ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಕ್ಕಿಪಿಕ್ಕಿ ಮತ್ತಿತರೆ ಅಲೆಮಾರಿಗಳಿಗೆ ಶೇ 3 ರಷ್ಟು ಮೀಸಲಾತಿ ಕಲ್ಪಿಸಲು ಆಗ್ರಹ

12:35 PM Oct 23, 2024 IST | Samyukta Karnataka

ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 51 ಪರಿಶಿಷ್ಟ ಜಾತಿ, ಪರಿಶಿಷ್ಟ ಅಲೆಮಾರಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ "ಅಂತರ್ ಹಿಂದುಳಿದಿರುವಿಕೆ"ಯನ್ನು ಸಾಬೀತುಪಡಿಸಲು ಅಗತ್ಯ ಸಮೀಕ್ಷೆ, ಅಧ್ಯಯನದ ಮೂಲಕ ಅಲೆಮಾರಿ ಸಮುದಾಯಗಳಿಗೆ ಶೇ 3 ರಷ್ಟು ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಫೆಡರೇಷನ್ ಆಫ್ ಎಸ್.ಸಿ, ಎಸ್,ಟಿ, ಎನ್ ಟಿ, ಡಿಎನ್ ಟಿ ಅಸೋಸಿಯೇಷನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಯಲ್ಲಪ್ಪ, ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಸಿಳ್ಳೇಕ್ಯಾತಾಸ್, ಬುಡ್ಗಜಂಗಮ, ಸುಡುಗಾಡುಸಿದ್ದ, ಚನ್ನದಾಸರ್, ದೊಂಬರು, ಘಂಟಿಚೋರ್, ಕೊರಮ, ಕೊರಚ, ಮಾಂಗ್ಗಾರುಡಿ, ಮುಕ್ರಿ, ಅಜೀಲ, ಹಳ್ಳೇರ್, ನಲಿಕೆಯವ, ಸಿಂಧೋಳ್ಳು, ಬುಡಕಟ್ಟು ವಲಯದಲ್ಲಿ ಮೇದ, ಹಕ್ಕಿಪಿಕ್ಕಿ, ಇರುಳಿಗ, ರಾಜಗೊಂಡ, ಪಾರಿ, ಚೆಂಚು, ಹರಿಣಿಶಿಕಾರಿ, ಮಲೆಕುಡಿಯ, ಕಮ್ಮಾರ, ಹರಣಿಶಿಕಾರಿ, ಡುಂಗ್ರಿಗರಾಸಿಯಾ ಇತ್ಯಾದಿ 23 ಬುಡಕಟ್ಟು ಸೇರಿ 74 ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿವೆ. ಸೂಕ್ತ ಸೂರಿಲ್ಲದೇ ತಾತ್ಕಾಲಿಕ ಟೆಂಟು, ಗುಡಿಸಲು, ಹಾಡಿಗಳಲ್ಲಿ ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿ ಅಸಂಘಟಿತರಾಗಿ ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದಾರೆ ಎಂದರು.
ಔದ್ಯೋಗಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಯಾವುದೇ ಭಾಗದಲ್ಲಿ ದತ್ತಾಂಶವಿಲ್ಲದ ಕಾರಣ ಕಳೆದ 70 ವರ್ಷದಲ್ಲಿಯಾವುದೇ ಮೀಸಲಾತಿ ಸೌಲಭ್ಯ ಅಲೆಮಾರಿಗಳಿಗೆ ಸಿಗದೇ ನಿರ್ಲಕ್ಷಕ್ಕೊಳಗಾಗಿದ್ದಾರೆ. ಇದೀಗ ಪ್ರಾತಿನಿಧ್ಯದ ಕೊರತೆಯನ್ನು ಆಧಾರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಸಂವಿಧಾನಬದ್ಧ ಅಧಿಕಾರ ನೀಡಲಾಗಿದೆ. ಯಾವುದೇ ಸಮುದಾಯಗಳಿಗೆ ಅನಾನುಕೂಲ ಮಾಡುವ ಅಥವಾ ಸಮುದಾಯಗಳನ್ನು ಅವಕಾಶ ಮತ್ತು ಹಕ್ಕುಗಳಿಂದ ವಂಚಿತರನ್ನಾಗಿ ಮಾಡಬಾರದು ಎಂದು ಹೇಳಿದರು.
ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವಿಕ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತು ಪಡಿಸಲು ಒತ್ತು ನೀಡಬೇಕು. ದುರದೃಷ್ಟಕರವೆಂದರೆ ಸರ್ಕಾರದ ಬಳಿ ಈವರೆಗೆ ಯಾವುದೇ ಅಧ್ಯಯನ, ಸಮೀಕ್ಷೆ, ತುಲನೆ ಮಾಡಿರುವ ವರದಿಗಳಿಲ್ಲ. ಸಮುದಾಯಗಳ ತಲಾ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗಳನ್ನು ಒಳಗೊಂಡಿರುವ ಅಲೆಮಾರಿಗಳ ವಾಸ್ತವಿಕ ದತ್ತಾಂಶಗಳನ್ನು ಮೊದಲು ಸಂಗ್ರಹಿಸಬೇಕು. ಅಗತ್ಯವಿರುವ ಕುಲಶಾಸ್ತ್ರಅಧ್ಯಯನ, ಸಾಮಾಜಿಕ ಮತ್ತಿತರ ಅಂಶಗಳನ್ನು ಸಾಕಾರಗೊಳಿಸಬಹುದಾದ ವೈಜ್ಞಾನಿಕ ಮತ್ತು ಒಪ್ಪಿತ ವರದಿಗಳು ಸರ್ಕಾರದಲ್ಲಿಇಲ್ಲ ಎಂದು ಆದರ್ಶ್ ಯಲ್ಲಪ್ಪ ಹೇಳಿದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಣೆ ಮಾಡಬೇಕಾಗಿದೆ. ವಿವಿಧ ರಾಜ್ಯಗಳು, ಸರ್ವ ಪಕ್ಷಗಳ ಮುಖಂಡರು, ಕಾನೂನು ಮತ್ತು ಸಮಾಜ ಶಾಸ್ತ್ರತಜ್ಞರ ಅಭಿಪ್ರಾಯ ಪಡೆದು ಈ ವರ್ಗೀಕರಣ ಪ್ರಕ್ರಿಯೆಗೆ ಸಹಕಾರಿ ಆಗುವಂತೆ ಹರಿಯಾಣ ಸರ್ಕಾರ ಹೊಸ ಆಯೋಗ ರಚಿಸಲು ನಿರ್ಧರಿಸಿದೆ. ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಅಂಶಗಳ ದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸದೊಂದು ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಅಲೆಮಾರಿಗಳಿಗೆ ಪ್ರತ್ಯೇಕ ಎಸ್.ಸಿ/ಎಸ್.ಟಿ ಅಲೆಮಾರಿಗಳ ಆಯೋಗಕ್ಕಾಗಿ ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರವು ಕಳೆದ ಬಜೆಟ್ನಲ್ಲಿ ಎಸ್.ಸಿ/ಎಸ್.ಟಿಅಲೆಮಾರಿ ಆಯೋಗದ ಬದಲಿಗೆ ಹಿಂದುಳಿದ ವರ್ಗದ ಅಲೆಮಾರಿಗಳ ಆಯೋಗ ರಚಿಸಿದೆ. ಅದೇ ಮಾದರಿಯಲ್ಲಿ ಎಸ್.ಸಿ/ಎಸ್.ಟಿಅಲೆಮಾರಿ ಸಮುದಾಯಗಳ ಆಯೋಗ ರಚಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವೆಂಕಟೇಶದೊರ, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಮಂಜುನಾಥ್. ಖಜಾಂಚಿ ಬಸವರಾಜ ನಾರಾಯಣಕರ ಮತ್ತಿತರರು ಉಪಸ್ಥಿತರಿದ್ದರು.

Tags :
#ಬೆಂಗಳೂರು#ಮೀಸಲಾತಿ
Next Article