ಸ್ವಭಾವವೆಂಬುದು ಗುಣಲಕ್ಷಣಗಳ ಮೊತ್ತ
`ಸ್ವಭಾವ' ಎಂದರೇನು? ವ್ಯಕ್ತಿಗಳ ವೈಯಕ್ತಿಕ ವಿಶಿಷ್ಟತೆಗಳಿಗೆ ಈ ಪದವನ್ನು ಬಳಸುವುದು ರೂಢಿ. ವ್ಯಕ್ತಿಯ ವೈಯಕ್ತಿಕ ಗುಣಗಳು ಅಥವಾ ವಿಶಿಷ್ಟ ಲಕ್ಷಣಗಳನ್ನು ಕುರಿತಂತೆ ವ್ಯಾಖ್ಯಾನಿಸುವಾಗ ಬಳಸುವ ಪದವಿದು. ವ್ಯಕ್ತಿಯೊಬ್ಬನ ಸ್ವಭಾವವು ಆತನ ಮನಸ್ಸಿನಲ್ಲಿ ಮೂಡಿಸಿದ ಸ್ವಂತ ಅಥವಾ ಹಲವಾರು ಪೀಳಿಗೆಗಳ ಅನಿಸಿಕೆ, ಅನುಭವಗಳ ಪರಿಣಾಮ ಮತ್ತು ವೈಯಕ್ತಿಕ ಗುಣಲಕ್ಷಣಗಳ ಮೊತ್ತ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ಒಂದರ್ಥದಲ್ಲಿ; ಸ್ವಭಾವವೆಂಬುದು ಜೀವನದ ಮಹಾನ್ ನಾಟಕದಲ್ಲಿ ವಹಿಸುವ ಪಾತ್ರ. ಪ್ರತಿಯೊಬ್ಬ ಮನುಷ್ಯನ ಸ್ವಭಾವವು ಆತನ ವರ್ತಮಾನದಲ್ಲಿ ಬಿಂಬಿತವಾಗುವ ಆದರೆ ಆಂತರಿಕವಾಗಿ ಸಂಭವಿಸಿದ ಭೂತಕಾಲದ ಅನಿಸಿಕೆಗಳ ಸಂಗ್ರಹಗಳ ಫಲರೂಪವಾಗಿರುತ್ತದೆ ಮತ್ತು ಬಾಹ್ಯದಲ್ಲಿ ಆತನ ವ್ಯಕ್ತಿತ್ವವಾಗಿ ಪ್ರಕಟವಾಗುತ್ತದೆ. ಸೃಷ್ಟಿಯಲ್ಲಿ ಒಂದೇ ರೀತಿಯ ಎರಡು ಸ್ವಭಾವಗಳಿಲ್ಲ. ಒಬ್ಬನ ಸ್ವಭಾವದ ಅಥವಾ ವ್ಯಕ್ತಿತ್ವದ ರೂಪಿಸುವಿಕೆಯಲ್ಲಿ ವಿವಿಧ ಅಂಶಗಳ ಸಂಯೋಜನೆಯ ಅನಂತ ಸಾಧ್ಯತೆಯಿದೆ ಮತ್ತು ಇದು ಪ್ರಕೃತಿಯ ಸಾರ್ವತ್ರಿಕ ನಿಯಮಗಳಿಗೆ ಅನುಗುಣವಾಗಿದೆ. ಏಕೆಂದರೆ; ಪ್ರಕೃತಿಯಲ್ಲಿ ಯಾವುದೇ ಎರಡು ಹುಲ್ಲಿನ ಅಂಚುಗಳು ಒಂದೇ ರೀತಿ ಇರುವುದಿಲ್ಲ. ಅನಂತ ಮರಳರಾಶಿಯಲ್ಲಿ ಗಾತ್ರ ಅಥವಾ ಸ್ವರೂಪದಲ್ಲಿ ಪರಸ್ಪರ ನಿಖರವಾಗಿ ಹೋಲುವ ಎರಡು ಮರಳಿನ ಕಣಗಳು ಕಾಣಸಿಗುವುದಿಲ್ಲ. ಪ್ರತಿಯೊಂದು ಪ್ರಭೇದ, ಸೃಷ್ಟಿ, ವಿಚಾರದಲ್ಲಿ ಅನಂತ ವೈವಿಧ್ಯತೆ ಪ್ರಕೃತಿಯ ಮೂಲ ಲಕ್ಷಣ. ಹಾಗೆಯೇ ಮನುಷ್ಯರಲ್ಲಿ ಮತ್ತು ಮನುಷ್ಯ ಸ್ವಭಾವದಲ್ಲಿಯೂ. ಈ ಸತ್ಯವು ಮಾನವ ಪ್ರಭೇದವನ್ನು ಒಂದು ವಿಜ್ಞಾನವಾಗಿ ಅಧ್ಯಯನ ಮಾಡಲು ಸಾಧ್ಯವಾಗಿಸಿದೆ.
