ಸ್ಮಶಾನದಲ್ಲಿ ಕಣ್ಣು ತೆರೆದ ವೃದ್ಧೆ…!
ಚೆನ್ನೈ: ಸ್ಮಶಾನದಲ್ಲಿ ಶವ ಹೂಳಲು ಗುಂಡಿ ತೋಡುವಾಗಲೇ ೬೦ ವರ್ಷದ ಮುದುಕಿ ಮೇಲೆದ್ದು ಕಣ್ಣು ತೆರೆದು ಎಲ್ಲರನ್ನೂ ದಂಗುಬಡಿಸುವಂತೆ ಮಾಡಿದ ಘಟನೆ ತಿರುಚ್ಚಿ ಜಿಲ್ಲೆಯಲ್ಲಿ ನಡೆದಿದೆ. ಅಜ್ಜಿ ಕಣ್ಣು ತೆರೆದಿರುವುದನ್ನು ನೋಡಿದ ಸಂಬಂಧಿಕರು ಭಯಭೀತರಾಗಿ ಅಲ್ಲಿಂದ ದೂರ ಓಡಿಹೋದರು.
ತೀವ್ರ ಕಣ್ಣಿನ ನೋವಿನಿಂದ ಬಳಲುತ್ತಿದ್ದ ವೇಲ್ಕುರಿಚಿ ನಿವಾಸಿ ಚಿನ್ನಮ್ಮಾಳ್‌ಗೆ ಈಗ ಕಣ್ಣು ಕಾಣದಿರುವುದರಿಂದ ಬದುಕಿನಲ್ಲಿ ಭ್ರಮನಿರಸನಗೊಂಡಿದ್ದಳು. ಭಾನುವಾರ ಕಣ್ಣಿನ ನೋವಿನ ಬಾಧೆ ಸಹಿಸದಿದ್ದಾಗ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಹೀಗಾಗಿ ಪುತ್ರ ಸುಬ್ರಮಣಿ ಆಕೆಯನ್ನು ದ್ವಾರಕುರಿಚಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು.
ಆದರೆ ಚಿನ್ನಮ್ಮಾಳ್ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರಿಂದ ಕುಟುಂಬಸ್ಥರು ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ದಾರಿ ಮಧ್ಯೆ ವಾಹನ ಸಾಕಷ್ಟು ಅಲುಗಾಡಿದ್ದರಿಂದ ಆಕೆಯ ವೆಂಟಿಲೇಟರ್ ಕೆಳಗೆ ಬಿದ್ದು ಉಸಿರಾಟ ನಿಲ್ಲಿಸಿದ್ದಳು. ಇದರಿಂದ ಆಕೆ ಸಾವಿಗೀಡಾಗಿದ್ದಾರೆಂದು ಭಾವಿಸಿ ಶವವನ್ನು ಸ್ಮಶಾನದ ಕಡೆ ಸಾಗಿಸಿದರು.
ಸ್ಮಶಾನದಲ್ಲಿ ಹೊಂಡ ಅಗೆಯುತ್ತಿದ್ದಾಗ ಚಿನ್ನಮ್ಮಾಳ್ ಕಣ್ಣು ತೆರೆದು ಮೇಲೆದ್ದಳು. ಅಲ್ಲದೆ ತನಗೆ ಬಾಯಾರಿಕೆಯಾಗಿದೆ, ನೀರು ಕೊಡುವಂತೆ ಸ್ಥಳದಲ್ಲಿದ್ದವರಲ್ಲಿ ಕೇಳಿದಳು. ಇದರಿಂದ ಹೌಹಾರಿದ ಕುಟುಂಬಸ್ಥರು ಆರಂಭದಲ್ಲಿ ಆಕೆಯ ಬಳಿ ಹೋಗಲು ಹೆದರಿದರು. ಕೊನೆಗೆ ಜೀವಂತ ಇರುವುದು ದೃಢಪಟ್ಟನಂತರ ಆಕೆಗೆ ನೀರು ನೀಡಲಾಯಿತು. ಆ ಕೂಡಲೇ ಮತ್ತೊಂದು ಅಂಬ್ಯುಲೆನ್ಸ್‌ನಲ್ಲಿ ಚಿನ್ನಮ್ಮಾಳನ್ನು ತಿರುಚ್ಚಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದೆ.