ಹಸಿರು ವಿದ್ಯುತ್‌ಗೆ ಹೆಚ್ಚಿದ ಬೇಡಿಕೆ
ಕರ್ನಾಟಕದಲ್ಲಿ ಸರ್ಕಾರಿ ನಿಯಂತ್ರಿತ ವಿತರಣ ಕಂಪನಿಗಳ ಮೂಲಕ ವಿದ್ಯುತ್ ಪಡೆಯುವುದಲ್ಲದೆ ಮುಕ್ತ ಮಾರುಕಟ್ಟೆಯಲ್ಲೂ ವಿದ್ಯುತ್ ಖರೀದಿ ಮಾಡಬಹುದು. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಇದಕ್ಕೆ ಪ್ರತ್ಯೇಕದರ ಇರುತ್ತದೆ. ವಿದ್ಯುತ್ ಖರೀದಿ ಮಾರುಕಟ್ಟೆ ಪ್ರತ್ಯೇಕವಾಗಿದೆ. ಪ್ರತಿ ಗಂಟೆಗೂ ವಿದ್ಯುತ್ ಖರೀದಿ-ಮಾರಾಟ ನಿರಂತರ ನಡೆಯುತ್ತದೆ. ಇದರಲ್ಲಿ ಈಗ ಹಸಿರು ವಿದ್ಯುತ್‌ಗೆ ಬಹಳ ಬೇಡಿಕೆ ಬಂದಿದೆ.
ಸಾಮಾನ್ಯವಾಗಿ ಸೋಲಾರ್ ಸೇರಿದಂತೆ ಹಲವು ನವೀಕರಣ ವಿದ್ಯುತ್ ಮೂಲಗಳಿವೆ. ಇವುಗಳಲ್ಲಿ ಇಂಗಾಲಾಮ್ಲ ಬಿಡುಗಡೆಯಾಗುವುದಿಲ್ಲ. ಇದನ್ನು ಹಸಿರು ವಿದ್ಯುತ್ ಎಂದೂ ಕರೆಯುತ್ತಾರೆ. ಈಗ ವಿದ್ಯುತ್ ಮುಕ್ತ ಮಾರುಕಟ್ಟೆಯಲ್ಲಿ ಹಸಿರು ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಇದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿಗಳು. ಖಾಸಗಿ ಉದ್ಯಮಿಗಳು ಇದರಲ್ಲಿ ಹೆಚ್ಚು ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಇಡೀ ದೇಶದಲ್ಲಿ ಹಸಿರು ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಶೇ. ೩೦ರಷ್ಟು ಉತ್ಪಾದನೆ ಸಾಮರ್ಥ್ಯ ಪಡೆದಿದೆ. ಕರ್ನಾಟಕ ಹೊರತುಪಡಿಸಿದರೆ ಮಹಾರಾಷ್ಟ್ರ ಶೇ. ೧೪, ತಮಿಳುನಾಡು ಶೇ. ೧೧ರಷ್ಟು ಸೋಲಾರ್ ವಿದ್ಯುತ್ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಸೋಲಾರ್ ವಿದ್ಯುತ್ ಬಳಸುವ ಕೈಗಾರಿಕೆಗಳು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ಉತ್ಪಾದನೆಗೊಂಡ ಸೋಲಾರ್ ಇಲ್ಲೇ ಬಳಕೆಯಾಗುವುದರಿಂದ ಬೇರೆ ರಾಜ್ಯಕ್ಕೆ ರವಾನಿಸಬೇಕಾದ ಪರಿಸ್ಥಿತಿ ಬಂದಿಲ್ಲ. ಕೆಇಆರ್‌ಸಿ ಕೂಡ ಹೆಚ್ಚು ಸರ್ಚಾರ್ಜ್ ಅನ್ನು ಕೂಡ ಸೋಲಾರ್‌ಗೆ ಕಡಿಮೆ ಮಾಡಿದೆ. ಕ್ರೆಡಿಲ್ ಸಂಸ್ಥೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ. ಹೀಗಾಗಿ ಇನ್ನೂ ಹಲವು ಯೋಜನೆಗಳಲ್ಲಿ ರಾಜ್ಯದಲ್ಲಿ ತಲೆಎತ್ತಲಿವೆ. ಈ ವರ್ಷ ಮೊದಲ ೬ ತಿಂಗಳಲ್ಲಿ ಕರ್ನಾಟಕ ೩.೬ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಕಂಡಿದೆ. ಕಳೆದ ವರ್ಷ ಇದು ೧.೪ ಗಿಗಾವ್ಯಾಟ್ ಮಾತ್ರ ಇತ್ತು. ಕೆಲವು ಕಡೆ ಸೋಲಾರ್ ಜತೆ ಗಾಳಿಯಂತ್ರವನ್ನೂ ಅಳವಡಿಸಲಾಗಿದೆ. ಹೀಗಾಗಿ ನವೀಕರಣ ವಿದ್ಯುತ್ ನಿರಂತರ ಲಭಿಸಲು ಸಾಧ್ಯವಾಗಿದೆ. ಉತ್ತರ ಕರ್ನಾಟಕ ಇದಕ್ಕೆ ಹೇಳಿಮಾಡಿಸಿದ ತಾಣವಾಗಿದೆ. ಬಂಜರು ಭೂಮಿ ಇದಕ್ಕೆ ಉತ್ತಮ ಸ್ಥಳ. ಆಂಧ್ರದಲ್ಲಿ ಈಗ ಸೋಲಾರ್ ಹೆಚ್ಚಿನ ಪ್ರಮಾಣದಲ್ಲಿ ತಲೆ ಎತ್ತುತ್ತಿದೆ. ಮುಂದಿನ ದಿನಗಳಲ್ಲಿ ೨೩ ಗಿಗಾವ್ಯಾಟ್ ವಿದ್ಯುತ್ ಕರ್ನಾಟಕ ಸೇರಿದಂತೆ ರಾಜಾಸ್ತಾನ, ಆಂಧ್ರ, ಮಹಾರಾಷ್ಟ್ರ. ತಮಿಳುನಾಡು ರಾಜ್ಯಗಳಲ್ಲಿ ಉತ್ಪಾದನೆಗೊಳ್ಳಲಿದೆ.
ಈಗ ಸೋಲಾರ್ ಮಾರುಕಟ್ಟೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಬೇಕಿದೆ. ಇದಕ್ಕೆ ಪ್ರಮುಖ ಸಮಸ್ಯೆ ಭೂಮಿ. ಒಣ ಭೂಮಿ ಬೇಕು. ಅಲ್ಲಿ ಸೂರ್ಯನ ಕಿರಣಗಳು ಹೆಚ್ಚಿನ ಹೊತ್ತು ಲಭ್ಯವಿರಬೇಕು. ಕನಿಷ್ಠ ೬-೭ ಗಂಟೆ ಸೂರ್ಯನ ಶಾಖ ಲಭಿಸಬೇಕು. ಅಲ್ಲದೆ ವರ್ಷದಲ್ಲಿ ಎಷ್ಟು ದಿನ ಸೂರ್ಯ ಸಂಪೂರ್ಣವಾಗಿ ಲಭಿಸುತ್ತಾನೆ ಎಂಬುದು ಮುಖ್ಯ. ಇದನ್ನು ಅಧ್ಯಯನ ಮಾಡಲು ಪ್ರತ್ಯೇಕ ಸಂಸ್ಥೆ ಇದೆ. ಭೂಮಿ ಲಭಿಸಿದರೂ ಸಮೀಪದಲ್ಲಿ ವಿದ್ಯುತ್ ಮಾರ್ಗ ಇರಬೇಕು. ಇಲ್ಲದಿದ್ದಲ್ಲಿ ಉತ್ಪಾದಿತ ವಿದ್ಯುತ್ ಸಾಗಿಸುವುದಕ್ಕೆ ಹೆಚ್ಚು ಹಣ ಬೇಕಾಗುತ್ತದೆ. ವಿತರಣ ಕಂಪನಿಗಳ ವಿದ್ಯುತ್ ಮಾರ್ಗ ಸಮೀಪದಲ್ಲಿರುವುದು ಮುಖ್ಯ. ಎಲ್ಲಿ ಉತ್ಪಾದಿತ ವಿದ್ಯುತ್ ಇರುತ್ತದೋ ಅಲ್ಲಿ ಸಂಬಂಧಪಟ್ಟ ವಿದ್ಯುತ್ ಕಂಪನಿಗೆ ಕೊಟ್ಟು ಅದೇ ವಿದ್ಯುತ್ ಮತ್ತೊಂದು ಕಡೆ ನಮಗೆ ಬೇಕಾದ ಸ್ಥಳದಲ್ಲಿ ಪಡೆಯಬಹುದು. ಇದಕ್ಕೆ ನಿಗದಿತ ಶುಲ್ಕವನ್ನು ವಿತರಣ ಕಂಪನಿಗೆ ಕೊಡಬೇಕು. ೧೫ ರಾಜ್ಯಗಳಲ್ಲಿ ಸಗಟು ವಿದ್ಯುತ್ ಖರೀದಿ ದರ, ವಿದ್ಯುತ್ ಖರೀದಿ ಒಪ್ಪಂದ, ಮುಕ್ತ ಮಾರುಕಟ್ಟೆ ಮೇಲೆ ಸುಂಕ ಸೇರಿದಂತೆ ಹಲವು