For the best experience, open
https://m.samyuktakarnataka.in
on your mobile browser.

ಹಡಗುಗಳ ಸ್ಥಳ ಮಾಹಿತಿಯ ಮಾರಾಟ

02:49 AM Aug 30, 2024 IST | Samyukta Karnataka
ಹಡಗುಗಳ ಸ್ಥಳ ಮಾಹಿತಿಯ ಮಾರಾಟ

ಕಾರವಾರ: ಭಾರತೀಯ ನೌಕಾನೆಲೆಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಮೂವರನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಹಡಗುಗಳ ಚಲನವಲನ ಕುರಿತು ಶತ್ರುರಾಷ್ಟçಕ್ಕೆ ಮಾಹಿತಿ ಸೋರಿಕೆ ಮಾಡುತ್ತಿದ್ದುದು ಗೊತ್ತಾಗಿದೆ. ಬಂಧಿತ ಮೂವರು ಆರೋಪಿಗಳು ನೌಕಾನೆಲೆ ವ್ಯಾಪ್ತಿಯ ಹೊರ ಗುತ್ತಿಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಬೈನಿಂದ ಕರೆ ಮಾಡುತ್ತಿದ್ದ ವ್ಯಕ್ತಿಗೆ ನೌಕಾ ಹಡಗಿನ ಚಲನವಲನಗಳ ಬಗ್ಗೆ, ರಿಪೇರಿಯಲ್ಲಿದ್ದ ಹಡಗುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದಕ್ಕೆ ಅವರ ಖಾತೆಗೆ ಹಣ ಕೂಡ ಹಾಕಲಾಗಿತ್ತು ಎನ್ನಲಾಗಿದೆ.
ಬೆಂಗಳೂರು ಹಾಗೂ ಹೈದರಾಬಾದ್ ಎನ್‌ಐಎ ತಂಡ ಬುಧವಾರ ಅಂಕೋಲಾದ ಹಳವಳ್ಳಿಯ ಅಕ್ಷಯ ನಾಯ್ಕ, ಕಾರವಾರ ಮುದಗಾದ ವೇತನ್ ತಾಂಡೇಲ್ ಹಾಗೂ ತೋಡುರು ಗ್ರಾಮದ ಸುನೀಲ್ ನಾಯ್ಕ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಕ್ಷಯ ನಾಯ್ಕನನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿದ್ದ ಎನ್‌ಐಎ, ವೇತನ್ ತಾಂಡೇಲ್ ವಿಚಾರಣೆಯನ್ನು ಗ್ರಾಮೀಣ ಠಾಣೆಯಲ್ಲಿ ನಡೆಸಿತ್ತು. ಸುನೀಲ್ ನಾಯ್ಕ ಎಂಬಾತನನ್ನು ಗೋವಾದಲ್ಲಿ ವಿಚಾರಣೆ ನಡೆಸಿತ್ತು. ಓರ್ವನಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
೨೦೨೩ರಲ್ಲಿ ಹೈದ್ರಾಬಾದ್‌ನಲ್ಲಿ ದೀಪಕ್ ಹಾಗೂ ಇನ್ನಿತರರನ್ನು ಬಂಧಿಸಿದ್ದ ಎನ್‌ಐಎ ತಂಡ ವಿಚಾರಣೆ ನಡೆಸುತ್ತಿದ್ದ ವೇಳೆ ಆತ ಈ ಮೂವರ ಹೆಸರನ್ನು ಹೇಳಿದ್ದ ಎನ್ನಲಾಗಿದೆ. ಈ ಮೂವರ ಬಗ್ಗೆ ಬೆಂಗಳೂರು ಎನ್‌ಐಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಹೈದರಾಬಾದ್ ಎನ್‌ಐಎ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆಯಲು ಕಳೆದ ಎರಡು ದಿನಗಳಿಂದ ಬಲೆ ಬೀಸಿದ್ದರು. ತೋಡುರಿನ ಸುನೀಲ ನಾಯ್ಕ ಸೀಬರ್ಡ್ ನೌಕಾನೆಲೆಯಲ್ಲಿ ಕ್ಯಾಂಟೀನ್‌ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದ, ಆ ಬಳಿಕ ಮತ್ತೊಂದು ಕಂಪನಿಗೆ ಚಾಲಕನಾಗಿ ಸೇರಿಕೊಂಡಿದ್ದ. ಈತ ಹೀಗೆ ನೌಕಾನೆಲೆಯಲ್ಲಿ ಮಾಹಿತಿ ಸೋರಿಕೆ ಮಾಡುತ್ತಿರುವುದು ಕೇಂದ್ರ ಗುಪ್ತಚರ ಏಜೆನ್ಸಿಗೆ ತಿಳಿದುಬಂದ ಬೆನ್ನಲ್ಲೇ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ ಆತ ಗೋವಾದ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಹನಿಟ್ರ್ಯಾಪ್ ಸಾಧ್ಯತೆ
ಎನ್‌ಐಎ ವಿಚಾರಣೆ ನಡೆಸಿದ ಮೂವರು ಹನಿಟ್ರ‍್ಯಾಪ್‌ಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಅಕ್ಷಯ ನಾಯ್ಕ ಹಾಗೂ ವೇತನ್ ತಾಂಡೇಲ್ ಸೀಬರ್ಡ್ ಯೋಜನೆಯ ಗುತ್ತಿಗೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೌಕಾನೆಲೆ ಉದ್ಯೋಗಿ ಎಂದು ನಮೂದಿಸಿದ್ದರು. ಇದನ್ನೇ ಆಧರಿಸಿ ತಾನು ಅದೇ ಕಂಪನಿಯ ಸಿಬ್ಬಂದಿ ಎಂದು ಮಹಿಳೆಯೊಬ್ಬಳು ಸಂಪರ್ಕ ಸಾಧಿಸಿದ್ದಳು ಎನ್ನಲಾಗಿದೆ. ಮೊದಲು ಕೇವಲ ಮಹಿಳೆಯೊಬ್ಬಳು ಮಾತ್ರ ಸಂಪರ್ಕದಲ್ಲಿದ್ದಳು. ಬಳಿಕ ಗ್ರೂಪ್ ಮೂಲಕ ಅನೇಕ ಸದಸ್ಯರನ್ನು ಹೊಂದಿ ಆ ಗ್ರೂಪ್ ಮೂಲಕವೇ ನೌಕಾನೆಲೆ ಒಳಗಿನ ಯುದ್ಧ ಹಡಗುಗಳ ಚಲನವಲನ ಕುರಿತಾಗಿ ಸಂದೇಶ ರವಾನೆಯಾಗಲು ಪ್ರಾರಂಭವಾಗಿದೆ. ಬಳಿಕ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾದಾಗ ಸಂಶಯಗೊಂಡು ಅಕ್ಷಯ ನಾಯ್ಕ ಆ ನಂಬರ್‌ಗಳನ್ನೇ ಬ್ಲಾಕ್ ಮಾಡಿದ್ದ. ಆದರೆ ವೇತನ ತಾಂಡೇಲ್ ಮೊಬೈಲ್ ಸಕ್ರಿಯವಾಗಿದ್ದು ತನಿಖೆ ವೇಳೆ ಕಂಡುಬಂದಿದೆ. ಇದೇ ಕಾರಣಕ್ಕೆ ಹೆಚ್ಚಿನ ವಿಚಾರಣೆಗೆ ಎನ್‌ಐಎ ತಂಡ ಹೈದರಾಬಾದ್ ಬರುವಂತೆ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ.