ಹಸೀನಾ ನಿರ್ಗಮನ-ಭಾರತದ ಮೇಲೇನು ಪರಿಣಾಮ?
ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ತನ್ನ ಸುರಕ್ಷತೆಗಾಗಿ ಸೋಮವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಹೊರನಡೆದರು. ಅವರ ನಿರ್ಗಮನದ ಬಳಿಕ, ಬಾಂಗ್ಲಾದೇಶದ ಭಾರತ ಸ್ನೇಹಿ ಸರ್ಕಾರ ಪತನವಾದುದರ ಕುರಿತು ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷೋದ್ಘಾರ ತುಂಬಿತ್ತು. ಪ್ರಧಾನಿ ರಾಜೀನಾಮೆಗೂ ಮುನ್ನ ಬಾಂಗ್ಲಾ ದೇಶದಾದ್ಯಂತ ವ್ಯಾಪಕ ಹಿಂಸಾಚಾರ ನಡೆದು, ೩೦೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು.
ಹಲವಾರು ವರ್ಷಗಳಿಂದ, ಭಾರತ ಶೇಖ್ ಹಸೀನಾ ಅವರಿಗೆ ನಿರಂತರ ಬೆಂಬಲ ಒದಗಿಸುತ್ತಿತ್ತು. ಹಸೀನಾ ಅಧಿಕಾರದಲ್ಲಿ ಇರದಿದ್ದಾಗಲೂ ಭಾರತ ಅವರಿಗೆ ಬೆಂಬಲ ನೀಡುತ್ತಿತ್ತು. ಅವರ ಸರ್ಕಾರ ಅಧಿಕಾರದಲ್ಲಿದ್ದಾಗ, ಅವರ ಕಠಿಣ ಕ್ರಮಗಳ ವಿರುದ್ಧ ಬಾಂಗ್ಲಾ ಜನತೆಯಿಂದ ವಿರೋಧಗಳು ವ್ಯಕ್ತವಾದಾಗಲೂ ಭಾರತ ಹಸೀನಾರನ್ನು ಬೆಂಬಲಿಸುತ್ತಿತ್ತು. ಆದರೆ, ಈ ವಾರವಂತೂ ಶೇಖ್ ಹಸೀನಾಗೆ ಭಾರತದ ಬೆಂಬಲ ಒಂದು ಗಂಭೀರ ತಿರುವು ಪಡೆದುಕೊಂಡಿತು. ಬಾಂಗ್ಲಾದೇಶದಲ್ಲಿ ಹಲವಾರು ವಾರಗಳ ಕಾಲ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ, ಪ್ರತಿಭಟನಾಕಾರರು ಹಸೀನಾರ ಅಧಿಕೃತ ನಿವಾಸಕ್ಕೆ ಲಗ್ಗೆ ಹಾಕಲು ಸಿದ್ಧತೆ ನಡೆಸಿದಾಗ ಅವರು ಆಗಸ್ಟ್ ೫ರಂದು ಭಾರತಕ್ಕೆ ಪಲಾಯನ ನಡೆಸಬೇಕಾಯಿತು.
೧೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶೇಖ್ ಹಸೀನಾ ಸರ್ಕಾರ ಕ್ಷಿಪ್ರವಾಗಿ ಪತನಗೊಂಡಿತು. ಇದರ ಪರಿಣಾಮವಾಗಿ, ಭಾರತ ತನ್ನ ಅತ್ಯಂತ ನಂಬಿಕಾರ್ಹ ಪ್ರಾದೇಶಿಕ ಮಿತ್ರ ರಾಷ್ಟ್ರ ಎಂದು ನಂಬಿರುವ ೧.೭ ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಅಧಿಕಾರದ ನಿರ್ವಾತ ಸೃಷ್ಟಿಯಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಗ್ಗಿಸಲು ಪ್ರಯತ್ನ ನಡೆಸುತ್ತಿದ್ದು, ಇದೂ ಸೇರಿದಂತೆ, ಭಾರತದ ಪ್ರಾದೇಶಿಕ ಯೋಜನೆಗಳಿಗೆ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಹಿನ್ನಡೆ ಉಂಟುಮಾಡಬಹುದು. ಅದರೊಡನೆ, ಭಾರತ ನಿರಂತರವಾಗಿ ಶೇಖ್ ಹಸೀನಾರಿಗೆ ಬೆಂಬಲ ನೀಡಿರುವುದೂ ಸಹ ಬಾಂಗ್ಲಾದೇಶದ ಜನರಲ್ಲಿ ಭಾರತದ ಕುರಿತು ಅಸಮಾಧಾನ ಮೂಡಲು ಕಾರಣವಾಗಬಹುದು.
ಇಲಿನಾಯ್ಸ್ ಸ್ಟೇಟ್ ಯುನಿವರ್ಸಿಟಿಯಲ್ಲಿರುವ ಬಾಂಗ್ಲಾದೇಶಿ ರಾಜಕೀಯ ತಜ್ಞರಾದ ಅಲಿ ರಿಯಾಜ್ ಅವರು ಭಾರತದ ನಿರಂತರ ಬೆಂಬಲ ಶೇಖ್ ಹಸೀನಾರನ್ನು ಅವರದೇ ಜನರ ಆಕ್ರೋಶದಿಂದಲೂ, ಜಾಗತಿಕ ಒತ್ತಡಗಳಿಂದಲೂ ರಕ್ಷಿಸಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ತೀರಾ ಕೆಟ್ಟ ಮಾನವ ಹಕ್ಕು ದಾಖಲೆ ಹೊಂದಿದ್ದ, ಎಲ್ಲ ದೇಶಗಳೂ ದೂರವಿಟ್ಟಿದ್ದ ಬಾಂಗ್ಲಾದೇಶಿ ಸರ್ಕಾರಕ್ಕೆ ನವದೆಹಲಿ ಮಾತ್ರ ಬೆಂಬಲ ಮುಂದುವರಿಸಿತ್ತು ಎಂದು ಅವರು ಹೇಳಿದ್ದಾರೆ.
ಶೇಖ್ ಹಸೀನಾ ಅವರು ಬಾಂಗ್ಲಾದೇಶ ಬಿಟ್ಟ ನಂತರ ತಲೆದೋರಿದ ಹಿಂಸಾಚಾರದ ಕುರಿತು ಭಾರತೀಯ ಅಧಿಕಾರಿಗಳು ಆತಂಕ ಹೊಂದಿದ್ದಾರೆ. ಸೋಮವಾರ ೧೩೦ಕ್ಕೂ ಹೆಚ್ಚು ಜನರು ಹತ್ಯೆಗೊಳಗಾಗಿದ್ದು, ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಹಿಂದೂಗಳು ದಾಳಿಗೆ ಗುರಿಯಾಗುತ್ತಿದ್ದಾರೆ ಎಂದಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ಮಾತನಾಡಿದ ಜೈಶಂಕರ್, ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗಮನಕ್ಕೆ ಬರುವ ತನಕವೂ ಭಾರತ ಆತಂಕ ಹೊಂದಿರಲಿದೆ ಎಂದಿದ್ದರು.
೧೪೦ ಕೋಟಿ ಜನಸಂಖ್ಯೆ ಮತ್ತು ೩.೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಭಾರತ, ಎರಡರಲ್ಲೂ ಒಟ್ಟು ದಕ್ಷಿಣ ಏಷ್ಯಾದ ಸಂಖ್ಯೆಗಿಂತಲೂ ದೊಡ್ಡದಾಗಿದೆ. ಆದರೆ, ನೆರೆಹೊರೆಯ ರಾಷ್ಟ್ರಗಳೊಡನೆ ಭಾರತದ ಸಂಬಂಧ ಸಂಕೀರ್ಣವಾಗಿದೆ. ಭಾರತ ದಕ್ಷಿಣ ಏಷ್ಯಾದ ರಾಷ್ಟçಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಗಳೊಡನೆ ಗಡಿ ಹಂಚಿಕೊಳ್ಳುತ್ತದೆ. ಇತಿಹಾಸ, ಸಹಕಾರ ಮತ್ತು ಒಂದಷ್ಟು ಉದ್ವಿಗ್ನತೆಗಳ ಆಧಾರದಲ್ಲಿ ಭಾರತ ಈ ರಾಷ್ಟ್ರಗಳೊಡನೆ ಆಪ್ತ ಸಾಂಸ್ಕೃತಿಕ ಬಂಧ ಮತ್ತು ಸಂಕೀರ್ಣ ರಾಜಕೀಯ ಸಂಬಂಧಗಳನ್ನು ಹೊಂದಿದೆ. ಇದೆಲ್ಲವೂ ಏಕಕಾಲದಲ್ಲಿ ದಕ್ಷಿಣ ಏಷ್ಯಾವನ್ನು ಭಾರತಕ್ಕೆ ಮಹತ್ವದ್ದೂ, ಸಂಕೀರ್ಣವೂ ಆಗಿಸಿವೆ.
