ಹಣದುಬ್ಬರ ಆತಂಕದ ನಡುವೆ ಪ್ರಗತಿ ಉದ್ದೀಪಿಸುವ ಸವಾಲು
ಅರುಣ ಹೆಗಡೆ
ಜಾಗತಿಕ ಆರ್ಥಿಕ ಮಂದಗತಿ, ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳ ಆತಂಕದ ನಡುವೆ ಇಡೀ ದೇಶದ ಚಿತ್ತ ಫೆ.೧ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಮಧ್ಯಂತರ ಬಜೆಟ್‌ನತ್ತ ನೆಟ್ಟಿದೆ. ಹೆಸರಿಗೆ ಇದು ಮಧ್ಯಂತರ ಬಜೆಟ್ ಎಂದು ಕರೆಸಿಕೊಂಡರೂ ದೇಶದ ಮಧ್ಯಮವರ್ಗವನ್ನು ಆವರಿಸಿಕೊಂಡಿರುವ ಭೀತಿಯನ್ನು ಪರಿಹರಿಸಿ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ತೋರಿಸಬೇಕಾದ ದೂರದರ್ಶಿತ್ವವನ್ನು ಇಲ್ಲಿ ಪ್ರದರ್ಶಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
sಸದ್ಯದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಇದು ಲೇಖಾನುದಾನ ಕೋರುವ ಬಜೆಟ್ ಎಂದು ಹೇಳಲಾಗುತ್ತಿದೆಯಾದರೂ ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ.೫.೭ರ ಶ್ರೇಣಿಯಲ್ಲಿರುವ ಕಾರಣ ಎಲ್ಲರೂ ಕಂಗಾಲಾಗುವಂತಾಗಿದೆ. ಆಹಾರ ಧಾನ್ಯ, ಹಣ್ಣು, ತರಕಾರಿ, ಹಾಲು, ಮೊಟ್ಟೆ, ಮೀನು, ಮಾಂಸಗಳ ದರ ಗಗನಕ್ಕೇರಿ ಜನತೆ ಪರಿತಪಿಸುವಂತಾಗಿದೆ. ಸರಕಾರ ಆಹಾರ ಧಾನ್ಯಗಳ ರಫ್ತು ನಿಷೇಧ ಮುಂತಾದ ಕ್ರಮಗಳನ್ನು ಕೈಗೊಂಡರೂ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಜೊತೆಗೆ ನಿರುದ್ಯೋಗದ ಆತಂಕವೂ ಸೇರಿಕೊಂಡು ಕಿಂಕರ್ತವ್ಯವಿಮೂಢರಾಗುವಂತಹ ಸ್ಥಿತಿಯನ್ನು ತಂದೊಡ್ಡಿದೆ.
೨೦೨೩-೨೪ನೇ ಸಾಲಿಗೆ ಆರ್‌ಬಿಐ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಶೇ.೭-೭.೩ಕ್ಕೆ ನಿಗದಿಪಡಿಸಿರುವುದು ಸಮಾಧಾನಕರ ಸಂಗತಿ. ಜನಪ್ರಿಯ ಕಾರ್ಯಕ್ರಮಗಳನ್ನು ಕೊಡುವುದರ ಜೊತೆಗೆ ಗ್ರಾಮೀಣ ಬೇಡಿಕೆ ಮತ್ತು ಆದಾಯ ವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಇಳಿಕೆಯಾಗಿರುವುದು, ಸೇವಾ ರಫ್ತು ವಹಿವಾಟು ಹೆಚ್ಚಿರುವುದರಿಂದ ಅಂತಾರಾಷ್ಟ್ರೀಯ ವ್ಯಾಪಾರದ ಚಾಲ್ತಿ ಖಾತೆ ಕೊರತೆ(ಕ್ಯಾಡ್) ಒಟ್ಟು ಜಿಡಿಪಿಯ ಶೇ.೧.೩ಕ್ಕೆ ಇಳಿಯುವ ಮುನ್ಸೂಚನೆ ದೊರೆತಿರುವುದು ಒಳ್ಳೆಯ ಬೆಳವಣಿಗೆ. ತೆರಿಗೆ ಮತ್ತಿತರ ಬಾಬ್ತುಗಳ ಮೂಲಕ ಬರುವ ಆದಾಯ ತೃಪ್ತಿಕರವಾಗಿರುವುದರಿಂದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.೫.೯ಕ್ಕೆ ಸೀಮಿತಗೊಳಿಸಲು ಅನುಕೂಲ ವಾಗಲಿದೆ.
