ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ವರಾಜ್ಯದ ರಕ್ಷಣೆಯೇ ಭಾರತೀಯನ ಧರ್ಮ

03:30 AM Jul 25, 2024 IST | Samyukta Karnataka

ಭಾರತದ ಸ್ವಾತಂತ್ರ‍್ಯ ಹೋರಾಟವು ಹಲವು ವಿಶಿಷ್ಟತೆಗಳ ಸಂಗಮ. ಆಬಾಲವೃದ್ಧರಾದಿಯಾಗಿ ನಡೆದ ಮಹೋನ್ನತ ಆಂದೋಲನವು ಭಾರತೀಯರ ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯನ್ನು ಓರೆಗೆ ಹಚ್ಚಿದ್ದಷ್ಟೇ ಅಲ್ಲದೆ, ಸಂಹತಿಯಿಂದ ಉನ್ನತಿ ಸಾಧ್ಯವೆಂದು ಸಾರಿತ್ತು. ದೇಶದ ಮೂಲನಂಬಿಕೆಗಳ ಬುಡವನ್ನು ಅಲುಗಾಡಿಸುವ ಪ್ರಯತ್ನವನ್ನು ಪ್ರಬಲವಾಗಿ ವಿರೋಧಿಸಿದ ತರುಣವರ್ಗವು ಸಂಸ್ಕೃತಿಗಾಗುವ ಅಪಮಾನವು ದೇಶಕ್ಕೂ, ದೇವರಿಗೂ ಎಸಗುವ ಪ್ರತ್ಯಕ್ಷ ಅಪಚಾರವೆಂದೇ ಭಾವಿಸಿತ್ತು. ಖಡ್ಗ, ಕತ್ತಿ, ಬಂದೂಕುಗಳಷ್ಟೇ ಮುಖ್ಯವಾಗಿ ಶೈಕ್ಷಣಿಕ ದೃಷ್ಟಿಯಿಂದಲೂ ಭಾರತೀಯರು ವಿಶ್ವವ್ಯಾಪಿ ಬೆಳೆಯಬೇಕೆಂದು ಯೋಚಿಸಿ ದೇಸೀ ಚಿಂತನೆಯ ಶಾಲಾ-ಕಾಲೇಜುಗಳನ್ನು ತೆರೆದವರು ಅನೇಕರು. ಶಿಕ್ಷಣವನ್ನು ದೇಶಭಕ್ತಿಯ ಉತ್ತೇಜನದ ಮಾಧ್ಯಮವನ್ನಾಗಿ ಬದಲಾಯಿಸಿದ ಮುಂದಾಳುಗಳಲ್ಲೇ ಮೊದಲಿಗರಾದ ಲೋಕಮಾನ್ಯ ಬಾಲಗಂಗಾಧರ ತಿಲಕರು ಬ್ರಹ್ಮವರ್ಚಸ್ಸಿನ ಸಂಕೇತವಾದರೆ, ಸಂಘಟನೆ ಮತ್ತು ಕ್ರಿಯಾಶಕ್ತಿಯ ಸಮಪಾಕದಿಂದ ಯುವಸಮಾಜವನ್ನು ಒಗ್ಗೂಡಿಸಿ ಬ್ರಿಟಿಷ್ ಸಾಮ್ರಾಜ್ಯವನ್ನು ಕುಟ್ಟಿ ಪುಡಿಗೈಯಲು ಅವರದೇ ದಾರಿಯನ್ನು ಆಯ್ದ ವೀರ ಚಂದ್ರಶೇಖರ ಆಜಾದರು ಕ್ಷಾತ್ರತೇಜಸ್ಸಿನ ಪ್ರತಿರೂಪ. ಹಿಂದುಸ್ಥಾನದ ಮಾನಸಮ್ಮಾನಗಳ ರಕ್ಷಣೆ ಮತ್ತು ಯಶೋಗಾನದ ಅನುರಣನಕ್ಕಾಗಿ ಸಕಲವನ್ನೂ ಧಾರೆಯೆರೆದ ಧೀಮಂತ ಸೇನಾನಿಗಳ ತ್ಯಾಗಪೂರ್ಣ ಜೀವನದ ಗಾಥೆಯೇ ಬಹುರೋಚಕ.
ಜನಸಾಮಾನ್ಯರ ಸಾಮಾಜಿಕ ಔನ್ನತ್ಯ, ಸುಭದ್ರ ಬದುಕಿಗಾಗಿ ಜೀವನ ಮೀಸಲಿಡುವುದೇ ಧರ್ಮ ಎಂಬ ಅತ್ಯುನ್ನತ ಆದರ್ಶದ ಮಹಾಸಾಗರವಾದ ಲೋಕಮಾನ್ಯ ತಿಲಕರು ಕ್ರಾಂತಿಕಾರಿಗಳ ಮಹಾಗುರುವೆಂದೇ ಸುಪ್ರಸಿದ್ಧರು. ಮಹಾರಾಷ್ಟçದ ರತ್ನಗಿರಿಯ ಸಂಸ್ಕೃತ ವಿದ್ವಾಂಸ ಗಂಗಾಧರ ತಿಲಕ್ ದಂಪತಿಗಳಿಗೆ ಜನಿಸಿದ ಬಾಲಗಂಗಾಧರರು ಮಹಾಮೇಧಾವಿ ಹಾಗೂ ಏಕಪಾಠಿ. ಬಾಲ್ಯದ ದಿನಗಳಲ್ಲೇ ಮರಾಠಿ, ಸಂಸ್ಕೃತ, ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ ತಿಲಕರಿಗೆ ಸ್ವಾತಂತ್ರ‍್ಯ ಸಂಗ್ರಾಮದ ಕಥೆಗಳೇ ಆಪ್ಯಾಯಮಾನ. ಗೆಲುವಿನ ಹೊಸ್ತಿಲಿನಲ್ಲಿ ಸೋತರೂ ಬ್ರಿಟಿಷ್ ಆಧಿಪತ್ಯವನ್ನು ನಡುಗಿಸಿದ ಪೂರ್ವಿಕರ ಸಾಹಸದ ಚಿತ್ರಣವನ್ನು ಕೇಳುತ್ತಲೇ ಮೈಮರೆಯುತ್ತಿದ್ದ ತರುಣನೋ ಗಣಿತದ ಮೇರುಪ್ರತಿಭೆ. ಕಾನೂನು ಪದವಿಯ ಜೊತೆಗೆ ಗಣಿತಶಾಸ್ತ್ರದಲ್ಲೂ ಸ್ನಾತಕರಾಗಿ ಕೆಲಕಾಲ ಶಿಕ್ಷಕ ವೃತ್ತಿ ಕೈಗೊಂಡರು. ವಾಸುದೇವ ಬಲವಂತ ಫಡಕೆಯವರ ಸ್ವಾತಂತ್ರ್ಯ ಹೋರಾಟದ ಅಮಿತ ಪ್ರಯತ್ನದಿಂದ ಪ್ರಭಾವಿತರಾಗಿ ಸಾಮಾಜಿಕ ಜೀವನಕ್ಕೆ ಧುಮುಕಿದ ತಿಲಕ್, ಕೇಸರಿ ಮತ್ತು ಮರಾಠಾ ಪತ್ರಿಕೆಯ ಮೂಲಕ ರಾಷ್ಟ್ರೀಯ ವಿಚಾರಗಳನ್ನು ಮನೆಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು. ಬೆಂಕಿಚೆಂಡುಗಳೆಂದು ಹೆಸರು ಸಂಪಾದಿಸಿದ ಉಭಯ ಪತ್ರಿಕೆಗಳು ಬ್ರಿಟಿಷ್ ಸರಕಾರದ ಪಾಲಿಗೆ ಮೃತ್ಯುದೇವತೆಯೇ. ಪೂಜೆ, ಯಜ್ಞಗಳಲ್ಲಿರುವ ಭಗವಂತನನ್ನು ತಲುಪುವ ಸರಳದಾರಿ ಜನಸೇವೆಯೆಂದರಿತು ಸಮಾನಮನಸ್ಕ ಸ್ನೇಹಿತರೊಡಗೂಡಿ ನ್ಯೂ ಇಂಗ್ಲಿಷ್ ಸ್ಕೂಲ್, ಡೆಕ್ಕನ್ ಎಜುಕೇಶನ್ ಸೊಸೈಟಿ, ಫರ್ಗ್ಯುಸನ್ ಕಾಲೇಜನ್ನು ಸ್ಥಾಪಿಸಿದ ತಿಲಕರು ಆಂಗ್ಲರ ಶಿಕ್ಷಣ ಪದ್ಧತಿಯ ಪ್ರತಿಕೂಲ ಪರಿಣಾಮಗಳು ಭಾರತೀಯರ ಮೇಲೆ ಆಗದಂತೆ ಆಸ್ಥೆ ವಹಿಸಿದರಲ್ಲದೆ ಸ್ವಯಂ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ಮೌಲ್ಯ ಮತ್ತು ಸಿದ್ಧಾಂತಗಳನ್ನು ಅಳವಡಿಸಲು ಪ್ರಯತ್ನಿಸಿ ಪ್ರಖರ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸಲು ತಮ್ಮ ಸಂಸ್ಥೆಯನ್ನೇ ಮೊದಲ ಹೆಜ್ಜೆಯನ್ನಾಗಿ ಆಯ್ಕೆಗೈದ ಅವರ ನಾಡಪ್ರೇಮ ಅತುಲ್ಯ.
ಹಿಂದೂ ಜೀವನ ಪದ್ಧತಿಯ ಪರಿಚಯದಿಂದ ಪ್ರತಿಯೊಬ್ಬ ಹಿಂದೂವೂ ರಾಷ್ಟ್ರಮುಖಿಯಾಗಬಲ್ಲನೆಂಬ ವಿಶ್ವಾಸದಿಂದ ಶ್ರೀ ಶಿವಾಜಿ ರಾಯಗಢ ಸ್ಮಾರಕ ಮಂಡಲ ಸ್ಥಾಪಿಸಿ ಶಿವಾಜಿ ಜಯಂತಿ, ಸಾರ್ವಜನಿಕ ಗಣೇಶೋತ್ಸವಗಳನ್ನು ಸಂಘಟಿಸಿ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಖರ ದೇಶಪ್ರೇಮ ಬಿತ್ತುವ ಕಾರ್ಯದಲ್ಲಿ ನಿರತರಾದರು. ಬ್ರಿಟಿಷ್ ಆಡಳಿತದ ವಿರುದ್ಧ ಸೆಟೆದು ನಿಲ್ಲುವ ಯುವಕರನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ತಿಲಕರು, ಶತ್ರುಗಳ ಜೊತೆ ಹೋರಾಡುವಾಗ ಕೃಷ್ಣಾರ್ಜುನರನ್ನು