ಬಹುತೇಕ ಭಾರತದಿಂದ ಸುತ್ತುವರಿಯಲ್ಪಟ್ಟಿರುವ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಮೂಲಭೂತವಾದ ಮತ್ತು ಚೀನಾದ ಪ್ರಭಾವದ ಕುರಿತು ಭಾರತ ಕಳವಳ ಹೊಂದಿದೆ. ಶೇಖ್ ಹಸೀನಾರ ಪ್ರಮುಖ ಎದುರಾಳಿ, ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಇಸ್ಲಾಮಿಕ್ ಮೂಲಭೂತವಾದದ ಕುರಿತು ಮೃದು ಧೋರಣೆ ಹೊಂದಿದೆ ಮತ್ತು ಚೀನಾದೊಡನೆ ಆತ್ಮೀಯ ಬಾಂಧವ್ಯ ಹೊಂದಿದೆ ಎಂದು ಭಾರತ ಅಭಿಪ್ರಾಯ ಪಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಮತ್ತು ಮಾಧ್ಯಮ ಸಂಸ್ಥೆಗಳು ಬಾಂಗ್ಲಾದೇಶದಲ್ಲಿ ತಲೆದೋರಿದ ದಂಗೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಅದು ಪಾಶ್ಚಾತ್ಯ ಪಿತೂರಿಯ ಪರಿಣಾಮವಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಬಿಎನ್‌ಪಿ ಭಾರತದೊಡನೆ ಸಮಸ್ಯಾತ್ಮಕ ಸಂಬಂಧ ಹೊಂದಿದ್ದು, ಭಾರತ ಬಾಂಗ್ಲಾದೇಶದ ಆಂತರಿಕ ರಾಜಕಾರಣದಲ್ಲಿ ಮಧ್ಯಪ್ರವೇಶ ನಡೆಸಿದೆ ಎಂದು ಆರೋಪಿಸಿದೆ. ಶೇಖ್ ಹಸೀನಾ ಭಾರತದ ಬೆಂಬಲದಿಂದಲೇ ಗೆಲುವು ಸಾಧಿಸುತ್ತಾ ಬಂದಿದ್ದಾರೆಂದು ಬಿಎನ್‌ಪಿ ಭಾವಿಸಿದೆ. ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಎನ್‌ಪಿ, ಜನವರಿಯಲ್ಲಿ ನಡೆದ ಚುನಾವಣೆಯನ್ನು ಬಹಿಷ್ಕರಿಸಿತ್ತು. ಹಸೀನಾ ಮರಳಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಮಾಲ್ಡೀವ್ಸನಲ್ಲಿ ಮೊಹಮದ್ ಮುಯಿಝು ಅವರ ರೀತಿಯಲ್ಲೇ ಬಿಎನ್‌ಪಿ ಸಹ ಇಂಡಿಯಾ ಔಟ್' ಆಂದೋಲನ ಆರಂಭಿಸಿತ್ತು. ಈ ಆಂದೋಲನ ಜನರಿಗೆ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಉತ್ತೇಜಿಸಿ, ಹಸೀನಾ ಸರ್ಕಾರಕ್ಕೆ ಸವಾಲಾಗಿತ್ತು. ಇದೇ ವೇಳೆ, ಬಿಎನ್‌ಪಿ ನಿಲುವುಗಳು ಜಮಾತ್ ಮತ್ತು ಹೆಫಾಜತ್ ಎ ಇಸ್ಲಾಮ್‌ನಂತಹ ತೀವ್ರಗಾಮಿ ಗುಂಪುಗಳಿಗೆ ಉತ್ತಮವೆಂಬಂತೆ ಕಂಡಿದ್ದವು. ಭಾರತ ಮತ್ತು ಶೇಖ್ ಹಸೀನಾರ ಸಂಬಂಧ ೧೯೭೧ರ ಬಾಂಗ್ಲಾದೇಶ ವಿಮೋಚನಾ ಚಳವಳಿಯಷ್ಟು ಹಿಂದಿನದಾಗಿದ್ದು, ಪ್ರತ್ಯೇಕತಾ ಚಳವಳಿ ನಡೆಸುತ್ತಿದ್ದ ಅವರ ತಂದೆ, ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಭಾರತ ಬೆಂಬಲ ಒದಗಿಸಿತ್ತು. ೧೯೭೫ರ ದಂಗೆಯಲ್ಲಿ, ತಂದೆ ಮತ್ತು ಬಹುತೇಕ ಕುಟುಂಬಸ್ಥರನ್ನು ಕಳೆದುಕೊಂಡ ೨೭ ವರ್ಷದ ಶೇಖ್ ಹಸೀನಾಗೆ ನವದೆಹಲಿಯಲ್ಲಿ ಆಶ್ರಯ ನೀಡಲಾಗಿತ್ತು. ೧೯೮೧ರಲ್ಲಿ ಬಾಂಗ್ಲಾದೇಶಕ್ಕೆ ಮರಳಿದ ಶೇಖ್ ಹಸೀನಾ, ಭಾರತದ ನೆಚ್ಚಿನ ಬಾಂಗ್ಲಾದೇಶಿ ನಾಯಕಿಯಾಗಿ ರೂಪುಗೊಂಡರು. ಪ್ರಾದೇಶಿಕ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ, ಮತ್ತು ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಗ್ಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಗೆ ಹಸೀನಾ ಮುಖ್ಯ ವ್ಯಕ್ತಿಯಾಗಿದ್ದರು. ಭಾರತ ಬಾಂಗ್ಲಾದೇಶಕ್ಕೆ ೮ ಬಿಲಿಯನ್ ಡಾಲರ್ ಸಾಲ ಸಹಾಯ ನೀಡಿದ್ದು, ಇನ್ನಾವುದೇ ಏಷ್ಯನ್ ದೇಶ ಬಾಂಗ್ಲಾಗೆ ಅಷ್ಟರಮಟ್ಟಿನ ನೆರವು ನೀಡಿಲ್ಲ. ಭಾರತದ ಪ್ರಭಾವಿ ಸಂಸ್ಥೆಯಾಗಿರುವ ಅದಾನಿ ಗ್ರೂಪ್ ಬಾಂಗ್ಲಾದೇಶದಲ್ಲಿ ಲಾಭದಾಯಕ ವಿದ್ಯುತ್ ಪೂರೈಕೆ ಗುತ್ತಿಗೆಗಳನ್ನೂ ಪಡೆದುಕೊಂಡಿತ್ತು. ದೆಹಲಿಯ ಏಷ್ಯಾ ಸೊಸೈಟಿ ಪಾಲಿಸಿ ಇನ್ಸಿಟ್ಯೂಟ್ ಸಂಸ್ಥೆಯ ಸಿ ರಾಜಾ ಮೋಹನ್ ಅವರು ಹಸೀನಾ ಓರ್ವ ಭಾರತ ಪರ ನಾಯಕಿಯಾಗಿದ್ದು, ಭಾರತದೊಡನೆ ಸಂಬಂಧವನ್ನು ಇನ್ನಷ್ಟು ವೃದ್ಧಿಸುವ ಇಚ್ಛೆ ಹೊಂದಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ನಾಯಕತ್ವ ಬದಲಾವಣೆಗಳನ್ನೂ ಮೀರಿ ಮುಂದುವರಿಯಬಲ್ಲಷ್ಟು ಗಟ್ಟಿಯಾದ ಸಂಬಂಧಗಳನ್ನು ಬಾಂಗ್ಲಾದೊಡನೆ ಭಾರತ ಸ್ಥಾಪಿಸಬಲ್ಲದೇ ಎನ್ನುವುದು ಈಗಿನ ಪ್ರಶ್ನೆಯಾಗಿದೆ ಎಂದು ಮೋಹನ್ ಹೇಳುತ್ತಾರೆ. ತನ್ನ ಸರ್ವಾಧಿಕಾರಿ ಧೋರಣೆ ಮತ್ತು ಮಾನವ ಹಕ್ಕುಗಳ ದಮನದ ಕುರಿತು ಬಾಂಗ್ಲಾದೇಶದಲ್ಲಿ ಅಸಮಾಧಾನಗಳು ಮೂಡಿದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿಯವರು ಪುನರಾಯ್ಕೆಯಾದ ಬಳಿಕ ಅವರನ್ನು ಅಭಿನಂದಿಸಲು ಆಗಮಿಸಿದ ಮೊದಲ ವಿದೇಶೀ ನಾಯಕಿ ಶೇಖ್ ಹಸೀನಾ ಆಗಿದ್ದರು. ಜನವರಿಯಲ್ಲಿ ಹಸೀನಾ ಪುನರಾಯ್ಕೆ ಆಗುವ ಮುನ್ನ ವಿಪಕ್ಷ ಬಿಎನ್‌ಪಿಯನ್ನು ಮಟ್ಟಹಾಕಿದ್ದಕ್ಕೆ ಅಮೆರಿಕಾ ಮತ್ತು ಯುಕೆಗಳು ಟೀಕಿಸಿದರೂ, ಭಾರತ ಅವುಗಳೊಡನೆ ಸೇರಲಿಲ್ಲ. ಒಂದಷ್ಟು ಬಾಂಗ್ಲಾದೇಶಿ ಹೋರಾಟಗಾರರು ಹಸೀನಾ ಸರ್ಕಾರವನ್ನು ಉಳಿಸಲು ನವದೆಹಲಿ ತನ್ನ ಪ್ರಭಾವವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ
ಇಂಡಿಯಾ ಔಟ್' ಘೋಷವಾಕ್ಯದಡಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮದ್ ಮುಯಿಝು ಅವರು, ಸಣ್ಣ ಪ್ರಮಾಣದಲ್ಲಿದ್ದ ಭಾರತೀಯ ಪಡೆಯನ್ನು ದ್ವೀಪ ರಾಷ್ಟ್ರದಿಂದ ಹೊರಹಾಕಿದ್ದರು. ಶ್ರೀಲಂಕಾ, ನೇಪಾಳ ಮತ್ತು ಭೂತಾನ್‌ಗಳಲ್ಲೂ ಭಾರತ ಚೀನಾದ ಪ್ರಭಾವದ ವಿರುದ್ಧ ಸೆಣಸುತ್ತಿದೆ.
ಶೇಖ್ ಹಸೀನಾ ಸೋಮವಾರ ಹೆಚ್ಚಿನ ಮುನ್ಸೂಚನೆ ನೀಡದೆ ಇದ್ದಕ್ಕಿದ್ದಂತೆ ನವದೆಹಲಿಗೆ ಬಂದಾಗ ಅವರನ್ನು ಹೇಗೆ ನಿಭಾಯಿಸುವುದು ಎನ್ನುವುದು ನವದೆಹಲಿಯ ಮುಂದಿದ್ದ ತುರ್ತು ಸವಾಲಾಗಿತ್ತು. ಪ್ರತಿಭಟನಾಕಾರರು ಹಸೀನಾರ ಢಾಕಾ ನಿವಾಸಕ್ಕೆ ನುಗ್ಗುವ ಕೆಲ ಸಮಯದ ಮುನ್ನ ಅವರಿಗೆ ಸುರಕ್ಷಿತ ಮಾರ್ಗ ಒದಗಿಸಿದ ಭಾರತ, ಅವರನ್ನು ಸಂಭಾವ್ಯ ಹಿಂಸಾಚಾರದಿಂದ ರಕ್ಷಿಸಿ, ಬಾಂಗ್ಲಾದೇಶದಲ್ಲಿ ಇನ್ನಷ್ಟು ಅವ್ಯವಸ್ಥೆ ಉಂಟಾಗದಂತೆ ತಡೆಯಿತು. ಆದರೆ, ಆಕೆ ಇನ್ನೂ ಭಾರತದಲ್ಲೇ ಇರುವುದು ನವದೆಹಲಿ ಶೇಖ್ ಹಸೀನಾರ ಬೆಂಬಲಕ್ಕಿದೆ ಎಂಬ ಭಾವನೆಯನ್ನು ಇನ್ನಷ್ಟು ಬಲಪಡಿಸಿ, ಬಾಂಗ್ಲಾದೇಶದ ಮುಂದಿನ ಸರ್ಕಾರದೊಡನೆ ಉತ್ತಮ ಸಂಬಂಧ ಹೊಂದುವುದಕ್ಕೆ ಅಡ್ಡಗಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಬಾಂಗ್ಲಾದೇಶದ ನೂತನ ಮಧ್ಯಂತರ ನಾಯಕ ಮೊಹಮ್ಮದ್ ಯೂನುಸ್ ಅವರು ಖ್ಯಾತ ಅರ್ಥಶಾಸ್ತçಜ್ಞ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದು, ಅಮೆರಿಕಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಹೊಂದಿದ್ದಾರೆ. ಯೂನುಸ್ ತನ್ನ ಗುರಿ ಬಾಂಗ್ಲಾದೇಶದಲ್ಲಿ ಸ್ಥಿರತೆ ತಂದು, ಮುಂದಿನ ಚುನಾವಣೆಗೆ ಹಾದಿ ಮಾಡಿಕೊಡುವುದಾಗಿದೆ ಎಂದಿದ್ದಾರೆ. ಮುಂಬರುವ ಚುನಾವಣೆಗಳು ಬಿಎನ್‌ಪಿ ಮರಳಿ ಅಧಿಕಾರಕ್ಕೆ ಬರಲು ನೆರವಾಗುವ ಸಾಧ್ಯತೆಗಳಿದ್ದು, ಪಕ್ಷ ತಾನು ಭಾರತ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
"ಬಿಎನ್‌ಪಿ ಭಾರತವನ್ನು ಒಂದು ಮುಖ್ಯ ಪ್ರಾದೇಶಿಕ ಸಹಯೋಗಿ ಎಂದು ಪರಿಗಣಿಸುತ್ತಿದೆ. ಭಾರತ ಸರ್ಕಾರ ಕೇವಲ ಶೇಖ್ ಹಸೀನಾ ಎಂಬ ಓರ್ವ ವ್ಯಕ್ತಿಯ ಮೇಲೆ ಅವಲಂಬಿತವಾಗುವುದನ್ನು ನಿಲ್ಲಿಸಿ, ಬಾಂಗ್ಲಾದೇಶದೊಡನೆ ನೇರವಾಗಿ ಸಂವಹನ ನಡೆಸುತ್ತದೆ ಎಂದು ನಾವು ನಂಬಿದ್ದೇವೆ" ಎಂದು ಬಿಎನ್‌ಪಿ ಕಾರ್ಯಕಾರಿ ಸಮಿತಿಯ ಸದಸ್ಯ ತಬಿತ್ ಅವಾಲ್ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಯಾವುದೇ ನೂತನ ಸರ್ಕಾರ ಬಂದರೂ, ಅದು ತನ್ನ ನೆರೆಯ ಭಾರತದ ಮೇಲೆ ಹೆಚ್ಚಿನ ಅವಲಂಬನೆ ಹೊಂದಬೇಕಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. "ಬಾಂಗ್ಲಾದೇಶದ ನೂತನ ಸರ್ಕಾರ ಹೇಗಿರಲಿದೆ ಎಂಬ ಕುರಿತು ನವದೆಹಲಿ ಸಾಕಷ್ಟು ಆತಂಕ ಹೊಂದಿದೆ. ಆದರೆ, ಭೌಗೋಳಿಕ ರಾಜಕಾರಣ ಮತ್ತು ಬಾಂಗ್ಲಾದೇಶದ ಭೌಗೋಳಿಕ ಪ್ರದೇಶದ ಆಧಾರದಲ್ಲಿ, ಬಾಂಗ್ಲಾದೇಶಕ್ಕೆ ಭಾರತದೊಡನೆ ಕೈಜೋಡಿಸಿ ಕಾರ್ಯಾಚರಿಸುವುದು ಅನಿವಾರ್ಯವಾಗಿದೆ" ಎಂದು ಬಾಂಗ್ಲಾದೇಶ್ ಇನ್ಸಿಟ್ಯೂಟ್ ಆಫ್ ಪೀಸ್ ಆ್ಯಂಡ್ ಸೆಕ್ಯುರಿಟಿ ಸ್ಟಡೀಸ್‌ನ ಶಫ್ಕತ್ ಮುನೀರ್ ಅಭಿಪ್ರಾಯ ಪಡುತ್ತಾರೆ.