ಹಾಗಾದರೆ ಚುನಾವಣೆ ಸುಧಾರಣೆ ಗತಿ…
ಚುನಾವಣಾ ಬಾಂಡ್ ಯೋಜನೆಯನ್ನು ಕಾನೂನು ಬಾಹಿರ ಎಂದು ವಿಶ್ಲೇಷಿಸಿ ರದ್ದುಪಡಿಸಿರುವ ಸುಪ್ರೀಂಕೋರ್ಟ್ನ ಕ್ರಮ ಹೊಸ ಬಿಕ್ಕಟ್ಟನ್ನು ಸೃಷ್ಟಿಸುವಂತಾಗಿದೆ. ಏಕೆಂದರೆ, ಈ ಯೋಜನೆಯ ರದ್ದತಿಯ ನಂತರ ಯಾವ ದಾರಿಯನ್ನು ರಾಜಕೀಯ ಪಕ್ಷಗಳು ಅನುಸರಿಸಬೇಕು ಎಂಬ ಬಗ್ಗೆ ಪರ್ಯಾಯ ಸೂತ್ರ ಇಲ್ಲದಿರುವುದು. ಇದರಿಂದಾಗಿ ಚುನಾವಣಾ ಸುಧಾರಣೆ ಪ್ರಕ್ರಿಯೆಗಳಿಗೆ ಒಂದು ರೀತಿಯಲ್ಲಿ ಹಿನ್ನಡೆಯುಂಟಾದಂತಾಗಿದೆ.
ಸರ್ಕಾರಗಳ ಆಡಳಿತ ವ್ಯವಸ್ಥೆಯಲ್ಲಿ ಅವ್ಯವಸ್ಥೆ ತಲೆದೋರಲು ಚುನಾವಣಾ ಪದ್ಧತಿಯಲ್ಲಿರುವ ದೋಷವೇ ಕಾರಣ ಎಂಬುದು ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಚುನಾವಣಾ ವೆಚ್ಚ ನಿಭಾಯಿಸಲು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ನಾನಾ ರೀತಿಯ ಒಳಮಾರ್ಗಗಳನ್ನು ಅನುಸರಿಸುತ್ತಿದ್ದ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಕ್ರಮದ ಹಣವೇ ಚುನಾವಣೆಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು ಎಂಬ ಮಾತನ್ನು ನಿರಾಕರಿಸುವುದು ಕಷ್ಟವೇ. ಸಾರ್ವಜನಿಕ ಒತ್ತಾಯದ ಕೂಗಿನ ಹಿನ್ನೆಲೆಯಲ್ಲಿ ಚುನಾವಣಾ ಸುಧಾರಣೆ ಅಂಗವಾಗಿ ೨೦೧೯ರಲ್ಲಿ ಕೇಂದ್ರ ಸರ್ಕಾರ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುವ ಪದ್ಧತಿಯನ್ನು ರೂಪಿಸಿ ನಿಯಮಾವಳಿಯನ್ನು ಜಾರಿಗೊಳಿಸಿದ್ದರಿಂದ ತಕ್ಕಮಟ್ಟಿಗೆ ಉದ್ಯಮಿಗಳು ಹಾಗೂ ಧನಿಕರಿಂದ ಹಣ ಸಂಗ್ರಹಿಸುವ ವಿಧಾನದಲ್ಲಿ ಕೊಂಚ ಪಾರದರ್ಶಕತೆ ಕಂಡುಬಂದಿತ್ತು. ಈಗ ಸುಪ್ರೀಂಕೋರ್ಟ್ ತೀರ್ಮಾನದಿಂದಾಗಿ ರಾಜಕೀಯ ಪಕ್ಷಗಳಿಗೆ ಹಣ ಸಂಗ್ರಹಣೆಗೆ ಮುಕ್ತ ದಾರಿ ಒದಗಿಸಿದಂತಾಗಿದೆ.
ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಘೋಷಣೆ ಮಾಡಿದೆ ಅನಾಮಧೇಯವಾಗಿ ಚುನಾವಣಾ ಬಾಂಡನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಖರ್ಚಿಗೆ ಕೊಡತಕ್ಕಂಥ ಯೋಜನೆ ಜನರ ಮಾಹಿತಿ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ ಯಾರು ಈ ಚುನಾವಣೆಯ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಹಣವನ್ನು ಕೊಡುತ್ತಾರೋ ಆ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿಯುವ ಹಕ್ಕು ಜನರಿಗೆ ಇದೆ ಎಂದು ಅಭಿಪ್ರಾಯ ಪಟ್ಟಿದೆ.
೨೦೧೭ರಲ್ಲಿ ಹಣಕಾಸಿನ ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಕೇಂದ್ರ ಸರ್ಕಾರ ತಂದಿತು. ಪ್ರಜಾ ಪ್ರಾತಿನಿಧ್ಯ ಕಾನೂನು ಅಂದರೆ ರೆಪ್ರೆಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ ಕಾನೂನುಗಳಿಗೆ ತಿದ್ದುಪಡಿ ಮಾಡಲಾಯಿತು. ಈ ಬಿಲ್ಲನ್ನು ಮನಿ ಬಿಲ್ ರೀತಿ ಜಾರಿಗೆ ತರಲಾಯಿತು. ಅಂದರೆ ರಾಜ್ಯಸಭೆಯ ಅನುಮೋದನೆ ಪಡೆಯಬೇಕಾದ ಅವಶ್ಯಕತೆ ಇರಲಿಲ್ಲ. ನಗದು ಹಣವನ್ನು ರಾಜಕೀಯ ಪಕ್ಷಕ್ಕೆ ಅನಾಮಧೇಯವಾಗಿ ಕೊಡಬೇಕಾದರೆ ೨ ಸಾವಿರ ಮಾತ್ರ ಕೊಡಬಹುದಿತ್ತು. ರಾಜಕೀಯ ಪಕ್ಷಗಳು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ ೨೯ಎ ಪ್ರಕಾರ ರಿಜಿಸ್ಟರ್ ಮಾಡಿಸಿ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಶೇಕಡ ಒಂದರಷ್ಟು ಮತವನ್ನು ಗಳಿಸಿದ್ದರೆ, ಆ ರೀತಿಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಹಣವನ್ನು ಕೊಡುವ ಅವಕಾಶವಿತ್ತು. ಪ್ರಾಮಿಸರೀ ನೋಟ್ ರೂ ೧,೦೦೦ ದಿಂದ ಒಂದು ಕೋಟಿಯ ತನಕ ಈ ರೀತಿಯ ಬಾಂಡ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಖರೀದಿಸಿ ಪಕ್ಷಗಳಿಗೆ ಕೊಡುವ ಅವಕಾಶವಿತ್ತು. ಈ ಪ್ರಾಮಿಸರಿ ನೋಟ್‌ಗಳನ್ನು ಯಾರು ಖರೀದಿಸಿದ್ದಾರೆ ಎನ್ನುವ ಮಾಹಿತಿ ಬ್ಯಾಂಕುಗಳಿಗೆ ಬಿಟ್ಟು ಬೇರೆಯವರಿಗೆ ತಿಳಿಯುವ ಅವಕಾಶವಿರಲಿಲ್ಲ. ಈ ಯೋಜನೆಯಿಂದ ಹಿಂದೆ ಕಪ್ಪು ಮಾರುಕಟ್ಟೆಯಲ್ಲಿ ನಗದು ಹಣ ರಾಜಕೀಯ ಪಕ್ಷಗಳಿಗೆ ಹೋಗುವುದನ್ನು ತಪ್ಪಿಸಿ ಬ್ಯಾಂಕ್ ವ್ಯವಹಾರದ ಮೂಲಕವೇ ಹಣ ಹೋಗತಕ್ಕಂಥ ವ್ಯವಸ್ಥೆಯನ್ನು ತರಲಾಗಿತ್ತು.
