ಸ್ಪರ್ಧಾತ್ಮಕತೆಯನ್ನು ಸರ್ಕಾರ ಕಡಿಮೆ ಮಾಡುತ್ತಿದೆ
ಬೆಂಗಳೂರು: ಎಸ.ಎಸ.ಎಲ್.ಸಿ ಓದುವ ಮಕ್ಕಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಬೇಕೆ ಹೊರತು ನಪಾಸಾದರೆ ಮೂರು ಬಾರಿ ಅವಕಾಶ ಕೊಡುವುದರ ಮೂಲಕ ಅವರ ಸ್ಪರ್ಧಾತ್ಮಕತೆಯನ್ನು ಸರ್ಕಾರ ಕಡಿಮೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವಿದ್ಯಾರ್ಥಿಗಳಿಗೆ ಇರುವ ನ್ಯೂನತೆಗಳು, ಸಮಸ್ಯೆಗಳು, ಕೊರತೆಗಳನ್ನು ಶಿಕ್ಷಣ ಇಲಾಖೆ ಸರಿಪಡಿಸಬೇಕೇ ಹೊರತು ಮೂರು ಬಾರಿ ಪರೀಕ್ಷೆ ನಡೆಸುವುದರಿಂದ ಯಾವುದೇ ರೀತಿಯಾದ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ. SSLC ಯಲ್ಲಿ 20 % ಕೃಪಾಂಕ ನೀಡಿದರೂ ಫಲಿತಾಂಶ ಸುಧಾರಣೆ ಆಗುತ್ತಿಲ್ಲವೆಂದರೆ ಇನ್ನೆಷ್ಟರ ಮಟ್ಟಿಗೆ ಶಿಕ್ಷಣ ಇಲಾಖೆ ವೈಫಲ್ಯ ಕಂಡಿದೆ ಎಂಬುದನ್ನು ಅರಿಯಬಹುದು. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಖುದ್ದು ಕನ್ನಡ ಓದಲು, ಬರೆಯಲು ಬಾರದ ಸಚಿವರನ್ನು ಈ ಇಲಾಖೆಯ ಸಾರಥಿಯನ್ನಾಗಿ ಮಾಡಿರುವುದರಿಂದಲೇ ಈ ಸಮಸ್ಯೆ ಪ್ರಾರಂಭವಾಗಿದೆ. ಕೂಡಲೇ, ಇಲಾಖಾ ಸಚಿವರನ್ನು ಬದಲಿಸಿ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲವರಿಗೆ ಕೊಡಿ ಸಿದ್ದರಾಮಯ್ಯನವರೇ ಎಂದು ಆಗ್ರಹಿಸಿದ್ದಾರೆ.