ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಕ್ಕು ಚಲಾವಣೆ ನಂತರ ಉಳಿದದ್ದು ಶೂನ್ಯವೊಂದೇ !

01:11 PM May 09, 2024 IST | Samyukta Karnataka

ಕರುನಾಡು ನಿಟ್ಟುಸಿರು ಬಿಟ್ಟಿದೆ.
ಅಬ್ಬಾ. ಚುನಾವಣೆಯ ಅಬ್ಬರ, ರೋಷಾವೇಶ, ಕರ್ಕಶ ಸೇಡು, ಸೆಡವುಗಳ ದಾಂಧಲೆಗೆ ಅಂತೂ ಪೂರ್ಣವಿರಾಮ. ಇನ್ನೇನಿದ್ದರೂ ಮತದಾರ ಪ್ರಭುವಿನ ತೀರ್ಮಾನದತ್ತ ಚಿತ್ತ !
ಕಳೆದ ಎರಡೂವರೆ ತಿಂಗಳ ಕಾಲ ನಾಡಿಗೆ ಶಾಂತಿ ಇಲ್ಲದಂತೆ ಕರ್ಕಶ ಕ್ರೋಧಗಳ ಭಾಷಣ-ಭೀಷಣಗಳ ಅಬ್ಬರ, ಪ್ರಶಾಂತ ಮತದಾರನ ತಲೆ ಚಿಟ್ಟು ಹಿಡಿಸಿಬಿಟ್ಟಿತ್ತು.
ಉರಿಗಾಳಿ ಬೇರೆ. ಕಡು ಬಿಸಿಲು ಮೇಲೆ. ಬರ, ಬವಣೆಯಲ್ಲಿ ಜನಸಾಮಾನ್ಯ ಪರದಾಡುತ್ತಿರುವಾಗ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಅವರ ಮತಕ್ಕಾಗಿ, ಒಂದೊಂದು ವೋಟಿಗಾಗಿ ಏನೆಲ್ಲ ತಂತ್ರ, ಪ್ರತಿತಂತ್ರಗಳ ಹೊಯ್ದಾಟ ಹೂಡಿಕೆಗಳೇ ನಡೆದವು.
ದೇಶದ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯ್ತಿ ಮುಖಂಡನವರೆಗೆ ಹಳ್ಳಿ-ಗಲ್ಲಿ, ಊರು-ಕೇರಿ ಸುತ್ತಿ, ರಾಷ್ಟ್ರ- ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿ ಪರಸ್ಪರ ಕಚ್ಚಾಡಿ, ಕೆಸರೆರೆಚಿಕೊಂಡಿದ್ದೂ ಆಯಿತು. ಜಾತಿ, ಕೋಮು, ಸಮುದಾಯಗಳು ಇನ್ನೇನು ಒಡೆದು ಛಿದ್ರವಾದವೇನೋ ಎನ್ನುವ ರೀತಿಯಲ್ಲಿ ಮತಬ್ಯಾಂಕ್ ಕ್ರೋಢೀಕರಣದ ಆಖ್ಯಾನ ನಡೆದವು.
ಮಹಾಭಾರತ ಯುದ್ಧ ಹದಿನೆಂಟು ದಿನಗಳು ನಡೆದರೆ, ಈ ಮತಯುದ್ಧ ಸರಿಸುಮಾರು ನೂರೆಂಟು ದಿನಗಳ ಕಾಲ ನಡೆಯಿತು. ಮಹಾಭಾರತದ ಎಲ್ಲ ತಂತ್ರಗಳನ್ನೂ ಮೀರಿ ಇಲ್ಲಿ ಕದನ ಕಣ ಕಂಡು ಬಂತು. ಹಾಗೇ ರಾಮಾಯಣದಲ್ಲಿ ತೆರೆಯಲ್ಲಿ ನಿಂತು ವಾಲಿ ಕೊಲ್ಲಿಸಿದ ಬಗೆ, ಮಹಾಭಾರತದಲ್ಲಿ ಕರ್ಣನ ಕುಂಡಲ ಬೇಡಿದ ತಂತ್ರ, ಶ್ರೀಕೃಷ್ಣ ಭೀಮನಿಗೆ ದುರ್ಯೋಧನನ ತೊಡೆಗೆ ಗಧೆ ಬೀಸು ಎಂದು ತೊಡೆ ತಟ್ಟಿದ ಪ್ರತಿತಂತ್ರ, ಶರಮಂಚದ ಮೇಲೆ ಭೀಷ್ಮನ ಸ್ಥಿತಿ, ಹಾಗೇ ಪುರಸ್ಕಾರ ಪ್ರಶಸ್ತಿ ನೀಡಿ ಪುಸಲಾಯಿಸಿದ (ಭಾರತರತ್ನ) ಜಾಣ್ಮೆ ಎಲ್ಲವೂ ಈಗ ಕಾಣುತ್ತಿವೆ.
