ಹರಿಭಕ್ತರೆದುರು ರಾವಣನಂಥವರು ನಿಲ್ಲಲುಂಟೇ..?
ಹನುಮಂತ ಮತ್ತು ಕಪಿಸೈನ್ಯಕ್ಕೆ ಸ್ವಾಮಿ ಶ್ರೀರಾಮ. ಶ್ರೀರಾಮನಲ್ಲಿ ಅಚಲ ಭಕ್ತಿ. ಕಪಿಯಾಗಿದ್ದರೂ ನಿಷ್ಠೆ ಮತ್ತು ಭಕ್ತಿಯನ್ನು ಪ್ರಶ್ನೆ ಮಾಡುವಂತಿಲ್ಲ. ಶ್ರೀರಾಮನ ಎದುರು ರಾವಣ ಯುದ್ಧ ಸಾರಿದಾಗ ಸುಸಜ್ಜಿತ ಸೈನ್ಯದೆದುರು ಕಪಿ ಸೈನ್ಯವು ನಿಷ್ಠೆಯಿಂದ ಜಯವನ್ನು ತಂದುಕೊಡಲು ಕಾರಣವಾಯಿತು.
ಅತಿಬಲಿಷ್ಠನಾದ ರಾವಣನು ಗಜ, ಗವಾಕ್ಷ, ಗವಯ, ವೃಷ ಮೊದಲಾದ ಕಪಿಗಳ ಮೇಲೆ ಯುದ್ಧ ಮಾಡಿದನು. ಮೈಂದ, ವಿವಿಧ, ಜಾಂಬವಂತರನ್ನೆಲ್ಲ ನೆಲಕ್ಕುರುಳಿಸಿದನು. ಸುಗ್ರೀವನ ಕುತ್ತಿಗೆಗೆ ಬಾಣಪ್ರಯೋಗಮಾಡಿ ಅವನನ್ನೂ ಕೆಡವಿದನು. ಇದನ್ನು ನೋಡಿ ಸಹಿಸಲಾಗದ ಹನುಮಂತನು ಹಾರಿ ಒಮ್ಮೆ ರಾವಣನ ಎದೆಗೆ ಮೆಲ್ಲನೆ ಗುದ್ದಿದನು. ಆಗ ರಾವಣನ ಎದೆಯಲ್ಲಿ ರಕ್ತ ಸರೋವರವೇ ನಿರ್ಮಾಣವಾಯಿತು.
ಹತ್ತು ಮುಖಗಳಿಂದ ರಕ್ತವನ್ನು ಕಾರಿ ಮೂರ್ಛಿತನಾದನು. ಎದ್ದ ಮೇಲೆ ಹನುಮಂತನ ಶಕ್ತಿಯನ್ನು ಪ್ರಶಂಸೆ ಮಾಡಿದನು. ಆಗ ಹನುಮಂತನ ಎದೆಗೆ ರಾವಣನು ಗುದ್ದಿ ಓಡಿಹೋಗಲು ಪ್ರಾರಂಭ ಮಾಡಿದನು. ನೀಲ ಎಂಬ ಕಪಿಯು ರಾವಣನ ರಥದ ಮೇಲೆ ಹಾರಿದನು. ಅವನ ಧ್ವಜದ ಮೇಲೆ ಕುಣಿದನು. ಕುದುರೆಗಳ ಮೇಲೆ ರಥಗಳ ಮೇಲೆ ಅಷ್ಟೇ ಅಲ್ಲದೇ ಅವನ ಹತ್ತುತಲೆಗಳ ಮೇಲೆ ಒಂದೇ ಸಮನೆ ಕುಪ್ಪಳಿಸಲು ಪ್ರಾರಂಭ ಮಾಡಿದನು. ಸಿಟ್ಟುಗೊಂಡ ರಾವಣನು ಉಪಾಯ ಕಾಣದೇ ಆಗ್ನೇಯಾಸ್ತ್ರವನ್ನು ನೀಲನ ಮೇಲೆ ಪ್ರಯೋಗಿಸಿದನು. ಆದರೆ, ಅವನು ಅಗ್ನಿಯ ಅವತಾರನಾದ್ದರಿಂದ ಮೃತನಾಗಲಿಲ್ಲ.