ವ್ಯಕ್ತಿಯೊಬ್ಬನ ಭೂತಕಾಲದ ಅನಿಸಿಕೆಗಳು ವರ್ತಮಾನದಲ್ಲಿ ಅನುವಂಶೀಯವಾಗಿ ಆತನನ್ನು ತಲುಪುತ್ತವೆ; ಆದರೆ ವೈಯಕ್ತಿಕ ಅನಿಸಿಕೆಗಳು ತನ್ನ ಸುತ್ತಲಿನ ಪರಿಸರದಿಂದ ಬಂದಿರುತ್ತವೆ. ಅಂದರೆ; ಮನುಷ್ಯನೊಬ್ಬನ ಸ್ವಭಾವವನ್ನು ರೂಪಿಸುವಲ್ಲಿ ಹಿಂದಿನ ಅನೇಕ ತಲೆಮಾರುಗಳ ಗುಣಲಕ್ಷಣಗಳು ಪ್ರಮುಖ ಪಾತ್ರವಹಿಸುತ್ತವೆ. ವ್ಯಕ್ತಿಯ ವರ್ತಮಾನದ ವ್ಯಕ್ತಿತ್ವ ತನ್ನೊಳಗೆ ಸಾವಿರಾರು ವರ್ಷಗಳ ಪೀಳಿಗೆಗಳ ಗುಣಲಕ್ಷಣಗಳನ್ನು ಒಳಗೊಂಡಿದ್ದು ಅನಂತ ವೈವಿಧ್ಯಮಯ ಸಂಯೋಜನೆಗಳಿಂದ ರೂಪುಗೊಂಡಿರುತ್ತದೆ. ಜನಾಂಗಗಳ ಹಿಂದಿನ ಪರಿಸ್ಥಿತಿ ಮತ್ತು ಪರಿಸರಗಳ ಮಾಹಿತಿ ಸುಪ್ತಪ್ರಜ್ಞೆಯ ಬಹುದೊಡ್ಡ ಭಾಗದಲ್ಲಿ ದಾಖಲಾಗಿರುತ್ತದೆ ಮತ್ತು ಅಲ್ಲಿಂದ ಅವುಗಳು ಕಾಲಕಾಲಕ್ಕೆ ಕೆಲವೊಂದು ಕೇಂದ್ರೀಕೃತ ಆಲೋಚನೆ ಅಥವಾ ಗ್ರಹಿಕೆಯ ಕರೆಗೆ ಪ್ರತಿಕ್ರಿಯೆಯಾಗಿ ಪ್ರತಿಸ್ಪಂದಿಸುತ್ತವೆ. ಪ್ರೊ. ಎಲ್ಮರ್ ಗೇಟ್ಸ್ ಹೇಳುವಂತೆ; “ನಮ್ಮ ಮಾನಸಿಕ ಜೀವನದ ಶೇ.೯೦ ಭಾಗ ಸುಪ್ತಪ್ರಜ್ಞೆಯಾಗಿದೆ. ನಮ್ಮ ಮಾನಸಿಕ ಕಾರ್ಯಾಚರಣೆಯನ್ನು ವಿಶ್ಲೇಷಿಸಿದಾಗ ಕಂಡುಬರುವುದೇನೆಂದರೆ; ನಮ್ಮ ಪ್ರಜ್ಞಾಪೂರ್ವಕ ಚಿಂತನೆಯು ಎಂದಿಗೂ ಜಾಗೃತಾವಸ್ಥೆಯ ನಿರಂತರ ಪ್ರಕ್ರಿಯೆಯಲ್ಲ ಎಂಬುದು.”