ಈ ಮಧ್ಯೆ ಜನರಿಗೆ ಬೇಕೋ ಬೇಡವೋ, ಅಗತ್ಯವೋ, ಅನಗತ್ಯವೋ ಗ್ಯಾರಂಟಿಯ ಬಾಣ ಬಿರುಸುಗಳು. ಆಸೆ ಆಮಿಷಗಳು.
ಕರುನಾಡಿನ ದಕ್ಷಿಣದ ಜನ ಉದಾಸೀನ ತಾಳಿದರೂ, ಉತ್ತರದ ಮಂದಿಯ ಉತ್ಸಾಹದ ಪರಿಣಾಮ ಎಪ್ಪತ್ತೈದರ ಆಸುಪಾಸು ಮತದಾನವೇನೋ ಆಯಿತು. ಫಲಿತಾಂಶಕ್ಕೆ ಇನ್ನೊಂದು ತಿಂಗಳು ಕಾಯಬೇಕು.
ಈಗ ಕಾಡುವ ಪ್ರಶ್ನೆ, ಚುನಾವಣೆ ಏನಾದರೂ ಭವಿಷ್ಯತ್ತಿನ ಬದುಕಿಗೆ ಆಶಾಭಾವನೆ ಮೂಡಿಸೀತೇ? ಎನ್ನುವುದು. ಲೋಕಸಭೆಯಂತಹ ಮಹಾ ಚುನಾವಣೆ ಭವಿತವ್ಯದ ಅಗತ್ಯತೆಗಳನ್ನು ಈಡೇರಿಸಲು ಜನತೆಗೆ ಭರವಸೆ ದೊರೆಯುವಂತಿರಬೇಕು ಎಂಬ ನಿರೀಕ್ಷೆ ಸಹಜ. ಆಗಬೇಕಾದದ್ದೂ ಹಾಗೇ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಹಿಂದಿನ ಮೂಲ ಉದ್ದೇಶವೂ ಅದೇ. ಒಂದು ರೀತಿಯ ಪ್ರತಿಜ್ಞೆ.
ಹಿಂದೆ ಪಂಚ ವಾರ್ಷಿಕ ಯೋಜನೆಗಳು, ಅಭಿವೃದ್ಧಿ, ಬಡತನ ನಿರ್ಮೂಲನೆ, ರೈತರ ಅಭ್ಯುದಯ ಇವೆಲ್ಲವುಗಳ ಮೇಲೆ ಚುನಾವಣೆ ಕೇಂದ್ರೀಕೃತವಾಗಿದ್ದನ್ನು ಇಂದೂ ಸ್ಮರಿಸಿಕೊಳ್ಳಬಹುದೇನೋ. ವಿದೇಶಗಳಲ್ಲಿ, ವಿಶೇಷವಾಗಿ ಮುಂದುವರಿದ ರಾಷ್ಟ್ರಗಳಲ್ಲಿ, ಚುನಾವಣೆ ಸಂಗತಿಗಳೇ ಬೇರೆ. ಅಣುಶಕ್ತಿ, ವಿದ್ಯುತ್ತು, ಯುದ್ಧ, ವಿದೇಶಿ ನೀತಿ, ಶಸ್ತ್ರಾಸ್ತ್ರಗಳ ಕ್ರೋಢೀಕರಣ, ಮಿಲಿಟರಿ ಬಲ ಹೆಚ್ಚಳ, ಶೈಕ್ಷಣಿಕ ವಿಷಯಗಳು, ವಿಜ್ಞಾನ- ತಂತ್ರಜ್ಞಾನ ಉದ್ಯಮಗಳ ನೀತಿಗಳ ಮೇಲೆ ಅಲ್ಲಿನ ಚುನಾವಣೆಗಳು ಇಂದಿಗೂ ನಡೆಯುತ್ತಿವೆ.