ರಾವಣ-ಲಕ್ಷ್ಮಣರ ಯುದ್ಧ: ರಾವಣನು ಶ್ರೀರಾಮನಿರುವೆಡೆಗೆ ಯುದ್ಧಕ್ಕಾಗಿ ಹೊರಟಿದ್ದಾನೆ. ಲಕ್ಷ್ಮಣನು ರಾವಣನಿಗೆ ಮುಂದೆ ತೆರಳದಂತೆ ತಡೆದಿದ್ದಾನೆ. ತಡೆಯುತ್ತಿರುವ ಲಕ್ಷ್ಮಣನ ಮೇಲೆ ಬ್ರಹ್ಮನಿಂದ ಕೊಡಲ್ಪಟ್ಟ ಬಾಣವನ್ನು ಹಣೆಗೆ ಗುರಿಯಿಟ್ಟು ಹೊಡೆದೇ ಬಿಟ್ಟ. ಲಕ್ಷ್ಮಣ ಮೂರ್ಚ್ಛಿತನಾಗಿ ಬಿದ್ದ. ಶ್ರೀಹರಿಯ ಆವೇಶವು ಲಕ್ಷ್ಮಣನಲ್ಲಿ ಇದ್ದ ಕಾರಣ ತನ್ನ ಮೂಲರೂಪವನ್ನು ನೆನೆದ. ಆಗ ರಾವಣನಿಗೆ ಲಕ್ಷ್ಮಣನನ್ನು ಅಲುಗಾಡಿಸಲು ಕೂಡ ಸಾಧ್ಯವಾಗಲಿಲ್ಲ. ಇಪ್ಪತ್ತು ತೋಳುಗಳಿಂದ ಹಿಡಿದು ಬಲ ಹಾಕಿ ಎಳೆದರೂ ಭೂಮಿಯೇ ನಡುಗಿತು. ಲಕ್ಷ್ಮಣನ ಶರೀರ ಚಲಿಸಲಿಲ್ಲ. ಮೂಲ ರೂಪಿಯಾದ ಶೇಷನು ಸಮಗ್ರ ಭೂಮಿಯನ್ನು ಸಾಸಿವೆ ಕಾಳಿನಂತೆ ಧರಿಸಿರುವಾಗ ರಾವಣನು ಲೆಕ್ಕಕ್ಕೆ ಬಾರದ ವ್ಯಕ್ತಿಯಾಗಿದ್ದಾನೆ.
ಕೊನೆಗೂ ಲಕ್ಷ್ಮಣನಿಂದ ಸೋಲು ತಿಂದು ರಾವಣ ಮುನ್ನೆಡೆದ. ಲಕ್ಷ್ಮಣನ ಜೊತೆ ಯುದ್ಧಮಾಡಿದ್ದನ್ನು ಕಂಡ ಹನುಮಂತನು ಸಿಟ್ಟಿನಿಂದ ಹಾರಿ ಬಂದು ಎದೆಗೆ ಪುನಃ ಗುದ್ದಿದ. ರಾವಣನು ತನ್ನ ಇಪ್ಪತ್ತು ತೋಳುಗಳನ್ನು ಚೆಲ್ಲಿ ಹತ್ತು ಮುಖಗಳಿಂದಲೂ ರಕ್ತಕಾರಿ ಶವದಂತೆ ಬಿದ್ದು ಹೋದ. ಅದಕ್ಕೆ ಹರಿಭಕ್ತರೆದುರು ರಾವಣನಂಥವರು ನಿಲ್ಲಲುಂಟೇ…