ಹಸುವಿನ ಕೆಚ್ಚಲು ಕಡಿದು ವಿಕೃತಿ: ಪ್ರತಿಭಟನೆ
ಮಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲನ್ನು ಕಡಿದು ವಿಕೃತಿ ಮೆರೆದ ಕೃತ್ಯವನ್ನು ಖಂಡಿಸಿ ಮಂಗಳೂರಿನ ಗೋ ಸಂರಕ್ಷಣಾ ಸಂವರ್ಧನ ಸಮಿತಿ ಮಂಗಳವಾರ ಕ್ಲಾಕ್ ಟವರ್ ಬಳಿ ನಡೆಸಿದ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ವಿಹಿಂಪ ಮುಖಂಡ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಗೋಮಾತೆ, ಗೋವಂಶದ ನೋವು ಎಂದರೆ, ಅದು ಹಿಂದು ಧರ್ಮಕ್ಕೆ ಮಾಡಿದ ಅವಮಾನ. ಗೋ ಸಂರಕ್ಷಣೆ ವಿಚಾರದಲ್ಲಿ ಪೊಲೀಸರು ಕಾನೂನು ಜಾರಿ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಗೋ ಹಿಂಸೆ ವಿರುದ್ಧ ಇಡೀ ಹಿಂದು ಸಮಾಜ ಎದ್ದು ನಿಲ್ಲಬೇಕು ಎಂದರು.
ನ್ಯಾಯವಾದಿ ಕಿಶೋರ್ ಕುಮಾರ್ ಮಾತನಾಡಿ, ಅಲ್ಪಸಂಖ್ಯಾತರ ಹಿತಕ್ಕಾಗಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕಏನೆಲ್ಲ ನಡೆಯುತ್ತಿದೆ ಎಂಬುದು ಅರಿವಿಗೆ ಬರುತ್ತಿದೆ. ಹಿಂದು ಭಾವನೆಗಳಿಗೆ ನಿರಂತರ ಧಕ್ಕೆಯಾಗುತ್ತಿದೆ. ರಾಜ್ಯದಲ್ಲಿ ಗೋ ವಧೆ ತಡೆ ಕಾನೂನು ಜಾರಿಯಲ್ಲಿದ್ದರೂ ಅದನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ. ಎರಡು ಬಾರಿ ಆರೋಪಿ ಸಿಕ್ಕಿಬಿದ್ದರೆ ೭ ವರ್ಷ ಕಠಿಣ ಸಜೆ, ಅಕ್ರಮ ಗೋಸಾಗಾಟ ಕಂಡುಬಂದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆ. ಆದರೆ ಇದಾವುದೂ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತರ ಸೂರಜ್ ಮಾತನಾಡಿ, ಗೋ ವಧೆಯಂತಹ ಘಟನೆಗಳು ಬೇರೆ ಕಡೆ ಆಗಿದೆ ಎಂದು ನಾವು ಕೈಕಟ್ಟಿ ಕೂರುವಂತಿಲ್ಲ. ಚಾಮರಾಜಪೇಟೆಯಲ್ಲಿ ಗೋಮಾಳ ಜಾಗವನ್ನು ಅಲ್ಪಸಂಖ್ಯಾತರು ಒತ್ತುವರಿ ಮಾಡಿಕೊಂಡಿದ್ದಾರೆ. ಗೋವಿನ ಮೇಲೆ ದೌರ್ಜನ್ಯ ನಡೆಸಿದರೆ, ಅದು ಮಾತೃ ಶಕ್ತಿಯ ಮೇಲಿನ ದಮನ ನೀತಿಯಾಗಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕು. ಇಂತಹ ಅಸ್ವಸ್ಥ ಮಾನಸಿಕತೆಯ ಮಂದಿ ಹಿಂದು ಸಮಾಜಕ್ಕೆ ದೊಡ್ಡ ಸವಾಲಾಗಿದ್ದಾರೆ ಎಂದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಮುಖಂಡರಾದ ವಿಶ್ವ ಹಿಂದು ಪರಿಷತ್ ದ. ಕ. ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೊತ್ತಮ ಜೋಗಿ, ಗಿರಿ ಪ್ರಕಾಶ್ ತಂತ್ರಿ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಗೋ ಪೂಜೆ ನೆರವೇರಿಸಲಾಯಿತು. ಬಳಿಕ ಹನುಮಾನ್ ಚಾಲೀಸ್ ಪಠಿಣಸಲಾಯಿತು.