ಆದರೆ ಬಹುವರ್ಣೀಯ, ಬಹು ಸಮಸ್ಯೆಗಳ, ಬಹು ಭಾಷೀಯ, ಬಹು ಜಾತೀಯ ದೊಡ್ಡ ದೇಶದಲ್ಲಿ ಆ ಮಟ್ಟಕ್ಕೆ ಅಂತಹ ಒಂದೆರಡು ವಿಷಯಗಳ ಮೇಲೆ ಚುನಾವಣೆ ನಡೆಯುತ್ತದೆನ್ನುವ ನಿರೀಕ್ಷೆ ಮಾಡುವಂತಿಲ್ಲ, ನಿಜ.
ಆದರೆ ಕನಿಷ್ಠ ಜನರ ನೋವು, ಸಂಕಷ್ಟಗಳ ನಿವಾರಣೆಯ ಸಂಬಂಧವಾದರೂ, ರಾಷ್ಟ್ರೀಯ ಪ್ರಾದೇಶಿಕ ಯೋಜನೆಗಳ ಮಹತ್ವದ ಹಿನ್ನಲೆಯಲ್ಲಾದರೂ ಚುನಾವಣೆ ನಡೆಯಬೇಕಿತ್ತು. ಈ ಸಾರೆ ತಳಸ್ತರದಲ್ಲಿ ಅವ್ಯಾವವೂ ವಿಷಯಗಳೇ ಆಗಲಿಲ್ಲ.
ಈಗ ಮತದಾನದ ನಂತರ ಕಾಡುವ ಪ್ರಶ್ನೆ ಏನೆಂದರೆ, ಉತ್ತರ ಕರ್ನಾಟಕದ ಪ್ರಮುಖ ಯೋಜನೆ ಕಳಸಾ-ಬಂಡೂರಿ- ಮಹದಾಯಿ ಮತಚಲಾಯಿಸುವವರಿಗೆ ಏನಾದರೂ ಭರವಸೆ ದೊರಕಿತಾ? ನೀರಿನ ತೀವ್ರ ತುಟಾಗ್ರತೆ ಎದುರಿಸುತ್ತಿರುವ ರಾಜ್ಯಕ್ಕೆ ಬರದ ಬವಣೆ ನೀಗಿಸುವ ಪರಿಹಾರ ದೊರಕಿತಾ? ಇಡೀ ಐದು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದ ಮೇಕೆದಾಟು ಯೋಜನೆಗೆ ಕೇಂದ್ರ ಪರವಾನಗಿ ನೀಡುತ್ತೋ ಇಲ್ಲವೋ ಎನ್ನುವ ಕುರಿತಾಗಲೀ, ಕಾವೇರಿ ನೀರು ಸದ್ಬಳಕೆ ವಿಷಯವಾಗಲೀ, ಅಂತಾರಾಜ್ಯ ನೀರು, ಗಡಿತಂಟೆಯಾಗಲೀ, ಇನ್ನೂ ಇಂತಹ ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ಭರವಸೆ ಮತದಾರನಿಗೆ ದೊರೆಯಿತಾ? ಹೋಗಲಿ, ಚುನಾವಣೆಯುದ್ದಕ್ಕೂ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದ ಭದ್ರಾ ಯೋಜನೆಗೆ ೫೪೦೦ ಕೋಟಿ ಬಜೆಟ್ ಘೋಷಣೆ ಹಣ ಏಕೆ ಬಂದಿಲ್ಲ? ಎಂದು ಬರುತ್ತೆ? ಅಥವಾ ಯಾವಾಗ ಈ ಕಾರ್ಯಾರಂಭ ಕುರಿತ ಸ್ಪಷ್ಟ ವಿಶ್ವಾಸ- ಭರವಸೆ ಆ ಭಾಗದ ಜನತೆಗೆ ದೊರಕೀತು ಎನ್ನುವುದು ತಿಳಿಯಿತೇ? ಮೂರು ದಶಕಗಳಿಂದ ಜನತೆಯನ್ನು ಹೈರಾಣು ಮಾಡಿದ ಮುಳುಗಡೆ ಸಂತ್ರಸ್ತರ, ಅರಣ್ಯ ಅತಿಕ್ರಮಣದಾರರ ಭವಿಷ್ಯತ್ತಿನ ಬದುಕಿನ ಸ್ಥಿರತೆ ಕುರಿತ ಏನಾದರೊಂದು ಸ್ಪಷ್ಟ ಭರವಸೆ- ವಿಶ್ವಾಸ ದೊರೆಯಿತಾ? ಇದ್ಯಾವುವೂ ಇಲ್ಲ.
ಹಿಂದಿನ ಚುನಾವಣೆಗಳಲ್ಲಿ ಎದ್ದ ಸಮಸ್ಯೆಗಳೇ ಈ ಚುನಾವಣೆಯಲ್ಲೂ ಎದ್ದು ಹಾಗೇ ಮಲಗಿ ಬಿಟ್ಟವು. ಪ್ರಧಾನಿಯಿಂದ ಹಿಡಿದು ಎಲ್ಲ ಪ್ರಮುಖರೂ ರಾಜ್ಯಾದ್ಯಂತ ಹಲವು ಸುತ್ತುಗಳಲ್ಲಿ ಪ್ರವಾಸ ಮಾಡಿದರೂ ಕಳಸಾ- ಬಂಡೂರಿಗೆ ಸ್ಪಷ್ಟ ಪರವಾನಗಿ ಏಕೆ ನೀಡಿಲ್ಲ ಎನ್ನುವ ಉತ್ತರವನ್ನು ಯಾರೂ ನೀಡಿಲ್ಲ. ಮುಖ್ಯಮಂತ್ರಿ, ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿತೇ ವಿನಾ, ಕೇಂದ್ರದ ಪ್ರಮುಖರು ತುಟಿ ಪಿಟ್ ಎನ್ನಲಿಲ್ಲ. ಭದ್ರಾ ಯೋಜನೆಗೆ ೫೪೦೦ ಕೋಟಿ ರೂಪಾಯಿ ಘೋಷಣೆ ಮಾಡಿದ ಕೇಂದ್ರ ಸಚಿವರು ಯಾಕೆ ಬಿಡುಗಡೆ ಮಾಡಿಲ್ಲ? ಆ ಹಣ ಏನಾಯಿತು? ಊಹುಂ. ಕೊನೆಗೂ ಸ್ಪಷ್ಟನೆಯನ್ನೇ ನೀಡಲಿಲ್ಲ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಈ ಸಾರೆ ಚುನಾವಣಾ ವಿಷಯವೇ ಆಗಲಿಲ್ಲ. ಭಾರೀ ಪ್ರಚಾರ ಪಡೆದ ಸಾಗರಮಾಲಾ ಮತ್ತು ಮತ್ಸೋದ್ಯಮ ಎರಡೂ ಸಮುದ್ರದ ತೆರೆಯಲ್ಲಿ ಕೊಚ್ಚಿ ಹೋದವು.