ನಕಾರಾತ್ಮಕ ಬೆಳವಣಿಗೆ
ಇಷ್ಟೆಲ್ಲಾ ಒಳ್ಳೆ ಸುದ್ದಿಗಳ ನಡುವೆಯೂ ಕೆಲವು ನಕಾರಾತ್ಮಕ ಬೆಳವಣಿಗೆಗಳು ಸರಕಾರದ ಹಣೆಯ ಮೇಲೆ ಚಿಂತೆಯ ನೆರಿಗೆಗಳು ಮೂಡುವಂತೆ ಮಾಡಿವೆ. ಇತ್ತೀಚೆಗೆ ಪ್ರಕಟವಾದ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಗ್ರಾಹಕ ಬಾಳಿಕೆ ವಸ್ತುಗಳು(ಶೇ.-೫.೪), ಗ್ರಾಹಕ ಬಾಳಿಕೇತರ ವಸ್ತುಗಳು(ಶೇ.-೩.೬) ಸೇರಿದಂತೆ ಕೆಲವು ವಲಯಗಳು ಋಣಾತ್ಮಕ ಬೆಳವಣಿಗೆ ದರವನ್ನು ದಾಖಲಿಸಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೇಡಿಕೆ ಗಣನೀಯವಾಗಿ ಕುಸಿದಿರುವುದನ್ನು ಎತ್ತಿ ತೋರಿಸಿದಂತಾಗಿದೆ. ೨೦೨೩ರ ಮುಂಗಾರು ಮತ್ತು ಹಿಂಗಾರು ಎರಡೂ ಕೈ ಕೊಟ್ಟಿರುವುದು ಕೃಷಿ ಪ್ರಧಾನವಾಗಿರುವ ಗ್ರಾಮೀಣ ಅರ್ಥವ್ಯವಸ್ಥೆಗೆ ಮರ್ಮಾಘಾತವಾದಂತಾಗಿದೆ. ಇದರಿಂದ ಕೃಷಿ ಕ್ಷೇತ್ರದ ಬೆಳವಣಿಗೆ ಕುಸಿಯುವ ಸಾಧ್ಯತೆ ಇದ್ದು, ಗ್ರಾಮೀಣರ ಆದಾಯ ಇಳಿಮುಖವಾಗುವ ಭೀತಿ ಉದ್ಭವವಾಗಿದೆ. ಮುಖ್ಯವಾಗಿ ಇದರ ಬಿಸಿ ತಟ್ಟಿದ್ದು ಎಫ್‌ಎಂಸಿಜಿ ವಲಯಕ್ಕೆ. ಹೀಗಾಗಿ ಕಳೆದ ಸಾಲಿನ ನವೆಂಬರ್ ಹೊತ್ತಿಗೆ ಗ್ರಾಮೀಣ ಭಾಗದಲ್ಲಿ ಎಫ್‌ಎಂಸಿಜಿ ಕಂಪನಿಗಳ ಮಾರಾಟ ಪ್ರಮಾಣ ಶೇ.೯.೬ರಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಕೇವಲ ಎಫ್‌ಎಂಸಿಜಿ ಮಾತ್ರವಲ್ಲ ಆಟೋಮೊಬೈಲ್, ರೀಟೇಲ್ ಉದ್ಯಮಗಳ ಸಾಧನೆಯೂ ಅಷ್ಟಕ್ಕಷ್ಟೇ.