ಎಷ್ಟೊಂದು ಬಾರಿ ನಾವು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಾಗ ವಿಫಲರಾಗುತ್ತೇವೆ. ಅಲ್ಪವಿರಾಮ ಅಥವಾ ಬೇರೆ ಚಟುವಟಿಕೆಗಳ ನಂತರದಲ್ಲಿ ಮತ್ತೆ ಪುನಃ ಪ್ರಯತ್ನಿಸಿ ವಿಫಲಗೊಳ್ಳುತ್ತೇವೆ. ಈ ರೀತಿಯ ಪ್ರಯತ್ನ ಮತ್ತು ವಿಫಲತೆ ಪದೇ ಪದೇ ಮುಂದುವರಿಯುತ್ತಿದ್ದಂತೆ ಆ ಸಮಸ್ಯೆಗೆ ಸಂಬಂಧಪಟ್ಟಂತೆ ಹಠಾತ್ತನೆ ಒಂದು ಸ್ಪಷ್ಟ ಚಿಂತನೆ ಉದ್ಭವಿಸಿ ಪರಿಹಾರಕ್ಕೆ ಕಾರಣವಾಗುತ್ತದೆ. ಇಂತಹ ಒಂದು ಹಠಾತ್ ಚಿಂತನೆ ಸುಪ್ತಪ್ರಜ್ಞೆಯ ಕಾರ್ಯಚಟುವಟಿಕೆಯ ಪರಿಣಾಮವಾಗಿರುತ್ತದೆ. ನಾವು ಸ್ವಯಂಪ್ರೇರಿತವಾಗಿ ನಮ್ಮ ಸ್ವಂತ ಆಲೋಚನೆಗಳನ್ನು ಸೃಷ್ಟಿಸುವುದಿಲ್ಲ; ಬದಲಿಗೆ ಅದು ತನ್ನಷ್ಟಕ್ಕೆ ತಾನೇ ಸಂಭವಿಸುತ್ತದೆ. ಸುಪ್ತಪ್ರಜ್ಞೆಯ ಈ ವಿದ್ಯಮಾನದಲ್ಲಿ ಹೆಚ್ಚು ಕಡಿಮೆ ನಾವು ಪ್ರತ್ಯಕ್ಷ ಭಾಗಿಗಳಾಗಿರುವುದಿಲ್ಲ. ನಾವು ಒಂದು ಆಲೋಚನೆಯ ಸ್ವರೂಪವನ್ನು ಅಥವಾ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ; ಆದರೆ ಅದರ ದಿಕ್ಕನ್ನು ನಿರ್ದೇಶಿಸಬಹುದು.
ವ್ಯಕ್ತಿಗೆ ಅನುವಂಶೀಯವಾಗಿ ದಾಟಿಬರುವ ಹಿಂದಿನ ಪೀಳಿಗೆಗಳ ಮಾಹಿತಿ ಮನುಷ್ಯನ ಸ್ವಭಾವದ ನಿರೂಪಣೆಯಲ್ಲಿ ಕೇವಲ ಕಚ್ಚಾವಸ್ತುಗಳಷ್ಟೇ. ಏಕೆಂದರೆ; ನಿರ್ದಿಷ್ಟ ಸ್ವಭಾವವು ವ್ಯಕ್ತಿಯ ಸ್ವಇಚ್ಛೆ ಮತ್ತು ಜೀವಿಸುವ ಪರಿಸರದ ಪ್ರಭಾವದಿಂದ ರೂಪುಗೊಳ್ಳುತ್ತದೆ. ವ್ಯಕ್ತಿಯು ಜೀವಿಸುವ ಪರಿಸರ ಬಹುಪಾಲು ಆತನದೇ ಆಯ್ಕೆಯಾಗಿದ್ದು ಮತ್ತು ಅನುವಂಶೀಯ ಮಾಹಿತಿ ಕೇವಲ ಕಚ್ಚಾವಸ್ತುವಷ್ಟೇ ಆಗಿದ್ದು ತನಗೆ ಬೇಕಾದಂತೆ ಸಮೃದ್ಧ ಪರಿಸರವನ್ನು ಆಯ್ಕೆಮಾಡಿಕೊಳ್ಳುವ ಮೂಲಕ ತನ್ನ ಸ್ವಭಾವ ಅಥವಾ ವ್ಯಕ್ತಿತ್ವವನ್ನು ಮರುರೂಪಿಸಿಕೊಳ್ಳುವ ಅವಕಾಶ ವ್ಯಕ್ತಿಗೆ ಇದ್ದೇ ಇರುತ್ತದೆ. ವಸ್ತುವಿಲ್ಲದೆ ಇಚ್ಛೆಗೆ ಅಸ್ತಿತ್ವವಿಲ್ಲ ಎಂಬುದನ್ನೂ ಗಮನಿಸಬೇಕು. ಆಧುನಿಕ ಪ್ರವೃತ್ತಿಯು ಸ್ವಭಾವವನ್ನು ರೂಪಿಸುವಲ್ಲಿ ಅನುವಂಶಿಕತೆ ಮತ್ತು ಪರಿಸರದ ಪರಿಣಾಮಗಳನ್ನು ಅತಿಯಾಗಿ ಅಂದಾಜುಮಾಡುತ್ತಿದ್ದು, ಹಾಗೆಯೇ ಕೀಳಂದಾಜು ಕೂಡಾ ಮಾಡಬಾರದು ಎಂಬ ಪ್ರಜ್ಞೆ ಹೊಂದಿರಲೇಬೇಕು. ಸ್ವಭಾವದ ಮೇಲೆ ಅನುವಂಶಿಕತೆಯ ಪರಿಣಾಮವನ್ನು ಒಪ್ಪಿಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಕಚ್ಚಾವಸ್ತುವಿನಂತಿರುವ ಈ ಅನುವಂಶೀಯ ಮಾಹಿತಿಯಲ್ಲಿಯೂ ಉತ್ತಮ ಅಂಶಗಳೂ ಇದ್ದೇ ಇರುತ್ತವೆ ಎಂಬ ವಾಸ್ತವವವನ್ನು ಇಂತಹ ವ್ಯಕ್ತಿಗಳು ಮರೆಯುತ್ತಾರೆ.