ಚುನಾವಣಾ ಸಂದರ್ಭದಲ್ಲಿ ಪ್ರಧಾನವಾಗಿ ಸಂಘರ್ಷಕ್ಕೆ ಇಳಿದ ರಾಜ್ಯ ಸರ್ಕಾರ ಅಂತೂ ನ್ಯಾಯಾಲಯದ ನಿರ್ದೇಶನದ ಮೂಲಕ ಕೇಂದ್ರದಿಂದ ೩೯೦೦ ಕೋಟಿ ರೂಪಾಯಿ ಅನಾವೃಷ್ಟಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾದದ್ದೇ ಈ ಸಾರೆಯ ಚುನಾವಣೆಯ ಲಾಭ.
ಹಾಗಂತ, ಚುನಾವಣೆ ಬರದಿದ್ದರೆ ರಾಜ್ಯ ಸರ್ಕಾರವೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿತ್ತೋ ಇಲ್ಲವೋ ತಿಳಿಯದು. ಹಾಗೇ ದೆಹಲಿ ಜಂತರ್ ಮಂತರ್‌ನಲ್ಲೂ ರಾಜ್ಯ ಸರ್ಕಾರದ ಮಂತ್ರಿ ಮತ್ತು ಕಾಂಗ್ರೆಸ್ ಶಾಸಕರ ಧರಣಿ- ಧ್ವನಿ ಕೇಳುವುದಕ್ಕೆ ಸಾಧ್ಯ ಇದ್ದಿರಲಿಲ್ಲವೇನೋ? ಹಾಗಂತ, ರಾಜ್ಯ ಎತ್ತಿದ ತೆರಿಗೆ ಪಾಲು ವಿಷಯ ಕೊನೆಗೂ ಇತ್ಯರ್ಥವಾಗಲೇ ಇಲ್ಲ. ತೆರಿಗೆ ಪಾಲು ಕೇಳಿದರೆ ದೇಶ ವಿಭಜನೆಯ ಧ್ವನಿ ಮೇಲೆದ್ದಿತು. ಮೇಕೆದಾಟು ಸವಾಲು- ಜವಾಬು ಸ್ವರೂಪದಲ್ಲೇ ಮುಗಿದು ಹೋಯಿತು. ಅಭಿವೃದ್ಧಿ' ಜಾಹೀರಾತು ಸಮರದಲ್ಲಷ್ಟೇ ಕಾಣಿಸಿತು.ಗ್ಯಾರಂಟಿ'ಗಳಿಗೆ, ಪ್ರತಿ ಗ್ಯಾರಂಟಿಗಳು ತೂರಿ ಬಂದವು. ಹೊರತು ಗ್ಯಾರಂಟಿಯ ಅಗತ್ಯಗಳು, ಫ್ರೀಬಿಗಳ ಬೇಕು ಬೇಡಗಳು, ಟೀಕೆ ಟಿಪ್ಪಣಿಗಳು ಎಲ್ಲವೂ ಪೈಪೋಟಿಯಂತೆ ನಡೆದವು.
ಈ ಮಧ್ಯೆ ಜಾತಿ, ಮೀಸಲಾತಿ, ಜೊತೆಗೆ ಭಾವನಾತ್ಮಕ ಸಂಗತಿಗಳೇ ಪ್ರಧಾನ ಪಡೆದವು. ಇಡೀ ರಾಜ್ಯದಲ್ಲಿ ಮೊಳಗಿದ್ದ ಲಿಂಗಾಯತ-ವೀರಶೈವ ಮೀಸಲಾತಿ, ಪಂಚಮಸಾಲಿಗಳ ಹೋರಾಟ, ಮರಾಠಾ ಧ್ವನಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕೆಲವು ಪಂಗಡಗಳ ಸೇರ್ಪಡೆ ಇವೆಲ್ಲ ಅಲ್ಲಲ್ಲಿ, ಆಗಾಗ ಕಾಣಿಸಿಕೊಂಡರೂ, ಕೇಳಿದರೂ ಅಲ್ಲಿಯೇ ಉಳಿದು ಹೋದವು. ಅಷ್ಟು ಮಾಡುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ, ನಾಯಕರೂ ಯಶಸ್ವಿಯಾದರು !!
ಯಾರಿಗೆ ಬೇಕು ಅಭಿವೃದ್ಧಿ ವಿಷಯ? ಯಾರಿಗೆ ಆಸಕ್ತಿ ಇದೆ ಸಮಸ್ಯೆಗಳ ನಿವಾರಣೆಯಲ್ಲಿ? ಯಾರು ಕೇಳಬೇಕು ಜನರ ಬೇಕು ಬೇಡಗಳ ಬವಣೆ?
ಹುಬ್ಬಳ್ಳಿಯ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿನಿ, ಫಯಾಜ್ ಎನ್ನುವ ಯುವ ಕಾಮಾಂಧನಿಂದ ಅಮಾನುಷವಾಗಿ ಹತ್ಯೆಯಾಗಿದ್ದು ಕೋಮು ಬಣ್ಣ ಪಡೆದು ಆಕೆಯ ಮನೆಯ ಮುಂದೆ ರಾಷ್ಟ್ರದ ಗೃಹಮಂತ್ರಿಯಿಂದ ಹಿಡಿದು ಮರಿಪುಢಾರಿಗಳವರೆಗೆ, ದೊಡ್ಡ ಮಠಾಧೀಶರಿಂದ ಹಿಡಿದು ಓಣಿ ಸ್ವಾಮಿಗಳವರೆಗೆ, ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸಹಿತ ಹದಿನೈದು ದಿನಗಳ ಕಾಲ ಭೇಟಿ ನೀಡಿ ವಿಷಯ ಜೀವಂತವಾಗಿ ಚುನಾವಣೆಯ ವಿಷಯವಾಗಿದ್ದು ನಿಜ. ಹಾಗೆಯೇ ಮತದಾನ ಸಮೀಪವಿದ್ದಾಗ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ, ರಾಸಲೀಲೆಗಳು ಜನರ ಎಲ್ಲ ಆಸೆ ಆಕಾಂಕ್ಷೆಗಳ ಕಂಗಳನ್ನು ಮುಚ್ಚಿಬಿಟ್ಟವು. ಅದೊಂದೇ ಜನರಿಗೆ ಮನರಂಜನೆಯೂ ಆಯಿತು.
ಕ್ಷಣಕಾಲ ಯೋಚಿಸಿ. ಈಗ ಮುಗಿದ ಚುನಾವಣೆಯಲ್ಲಿ ಏನಾದರೊಂದು ಭವಿಷ್ಯತ್ತಿನ ಬದುಕಿಗೆ ಅಥವಾ ಸಮಸ್ಯೆಗಳಿಗೆ ಪರಿಹಾರ ಕಾಣುವ ಸಣ್ಣ ಅಂಶವಾದರೂ ಇದೆಯೇ? ಶೇಕಡಾ ೨೭ರಷ್ಟು ಹೊಸ ಮತದಾರರು ಈ ಸಾರೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅವರ ಆಸೆಗಳು ಏನೋ? ಉದ್ಯೋಗ, ದುಡಿಮೆ, ಭವಿಷ್ಯತ್ತಿನ ದಾರಿ ಈ ಯಾವುದಕ್ಕೆ ಚುನಾವಣೆಯಲ್ಲಿ ಭರವಸೆ ದೊರಕಿತೋ ಗೊತ್ತಿಲ್ಲ?
ಕೊನೆಗೂ ಅನ್ನಿಸಿದ್ದು, ಯಾರು ಬಂದರೇನು? ಇದೇ ಭಾವದಿಂದ ಮತದಾನಕ್ಕೆ ಬಾರದವರು ಹೆಚ್ಚಿದ್ದಾರೆ. ಮತದಾನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಹುಮ್ಮಸ್ಸು ಬೆಳೆಸಿದಲ್ಲಿ ಮಾತ್ರ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತವೆ.
ಒಂದು ಕ್ಷಣ ನಿಂತು ಯೋಚಿಸಿ. ಮುಗಿದ ಚುನಾವಣೆಯಲ್ಲಿ ಏನು ಆಶಯ ಕಂಡಿರಿ…ಅಷ್ಟೇ !

Next Article