ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ವತ್ತು ಒಂದು, ವಿವಾದಗಳು ನೂರೆಂಟು

04:00 AM Oct 19, 2024 IST | Samyukta Karnataka

ಈಪ್ರಕರಣ ಹಲವಾರು ಗೊಂದಲದ ಗೂಡು. ಒಂದು ಆಸ್ತಿಗಾಗಿ ಹೀಗೆ ಪ್ರಕರಣಗಳ ಗುಡ್ಡ ಬೆಳೆಯುತ್ತ ಹೋಗುತ್ತವೆ. ಜನಸಾಮಾನ್ಯರಲ್ಲಿ, ಕೋರ್ಟಿಗೆ ಹೋದರೆ ಮುದ್ದತ್ತಿನ ಮೇಲೆ ಮುದ್ದತ್ತು, ಜೀವನಪರ್ಯಂತ ಅಲೆದಾಟ ಹೈರಾಣಾಗಿ ಕೊನೆಗೆ ನ್ಯಾಯ ಸಿಕ್ಕರೂ, ನ್ಯಾಯಕ್ಕಾಗಿ ಮೊರೆ ಹೋದವನೇ ಇರುವುದಿಲ್ಲ ಎಂಬ ಮಾತಿದೆ. ನ್ಯಾಯ ವಿಳಂಬವಾದರೆ, ನ್ಯಾಯ ನಿರಾಕರಿಸಿದಂತೆ ಆತುರದ ನ್ಯಾಯ, ನ್ಯಾಯ ಸಮಾಧಿ ಎನ್ನುವ ಮಾತಿದೆ. ಯಾಕೆ ವ್ಯಾಜ್ಯಗಳು ಎಳೆದಾಡುತ್ತವೆ ಅನ್ನುವದಕ್ಕೆ ಈ ಪ್ರಕರಣ ಒಂದು ಉದಾಹರಣೆ ಅಷ್ಟೆ.
ನಮ್ಮ ಕಕ್ಷಿದಾರ ಗಂಡ ಹೆಂಡತಿ ಸುಧೀರ, ಶಾರದೆ (ಎಲ್ಲರ ಹೆಸರು ಬದಲಿಸಲಾಗಿದೆ) ತಮ್ಮ ಅಜ್ಞಾನ ಮಗ ಉಮೇಶನ ಹೆಸರಲ್ಲಿ ಇರುವ ಜಮೀನನ್ನು ಮಾರಾಟಕ್ಕೆ ತೆಗೆದರು. ಕು.ಉಮೇಶನ ಹೆಸರಿನಲ್ಲಿ ಸುಮಾರು ೮ ಎಕರೆ ಅಷ್ಟು ಫಲವತ್ತಾದ ಜಮೀನು ಇದೆ. ಹುಸೇನಸಾಬ ಹೆಚ್ಚಿನ ಬೆಲೆ ಪ್ರತಿ ಎಕರೆಗೆ ೫ ಲಕ್ಷಕ್ಕೆ ಬೇಡಿದಾಗ, ಮುಂಗಡ ರೂ. ೨೦.೦೦.೦೦೦ ಪಡೆದುಕೊಂಡು ಸುಧೀರ, ಶಾರದೆ ಕ್ರಯ ಕರಾರು ಪತ್ರವನ್ನು ದಿ. ೭/೮/೨೦೦೧ ರಂದು ಹುಸೇನಸಾಬನಿಗೆ ಬರೆದುಕೊಟ್ಟರು. ಕರಾರು ಪತ್ರದಲ್ಲಿ ಸುಧೀರ, ಶಾರದೆ ಇವರು ಮಹೇಶನ ಅಜ್ಞಾನ ಪಾಲಕರೆಂದು, ಈ ಜಮೀನು ಹಾಗೂ ಉಳಿದ ಸ್ವತ್ತಿಗಾಗಿ ತಮ್ಮ ಮಕ್ಕಳ ನಡುವೆ ಕೋರ್ಟಿನಲ್ಲಿ ವ್ಯಾಜ್ಯ ನಡೆದಿದ್ದು, ಆ ವ್ಯಾಜ್ಯ ರಾಜಿ ಆಗಲಿದೆ, ಆ ವ್ಯಾಜ್ಯದಲ್ಲಿ ಈ ಜಮೀನು ತಮ್ಮ ಹಿಸ್ಸೆಗೆ ಬರುತ್ತದೆ ಆಗ ತಾವು ಉಳಿದ ರೂ. ೨೦.೦೦.೦೦೦ ಪಡೆದುಕೊಂಡು, ನೋಂದಾಯಿತ ಕ್ರಯಪತ್ರ ಬರೆದುಕೊಡುವ ಷರತ್ತಿನೊಂದಿಗೆ ಕ್ರಯ ಕರಾರು ಬರೆದುಕೊಟ್ಟರು.
ವ್ಯಾಜದಲ್ಲಿ ಜಮೀನು ಸುಧೀರ ಮತ್ತು ಶಾರದೆ ಹಿಸ್ಸೆಗೆ ಬಂದು ಅವರ ಹೆಸರು ಕಂದಾಯ ದಾಖಲೆಯಲ್ಲಿ ದಾಖಲಾಯಿತು. ಹುಸೇನಸಾಬ ಕ್ರಯಪತ್ರ ಮಾಡಿಕೊಡಲು ತನ್ನ ವಕೀಲರ ಮೂಲಕ ನೋಟಿಸ್ ನೀಡಿ ವಿನಂತಿಸಿದನು. ಕ್ರಯಪತ್ರ ಮಾಡಿಕೊಡಲು ದಂಪತಿ ನಿರಾಕರಿಸಿದರು. ಹುಸೇನಸಾಬ ವಾದಿಯಾಗಿ ನ್ಯಾಯಾಲಯದಲ್ಲಿ ಕರಾರಿನ ನಿರ್ದಿಷ್ಟ ಕಾರ್ಯಕ್ಷಮತೆ ದಾವೆ ದಾಖಲಿಸಿ ಪ್ರತಿವಾದಿ ಸುಧೀರ, ಶಾರದೆ, ಕು. ಮಹೇಶ ಕರಾರು ಪತ್ರ ದಿ೭/೮/೨೦೦೧ರಂತೆ ತನ್ನ ಹೆಸರಿಗೆ ನೋಂದಾಯಿತ ಕ್ರಯಪತ್ರ ಮಾಡಿಕೊಡುವಂತೆ ನಿರ್ದೇಶನ ನೀಡಲು ಪ್ರಾರ್ಥಿಸಿದನು. ಕೋರ್ಟ್ ಸಮನ್ಸ್ ಪಡೆದುಕೊಂಡು ನನ್ನೆಡೆಗೆ ಬಂದರು. ವಾದ ಪತ್ರವನ್ನು ಪರಿಶೀಲಿಸಿದೆ. ವಾದಿ ಕೇಳಿಕೊಂಡಂತೆ ನ್ಯಾಯಾಲಯದಿಂದ ಪರಿಹಾರ ಪಡೆಯುವದು ಅಸಾಧ್ಯ ಎನಿಸಿತು. ನೋಂದಾಯಿತವಲ್ಲದ ಕರಾರು ಪತ್ರವಿದ್ದು, ಸ್ವಾಧೀನ ಕೊಟ್ಟಿರುವದಾಗಿ ಕಾಣಿಸಿದ್ದಾರೆ. ಆದರೆ ಕೇವಲ ನೂರು ರೂಪಾಯಿ ಬಾಂಡ್ ಮೇಲೆ ಬರೆದಿದ್ದು, ಸ್ಟ್ಯಾಂಪ್ ಆಕ್ಟ್ ಅನ್ವಯ ಬಾಂಡ್ ಮೇಲೆ ಬರೆದಿಲ್ಲ. ಕಕ್ಷಿದಾರರಿಂದ ಇನ್ನಷ್ಟು ಮಾಹಿತಿ ಹೆಕ್ಕಿ ಪಡೆದೆ. ಪ್ರತಿವಾದಿಯರು ಕರಾರು ಪತ್ರ ಬರೆದುಕೊಟ್ಟಿದ್ದು ನಿರಾಕರಿಸಿದರು ಅಲ್ಲದೆ ಕರಿಬಸಪ್ಪ ಅನ್ನುವನಿಗೆ ದಿ ೧೭/೯/೨೦೦೧ ನೋಂದಾಯಿಸದ ಕ್ರಯಪತ್ರವನ್ನು ಬರೆದು ಕೊಟ್ಟಿರುವದಾಗಿ ತಿಳಿಸಿದರು. ಇದೆಲ್ಲ ಮಾಹಿತಿ ಮೇರೆಗೆ ರಿಟನ್ ಸ್ಟೇಟ್‌ಮೆಂಟ್ ದಾಖಲಿಸಿದೆ. ವಾದಿ ಹುಸೇನಸಾಬನಿಗೆ ಕರಾರು ಪತ್ರ ಕಡಿಮೆ ಸ್ಟ್ಯಾಂಪ್ ಮೇಲೆ ಬರೆದದ್ದು ಜ್ಞಾನೋದಯವಾಗಿ ದಂಡ ಸಹಿತ ಹಲವಾರು ಲಕ್ಷ ಹಣ ತುಂಬಿದನು.
ಹೀಗೊಂದು ದಿನ, ಕಕ್ಷಿದಾರರು ನ್ಯಾಯಾಲಯದಿಂದ ಬಂದ ಸಮನ್ಸ್ ನೋಟಿಸು ಹಿಡಿದುಕೊಂಡು ಬಂದರು. "ಏನಪ್ಪಾ ಮತ್ತೇನು ನಿಮ್ಮದು" ರಗಳೆ ಅನ್ನುತ್ತಾ ಕೈಗೆ ತೆಗೆದುಕೊಂಡೆನು. ಕರಿಬಸಪ್ಪ ವಾದಿಯಾಗಿ, ಪ್ರತಿವಾದಿಗಳಾಗಿ ಸುಧೀರ, ಶಾರದೆ, ಕು.ಮಹೇಶ ಅಲ್ಲದೆ ಉಳಿದ ಮಕ್ಕಳು, ಹುಸೇನಸಾಬ, ಮತ್ತೋರ್ವ ದಿಗಂಬರನ ಮೇಲೆ ಸಿವಿಲ್ ಕೋರ್ಟಲ್ಲಿ ದಾವೆ ದಾಖಲಿಸಿ ಸುಧೀರ ಶಾರದೆ ತನ್ನ ಹೆಸರಿಗೆ ನೋಂದಣಿ ಆಗದ ಕ್ರಯಪತ್ರ ಬರೆದುಕೊಟ್ಟಿರುವದಾಗಿ, ತಾನು ಜಮೀನಿನ ಮಾಲೀಕನೆಂದು ಘೋಷಣೆ ಮತ್ತು ಪ್ರತಿವಾದಿಗಳಿಗೆ ಕ್ರಯಪತ್ರ ನೋಂದಾಯಿಸಿ ಕೊಡುವಂತೆ ನಿರ್ದೇಶನ ನೀಡಲು ಪ್ರಾರ್ಥಿಸಿದ್ದನು. ವಾದ ಪತ್ರ ಓದುತ್ತ ಹೋದಂತೆ ಆಶ್ಚರ್ಯಕರ ಸಂಗತಿಗಳು ಬಯಲಾದವು. ನನ್ನ ಕಕ್ಷಿದಾರ/ಪ್ರತಿವಾದಿಯರು ದಿ. ೧೭/೯/೨೦೦೧ ರಂದು ವಾದಿ ಕರಿಬಸಪ್ಪನಿಗೆ ಕ್ರಯಪತ್ರ ಬರೆದು ಕೊಡುವುದಾಗಿ ಸಂಪೂರ್ಣ ಹಣ ಪಡೆದುಕೊಂಡರು. ಬಾಂಡ್ ರೈಟರ್ ಕಚೇರಿಯಲ್ಲಿ ಕ್ರಯಪತ್ರ ಬರೆದು ಕೊಟ್ಟು ಸಹಿ ಮಾಡಿದರು. ವಾದಿ ಕರಿಬಸಪ್ಪ ಲಕ್ಷಾಂತರ ರೂಪಾಯಿ ಬಾಂಡ್ ಪಡೆದುಕೊಂಡನು. ರಿಜಿಸ್ಟ್ರೇಷನ್ ಫೀ ತುಂಬಿದನು. ಕ್ರಯಪತ್ರ ನೋಂದಾಯಿಸಲು ಉಪ ನೋಂದಣಿ ಅಧಿಕಾರಿ ಮುಂದೆ ಸಲ್ಲಿಸಿದರು. ಅಷ್ಟರಲ್ಲಿ ಸುಧೀರನ ಹೆಣ್ಣು ಮಕ್ಕಳು ಬಂದು ದೊಡ್ಡ ಗಲಾಟೆ ಮಾಡಿ ಕ್ರಯ ಪತ್ರ ರಿಜಿಸ್ಟ್ರೇಷನ್ ಆಗದಂತೆ ತಡೆದರು. ಹೀಗಾಗಿ ಕ್ರಯಪತ್ರ ನೋಂದಣಿ ಆಗಲಿಲ್ಲ. ಅಷ್ಟರಲ್ಲಿ ಸುಧೀರ್, ಶಾರದೆ ಹಾಗೂ ಅವರ ಮಕ್ಕಳು ಜಮೀನನ್ನು ದಿಗಂಬರನಿಗೆ ನೋಂದಾಯಿತ ಕ್ರಯಪತ್ರ ಬರೆದುಕೊಟ್ಟು ಸ್ವಾಧೀನ ಕೊಟ್ಟಿದ್ದಾರೆ ಎಂದು ಓದಿ ಮುಗಿಸಿದೆ. `ಏನ್ರಿ ಎಂಥ ಜನ ಇವರು' ಎಂದು ಮನಸಿನಲ್ಲಿ ಉದ್ಘರಿಸಿ, ದೊಡ್ಡದಾದ ನಿಟ್ಟುಸಿರುಬಿಟ್ಟೇನು. ಹುಸೇನಸಾಬಗೆ ಕರಾರು ಪತ್ರ ಬರೆದುಕೊಟ್ಟಿಲ್ಲ. ಕರಿಬಸಪ್ಪನಿಗೆ ನೋಂದಣಿಯಾಗದ ಕ್ರಯಪತ್ರ ಬರೆದು ಕೊಟ್ಟಿಲ್ಲ. ದಿಗಂಬರನಿಗೆ ನೋಂದಾಯಿತ ಕ್ರಯಪತ್ರ ಬರೆದುಕೊಟ್ಟು ಸ್ವಾಧೀನಕೊಟ್ಟಿದೆ ಎಂದು ಸಮರ್ಥಿಸಿದೆ.
ಎರಡು ದಾವೆಗಳ ವಾದಿಯರು ಮೊದಲಿಗೆ ತಮ್ಮ ಮೌಖಿಕ ಲಿಖಿತ ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ನನ್ನ ಕಕ್ಷಿದಾರರಾದ ಪ್ರತಿವಾದಿ ಪರವಾಗಿ ಪಾರ್ಟಿ ಸವಾಲು ಮಾಡಿದೆ. ಪ್ರತಿವಾದಿಯರ ಪರವಾಗಿ ಮೌಖಿಕ ಲಿಖಿತ ಸಾಕ್ಷಿಗಳನ್ನು ಹಾಜರುಪಡಿಸಿದೆ.
ವಾದ ಪ್ರತಿವಾದ: ವಾದಿ ಹುಸೇನಸಾಬ ಪರ ವಕೀಲರು ವಾದ ಮಂಡಿಸುತ್ತ, ಪ್ರತಿವಾದಿ ತಮ್ಮ ಅಜ್ಞಾನಿ ಮಗನ ಪರವಾಗಿ ಕರಾರು ಪತ್ರ ಬರೆದು ಕೊಟ್ಟಿದ್ದಾರೆ. ಹೀಗಿದ್ದರೂ ಕೂಡ, ಈ ಕರಾರು ಪತ್ರವನ್ನು ಮುಚ್ಚಿಟ್ಟು ನೋಂದಾಯಿತ ಕ್ರಯಪತ್ರವನ್ನು ಕರಿಬಸಪ್ಪನಿಗೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ದಿಗಂಬರನಿಗೆ ನೋಂದಾಯಿತ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಈ ಪತ್ರಗಳು ತನಗೆ ಬಂಧನಕಾರಕವಾಗಿಲ್ಲ ಕ್ರಯಪತ್ರದ ಷರತ್ತಿನಂತೆ ಮಾಲೀಕರಾಗಿದ್ದು ಅದರಂತೆ ನೋಂದಾಯಿತ ಕ್ರಯಪತ್ರ ಮಾಡಿಕೊಡಲು ಆದೇಶಿಸಲು ವಿನಂತಿಸಿದರು. ಕರಿಬಸಪ್ಪನ ಪ್ರತಿವಾದಿಯು ತನಗೆ ಕ್ರಯಪತ್ರವನ್ನು ಮಾಡಿಕೊಟ್ಟಿದ್ದು, ಅದನ್ನು ನೋಂದಾಯಿಸಲು ಆಗಿರುವುದಿಲ್ಲ ಆದ್ದರಿಂದ ತನಗೆ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಪ್ರತಿವಾದಿಯರಿಗೆ ನಿರ್ದೇಶನ ನೀಡಲು ವಾದಿಸಿದರು.