ನೂರಾನೆ ಬಲ
ಮುಖ್ಯವಾಗಿ ಈಗಿನ ಪ್ರಬಲ ಸವಾಲು ಏನೆಂದರೆ ಹಳಿ ತಪ್ಪಿರುವ ಗ್ರಾಮೀಣ ಬೇಡಿಕೆಯನ್ನು ಪುನಶ್ಚೇತನಗೊಳಿಸುವುದು. ಇದಕ್ಕಾಗಿ ಬಜೆಟ್‌ನಲ್ಲಿ ಮನರೇಗಾಕ್ಕೆ ಅನುದಾನ ಹೆಚ್ಚಿಸಬೇಕಿದೆ. ಸಕಾಲಕ್ಕೆ ಬೆಳೆ ವಿಮೆ, ಬರ ಪರಿಹಾರ ಹಣ ಬಿಡುಗಡೆ ಮಾಡಬೇಕಿದೆ. ಅಂದಾಗ ಮಾತ್ರ ಗ್ರಾಮೀಣ ಅರ್ಥವ್ಯವಸ್ಥೆ ಕೊಂಚ ಮಟ್ಟಿಗೆ ಬಿಡುಗಡೆಯ ನಿಟ್ಟುಸಿರು ಬಿಟ್ಟೀತು. ಹಣದುಬ್ಬರದ ವಿಚಾರವೂ ಅಷ್ಟೇ. ಸರಕು ಮತ್ತು ಸೇವೆಗಳ ಸಮರ್ಪಕ ಪೂರೈಕೆಗೆ ಯಾವ ರೀತಿಯ ಮಾರ್ಗೋಪಾಯ ರೂಪಿಸುವರೋ ಕಾದು ನೋಡಬೇಕಿದೆ. ಈಗಿನ ಪರಿಸ್ಥಿತಿ ನೋಡಿದರೆ ಹಣದುಬ್ಬರವನ್ನು ಪಳಗಿಸಲು ನೂರಾನೆ ಬಲವೇ ಬೇಕು. ಅಷ್ಟರಮಟ್ಟಿಗೆ ಅದು ಬಂಡೆಯಂತೆ ಅಲುಗಾಡದೆ ನಿಂತಿದೆ. ಹೀಗಾಗಿ ಮೊದಲು ಎರಡಂಕಿ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವ ಈ ಬಂಡೆಯನ್ನು ನಿವಾರಿಸಿಕೊಳ್ಳಲೇಬೇಕು.
ಕಳೆದೊಂದು ವರ್ಷದಿಂದ ಅರ್ಥವ್ಯವಸ್ಥೆಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಚಟುವಟಿಕೆ ಸ್ಥಗಿತಗೊಂಡಿವೆ. ಕಂಪನಿಗಳು ವಿಸ್ತರಣಾ ಯೋಜನೆಗಳನ್ನು ಮುಂದೂಡಿವೆ. ಐಟಿ ಕ್ಷೇತ್ರದ ಮಂದಗತಿಯ ಪ್ರಗತಿಯ ಕಾರಣ ಕಂಪನಿಗಳು ನೂರಾರು ಮಂದಿಗೆ ಲೇಆಫ್ ನೀಡಿವೆ. ಸರಕಾರದ ಮಟ್ಟದಲ್ಲಿಯೂ ನೇಮಕಾತಿ ಚಟುವಟಿಕೆ ಮಂದಗತಿಯಲ್ಲಿದೆ. ಆದ್ದರಿಂದ ಉದ್ಯೋಗ ನಷ್ಟ ಹೆಚ್ಚಾಗಿದ್ದು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಮೊದಲು ಬಂಡವಾಳ ಹೂಡಿಕೆ ಚಟುವಟಿಕೆಗೆ ಉತ್ತೇಜನ ನೀಡಬೇಕಿದೆ. ಸದ್ಯಕ್ಕೆ ಕೇಂದ್ರ ಸರಕಾರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಹೆಚ್ಚಿಸಿದ್ದರೂ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಗೆ ನೆರವಾಗುತ್ತಿಲ್ಲ. ಇದು ಕೈಗೂಡಬೇಕಾದರೆ ಖಾಸಗಿ ಬಂಡವಾಳ ಹೂಡಿಕೆಯೂ ಹೆಚ್ಚಾಗಬೇಕು. ಜೊತೆಗೆ ಮಷೀನ್ ಲರ್ನಿಂಗ್, ಬ್ಲಾಕ್‌ಚೈನ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಐಒಟಿಗಳಂತಹ ನೂತನ ತಂತ್ರಜ್ಞಾನಗಳು ಜನಪ್ರಿಯವಾಗಿದ್ದು, ಅವುಗಳ ಮೇಲಿನ ಆರೋಪಗಳೇನೇ ಇರಲಿ ಹೊಸ ಮಾದರಿಯ ಉದ್ಯೋಗ ಸೃಷ್ಟಿ ಮಾಡುವ ತಾಕತ್ತು ಹೊಂದಿವೆ ಎಂಬುದು ಐಟಿ ತಜ್ಞರ ಅಂಬೋಣ. ಹೀಗಾಗಿ ಬಜೆಟ್‌ನಲ್ಲಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರುದ್ಯೋಗದ ಬವಣೆ ನಿವಾರಿಸಲು ಹೊಸ ಹೆಜ್ಜೆ ಇಡಬೇಕಿದೆ.