ನೆನಪಿಸಬೇಕೆಂದು ಕರೆಯಿತ್ತರು. ಬಂಗಾಳ ವಿಭಜನೆಯ ತರುವಾಯ ದೇಶದಾದ್ಯಂತ ಬೀಸಿದ ಸ್ವದೇಶೀ ಗಾಳಿಯನ್ನು ಹಳ್ಳಿಹಳ್ಳಿಗೆ ತಲುಪಿಸಿ ವಿದೇಶೀ ವಸ್ತುಗಳನ್ನು ಸಂಪೂರ್ಣ ಕೈಬಿಡುವಂತೆ ದೇಶವಾಸಿಗಳನ್ನು ಹುರಿದುಂಬಿಸಿದರು. ಬ್ರಿಟಿಷರೊಡನೆ ಕಾಂಗ್ರೆಸ್ ನಾಯಕರಿಗಿದ್ದ ಹೊಂದಾಣಿಕೆ ಮನೋಭಾವವನ್ನು ಕಟುಶಬ್ದಗಳಲ್ಲಿ ವಿರೋಧಿಸಿ, ಛಾಪೇಕರ್-ಪ್ರಫುಲ್ಲ ಚಾಕಿ-ಖುದಿರಾಮ ಬೋಸ್-ಸಾವರ್ಕರರ ಪ್ರಚಂಡ ಸಾಹಸವನ್ನು ಹೊಗಳಿ ಬರೆದ ತಪ್ಪಿಗಾಗಿ ಜೈಲುಶಿಕ್ಷೆಗೂ ಗುರಿಯಾದರು. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನದನ್ನು ಪಡೆದೇ ತೀರುತ್ತೇನೆಂದು ಘರ್ಜಿಸಿ ಹೋಮ್ ರೂಲ್ ಲೀಗ್ ಚಳವಳಿಗೆ ಬೆನ್ನೆಲುಬಾದರು. ಛತ್ರಪತಿ ಶಿವಾಜಿ ಮಹಾರಾಜರ ಬಳಿಕ ಸ್ವರಾಜ್ಯ ಶಬ್ದಘೋಷಗೈದ ತಿಲಕ್, ಭಗವದ್ಗೀತೆಯ ಕರ್ಮಯೋಗದ ಉಪಾಸಕ. ಮಾಂಡಲೆ ಜೈಲಿನಲ್ಲೇ ಗೀತಾರಹಸ್ಯ ಬರೆದ ಅಪ್ರತಿಮ ಲೇಖಕನ ಲೇಖನಿಯಿಂದ ದ ಆರ್ಕಟಿಕ್ ಹೋಮ್ ಇನ್ ದ ವೇದಾಸ್, ದ ಓರಿಯನ್ ಇತ್ಯಾದಿ ಅತ್ಯಮೂಲ್ಯ ಗ್ರಂಥಗಳು ಹೊರಬಂದವು. ಅಸಂತೋಷದ ಜನಕನೆಂದೇ ಇಂಗ್ಲೀಷರಿಂದ ಕರೆಯಲ್ಪಟ್ಟು ಸಾವಿರಾರು ತರುಣರಿಗೆ ಸ್ಫೂರ್ತಿಸೆಲೆಯಾಗಿ ಅನಾರೋಗ್ಯದ ನಡುವೆಯೂ ಬಿಡುವಿಲ್ಲದಂತೆ ಓಡಾಡಿ, ಲೇಖನ ಬರೆದು ದಾಸ್ಯಮುಕ್ತ ಭಾರತದ ಕನಸು ಕಾಣುತ್ತಲೇ ವಿರಮಿಸಿದ ಲೋಕಮಾನ್ಯ ತಿಲಕರು ನವಭಾರತ ನಿರ್ಮಾತೃಗಳಲ್ಲಿ ಅಗ್ರೇಸರರು.
'ರಾಷ್ಟ್ರಕ್ಕೆ ಅರ್ಪಣೆಯಾಗದ ತಾರುಣ್ಯ ಇದ್ದರೆಷ್ಟು ಹೋದರೆಷ್ಟು. ಎಲ್ಲವನ್ನೂ ನೀಡಿದ ದೇಶವೇ ಸಂಕಟದಲ್ಲಿರುವಾಗ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸುವುದು ಮಹಾಪಾಪ. ಮೋಸದಿಂದ ಗೆದ್ದು ಬೀಗುತ್ತಿರುವ ವಿದೇಶೀಯರ ಅಟ್ಟಹಾಸ ಕೊನೆಗೊಳಿಸಿ ಸ್ವತಂತ್ರ ಭಾರತದ ಧ್ವಜ ಹಾರಾಡಿಸುವ ಶತಮಾನಗಳ ಕನಸು ದೂರದ ಮಾತಲ್ಲ. ನಾಡಿನುನ್ನತಿಗಾಗಿ ಸಮರ್ಪಿತವಾಗದ ತಾರುಣ್ಯ ಅರ್ಥವಿಲ್ಲದ್ದು. ಸಂಕ್ರಮಣ ಕಾಲಘಟ್ಟದಲ್ಲಿ ಶಸ್ತ್ರಧಾರಿಗಳಾಗಿ ಹೋರಾಡಿ ಗೆಲುವಿನ ದಡ ತಲುಪೋಣ' ಎಂಬ ಚೇತೋಹಾರಿ ಕ್ರಾಂತಿನುಡಿಗಳಿಂದ ಸಾವಿರಾರು ಯುವಕರ ಮನದಲ್ಲಿ ದೇಶಭಕ್ತಿಯ ಬೀಜಬಿತ್ತಿದ ಮಹಾಪರಾಕ್ರಮಿ ಚಂದ್ರಶೇಖರ ತಿವಾರಿ, ಇತಿಹಾಸದ ಪುಟಗಳಲ್ಲಿ 'ವೀರ ಆಜಾದ್' ಎಂದೇ ಪ್ರಸಿದ್ಧರಾದ ಅಪ್ರತಿಮ ಸಾಹಸಿ. ಮಧ್ಯಪ್ರದೇಶದ ಭಾವರಾದ ಸುಸಂಸಕೃತ ಕುಟುಂಬದ ಸೀತಾರಾಮ ತಿವಾರಿ-ಜಗರಾಣಿದೇವಿ ದಂಪತಿಗಳಿಗೆ ಜನಿಸಿದ ಚಂದ್ರಶೇಖರ, ಸಂಸ್ಕೃತ ಪಂಡಿತನಾಗುವ ಆಸೆಯೊಂದಿಗೆ ಬಂದಿಳಿದುದು ಆಧ್ಯಾತ್ಮ ರಾಜಧಾನಿ ವಾರಾಣಸಿ ವಿದ್ಯಾಪೀಠದ ಅಂಗಳದಲ್ಲಿ. ಕಾವ್ಯ, ಶಾಸ್ತ್ರ, ವ್ಯಾಕರಣಾದಿಗಳಲ್ಲಿ ಬಹುಶ್ರುತನಾಗಿ ಮರಳಬೇಕಿದ್ದ ಹದಿನೈದರ ಬಾಲಕ ಅಸಹಕಾರ ಚಳವಳಿಯಲ್ಲಿ ಸಕ್ರಿಯನಾದ. ತನ್ನ ಗುರುಗಳ ಮೇಲೆ ಕೆಂಪಂಗಿ ತೋರಿದ ದರ್ಪಕ್ಕೆ ಕಲ್ಲೇಟಿನ ಶಿಕ್ಷೆಯಿತ್ತು ತುಂಬಿದ ನ್ಯಾಯಾಲಯದಲ್ಲಿ ತಾನು ಆಜಾದ್, ಮನೆ ಸೆರೆಮನೆಯೆಂದು ಘೋಷಿಸಿದ ಬಾಲವೀರ ಮುಂದೆ ಚಂದ್ರಶೇಖರ ಆಜಾದರೆಂದೇ ಲೋಕವಿಖ್ಯಾತರಾಗಿ ಧೈರ್ಯಕ್ಕೆ ಪರ್ಯಾಯವಾದುದು ಇತಿಹಾಸ. ಆದರೆ ಗಾಂಧೀಜಿಯ ಯೋಚನಾರಹಿತ ನಿರ್ಣಯದಿಂದ ಬೇಸತ್ತು ಹತೋತ್ಸಾಹಿಯಂತೆ ವರ್ತಿಸಿದ ಆಜಾದರು ಮುಖದಲ್ಲಿ ಮೀಸೆ ಮೂಡುವ ಮೊದಲೇ ಮನ್ಮಥನಾಥ ಗುಪ್ತರ ಮೂಲಕ ರಾಮಪ್ರಸಾದ ಬಿಸ್ಮಿಲ್ಲರ ಪಾಳಯ ಸೇರಿದರು. ಸಶಸ್ತç ಕ್ರಾಂತಿಯ ಏಕಮೇವ ಉದ್ದೇಶದಿಂದ ವಿಚಲಿತರಾಗದೆ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಸದಸ್ಯರಾಗಿ ವಿದ್ಯಾರ್ಥಿಗಳ, ಯುವಕರ ನಡುವೆ ಓಡಾಡಿ ಕ್ರಾಂತಿಗೀತೆ ಹಾಡಿದರು.