ನಾನು ಕಕ್ಷಿದಾರ/ಪ್ರತಿವಾದಿ ಪರ ವಾದಿಸುತ್ತಾ, ಹುಸೇನಸಾಬನಿಗೆ ಕರಾರು ಪತ್ರ ಮಾಡಿದ ಸಂದರ್ಭದಲ್ಲಿ ನನ್ನ ಕಕ್ಷಿದಾರರು ಮಾಲೀಕರೇ ಇರಲಿಲ್ಲ. ಕರಾರು ಪತ್ರಕ್ಕೆ ಕಾನೂನುಬದ್ಧ ಮಾನ್ಯತೆ ಇಲ್ಲ. ಕರಿಬಸಪ್ಪನಿಗೆ ಬರೆದುಕೊಟ್ಟಿರುವರೆಂಬ ಕ್ರಯಪತ್ರ ನೋಂದಣಿಯಾಗಿಲ್ಲ. ಕರಿಬಸಪ್ಪನಿಗೆ ಮಾಲೀಕತ್ವದ ಹಕ್ಕು ಪ್ರಾಪ್ತವಾಗಿಲ್ಲ. ನೋಂದಾಯಿಸಿಕೊಡುವಂತೆ ನಿರ್ದೇಶನದ ಪ್ರಾರ್ಥನೆ ಕಾನೂನಿನಲ್ಲಿ ಹೊಸದು. ನನ್ನ ಕಕ್ಷಿದಾರರು ಈಗಾಗಲೇ ಜಮೀನನ್ನು ದಿಗಂಬರನಿಗೆ ಮಾರಾಟ ಮಾಡಿದ್ದಾರೆ. ವಾದಿಯ ಎರಡು ದಾವೆಗಳು ಕಾನೂನು ಅಡಿಯಲ್ಲಿ ಊರ್ಜಿತ ಆಗಿರುವದಿಲ್ಲ ಎಂದು ವಾದಿಸಿದೆ.
ಅಂತಿಮ ತೀರ್ಪು: ಹುಸೇನಸಾಬನಿಗೆ ಹೆಸರಿಗೆ ಇರುವ ಕ್ರಯಪತ್ರದ ಅವಧಿಯಲ್ಲಿ ಸುಧೀರ, ಶಾರದೆ ಮಾಲೀಕರು ಇರಲಿಲ್ಲ, ಕು. ಮಹೇಶ ಮಾಲೀಕನಿದ್ದನು. ಆದ್ದರಿಂದ ದಾವೆ ಊರ್ಜಿತ ಆಗುವದಿಲ್ಲ. ಕರಿಬಸಪ್ಪನಿಗೆ ಬರೆದುಕೊಟ್ಟರೆನ್ನುವ ನೋಂದಣಿಯಾಗದ ಕ್ರಯಪತ್ರದಿಂದ ಮಾಲೀಕತ್ವದ ಹಕ್ಕು ಪ್ರಾಪ್ತಿಯಾಗಿಲ್ಲ, ನೋಂದಣಿ ಮಾಡಿಕೊಡಲು ನಿರ್ದೇಶನ ಆದೇಶ ಮಾಡಲು ನ್ಯಾಯಾಲಯಕ್ಕೆ ಅಧಿಕಾರ ಇದೆ ಅನ್ನುವದಕ್ಕೆ ವಾದಿ ಪೂರ್ವ ತೀರ್ಪು ಹಾಜರುಪಡಿಸಿಲ್ಲ. ಆದ್ದರಿಂದ ಎರಡು ದಾವೆಗಳನ್ನು ವಜಾಗೊಳಿಸಿ ನ್ಯಾಯಾಲಯವು ಜಡ್ಜ್ಮೆಂಟ್ ಆದೇಶ ಮಾಡಿತು.
ಇಂತಹ ಗೊಂದಲಮಯವಾದ ಪ್ರಕರಣಗಳ ಇತ್ಯರ್ಥಕ್ಕೆ ಹಲವಾರು ವರ್ಷಗಳು ಬೇಕಾಗುತ್ತವೆ. ಪ್ರತಿಯೊಂದು ನ್ಯಾಯ ಅಂಶಗಳನ್ನು ನ್ಯಾಯಯೋಚಿತ ವಾಗಿ ವಿಚಾರಿಸಲು ಇತ್ಯರ್ಥ ಮಾಡಲು ಆತುರದ ಕ್ರಮ ಅನುಚಿತ ಆಗುತ್ತದೆ.

Next Article