ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹರಿಪಾದ ವಿನಮ್ರಧಿಯಾ ಸತತ

04:54 AM Oct 24, 2024 IST | Samyukta Karnataka

ಭಗವಂತನ ಪಾದಕಮಲಗಳನ್ನು ಆಶ್ರಯಿಸಬೇಕು ಎಂದು ಸನಾತನ ಧರ್ಮದ ಪ್ರತಿಯೊಂದು ಗ್ರಂಥ, ಪುರಾಣಗಳಲ್ಲಿ ಉಲ್ಲೇಖವಿದೆ. ಭಗವಂತನ ವಿವಿಧ ರೂಪದ ಚಿಂತನೆಯೇ ನಮಗೆ ವಿಶೇಷ ಸದ್ಭಾವನೆ ಕೊಡುತ್ತದೆ ಹಾಗೂ ಭಗವಂತನ ಪಾದ ಚಿಂತನೆ, ಪಾದ ಸೇವೆಯಿಂದ ವಿಶೇಷವಾದ ಭಕ್ತಿ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿಕೊಟ್ಟಿವೆ. ಹಾಗಾದರೆ ಸರ್ವೋತ್ತಮನಾದ ಶ್ರೀ ಮಹಾವಿಷ್ಣುವಿನ ಪಾದದಲ್ಲಿ ಏನಿದೆ ಎಂದು ಚಿಂತಿಸಿದಾಗ, ಭಾಗವತ ಪುರಾಣದ ತೃತೀಯ ಸ್ಕಂದದಲ್ಲಿ ದೇವರು ಯಾವ ಯಾವ ಚಿಹ್ನೆಗಳನ್ನು ಪಾದದಲ್ಲಿ ಧಾರಣೆ ಮಾಡಿದ್ದಾನೆ ಎಂದು ತಿಳಿಸಲಾಗಿದೆ.
ಸಂಚಿಂತಯೇತ್ ಭಾಗವತಃ ಚರಣಾರವಿಂದಂ
ವಜ್ರಾಂಕುಶ-ಧ್ವಜ-ಸರೋರುಹ-ಲಾಂಛನಾಢ್ಯಮ್
ಉತ್ತುಂಗ-ರಕ್ತ-ವಿಲಸನ್-ನಖ-ಚಕ್ರವಾಲ-
ಜ್ಯೋತ್ಸಾನಭಿಃ ಆಹತಮಃ ಹೃದಯಾಂಧಕಾರಂ
ಶ್ರೀಮದ್ಭಾಗವತದಲ್ಲಿ ತಿಳಿಸಿದಂತೆ ದೇವರ ಪಾದ ಶಂಖ, ಚಕ್ರ, ಗದಾ, ಪದ್ಮ ಇತ್ಯಾದಿ ದಶಾವತಾರದಲ್ಲಿ ಧಾರಣೆ ಮಾಡಿದ ಆಯುಧಗಳ ರೇಖೆಗಳು, ಜೊತೆಗೆ ವಿಶೇಷವಾಗಿ ಧ್ವಜ, ವಜ್ರ, ಅಂಕುಶ, ರೇಖೆ ಗಳಿಂದ ಯುಕ್ತವಾಗಿದೆ. ಶ್ರೀಮನ್ಮಹಾವಿಷ್ಣುವಿನ ಎಲ್ಲಾ ಅವತಾರಗಳಲ್ಲೂ ಪಾದದಲ್ಲಿ ಇರುವ ಚಿಹ್ನೆಗಳು ಮಾತ್ರ ಯಾವುದೇ ವ್ಯತ್ಯಾಸವಿಲ್ಲ ಕಾರಣ ಎಲ್ಲವೂ ತನ್ನದೇ ರೂಪ ಎಂದು ತೋರಿದ ಹೀಗೆ ಪಾದದಲ್ಲಿ ಇರುವ ರೇಖೆಗಳು ಒಂದೇ ರೀತಿಯಲ್ಲಿ ಇರುವುದೇ ದೇವರ ಪಾದರೇಖಾ ವಿಶೇಷ.
ದೇವರು ಪಾದದಲ್ಲಿ ಧ್ವಜ ರೇಖೆ ಧಾರಣೆ ಯಾಕೆ ಮಾಡಿದ ಅಂದರೆ, ಯಾರು ಭಗವಂತನ ಪಾದದಲ್ಲಿರುವ ಧ್ವಜರೇಖಾ ಚಿಂತನೆ ಮಾಡುತ್ತಾರೋ ಅವರನ್ನು ಧ್ವಜದಂತೆ ಉತ್ತಮವಾದ ಸ್ಥಿತಿಯಲ್ಲಿ ಇಟ್ಟಿರುತ್ತಾನೆ. ಅದೇ ರೀತಿ ಭಗವಂತನ ಪಾದದಲ್ಲಿರುವ ಅಂಕುಶ ರೇಖೆ ಚಿಂತನೆ ಮಾಡಿದರೆ, ಮನಸ್ಸು ಎಂಬ ದುಷ್ಟ ಆನೆ ದುರ್ವಿಷಯಗಳಿಗೆ ಹೋಗದದಂತೆ ಅಂಕುಶ ಹಾಕಿ, ಸದ್ಧರ್ಮದಲ್ಲಿ ಇಡುತ್ತಾನೆ. ಇನ್ನು ದೇವರ ಪಾದದಲ್ಲಿರುವ ವಜ್ರ ರೇಖೆ ಧ್ಯಾನ ಮಾಡಿದರೆ, ವಜ್ರಾಯುಧವು ಪರ್ವತಗಳನ್ನು ಪುಡಿ ಮಾಡಿದಂತೆ, ನಮ್ಮ ಪಾಪ ಪರ್ವತಗಳನ್ನು ವಜ್ರರೇಖಾ ಚಿಂತನೆ ಪುಡಿ ಪುಡಿ ಮಾಡುತ್ತದೆ. ಇನ್ನು ಉಗುರಿನ ತುದಿಯಲ್ಲಿ ಚಂದ್ರ ಮಂಡಲದಂತೆ ಕಾಂತಿ ತುಂಬಿದೆ ಯಾರು ಭಗವಂತನ ನಖ ಚಂದ್ರಿಕಾ ಚಿಂತನೆ ಮಾಡುತ್ತಾರೋ ಅವರ ಮನಸ್ಸು ಚಂದಿರನಂತೆ ತಣ್ಣನೆಯ ವಾತಾವರಣದ, ನೆಮ್ಮದಿಯಿಂದ ಇರಲು ಹಾಗು ಶ್ರೀ ಹರಿಯ ಧ್ಯಾನದಲ್ಲಿ ಮನಸ್ಸನ್ನು ನಿಲ್ಲಿಸಲು ಪ್ರೇರೇಪಿಸುತ್ತಾನೆ ಎಂದು ಶ್ರೀಮದ್ಭಾಗವತದ ಕಪಿಲತತ್ವದಲ್ಲಿ ತಿಳಿಸಿಕೊಟ್ಟಿದ್ದಾರೆ.
ಶ್ರೀ ರಾಮನ ಪಾದುಕೆಗಳನ್ನ ಭಕ್ತಿಯಿಂದ ಸೇವೆ ಮಾಡಿ ರಾಜ್ಯವನ್ನು ಆಳಿದ ಭರತ. ಶ್ರೀ ರಾಮನ ಪಾದ ಸೋಕಿ ಶಿಲೇಯಾಗಿ ಇರುವ ಅಹಲ್ಯೆ ತನ್ನ ರೂಪವನ್ನು ಪಡೆದಳು. ಶ್ರೀಕೃಷ್ಣನ ಪಾದದಲ್ಲಿರುವ ಚಿಹ್ನೆಗಳು ಕಾಳಿಂಗನ ರಕ್ಷಿಸಿತು. ಶ್ರೀ ಕೃಷ್ಣನ ಪುಟ್ಟಪಾದದ ಚಿಹ್ನೆ ನೋಡಿ, ಅಕ್ರೂರ ತನ್ನ ರಥದಿಂದ ಇಳಿದು ಗೋಕುಲದ ಮಣ್ಣಲ್ಲಿ ಹೊರಳಿ ಸೇವೆಮಾಡಿದ. ಅರ್ಜುನ ಶ್ರೀಕೃಷ್ಣನ ಪಾದ ಹತ್ತಿರ ಕುಳಿತು ಕೃಷ್ಣನನ್ನೇ ಪಡೆದ. ಶ್ರೀ ವಿಷ್ಣುಪಾದ ದಿಂದ ಗಯಾಸುರನ ಉದ್ಧಾರವಾಯ್ತು. ಶ್ರೀ ವಿಷ್ಣು ಪಾದ ನಖದಿಂದ ಹುಟ್ಟಿರುವಳು ಗಂಗೆ (ವಿಷ್ಣುಪದಿ). ಆದಕಾರಣ ಗಂಗೆ ನದಿಗಳಲ್ಲಿ ಶ್ರೇಷ್ಠ. ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ತನ್ನ ಪಾದದಿಂದ ಪಾತಾಳಕ್ಕೆ ತುಳಿದು ನಿಗ್ರಹಮಾಡಿದ. ಅವನಿಗೆ ಮುಂದಿನ ಇಂದ್ರ ಪದವಿಕೊಟ್ಟ.
ಪರಮಾತ್ಮನ ಅವಯವಗಳಲ್ಲಿ ಯಾವುದೇ ಭೇದ ಇಲ್ಲ. ಆದರೆ ಪರಮಾತ್ಮನ ಪಾದದಿಂದ ನೆಡೆದಿರುವ ವಿಶೇಷ ಕ್ರಿಯೆಗಳು ಸ್ಮರಿಸಿ ದೇವರ ಪಾದಸೇವೆ ಮಾಡಬೇಕು. ಧರ್ಮಗ್ರಂಥಗಳು/ಆಚಾರ್ಯರು ಸಾಮಾನ್ಯವಾಗಿ ದೇವರ ಕೈ ಅಥವಾ ಮುಖದಲ್ಲಿ ಆಶ್ರಯ ಪಡೆಯಲು ನಮಗೆ ಸೂಚಿಸುವುದಿಲ್ಲ. ಬದಲಾಗಿ ಭಗವಂತನ ಪಾದಕಮಲದಲ್ಲಿ ಶರಣಾಗತಿ ಬೇಡಲು ಸೂಚಿಸುತ್ತಾರೆ. ಕಾರಣ ಭಗವಂತನ ಪಾದ ಚಿಂತನೆ ಮಾತ್ರದಿಂದ, ದೇವರು ಪ್ರತಿಯೊಬ್ಬರನ್ನು ರಕ್ಷಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ.

Next Article