ಹನುಮ ಧ್ವಜ ತೆರವು ಬೆನ್ನಲ್ಲೇ ಭಟ್ಕಳದಲ್ಲಿ ಭಗವಾಧ್ವಜ ತೆರವು
ಭಟ್ಕಳ: ತಾಲೂಖಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಠರಾವು ಮಾಡಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ವೃತ್ತ ಹಾಗೂ ಅದಕ್ಕೆ ಹಾರಿಸಲಾಗಿದ್ದ ಭಗವಾಧ್ವಜವನ್ನು ಗ್ರಾಮ ಪಂಚಾಯತ್ ಪೊಲೀಸರ ನೆರವಿನಿಂದ ಜೆಸಿಬಿ ಬಳಸಿ ತೆಗೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯದಲ್ಲಿ ಹನುಮ ಧ್ವಜ ತೆಗೆದಿರುವ ಕುರಿತು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಭಟ್ಕಳದ ತೆಂಗಿನಗುಂಡಿಯಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಸರ್ಕಲ್ ತೆರವುಗೊಳಿಸಲು ಮುಂದಾದ ಹಿಂದೂ ವಿರೋಧಿ ಸರಕಾರದ ವಿರುದ್ಧ ಬಿಜೆಪಿಗೆ ಇನ್ನೊಂದು ಅಸ್ತ್ರ ದೊರೆತಂತಾಗಿದ್ದು ನೂರಾರು ಕಾರ್ಯಕರ್ತರ ಹೋರಾಟದ ಫಲವಾಗಿ ತೆರವುಗೊಳಿಸಿದ್ದ ಸರ್ಕಲ್‌ನ್ನು ಮತ್ತೆ ಪುನಃ ನಿರ್ಮಾಣ ಮಾಡಿ ಭಗವಾಧ್ವಜವನ್ನು ಹಾರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷೀಕರಿಸಿದರು.
ಈ ಸಂದರ್ಭದಲ್ಲಿ ಒಂದು ಹಂತದಲ್ಲಿ ಪಿಡಿಒ ಅವರೇ ತಾವು ತೆರವುಗೊಳಿಸುವಂತೆ ಹೇಳಿಲ್ಲ ಎನ್ನುವ ಹೇಳಿಕೆಯೂ ಕೂಡಾ ಅವರಿಗೆ ಪುನರ್ ನಿರ್ಮಾಣಕ್ಕೆ ಅವಕಾಶವಾಯಿತು ಎನ್ನಲಾಗಿದ್ದು, ಒಟ್ಟಾರೆ ಬೆಳಿಗ್ಗೆಯಿಂದ ಸಂಜೆಯ ತನಕ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ಗೊಂದಲ ಉಂಟಾಗಿರುವುದಂತೂ ಸತ್ಯ. ಅನಾವಶ್ಯಕವಾಗಿ ಯಾವುದೇ ತೊಂದರೆ ಇಲ್ಲದಿದ್ದರೂ ಸರ್ಕಲ್ ತೆರವುಗೊಳಿಸುವಂತೆ ಹೇಳಿದ ಗ್ರಾಮ ಪಂಚಾಯತ್ ಅಧಿಕಾರಿಯ ಎಡವಟ್ಟು ನೀತಿಯಿಂದಾಗಿ ಇಡೀ ದಿನ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು.
ಗ್ರಾಮ ಪಂಚಾಯತ್ ತೆರವುಗೊಳಿಸುವ ಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ ಹೆಬಳೆ ಗ್ರಾಮ ಪಂಚಾಯತ್ ಎದರು ನೂರಾರು ಹಿಂದೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪ್ರತಿಭಟನೆ ಆರಂಭಿಸಿದರು. ಗ್ರಾಮ ಪಂಚಾಯತ್‌ನಲ್ಲಿಯೇ ಠರಾವು ಮಾಡಿ ಹಾಕಲಾಗಿದ್ದ ವೀರ ಸಾವರ್ಕರ್ ವೃತ್ತವನ್ನು ತೆರವುಗೊಳಿಸಿದ್ದಲ್ಲದೇ ಭಗವಾಧ್ವಜವನ್ನು ತೆಗೆದು ಹಾಕಿರುವುದನ್ನು ವಿರೋಧಿಸಿ, ಸರಕಾರದ ವಿರುದ್ಧ, ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಮುಖಂಡ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಅವರು ಪಿ.ಡಿ.ಒ. ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವೀರ ಸಾವರ್ಕರ್ ವೃತ್ತವನ್ನು ಗ್ರಾಮ ಪಂಚಾಯತ್ ಪರವಾನಿಗೆಯಿಂದಲೇ ನಿರ್ಮಾಣ ಮಾಡಿ ಕಟ್ಟೆ ಕಟ್ಟಿ ಹಾಕಲಾಗಿದ್ದು ಗ್ರಾಮ ಪಂಚಾಯತ್ ಮುಂದಾಗಿ ಒಡೆದು ಹಾಕುತ್ತದೆ ಎಂದರೆ ಏನಿದರ ಅರ್ಥ. ತಮ್ಮ ಪಂಚಾಯತ್ ಪರವಾನಿಗೆಗೆ ಕಾಸಿನ ಕಿಮ್ಮತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿ ಏನು ನಡೆಸಲಿಕ್ಕೆ ಹೊರಟಿದ್ದೀರಿ ಎಂದು ಪ್ರಶ್ನಿಸಿದರು.