ವೆಚ್ಚಗಳಿವೆ. ಇದರಿಂದ ಸೋಲಾರ್ ಖರೀದಿ ದರ ನಿಗದಿಯಾಗುತ್ತದೆ. ಈ ರೀತಿ ಉತ್ಪಾದನೆಗೊಂಡ ವಿದ್ಯುತ್‌ನ್ನು ಬೇಡಿಕೆ ಇರುವ ಸ್ಥಳಕ್ಕೆ ರವಾನಿಸಿ ಅಲ್ಲಿ ಬ್ಯಾಟರಿಗಳಲ್ಲಿ ದಾಸ್ತಾನು ಮಾಡಿ ಬಳಸಬಹುದು. ಇದಕ್ಕೆ ಪಂಪ್ಡ್ ಸ್ಟೋರೇಜ್ ವ್ಯವಸ್ಥೆಗಿಂತ ಉತ್ತಮ. ಅಲ್ಲದೆ ವಿದ್ಯುತ್ ವಿತರಣ ನಷ್ಟವನ್ನು ಕಡಿಮೆ ಮಾಡಬಹುದು. ಈಗ ಬ್ಯಾಟರಿ ಮೂಲಕ ೨೧೯.೧ ಮೆಗಾವ್ಯಾಟ್ ದಾಸ್ತಾನು ಮಾಡಲು ಸಾಧ್ಯವಾಗಿದೆ.
ಹಸಿರು ಜಲಜನಕ
ಈಗ ವಿದ್ಯುತ್ ಉತ್ಪಾದನೆಗೆ ಜಲಜನಕವನ್ನೂ ಬಳಸಿಕೊಳ್ಳಬಹುದು. ನೀರನ್ನು ವಿಭಜಿಸಿದರೆ ಒಂದು ಅಂಶ ಆಮ್ಲಜನಕ, ಎರಡು ಅಂಶ ಜಲಜನಕ ಲಭಿಸುತ್ತದೆ. ಈ ಅಮ್ಲಜನಕವನ್ನು ವೈದ್ಯಕೀಯ ಉದ್ದೇಶಗಳಿಗೆ ಜಲಜನಕವನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು. ನೀರನ್ನು ವಿಭಜಿಸಿ ಜಲಜನಕ ಪಡೆಯಲು ಬೇರೆ ವಿದ್ಯುತ್ ಮೂಲ ಬಳಸಬಹುದು. ಅದರಿಂದ ವಾತಾವರಣಕ್ಕೆ ಇಂಗಾಲಾಮ್ಲ ಸೇರ್ಪಡೆಯಾಗುವುದು ಅನಿವಾರ್ಯ. ಆದರೆ ಜಲಜನಕ ವಿದ್ಯುತ್ ಉತ್ಪಾದನೆಗೆ ಸೋಲಾರ್ ವಿದ್ಯುತ್ ಬಳಸಿದರೆ ಅದು ಹಸಿರು ಜಲಜನಕವಾಗುತ್ತದೆ. ಇದನ್ನು ಮೋಟಾರು ವಾಹನದಿಂದ ಹಿಡಿದು ಎಲ್ಲೆಲ್ಲಿ ವಿದ್ಯುತ್ ಬಳಕೆ ಇದೆಯೋ ಅಲ್ಲೆಲ್ಲ ಪರ್ಯಾಯ ವಿದ್ಯುತ್ತಾಗಿ ಬಳಸಬಹುದು. ಎಫ್‌ಪಿಜಿ, ಸಿಎನ್‌ಜಿ ರೀತಿ ಜಲಜನಕ ಈಗಾಗಲೇ ಇಂಧನವಾಗಿ ಬಳಕೆ ಬಂದಿದೆ. ಕರ್ನಾಟಕದಲ್ಲಿ ಜಲಜನಕ ಉತ್ಪಾದನೆಗೆ ಬೇಕಾದ ಮಾನದಂಡವನ್ನು ಸಿದ್ಧಪಡಿಸಲಾಗಿದೆ. ಜಿಎಚ್೨ ಎಂಬ ಸಂಸ್ಥೆ ಇದಕ್ಕಾಗಿ ತಲೆಎತ್ತಿದೆ. ಜಲಜನಕ ಉತ್ಪಾದನೆ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಬೇಕಿದೆ. ಜಲಜನಕ ಸಾಗಣೆ ಸುಲಭದ ಕೆಲಸವಲ್ಲ. ಇದರ ಬಳಕೆ ಹೆಚ್ಚಾದಲ್ಲಿ ವಾತಾವರಣದಲ್ಲಿ ಇಂಗಾಲಾಮ್ಲ ಪ್ರಮಾಣವನ್ನು ಕಡಿಮೆ ಮಾಡಬಹುದು. ಮುಂಬರುವ ದಿನಗಳಲ್ಲಿ ಇಂಗಾಲಾಮ್ಲ ಹೊರಸೂಸುವ ಎಲ್ಲ ಕೈಗಾರಿಕೆ, ವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ಹೆಚ್ಚಿನ ದಂಡ ವಿಧಿಸುವುದು ಅನಿವಾರ್ಯವಾಗಲಿದೆ. ದೆಹಲಿ ನಗರದಲ್ಲಿ ಈಗ ಕಲುಷಿತ ವಾತಾವರಣ ಅಧಿಕಗೊಂಡಿದ್ದು, ಇಂಗಾಲಾಮ್ಲ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಜಲಜನಕ ಬಳಕೆ ಅಧಿಕಗೊಂಡಲ್ಲಿ ದೆಹಲಿಯ ಮೋಟಾರು ವಾಹನಗಳಿಂದ ಆಗುವ ಪರಿಸರ ಮಾಲಿನ್ಯವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಕರ್ನಾಟಕ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ. ಐಟಿ ಬಿಟಿ ಕಂಪನಿಗಳು ವಾತಾವರಣವನ್ನು ಕೆಡೆಸುವ ಕೆಲಸ ಮಾಡುವುದಿಲ್ಲ. ಆದರೆ ಇ ವೇಸ್ಟ್ ಅಧಿಕ. ನಮಗೆ ವಿದ್ಯುತ್ ಬೇಕು. ಅದರೊಂದಿಗೆ ಇಂಗಾಲಾಮ್ಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಬೇಕು. ಇದಕ್ಕೆ ಸಹಕಾರಿ ಸೋಲಾರ್ ಮತ್ತು ಜಲಜನಕ. ಮುಂದಿನ ದಿನಗಳಲ್ಲಿ ಇದಕ್ಕೆ ಬಂಗಾರದ ಬೆಲೆ ಬರಲಿದೆ. ಜಲಜನಕ ಉತ್ಪಾದನೆಯಿಂದ ಸಮಾಜದ ಮೇಲಾಗುವ ಪರಿಣಾಮ ಹಾಗೂ ಆರ್ಥಿಕ ಬದಲಾವಣೆಗಳ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ. ಹೊಸ ತಂತ್ರಜ್ಞಾನ ಬರುವಾಗ ಅದು ವರದಾನವಾಗುವ ಹಾಗೆ ಶಾಪವೂ ಆಗಬಹುದು. ಅದರಿಂದ ಅಧ್ಯಯನ ಅಗತ್ಯ.
ಇಂಗಾಲಾಮ್ಲಕ್ಕೆ ಮಿತಿ
ವಾತಾವರಣಕ್ಕೆ ಎಷ್ಟು ಇಂಗಾಲಾಮ್ಲ ಬಿಡಬಹುದು ಎಂಬುದಕ್ಕೆ ಮಾನದಂಡ ಇದೆ. ಹಸಿರು ಇಂಧನ ಎಂದರೆ ೧ ಕೆಜಿ ಜಲಜನಕ ಉತ್ಪಾದನೆಗೆ ಸರಾಸರಿ ೨ ಕೆಜಿ ಇಂಗಾಲಾಮ್ಲ ಬರಬಹುದು. ಇದನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುವುದು. ಕೇಂದ್ರ ಸರ್ಕಾರ ಈ ಮಾನದಂಡಗಳನ್ನು ನಿಗದಿಪಡಿಸಿ ಸೂಕ್ತ ಸುತ್ತೋಲೆಗಳನ್ನು ಹೊರಡಿಸಿದೆ.
ಮೋಟಾರು ವಾಹನ ಚಾರ್ಜಿಂಗ್
ಈಗ ಬ್ಯಾಟರಿ ಆಧರಿತ ವಿದ್ಯುತ್ ಕಾರುಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೋಲಾರ್ ರಿಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯ. ಬೆಂಗಳೂರು ವಿದ್ಯುತ್ ವಿತರಣ ಕಂಪನಿಗೆ ಆದ್ಯತೆ ನೀಡಿದ್ದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನೂ ಪಡೆದಿದೆ.