ಬಿಸ್ಮಿಲ್ಲರ ತರುವಾಯ ಭಗತ್ ಸಿಂಗ್ ಜೊತೆಗೂಡಿ ಚದುರಿದ ಸಂಘಟನೆಯನ್ನು ಹಿಂದೂಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಹೆಸರಲ್ಲಿ ಒಗ್ಗೂಡಿಸಿ ಸೈಮನ್ ಗೋ ಬ್ಯಾಕ್ ಪ್ರತಿಭಟನಾ ಸಭೆಯಲ್ಲಿ ನಡೆದ ಲಾಲಾಲಜಪತರಾಯರ ಹತ್ಯಾಯತ್ನದ ಪ್ರತೀಕಾರವಾಗಿ ಸ್ಯಾಂಡರ್ಸ್ ವಧೆ, ವೈಸ್‌ರಾಯ್ ವಧೆಯ ವಿಫಲಯತ್ನ, ಕ್ರಾಂತಿಸಾಹಿತ್ಯ ಪ್ರಚಾರದಲ್ಲಿ ಸಕ್ರಿಯರಾದರು. ಭಗತ್ ಸಿಂಗ್ ಸ್ವಯಂ ಬಂಧಿತರಾದ ಬಳಿಕ ಏಕಾಂಗಿಯಾಗಿಯೇ ಸಂಘಟನಾ ವಿಸ್ತಾರದಲ್ಲಿ ತೊಡಗಿಸಿದ ಆಜಾದರು ಪ್ರಯಾಗದ ಉದ್ಯಾನವನದಲ್ಲಿ ಸ್ವಾತಂತ್ರ‍್ಯ ಹೋರಾಟದ ಕುರಿತು ಸ್ನೇಹಿತರೊಡನೆ ಚರ್ಚಿಸುವ ಮಾಹಿತಿ ಪಡೆದ ಧನದಾಹಿ ಭಾರತೀಯನ ಕುತಂತ್ರಕ್ಕೆ ಬಲಿಯಾಗಬೇಕಾಯಿತು. ಸುತ್ತಲೂ ಮುತ್ತಿಕ್ಕಿದ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ವೀರೋಚಿತ ದಾಳಿ ನಡೆಸಿ ಒಂದೊಂದು ಗುಂಡನ್ನೂ ಲೆಕ್ಕವಿಟ್ಟು ಕೊನೆಯದನ್ನು ತನ್ನೆಡೆಗೆ ಗುರಿಯಿಟ್ಟು ಸ್ವಾತ್ಮಾರ್ಪಣೆಗೈದ ಚಂದ್ರಶೇಖರ ಆಜಾದ್, ಭರತವರ್ಷದ ಯುವಕರ ಆಚಂದ್ರಾರ್ಕ ಸ್ಫೂರ್ತಿ.
ಸ್ವಾಭಿಮಾನಿ, ಸಶಕ್ತ ಯುವಕರ ಪಡೆಯೇ ತುಂಬಿರುವ ಯುವಭಾರತವು ಇಂದು ಜಗವನ್ನೇ ಆಳಲು ಮುಂದಡಿಯಿಟ್ಟಿದೆ. ವಿಶ್ವವಿಜಯ ವೈಭವದ ಮೆರವಣಿಗೆಗೆ ಹೊರಟಿರುವ ನವಹಿಂದೂಸ್ಥಾನದ ಕ್ಷಾತ್ರವೃತ್ತಿಗೆ ತಿಲಕ-ಆಜಾದರ ಹೋರಾಟ ಪ್ರೇರಣೆಯಾಗಲಿ.

Next Article