿದೆ. ದೇಹಪರಿಸರದ ವಿರುದ್ಧ ಬಾಹ್ಯ ಹಾರ್ಮೋನ್‌ಗಳ ಬಳಕೆಯನ್ನು ಮನಬಂದಂತೆ ಕುಟುಂಬ ಯೋಜನೆ ಅಥವಾ ಮುಟ್ಟಿನ ದಿನಗಳನ್ನು ಹಿಂದೆ ಮುಂದೆ ದೂಡಲು ಅಥವಾ ಮುಟ್ಟಿನ ಇತರ ತೊಂದರೆಗಳಿಗೆ ಯಥೇಚ್ಛವಾಗಿ ಬಳಸುವುದು ಸ್ತನ ಕ್ಯಾನ್ಸರ್‌ನ ತೀವ್ರತೆಗೆ ಇಂಬು ನೀಡುತ್ತವೆ.
ಚಿಕಿತ್ಸೋಪಾಯಗಳು: ಅಲೋಪತಿ ಚಿಕಿತ್ಸಾ ವಿಧಾನಗಳಲ್ಲಿ ಶಸ್ತ್ರಕ್ರಿಯೆಯಿಂದ ಅಸಹಜ ಜೀವಕೋಶಗಳನ್ನು ತೆಗೆಯುವುದು, ಸ್ತನಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಮತ್ತೆ ಕಸಿ ಮಾಡುವುದು. ಲಸಿಕೆಗಳ ಮೂಲಕ ಸ್ತನಗಳನ್ನು ಪುನರ್‌ರಚಿಸುವುದು. ಕಂಗಳ ಚರ್ಮದ ಕೆಳಗೆ ಜೀವಕೋಶಗಳನ್ನು ಕ್ರಮೇಣ ಬೆಳೆಯುವಂತೆ ವ್ಯವಸ್ಥೆ(ಮಮ್ಮ ಪ್ಲಾಸ್ಟಿ), ರೋಗಪೀಡಿತ ಲಿಪನೋಡ್‌ಗಳನ್ನು ಕತ್ತರಿಸಿ ತೆಗೆಯುವುದು. ಸಂಪೂರ್ಣವಾಗಿ ರೋಗಪೀಡಿತ ಗ್ರಂಥಿ ಅಂಗಾಂಶಗಳನ್ನು ಶರೀರದಿಂದ ಬೇರ್ಪಡಿಸುವುದು (ಲ್ಯಾಪ್ರೊ ಸ್ಕೋಪ್) ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ಅಥವಾ ಭಾಗಾಂಶ ಸ್ತನವನ್ನು ಬೇರ್ಪಡಿಸುವುದು. ಶಕ್ತಿಯುತ ವಿಶಿಷ್ಟ ಬೆಳಕಿನ ಕಿರಣಗಳ ಮೂಲಕ ಪೀಡಿತ ಜೀವಕೋಶಗಳನ್ನು ಸಂಪೂರ್ಣವಾಗಿ ಕೊಲ್ಲುವುದು(ರೇಡಿಯೇಶನ್ ಥೆರಪಿ), ಅತ್ಯಂತ ವೇಗವಾಗಿ ವೃದ್ಧಿಯಾಗುವ ಜೀವಕೋಶಗಳನ್ನು ಕೊಲ್ಲುವುದು ಹಾರ್ಮೋನ್ ಆಧಾರಿತ ಕಿಮೋಥೆರಪಿಗಳಂತಹ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
ಆಯುರ್ವೇದದ ಮನೆಮದ್ದು ವಿಧಾನ: ಶರೀರದ ಸಹಜ ಕ್ರಿಯೆಗೆ ಧಕ್ಕೆಯಾದ ಪಿತ್ತ ಕಫಗಳ ಶುದ್ಧಿಗೆಂದು ಮಮನ ಮತ್ತು ವಿರೇಚನ ಚಿಕಿತ್ಸೆ. ಇದು ಶರೀರದಲ್ಲಿ ಬಲವಿದ್ದಾಗ, ಆರಂಭಿಕ ಸ್ಥಿತಿಯಲ್ಲಿ ಸಾಧ್ಯ. ದಾಸವಾಳದ ರಸ ಸ್ತನ್ ಕ್ಯಾನ್ಸರ್ ಗಳಿಗೆ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವಿಜ್ಞಾನಿಗಳು ದಾಸವಾಳದ ಹೂಗಳನ್ನು ಪುಡಿ ಮಾಡಿ ನೀರಿನೊಂದಿಗೆ ಕುದಿಸಿ ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ ಬಳಸಿದಲ್ಲಿ ಉಪಯುಕ್ತವಾಗಲಿದೆ ಎಂದಿದ್ದಾರೆ. ಆಹಾರದಲ್ಲಿ ಮುಖ್ಯವಾದ ತರಕಾರಿಗಳು ಬ್ರೊಕೋಲಿ, ಬೆಳ್ಳುಳ್ಳಿ ಹಾಗೂ ವಿಟಮಿನ್ ಇರುವಂತ ತರಕಾರಿ. ರೆಡ್ ವೈನ್ ದೇಹದಲ್ಲಿ ಕ್ಯಾನ್ಸರ್‌ನಿರೋಧಕ ಶಕ್ತಿಯನ್ನು ಉತ್ಪತ್ತಿ ಮಾಡಬಲ್ಲದು. ಬೆಳಿಗ್ಗೆ ಸಮಯ ೧೫ ನಿಮಿಷಗಳ ಕಾಲ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ, ಚರ್ಮಕ್ಕೆ ವಿಟಮಿನ್ ಡಿ ಸತ್ವ ದೊರೆಯುತ್ತದೆ, ಇದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

ತಡೆಯುವುದು ಹೇಗೆ?
ತನ್ನದೇ ಶರೀರದ ಕರೆಗಳ ಬಗ್ಗೆ ಅಸಹನೆ ತಾತ್ಸಾರ ಬೇಡ, ಹಸಿವು, ಬಾಯಾರಿಕೆ, ನಿದ್ದೆ, ಮಲ-ಮೂತ್ರ ಇತ್ಯಾದಿ ದೇಹದ ನೈಸರ್ಗಿಕ ಕರೆಗಳನ್ನು ಗೌರವಿಸಿ. ಹಸಿವನ್ನು ತಡೆಯುವುದು, ಹಸಿವಿಲ್ಲದಾಗ ತಿನ್ನುವುದು, ಬೆವರು ಸುರಿಸದ ಜೀವನ ಆದರೂ ಯಥೇಚ್ಛ ದ್ರವಾಹಾರಗಳ ಸೇವನೆ ಸಲ್ಲದು. ಸದಾ ದೇಹದ ಬೇಡದ ಪದಾರ್ಥಗಳ (ಮಲ, ಮೂತ್ರ, ಬೆವರು, ಮುಟ್ಟು) ವಿಸರ್ಜನೆ ಕ್ರಿಯೆ ಸರಿಯಾಗಿದೆಯೇ ಎಂಬುದನ್ನು ಸರಿಯಾಗಿ ಗಮನಿಸಿ. ಕೃತಿಮ (ಪರಿಸರ ವಿರುದ್ಧ) ಆಹಾರಗಳ ಬಣ್ಣ, ಪಾನೀಯ, ರಾಸಾಯನಿಕಗಳ ಔಷಧಗಳ ವಿಪರೀತ ಅವಿವೇಚಿತ ಉಪಯೋಗಗಳನ್ನು ಬಿಡಿ.

ವಹಿಸಬೇಕಾದ ಎಚ್ಚರಿಕೆ
ಸ್ತನಗಳ ಯಾವುದೇ ಅಸಹಜ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ. ಕೈಯನ್ನು ಎತ್ತಿ ಸಡಿಲದ ಸ್ತನವನ್ನು ಮತ್ತೊಂದು ಕೈಯಿಂದ ಸ್ಪರ್ಶಿಸಿ ಅದರ ಸ್ವಾಭಾವಿಕವಾದ ಮೃದುತ್ವ ರಚನೆಯನ್ನು ಗಮನಿಸಿಕೊಳ್ಳುವುದು. ಮುಟ್ಟಿನ ಯಾವುದೇ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೇ ಇರುವುದು. ಯಾವುದೇ ಮನೆ ಮದ್ದಾದರೂ ಆರಂಭಿಕ ಹಂತದಲ್ಲಿ ಪರಿಣಾಮಕಾರಿ ಆಗುವುದು! ಅಂದರೂ ಆರೋಗ್ಯ ಹೆಚ್ಚು ಏರುಪೇರು ಆದಲ್ಲಿ ಸೂಕ್ತ ಸಮಯದಲ್ಲಿ ವೈದ್ಯರ ಬಳಿ ಹೋಗುವುದು, ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.