ಸ್ನೇಹಿ ವಿಶ್ವದತ್ತ…
ಕಡು ವೈರಿಯೊಬ್ಬ ಆಪ್ತಮಿತ್ರನಾಗಲು ಸಾಧ್ಯವೇ…? ಖಂಡಿತ ಸಾಧ್ಯವಿದೆ ಎಂದು ವಿಶ್ವದ ಎಲ್ಲಾ ಧರ್ಮಗಳು ಸಾರುತ್ತವೆ. ಜಗತ್ತಿನ ತುಂಬೆಲ್ಲ ಗೆಳೆಯರು, ಪ್ರಪಂಚವೆಲ್ಲ ಗೆಳೆಯರ ಗುಂಪು ಎನ್ನುವ ತತ್ವವನ್ನು ಬಹುಶಃ ಕುರಾನಿನ ಪ್ರತಿಯೊಂದು ವಚನದಲ್ಲಿ ನೇರವಾಗಿ, ಪರೋಕ್ಷವಾಗಿ, ಆದೇಶವಾಗಿ, ಉಪದೇಶವಾಗಿ, ಪ್ರಸ್ತಾಪಿಸಲಾಗಿದೆ.
ಜಗತ್ತಿನ ತುಂಬೆಲ್ಲ ಇರುವ ಸ್ನೇಹಿತರಲ್ಲಿ ಒಬ್ಬನು ನಿಜವಾದ ಸ್ನೇಹಿತನಾಗಿದ್ದರೆ ಇನ್ನೊಬ್ಬನು ಸಾಮರ್ಥ್ಯವುಳ್ಳ ಸ್ನೇಹಿತನಾಗಿರುತ್ತಾನೆ. ಹೀಗೆ ನಮ್ಮ ಸುತ್ತಮುತ್ತ ಸ್ನೇಹಿತರನ್ನೇ ಕಾಣಬಹುದು. ಕುರಾನಿನ ಅಧ್ಯಾಯ ಪುಸೀಲತ್ ದಲ್ಲಿಯ ಈ ವಚನ ನೋಡಿ. (೪೧:೩೪) ಒಳಿತು ಕೆಡಕುಗಳು ಸಮಾನವಲ್ಲ. ಕೆಡುಕನ್ನು ಒಳಿತಿನಿಂದ ಎದುರಿಸಿರಿ. ಆಗ ನಿಮ್ಮ ವಿರುದ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಾಗಿ ಬಿಡುತ್ತಾನೆ.' ಮಾನವೀಯತೆ ನೈತಿಕತೆ ಮತ್ತು ಸಭ್ಯತೆಗಳ ಇತಿಮಿತಿಗಳನ್ನು ಉಲ್ಲಂಘಿಸಿದಾಗ ನಾವು ತಿಳಿದುಕೊಳ್ಳಬೇಕಾದುದು ಒಳಿತು ಕೆಡಕುಗಳು ಸಮಾನವಲ್ಲ. ಕೆಡುಕಿನ ಬಿರುಗಾಳಿ ಎಷ್ಟೇ ಪ್ರಬಲವಾಗಿದ್ದರೂ ಅದರ ಎದುರಿಗೆ ನೀವು ಎಷ್ಟೇ ಅಸಹಾಯಕರಾಗಿದ್ದರೂ ಕೆಡುಕಿನಲ್ಲಿ ದೌರ್ಬಲ್ಯವಿದೆ. ನಾವು ಕೆಡುಕನ್ನು ಒಳಿತಿನಿಂದ ನಿವಾರಿಸಬಹುದು. ಇನ್ನು ಕುರಾನಿನ ವಿವರಣೆಯಂತೆ
ನಿಮ್ಮೊಡನೆ ಕೆಟ್ಟ ರೀತಿಯಲ್ಲಿ ವರ್ತಿಸಿದವನೊಂದಿಗೆ ನೀವು ಅತ್ಯುತ್ತಮ ರೀತಿಯಲ್ಲಿ ವರ್ತಿಸಿರಿ ಅವರಿಗೆ ಉಪಕಾರ ಮಾಡಿರಿ. ಇದರ ಪರಿಣಾಮವಾಗಿ ನಿಮ್ಮ ಕಡು ವೈರಿಯೂ ಆಪ್ತಮಿತ್ರನಾಗಬಲ್ಲ. ಏಕೆಂದರೆ ಮಾನವ ಸ್ವಭಾವ ಇದುವೇ ಆಗಿದೆ. ಕೆಡುಕನ್ನು ಶುಭಾಶಯದಿಂದ ಕೊನೆಗೊಳಿಸಬೇಕು ಇದಕ್ಕಾಗಿ ಮನೋಬಲ ಬೇಕು. ದೃಢಸಂಕಲ್ಪ, ಸಹನಾಶಕ್ತಿ ಬೇಕು. ಕುರಾನಿನ ಈ ವಿವರಣೆಯ ಹಿಂದೆ ಪ್ರವಾದಿವರ್ಯ ಮುಹಮ್ಮದ್ (ಸ) ಅವರನ್ನು ಹಾಗೂ ಅವರ ಸಂಗಾತಿಗಳನ್ನು ಮಕ್ಕಾದ ಜನರು ಅತ್ಯಂತ ಕ್ರೂರ ರೀತಿಯಿಂದ ನಡೆಸಿಕೊಂಡರು. ಪ್ರತಿಸಾರಿ ಅವರೆಲ್ಲರಿಗೆ ಹಿಂಸೆ ಕೊಟ್ಟು ಗಾಯಗೊಳಿಸುತ್ತಿದ್ದರು. ಆಗ ಪ್ರವಾದಿವರ್ಯರಿಗೆ ಹಾಗೂ ಅವರ ಸಂಗಾತಿಗಳಿಗೆ ಮಾರ್ಗದರ್ಶನ ನೀಡಲಾಯಿತು. `ವಿಶ್ವಾಸಿಗಳೆ, ಅವರ ಈ ನಡವಳಿಕೆ ವಿರುದ್ಧ ಪ್ರತಿಕ್ರಯಿಸ ಬೇಡಿರಿ, ಮುಯ್ಯಿಗೆ ಮುಯ್ಯ್ ನೀತಿ ಬೇಡ' ಎಂಬ ಉಪದೇಶಾಮೃತದಿಂದಾಗಿ ಮಕ್ಕಾದ ವಿರೋಧಿ ಜನತೆ ವೈರಿಗಳಾಗಿದ್ದವರು ಪರಮ ಮಿತ್ರರಾದರು. ಅಷ್ಟೇ ಅಲ್ಲ ಪ್ರವಾದಿವರ್ಯರ ಸ್ನೇಹ ಸೌಹಾರ್ದ್ರತೆಯ ನೀತಿಯಿಂದಾಗಿ ಇಡೀ ಅರಬ್ ಸ್ಥಾನ ಅಲ್ಲದೆ ಅದರ ಹೊರಗಿನ ಪ್ರದೇಶದ ಜನರು ಸ್ನೇಹಿತರಾದರು.
ಇದಕ್ಕೆ ಕಾರಣ ಕೆಡುಕನ್ನು ಒಳಿತನಿಂದ ಎದುರಿಸಿದ್ದು. ಈ ನೀತಿ ವಿರೋಧಿಯ ಹೃದಯವನ್ನು ತಟ್ಟಿತು ಕುರಾನಿನ ಈ ನೀತಿಯನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಸರ್ವಸಮ್ಮತ ನೈತಿಕ ತಿಳಿವಳಿಕೆ ಎಂದು ಕರೆಯಬಹುದು. ನಿಸರ್ಗದ ನಿಯಮವೇ ಆಗಿದೆ. ಯಾರೂ ತಮ್ಮ ಆತ್ಮಸಾಕ್ಷಿಯಾಗಿ ಅದರ ವಿರುದ್ಧ ಹೋಗಲಾರರು. ಕುರಾನು ಪ್ರತಿಪಾದಿಸುವ ಸಮಾಜದಲ್ಲಿ ಸ್ತ್ರೀ ಪುರುಷರೆಲ್ಲರೂ ಸರ್ವ ಸಮ್ಮತದಿಂದ ವಾಸಿಸಿದಾಗ ವಿಶ್ವವೆಲ್ಲ ಸ್ನೇಹಿ ವಿಶ್ವದತ್ತ ಆಗಬಲ್ಲದು.