ಹಠಾತ್ ಆಕ್ರಮಿಸುವ ಮೂರ್ಛೆರೋಗದ ಸುತ್ತಮುತ್ತ
ನಂಬಿಕೆಯಲ್ಲಿ ವೈಜ್ಞಾನಿಕತೆಯನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ಮೂಢನಂಬಿಕೆಗಳು ಸಾಯುತ್ತವೆ, ಮೂಢನಂಬಿಕೆಗಳು ಸತ್ತಾಗ ಮಾತ್ರ ಸಮಾಜದ ಏಳಿಗೆಯಾಗಲು ಸಾಧ್ಯ…."
ಮನುಷ್ಯನಿಗೆ ಬರುವ ನಾನಾ ರೋಗಗಳಲ್ಲಿ ಮೂರ್ಛೆರೋಗ(ಎಪಿಲೆಪ್ಸಿ) ಅಥವಾ ಅಪಸ್ಮಾರ ಎನ್ನುವುದು ಒಂದು ಸಾಮಾನ್ಯವಾಗಿ ಕಾಣಿಸುವ ದುಗುಡತೆಯ ಕಾಯಿಲೆ. ನಮ್ಮಲ್ಲಿ ಬೇರೂರಿರುವ ಸಾಮಾಜಿಕ ಕಳಂಕದ ಕಾರಣದಿಂದ ಜನರು ಈ ಸಮಸ್ಯೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಇದರ ಬಗ್ಗೆ ಅಪರಾಧ ಪ್ರಜ್ಞೆ ಹೊಂದಿರುವುದರ ಜೊತೆಗೆ ವಿಷಯವನ್ನು ಗೌಪ್ಯವಾಗಿ ಇಡುತ್ತಾರೆ. ಎಪಿಲೆಪ್ಸಿಯಿಂದ ಬಳಲುತ್ತಿರುವ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಎಷ್ಟೋ ಜನರಿಗೆ ಇದರ ಬಗ್ಗೆ ತಪ್ಪು ಕಲ್ಪನೆಗಳಿವೆ. ಮೂರ್ಛೆರೋಗ ಪೂರ್ವ ಜನ್ಮದ ಪಾಪದ ಫಲ, ದೆವ್ವ, ಭೂತ, ಮಾಟ ಮಂತ್ರ, ಸಾಂಕ್ರಾಮಿಕ ರೋಗ ಮತ್ತು ಮಾನಸಿಕ ರೋಗ ಹೀಗೆ ಇನ್ನೂ ಹಲವಾರು ರೀತಿಯ ತಪ್ಪು ಕಲ್ಪನೆ ಜನರಲ್ಲಿದೆ! ಹಾಗಾಗಿ ಮೂರ್ಛೆ ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಭೂತ-ದೆವ್ವ ಬಿಡಿಸುತ್ತೇವೆ ಎನ್ನುವವರ ಹತ್ತಿರ ಹೋಗಿ ರೋಗಿಗಳಿಗೆ ಚಿತ್ರಹಿಂಸೆ ನೀಡಿ ಮಾನಸಿಕ ರೋಗಿಯನ್ನಾಗಿ ಮಾಡಿಬಿಡುತ್ತಾರೆ. ಯಾವುದೇ ಕಾಯಿಲೆ ಆದರೂ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಬೇಗ ರೋಗಿಗಳು ಗುಣಮುಖರಾಗುತ್ತಾರೆ. ಮೂರ್ಛೆರೋಗ ಎನ್ನುವುದು ನರ ಸಂಬಂಧಿ ಸಮಸ್ಯೆ. ಮೆದುಳಿನಲ್ಲಾಗುವ ವೈಪರೀತ್ಯದಿಂದ ಮೂರ್ಛೆರೋಗ ಬರುತ್ತದೆ. ವೈಪರೀತ್ಯ ಹೆಚ್ಚಾದಾಗ ಮೆದುಳಿನಿಂದ ಹೆಚ್ಚಿನ ಪ್ರಮಾಣದ ಪ್ರಚೋದನೆಗಳು ದೇಹದ ಇನ್ನಿತರ ಭಾಗಗಳಿಗೆ ರವಾನೆಯಾಗುತ್ತವೆ. ಇದರಿಂದ ದೇಹದಲ್ಲಿ ವಿಭಿನ್ನ ರೀತಿಯ ಹಠಾತ್ ಚಲನೆಗಳು ಉಂಟಾಗುತ್ತದೆ. ಈ ಸ್ಥಿತಿಯನ್ನು ಸಾಮಾನ್ಯವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಹೋಲಿಸಬಹುದು. ಈ ಸಮಸ್ಯೆಗೆ ಒಳಗಾದ ವ್ಯಕ್ತಿ ತಕ್ಷಣವೇ ತಾತ್ಕಾಲಿಕವಾಗಿ ಪ್ರಜ್ಞೆಹೀನನಾಗಿರುತ್ತಾರೆ. ಈ ರೀತಿಯ ಅವಧಿ ಮೂವತ್ತು ಸೆಕೆಂಡ್‌ಗಳಿಂದ ಒಂದು ನಿಮಿಷದವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿ ಪೂರ್ಣ ಅಥವಾ ಅರ್ಧ ಪ್ರಜ್ಞೆಯನ್ನು ಕಳೆದುಕೊಳ್ಳಬಹುದು. ಅರೆ ಪ್ರಜ್ಞೆಗೆ ಜಾರುವ ವ್ಯಕ್ತಿ ಕೈ ಅಥವಾ ಕಾಲುಗಳ ಚಲನೆ ನಿಲ್ಲುವ ಸಾಧ್ಯತೆ ಇದೆ. ಬಾಯಲ್ಲಿ ನೊರೆ ಕಾಣಿಸಿಕೊಳ್ಳುತ್ತದೆ. ಸೆಳವು ಉಂಟಾಗಿ ಅದು ಕೊನೆಗೊಳ್ಳುವ ಮೊದಲು ಒಂದು ಅಥವಾ ಎರಡು ನಿಮಿಷಗಳವರೆಗೆ ಇರುತ್ತದೆ. ಹತ್ತರಿಂದ ಹದಿನೈದು ನಿಮಿಷಗಳಲ್ಲಿ, ರೋಗಿಯು ಚೇತರಿಸಿಕೊಳ್ಳುತ್ತಾನೆ. ಮಕ್ಕಳಲ್ಲಿ ಈ ಸೆಳೆ ಬಂದಾಗ ಅದರೊಟ್ಟಿಗೆ ಜ್ವರ ಕಾಣಿಸಿಕೊಳ್ಳಬಹುದು ಈ ರೋಗದಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಿಗಳನ್ನು ನೀಡುವುದರಿಂದ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಈ ಸಮಸ್ಯೆಗೆ ತುತ್ತಾದವರು ನಿಗದಿತ ಅವಧಿಯವರೆಗೂ ಕ್ರಮಬದ್ಧ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಸೇವಿಸುವ ಆಹಾರದಲ್ಲಿ ಬದಲಾವಣೆ, ಮತ್ತು ಮನೆ ಮದ್ದಿನಿಂದ ಸ್ವಲ್ಪಮಟ್ಟಿಗೆ ಹತೋಟಿಗೆ ತರಬಹುದು. ರೋಗಿ ಮೂರ್ಛೆ ಹೋದ ತಕ್ಷಣ ನುಗ್ಗೆ ಸೊಪ್ಪಿನ ದಂಟು ಅಥವಾ ಸೊಪ್ಪನ್ನು ಮೂಗಿನ ಹತ್ತಿರ ಹಿಡಿದರೆ ಬೇಗನೆ ಪ್ರಜ್ಞೆಗೆ ಮರಳುತ್ತಾರೆ. ಬ್ರಾಹ್ಮಿ ಸರಸ್ವತಿ ಮೂಲಿಕೆ, ಕರಿಮೆಣಸು, ಬೆಳ್ಳುಳ್ಳಿಯನ್ನು ಅರೆದು ಮಾತ್ರೆಗಳಾಗಿಟ್ಟುಕೊಂಡು ೪೦ ದಿನಗಳು ಬಳಸಿದಲ್ಲಿ ರೋಗ ಮರುಕಳಿಸದಂತೆ ತಡೆಯಲು ಸಹಾಯಕ ಮತ್ತು ಆರೋಗ್ಯಕ್ಕೂ ಉತ್ತಮ. ರೋಗಿಗಳು ಹಲಸಿನ ಹಣ್ಣು, ಬಾಳೆ ಹಣ್ಣು, ಹಾಲಿನ ಗಿಣ್ಣು, ಹಸಿ ಕೊಬ್ಬರಿಗಳಿಂದ ದೂರವಿರಬೇಕು. ಅಲ್ಲದೆ ಮತ್ಸ್ಯಾಸನಾ, ಹಾಲಾಸನ, ಸರ್ವಾಂಗಾಸನ, ಶೀರ್ಷಾಸನಗಳಂತಹ ಯೋಗಗಳಿಂದ ಮನಸ್ಸನ್ನು ಹಾಗೂ ಮೆದುಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.
ಈ ರೋಗದಿಂದ ಬಳಲುವವರು ನಿರಂತರವಾಗಿ ವೈದ್ಯರು ನೀಡುವ ಮಾರ್ಗದರ್ಶನವನ್ನು ತಪ್ಪದೇ ಪಾಲಿಸುವುದು ಅತಿ ಅಗತ್ಯವಾಗಿರುತ್ತದೆ. ಒಳ್ಳೆಯ ಪೋಷಕಾಂಶಯುಕ್ತ ಆಹಾರ ಸೇವನೆ ತುಂಬಾ ಮುಖ್ಯ. ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಒತ್ತಡದಿಂದ ಮುಕ್ತರಾಗಿರಬೇಕು. ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಒಂದು ಬಟ್ಟಲು ಅಗಸೆ ಸೊಪ್ಪಿನ ರಸಕ್ಕೆ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸುವುದು ಉತ್ತಮ. ಬಾಳೆದಿಂಡಿನ ರಸ ತೆಗೆದು ಆ ರಸವನ್ನು ನೀರಿನಲ್ಲಿ ಮಿಶ್ರ ಮಾಡಿ ದೀರ್ಘಾವಧಿಯವರೆಗೂ ಸೇವಿಸುತ್ತಿದ್ದರೆ ಕ್ರಮೇಣ ಕಡಿಮೆ ಆಗುವ ಸಂಭವವಿದೆ.
ರೋಗ ಬರುವುದಕ್ಕೆ ಕಾರಣ: ಅಪಘಾತದಿಂದ ತಲೆಗೆ ಏಟಾದಲ್ಲಿ, ಮೆದುಳಿನ ಸೋಂಕು, ಅನುವಂಶೀಯತೆ ಹೆರಿಗೆಯಲ್ಲಿ ತೊಂದರೆ, ಮಗುವಿಗೆ ಉಸಿರಾಟದಲ್ಲಿ ತೊಂದರೆ ಉಂಟಾದಾಗ, ಹೆರಿಗೆ ಸಮಯದಲ್ಲಿ ಮಗುವಿನ ತಲೆಗೆ ಪೆಟ್ಟಾದಲ್ಲಿ ತೀವ್ರವಾದ ಜ್ವರ (ಸಾಮಾನ್ಯವಾಗಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ) ಕಲುಷಿತ ಆಹಾರ, ಅಥವಾ ನೀರು ಸೇವಿಸಿದಾಗ, ಹಸಿ ಮಾಂಸ, ಅರ್ಧ ಬೆಂದಮಾಂಸ, ಅರೆ ಬೇಯಿಸಿದ ತರಕಾರಿ ಇವುಗಳ ಸೇವನೆಯಿಂದ ಲಾಡಿಹುಳು ಮೆದುಳಿನ ನರವ್ಯೂಹಕ್ಕೆ ಸೇರಿದಾಗ ಈ ಸಮಸ್ಯೆ ಉಂಟಾಗುತ್ತದೆ.