ಪರಿಸರಕ್ಕೆ ಸಂಬಂಧಿಸಿದಂತೆ ಅದರ ಪ್ರಭಾವವನ್ನು ನಿರಾಕರಿಸುವುದು ಮೂರ್ಖತನ. ಸಮಾನ ಸಾಮರ್ಥ್ಯ, ಸಮಾನ ಅಭಿರುಚಿ ಮತ್ತು ಒಂದೇ ಅನುವಂಶಿಕತೆಗೆ ಸೇರಿದ ಇಬ್ಬರು ಯುವಕರನ್ನು ಕರೆದುಕೊಂಡು ಹೋಗಿ ಒಬ್ಬನನ್ನು ಒಂದು ಸಣ್ಣ ಹಳ್ಳಿಯಲ್ಲಿಯೂ, ಇನ್ನೊಬ್ಬನನ್ನು ಒಂದು ಮಹಾನಗರದಲ್ಲಿಯೂ ಅವರ ಮಧ್ಯವಯಸ್ಸಿನವರೆಗೂ ಇರಿಸಿ ನೋಡಿ. ಅವರಿಬ್ಬರ ಮೇಲೆಯೂ ಸಂಪೂರ್ಣ ಬೇರೆಯೇ ರೀತಿಯಲ್ಲಿ ಪರಿಸರದ ಪ್ರಭಾವವಾಗಿರುವುದನ್ನು ನಾವು ಕಾಣಬಹುದು. ಮೇಲ್ನೋಟಕ್ಕೆ ಅವರಿಬ್ಬರೂ ಸಮಾನ ಸಂತೋಷಿಗಳಾಗಿ, ಸಂತೃಪ್ತರಾಗಿರಬಹುದು; ಆದರೆ ಅವರ ಅನುಭವಗಳು ತೀರಾ ವಿಭಿನ್ನವಾಗಿರುವುದನ್ನು ಗಮನಿಸಬಹುದು. ನೆನಪಿಡಿ; ಪರಿಸರದಲ್ಲಿ ಇತರ ವ್ಯಕ್ತಿಗಳ, ಗುಂಪುಗಳ ಪ್ರಭಾವವೂ ಸೇರಿರುತ್ತದೆ. ಪರಿಸರದ ಪ್ರಭಾವವು ವ್ಯಕ್ತಿಯ ಮನಸ್ಸಿನ ಸಲಹೆ, ಸೃಜನಶೀಲತೆ, ನಿರ್ದೇಶನಗಳಿಂದ ಉದ್ಭವಿಸುತ್ತದೆ. “ಯೋಚನೆ ಹೇಗೋ ಹಾಗೆಯೇ ಅವನು” ಎಂಬ ತತ್ತ್ವ ನಿಜ; ಆದರೆ ಮನುಷ್ಯನ ಯೋಚನೆಗಳು ಆತನ ಪರಿಸರ, ಅನುಭವ, ಸಲಹೆಗಳ ಮೇಲೆ ಭೌತಿಕವಾಗಿ ಅವಲಂಬಿತವಾಗಿದೆ. ನಾವು ಬಯಸಿದಂತೆ ಯೋಚಿಸಲು ಸಾಧ್ಯವಿಲ್ಲ, ಆದರೆ ಪ್ರಸ್ತುತದ ಘಟನಾವಳಿಗಳು ಸೂಚಿಸುವಂತೆ ಅಥವಾ ಮುನ್ನಡೆಸಿದಂತೆ ಯೋಚಿಸಬೇಕು. ಸ್ವಭಾವದಲ್ಲಿ ಕೆಲವರದು ಸ್ಥಿರಪ್ರಕೃತಿಯದ್ದಾಗಿದ್ದರೆ ಇನ್ನು ಕೆಲವರದ್ದು ಆಗಾಗ ಬದಲಾವಣೆಯನ್ನು ಹೊಂದುತ್ತಿರುತ್ತದೆ. ಆದರೆ ಈ ಎರಡೂ ಸಂದರ್ಭಗಳಲ್ಲಿಯೂ, ಬಾಹ್ಯವಾಗಿ ಮತ್ತು ಆಂತರಿಕವಾಗಿ ವ್ಯಕ್ತಿ ತನ್ನದೇ ಆದ ಗುಣಲಕ್ಷಣಗಳನ್ನು ಅಥವಾ ಸ್ವಭಾವದ ಅಭಿವ್ಯಕ್ತಿಯನ್ನು ಹೊಂದಿರುತ್ತಾನೆಂಬುದನ್ನು ಮರೆಯಬಾರದು. ಮಾನವಸ್ವಭಾವವನ್ನು ತಿಳಿಯಲು ಮತ್ತು ಅರ್ಥೈಸಲು ಸಮರ್ಥರಾಗಿರುವವರು ಪ್ರಾಯೋಗಿಕ ಹಾಗೂ ಉಪಯುಕ್ತ ಜ್ಞಾನವನ್ನು ಹೊಂದಿರುತ್ತಾರೆ.
ಕೃಷ್ಣ ಯಾವ ದೇವರನ್ನು ಪೂಜಿಸುತ್ತಿದ್ದನೋ ತಿಳಿಯದು. ಆದರೆ ತಾಯಿ, ತಂದೆ, ಗುರು, ಹಿರಿಯರೆಂದರೆ ಅವನಿಗೆ ತುಂಬ ಭಕ್ತಿ. ಹಿರಿಯರನ್ನು, ತಾಯಿ-ತಂದೆಗಳನ್ನು, ಸೋದರತ್ತೆಯಾದ ಕುಂತಿಯನ್ನು ಎಂಥಹುದೇ ಸಂದರ್ಭದಲ್ಲೂ ಎದುರುಗೊಂಡಾಗಲೂ ಅವರಿಗೆ ಗೌರವಪೂರ್ವಕವಾಗಿ ನಮಸ್ಕರಿಸದೆ, ಕುಶಲೋಪರಿ ಮಾತನಾಡಿಸದೇ ಬಂದದ್ದೇ ಇಲ್ಲ. ವ್ಯಕ್ತಿಯೊಬ್ಬನಿಗೆ ಇಂತಹ ನಡವಳಿಕೆಗಳಿರುವ ವ್ಯಕ್ತಿ, ಸಮಾಜ ಮತ್ತು ಪರಿಸರವೊಂದು ದೊರೆಯಿತೆಂದಾದಲ್ಲಿ ಆತನೊಳಗೆ ರೂಪುಗೊಳ್ಳುವ ವ್ಯಕ್ತಿತ್ವ ಮತ್ತು ಆ ವ್ಯಕ್ತಿತ್ವದಿಂದ ಪಡಿಮೂಡುವ ಸ್ವಭಾವ ಯಾವುದೇ ಕಾಲಘಟ್ಟದಲ್ಲಿಯೂ ಸಮಾಜಕ್ಕೆ ಆದರ್ಶ, ಅನುಕರಣೀಯವಾಗಿಯೇ ಇರುತ್ತದೆ. ಪ್ರತಿಯೊಬ್ಬರೂ ಜೀವನವನ್ನು ಎದುರಿಸುವ ಪ್ರಕ್ರಿಯೆಯಲ್ಲಿ ಮತ್ತು ಸ್ವಇಚ್ಛೆಯಿಂದ ತನ್ನದೇ ಆದ ಸ್ವಭಾವವನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ “ಕೃಷ್ಣಂ ವಂದೇ ಜಗದ್ಗುರು” ಎಂಬುದನ್ನು ಸದಾ ಸ್ಮರಣೆಯಲ್ಲಿರಿಸಿಕೊಳ್ಳುವುದು ಎಂದೆಂದಿಗೂ ಶ್ರೇಯಸ್ಕರ.