For the best experience, open
https://m.samyuktakarnataka.in
on your mobile browser.

ಸ್ವಾತಂತ್ರ್ಯದ ಗುರಿ ತಲುಪಲು ಬೇಕು ತ್ಯಾಗ

03:30 AM Oct 31, 2024 IST | Samyukta Karnataka
ಸ್ವಾತಂತ್ರ್ಯದ ಗುರಿ ತಲುಪಲು ಬೇಕು ತ್ಯಾಗ

ಬ್ರಿಟಿಷರ ಕಪಟಜಾಲದಿಂದ ಮುಕ್ತರಾಗಲು ನಮಗಿರುವ ಒಂದೇ ದಾರಿ ಆರ್ಥಿಕ ಪಾರಮ್ಯ. ನಮ್ಮ ರೈತರು ಬೆಳೆಯುವ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ಲಾಭ ಪಡೆಯುವ ಬ್ರಿಟಿಷರ ಸೊಕ್ಕು ಮುರಿಯಲು ಪ್ರತಿಯೊಬ್ಬ ಭಾರತೀಯನೂ ಮಾತೃಭಾಷೆಯಲ್ಲೇ ವ್ಯವಹರಿಸುವ, ದೇಸೀ ದಿರಿಸನ್ನೇ ಧರಿಸುವ, ದೇಸೀ ಸಂಸ್ಕೃತಿಯನ್ನೇ ಪಾಲಿಸುವ ಹಾಗೂ ನಮ್ಮ ದೇಶದ ಉತ್ಪನ್ನಗಳನ್ನೇ ಖರೀದಿಸುವ ಸಂಕಲ್ಪ ಮಾಡಬೇಕು. ದೇಸೀತನ ಉಳಿಯದೆ ದೇಶ ಉಳಿಯುವುದು ಹೇಗೆ? ಸ್ವಾತಂತ್ರ್ಯಬೇಕೆಂದರೆ ಅದಕ್ಕಾಗಿ ಹಗಲಿರುಳೆನ್ನದೆ ವಿವಿಧ ಆಯಾಮಗಳಲ್ಲಿ ಮೈಚಳಿ ಬಿಟ್ಟು ದುಡಿಯಬೇಕು' ಎಂಬ ಮಾತು ಮತ್ತು ಲೇಖನ ಸರಣಿಯಿಂದ ಪಶ್ಚಿಮದ ಭ್ರಮೆಯಲ್ಲಿದ್ದ ತರುಣಶಕ್ತಿಯನ್ನು ಬಡಿದೆಚ್ಚರಿಸಿದ ಸ್ವಾತಂತ್ರ‍್ಯ ಹೋರಾಟಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಅಶ್ವಿನಿಕುಮಾರ ದತ್ತ, ರಾಷ್ಟ್ರೀಯ ಸ್ವಾತಂತ್ರ‍್ಯ ಹೋರಾಟಕ್ಕೆ ಹೊಸ ರೂಪಿತ್ತ ದೇಶಭಕ್ತ. ಬಂಗಾಲದ ಬೃಜಮೋಹನ ದತ್ತ ದಂಪತಿಗಳಿಗೆ ಜನಿಸಿದ ಅಶ್ವಿನಿಕುಮಾರರು, ಹಿಂದು ಕಾಲೇಜಿನಲ್ಲಿ ಪದವಿ ಅಧ್ಯಯನಗೈದು ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಪ್ರಯಾಗದಲ್ಲಿ ಕಾನೂನು ಶಿಕ್ಷಣ ಅಭ್ಯಾಸ ಮಾಡಿ ವಕೀಲಿ ವೃತ್ತಿಜೀವನ ಆರಂಭಿಸಿದ ದತ್ತ, ತಮ್ಮ ಕುಶಲಮಾತು-ವಾದವೈಖರಿಯ ಪರಿಯಿಂದ ಜನಪ್ರಿಯರಾದರು. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿ ಜೈಲುಪಾಲಾಗುವ ರಾಜಕೀಯ ಕೈದಿಗಳನ್ನು ಬಿಡಿಸಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಉಚಿತ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅವರ ಕಾರ್ಯ ನೂರಾರು ಕುಟುಂಬಗಳಿಗೆ ಬೆಳಕಾಯಿತು. ಭಾರತವನ್ನು ಆಂಗ್ಲಶಿಕ್ಷಣ ವ್ಯವಸ್ಥೆಯ ಕಬಂಧಬಾಹುಗಳಿಂದ ರಕ್ಷಿಸಲು ದೇಶಪ್ರೇಮಿಗಳು ಒಗ್ಗೂಡಬೇಕೆಂದು ಕರೆಯಿತ್ತು ಶಾಲೆ ಸ್ಥಾಪಿಸಿ ಶೈಕ್ಷಣಿಕವಾಗಿ ತೊಡಗಿಸಿ, ದೇಸೀ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದರು. ಹೆಣ್ಮಕ್ಕಳು ಶಿಕ್ಷಿತರಾದರೆ ದೇಶವೇ ಸುಶಿಕ್ಷಿತವಾದಂತೆಯೆಂಬ ಅಭಿಪ್ರಾಯ ಹೊಂದಿ ಹುಡುಗಿಯರಿಗಾಗಿ ವಿದ್ಯಾದೇಗುಲ ನಿರ್ಮಿಸಿ, ಮೂರು ದಶಕಗಳ ಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಸ್ಥಾಪನೆಯ ಆರಂಭಿಕ ದಿನಗಳಿಂದಲೂ ಸಕ್ರಿಯರಾಗಿದ್ದ ದತ್ತ, ರಾಷ್ಟ್ರೀಯ ಸ್ವಾತಂತ್ರ‍್ಯಕ್ಕೆ ಹೊಸ ರೂಪವಿತ್ತ ನಾಡಪ್ರೇಮಿ. ಪಕ್ಷದ ಆಂತರಿಕ ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿ ಅಧ್ಯಕ್ಷರ ಆಯ್ಕೆ, ಹೋರಾಟದ ಹಾದಿಯಲ್ಲಿ ನಾಯಕರು ವಹಿಸಬೇಕಾದ ದಾಯಿತ್ವವನ್ನು ವಿವರಿಸಿದರು. ಬಂಗಾಲ ವಿಭಜನೆಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಪ್ರಖರತೆಯನ್ನು ಮನೆಮನಗಳಿಗೆ ತಲುಪಿಸಲು 'ಸ್ವದೇಶ ಬಾಂಧವ ಸಮಿತಿ'ಯನ್ನು ಆರಂಭಿಸಿ ಭಾರತೀಯ ವಸ್ತುಗಳನ್ನೇ ಕೊಳ್ಳುವಂತೆ ಜನಜಾಗೃತಿಗೈದ ದತ್ತ, ಬ್ರಿಟಿಷರ ವಿರುದ್ಧ ಅಕ್ಷರಶಃ ಆರ್ಥಿಕ ಸಮರವನ್ನೇ ಸಾರಿದರು. ಸ್ವದೇಶೀ ಭಂಡಾರವನ್ನೇ ತೆರೆದು ಹಳ್ಳಿಗಳ ರೈತರಿಗೆ ಅನುಕೂಲ ಕಲ್ಪಿಸಿ ಪೂರ್ಣ ಲಾಭಾಂಶ ದೊರೆಯುವಂತೆ ಮಾಡಿದ ಸತ್ಕಾರ್ಯಕ್ಕೆ ಆಂಗ್ಲರ ಕುದೃಷ್ಟಿ ಬಿತ್ತು. ತಮ್ಮ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ನಿಷೇಧ ಹೇರಲು ಶ್ರಮಿಸಿದ ಅಶ್ವಿನಿಕುಮಾರರ ಕಾರ್ಯದಿಂದ ಕ್ರುದ್ಧಗೊಂಡ ಸರಕಾರ, ಸಮಿತಿಯನ್ನು ನಿಷೇಧಿಸಿತಲ್ಲದೆ ಜೈಲುಶಿಕ್ಷೆಯನ್ನೂ ವಿಧಿಸಿತು. ಬಿಡುಗಡೆಯ ಬಳಿಕ, ತಮ್ಮ ವೃದ್ಧಾಪ್ಯವನ್ನು ಲೆಕ್ಕಿಸದೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಯುವಮುಂದಾಳುಗಳಿಗೆ ಸ್ಫೂರ್ತಿ ತುಂಬಿದರು. ತಾವು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳನ್ನು ಸಾರ್ವಜನಿಕ ಆಡಳಿತಕ್ಕೆ ವಹಿಸಿ ಹೊಸಚಿಗುರುಗಳು ಸ್ವದೇಶಾಭಿಮಾನದ ಜೊತೆಜೊತೆಗೆ ಸಹಸ್ರಮಾನದ ಇತಿಹಾಸವಿರುವ ಹಿಂದೂ ಸಂಸ್ಕೃತಿಯನ್ನು ಅಳವಡಿಸಬೇಕೆಂಬ ಕರೆಯಿತ್ತರು. ಉತ್ತಮ ಮಾತುಗಾರರೂ, ಲೇಖಕರಾಗಿಯೂ ಗುರುತಿಸಿ ಭಕ್ತಿಯೋಗ, ದುರ್ಗೋತ್ಸವತತ್ವ, ಭಾರತಗೀತೆ, ಕರ್ಮಯೋಗ ಮೊದಲಾದ ದೇಶಪ್ರೇಮ, ಅಧ್ಯಾತ್ಮ, ಹಿಂದೂಧರ್ಮದ ಕುರಿತಾಗಿರುವ ಮೌಲ್ಯಯುತ ಪುಸ್ತಕಗಳನ್ನೂ ರಚಿಸಿ, ಸದಾಕಾಲ ದೇಸೀ ಚಿಂತನೆಗಳ ವಿಕಾಸದ ಕುರಿತು ಯೋಚಿಸಿ ಅಸ್ತಂಗತರಾದ ಅಶ್ವಿನಿಕುಮಾರ ದತ್ತರು ನವಮನ್ವಂತರಶಿಲ್ಪಿಯೇ ಸರಿ.ಶತಮಾನಗಳ ಕನಸಾದ ಭಾರತದ ಸ್ವಾತಂತ್ರ‍್ಯ ನಮ್ಮೆಲ್ಲರ ಜವಾಬ್ದಾರಿ. ಹೋರಾಟ, ಬಲಿದಾನಗಳ ಬಳಿಕವೂ ನಿರೀಕ್ಷಿತ ಫಲ ಲಭಿಸದಿರಲು ಕಾರಣ ಒಗ್ಗಟ್ಟಿನ ಹಿನ್ನಡೆ. ಶಸ್ತçಧಾರಿ ತರುಣರು ತಮ್ಮ ಬದುಕಿನ ಒಂದು ವರ್ಷವನ್ನು ದೇಶದೇಳಿಗೆಗಾಗಿ ಸಮರ್ಪಿಸಿದರೆ ವಿದೇಶೀ ಆಳ್ವಿಕೆ ಕೊನೆಯಾಗುವುದು ಖಚಿತ. ಓದಿಗಾಗಿ ಇಂಗ್ಲೆಂಡ್, ಅಮೇರಿಕೆಗಳಿಗೆ ತೆರಳುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ಮರಳಿದ ಬಳಿಕ ತಮ್ಮತನವನ್ನು ಮರೆಯದೆ ಸಮಾಜಸೇವೆಯತ್ತ ಮುಖಮಾಡಬೇಕು. ಏಕತೆಯ ಒಂದೇ ಒಂದು ಮಂತ್ರದಿಂದ ಲಂಡನ್ ಗುಂಡಿಗೆಯನ್ನೂ ಸೀಳಲು ಸಾಧ್ಯವಿದೆ' ಎಂಬ ಗಂಭೀರವಾಣಿಯಿಂದ ಯುವಸಮುದಾಯವನ್ನು ಬಡಿದೆಚ್ಚರಿಸಿದ ಅಪ್ರತಿಮ ಕ್ರಾಂತಿಕಾರಿ, ವಿದೇಶಕೇಂದ್ರಿತ ಸ್ವಾತಂತ್ರ‍್ಯ ಹೋರಾಟದ ನಾಯಕ, ಬಹುಭಾಷಾವಿಶಾರದ ವೀರೇಂದ್ರನಾಥ ಚಟ್ಟೋಪಾಧ್ಯಾಯರು ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಲು ಸಶಸ್ತç ಕ್ರಾಂತಿಯೇ ಸೂಕ್ತವೆಂದು ಘೋಷಿಸಿದ ದೇಶಭಕ್ತ. ಭಾಗ್ಯನಗರದ ಅಘೋರನಾಥ ಚಟ್ಟೋಪಾಧ್ಯಾಯ-ವರದಸುಂದರಿ ದೇವಿ ದಂಪತಿಗಳಿಗೆ ಜನಿಸಿದ ವೀರೇಂದ್ರನಾಥರು ಮದ್ರಾಸ್ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಗೈದು ಪದವಿ ಪೂರೈಸಿದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಲು ಯಾವುದೇ ತಡೆಯಿಲ್ಲದ ವಾತಾವರಣದಲ್ಲಿ ಬೆಳೆದ ವೀರೇಂದ್ರರು, ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕಾರಿ ಅಧಿಕಾರಿಯಾಗುವ ಕನಸಿನೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ಮಿಡಲ್ ಟೆಂಪಲಿನಲ್ಲಿ ಕಾನೂನು ಪದವಿ ಅಭ್ಯಸಿಸಲು ಸಂಕಲ್ಪಿಸಿದ ಚಟ್ಟೋಪಾಧ್ಯಾಯರ ಬದುಕು ಬದಲಾದುದು ಭಾರತ ಭವನದ ಸಂಪರ್ಕದ ಬಳಿಕ. ಭಾರತದ ವಿವಿಧ ಪ್ರದೇಶಗಳಿಂದ ಲಂಡನ್‌ಗೆ ಆಗಮಿಸುವ ಯುವಕರು ಒಂದಿಲ್ಲೊಂದು ಕಾರಣಕ್ಕಾಗಿ ಭವನ ಪ್ರವೇಶಿಸುವುದು ಸಾಮಾನ್ಯವೇ ಆಗಿತ್ತು. ಆದರೆ ವೀರ ಸಾವರ್ಕರರ ಪ್ರವೇಶದ ಬಳಿಕ ಭವನದ ಚಟುವಟಿಕೆಗಳಲ್ಲಿ ಆಮೂಲಾಗ್ರ ಬದಲಾವಣೆ ಕಂಡು ಪ್ರಖರ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಯ ತಾಣವಾಯಿತು. ಸಾವರ್ಕರರ ಪರಿಚಯ ಹಾಗೂ ಸ್ನೇಹ ವೀರೇಂದ್ರನಾಥರೊಳಗೆ ಅವಿತಿದ್ದ ಸಮರ್ಥ ಲೇಖಕನನ್ನು ಹೊರತಂದಿತು. ಇಂಡಿಯನ್ ಸೋಶಿಯಲಿಸ್ಟ್ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿ ಸ್ಥಾನ ಸಂಪಾದಿಸಿ ಉತ್ಕೃಷ್ಟ ಲೇಖನಗಳನ್ನು ಬರೆದು ಧರ್ಮ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
ತಲ್ವಾರ್ ಪತ್ರಿಕೆಯ ಸಾರಥ್ಯವನ್ನೂ ವಹಿಸಿ ಹೊಸ ತಲೆಮಾರಿನ ಲೇಖಕರಿಂದ ಬರಹಗಳನ್ನು ಆಹ್ವಾನಿಸಿ ಭಾರತಕ್ಕೆ ಗುಪ್ತವಾಗಿ ರವಾನಿಸುವಲ್ಲಿ ಅಪಾರ ಶ್ರಮಿಸಿದ ವೀರೇಂದ್ರರು, ಸಾವರ್ಕರರ ಬಂಧನವನ್ನು ವಿರೋಧಿಸಿ ಬರೆದ ಲೇಖನಕ್ಕಾಗಿ ಕಾಲೇಜಿನಿಂದ ಅಮಾನತಾದರು. ಪಾರತಂತ್ರ್ಯದಡಿ ಓದಿ ಸಾಧಿಸುವ ಬದಲು ಸರ್ವತಂತ್ರ ಸ್ವತಂತ್ರ ಭಾರತದ ಗುರಿ ತಲುಪುವುದೇ ಶ್ರೇಯಸ್ಕರವೆಂದು ಭಾವಿಸಿ ಅಪಮಾನವನ್ನು ಸಮ್ಮಾನವೆಂದೇ ಸ್ವೀಕರಿಸಿದರು. ಪ್ಯಾರಿಸ್‌ಗೆ ತೆರಳಿ ಭಾರತೀಯ ಮೂಲದ ನಾಯಕರ ಸ್ನೇಹ ಸಂಪಾದಿಸಿ ಜರ್ಮನಿಯ ಸಹಕಾರದಿಂದ ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ಶಕ್ತಿ ತುಂಬುವ ಪ್ರಯತ್ನ ನಡೆಸಿ, ಆ ಮಹತ್ಕಾರ್ಯದಲ್ಲಿ ಸಫಲರಾದ ಪರಿಣಾಮವೇ ವಿದೇಶಕೇಂದ್ರಿತ ಚಳುವಳಿಯ ಪುನರುತ್ಥಾನಕ್ಕೆ ಪ್ರೇರಣೆಯಾಯಿತು. ಪ್ರಥಮ ಮಹಾಯುದ್ಧದ ಬಳಿಕ ಬ್ರಿಟಿಷರ ಕೈ ಕೆಳಗಾದರೆ ಭಾರತೀಯ ಕ್ರಾಂತಿಕಾರಿಗಳ ಉದ್ದೇಶ ನೆರವೇರುತ್ತದೆಯೆಂಬ ಯೋಜನೆ ರೂಪಿಸಿದ ವೀರೇಂದ್ರರು ಅನೇಕ ದೇಶಗಳಲ್ಲಿ ಸಂಚರಿಸಿ ಹೋರಾಟಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಶಸ್ತ್ರಸಜ್ಜಿತ ಸಮರಕ್ಕೆ ಕರೆಯಿತ್ತರು. ವಿವಿಧ ಪ್ರಾಂತಗಳಲ್ಲಿ ಬಿಡಿ ಬಿಡಿಯಾಗಿ ಚದುರಿದ್ದ ಭಾರತೀಯ ತರುಣರನ್ನು ಇಡಿಯಾಗಿ ಜೋಡಿಸಿದ ಕೀರ್ತಿಗೆ ಭಾಜನರಾದ ಚಟ್ಟೋಪಾಧ್ಯಾಯರ ಕಾರ್ಯ ಶ್ಲಾಘನೀಯ. ತೆಲುಗು, ತಮಿಳು, ಬೆಂಗಾಲಿ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್, ಇಟಾಲಿಯನ್, ಡಚ್, ರಷ್ಯನ್ ಮೊದಲಾದ ಅನೇಕ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿದ್ದ ವೀರೇಂದ್ರರು ಸ್ವಾತಂತ್ರ‍್ಯ ಪ್ರಾಪ್ತಿಯ ಕನವರಿಕೆಯೊಂದಿಗೆ ಇಹದ ವ್ಯಾಪಾರ ಮುಗಿಸಿದ್ದು ನೋವಿನ ಸಂಗತಿ. ಸರ್ವಸ್ವವನ್ನೂ ದೇಶದೇಳಿಗೆಗಾಗಿ ಸಮರ್ಪಿಸಿದ ಆ ಮಹಾನುಭಾವನ ಬದುಕೇ ಉತ್ಕೃಷ್ಟ. ದೇಸೀ ಹೋರಾಟಕ್ಕೆ ಹೊಸ ರೂಪಿತ್ತ ಸಾಹಸಿಯ ಜೀವನ ದೇಶಕಾರ್ಯರತರಿಗೆ ಸದಾ ಪ್ರೇರಣಾದಾಯಿ.
ಸದಾಕಾಲ ದೇಶದ ಸ್ವಾತಂತ್ರ‍್ಯದ ಕನಸನ್ನೇ ಕಂಡು, ಹಿಂದುಸ್ತಾನದ ಸಮುನ್ನತಿಗಾಗಿ ಅಹರ್ನಿಶಿ ದುಡಿದು, ರಾಷ್ಟ್ರಸೇವಾ ಯಜ್ಞದಲ್ಲಿ ಸಮಿಧೆಯಂತೆ ಉರಿದ ಅಶ್ವಿನಿಕುಮಾರ ದತ್ತ ಮತ್ತು ವೀರೇಂದ್ರನಾಥ ಚಟ್ಟೋಪಾಧ್ಯಾಯರ ಜನ್ಮೋತ್ಸವ ನಾಡಿಗೆ ಸದಾ ಸ್ಫೂರ್ತಿಕಿರಣ.