ಕೇಂದ್ರ ಸರ್ಕಾರ ಈ ಯೋಜನೆ ಕಪ್ಪು ಹಣವನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ತರಲಾಗಿದೆ ಮತ್ತು ನಗದು ಹಣ ರಾಜಕೀಯ ಪಕ್ಷಗಳು ಸಂಗ್ರಹಿಸುವ ವ್ಯವಸ್ಥೆಯನ್ನು ಇದರಿಂದ ಬದಲಾಯಿಸಬಹುದು ಎಂದು ಹೇಳಿತು. ಜನರ ಮಾಹಿತಿ ಹಕ್ಕಿನ ಉಲ್ಲಂಘನೆಯ ಪ್ರಶ್ನೆ ಬಂದಾಗ ಈ ರೀತಿಯಾದಂಥ ನಿಯಂತ್ರಣವಿಲ್ಲದ ಮಾಹಿತಿ ಹಕ್ಕು ಮತದಾರರು ಮತ್ತು ಸಾರ್ವಜನಿಕರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ನ ಮುಂದೆ ವಾದಿಸಲಾಯಿತು. ಜನರಿಗೆ ಎಲ್ಲ ವಿಷಯವನ್ನು ತಿಳಿಯತಕ್ಕಂಥ ಹಕ್ಕನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದಿಲ್ಲ ಎಂದು ಪ್ರತಿಪಾದಿಸಲಾಯಿತು. ಆದರೆ ಈ ಯೋಜನೆಯ ಬಗ್ಗೆ ರಿಸರ್ವ್ ಬ್ಯಾಂಕ್ ಸಹ ಕೆಲವು ಬೇರೆಯೇ ಅಭಿಪ್ರಾಯವಿತ್ತು. ಹಿಂದಿನ ರಿಸರ್ವ್ ಬ್ಯಾಂಕ್‌ನ ಗವರ್ನರಾದ ಪಟೇಲ್ ಅವರು ಈ ರೀತಿಯ ಚುನಾವಣಾ ಬಾಂಡುಗಳು ದುರುಪಯೋಗ ಆಗುವ ಸಂಭವವಿರುತ್ತದೆ ಮತ್ತು ಆ ರೀತಿಯ ಯೋಜನೆ ಮಾಡುವುದಾದರೆ ಅದಕ್ಕೆ ರಿಸರ್ವ್ ಬ್ಯಾಂಕ್ ಮೂಲಕ ಮಾಡಬೇಕು ಎಂದು ತಿಳಿಸಿದ್ದರು.
ಸರ್ವೋಚ್ಚ ನ್ಯಾಯಾಲಯವು ಈ ರೀತಿಯ ಬಾಂಡ್‌ಗಳ ವಿತರಣೆಯಿಂದ ಬಾಂಡ್ ಹೊಂದಿರುವ ವ್ಯಕ್ತಿಗಳ ನಿಯಂತ್ರಣ ಸರ್ಕಾರದ ಮೇಲೆ ಆಗುತ್ತದೆ ಮತ್ತು ಸರ್ಕಾರದ ನಿರ್ಧಾರಗಳ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಸಂವಿಧಾನದ ಕಲಂ ೧೯ (೧)೮ ಪ್ರಕಾರ ಜನರ ಮಾಹಿತಿ ಪಡೆಯುವ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ. ಈ ಬಾಂಡ್ ಯೋಜನೆಯಿಂದ ಮುಕ್ತ ಮತ್ತು ನ್ಯಾಯವಾದ ಚುನಾವಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಮಾನ ಮೇಲ್ನೋಟಕ್ಕೆ ಸರಿಯಾಗಿದೆ ಎಂದರೂ ಸಹ ಅದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಷ್ಟೇ ಸರ್ಕಾರದ ನಿಯಂತ್ರಣ ಮಾಡುವ ಪ್ರಯತ್ನವಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ನಗದು ಹಣದ ವಿತರಣೆಯಾಗುವುದು ಸರ್ವವಿದಿತ. ಪ್ರಾರಂಭದಲ್ಲೇ ನಿಮ್ಮ ಮಾಹಿತಿಯನ್ನು ಕೊಟ್ಟು ಬಾಂಡ್‌ಗಳನ್ನು ಖರೀದಿಸಿ ಎಂದರೆ ಆ ರೀತಿಯ ಯೋಜನೆ ಸಫಲವಾಗುವ ಸಾಧ್ಯತೆ ಇಲ್ಲ. ಆದ ಕಾರಣ ಈ ಪರಿಸ್ಥಿತಿಯನ್ನು ಯಾವ ರೀತಿಯಲ್ಲಿ ಬದಲಾವಣೆ ತರಬೇಕು ಅನ್ನುವ ಪ್ರಶ್ನೆ ಎಲ್ಲರ ಮುಂದಿದೆ. ಈ ಯೋಜನೆಯನ್ನು ವಿರೋಧಿಸಿದ ವ್ಯಕ್ತಿಗಳಿಗೂ ಸಹ ಚುನಾವಣೆಯ ಸಂಬಂಧದಲ್ಲಿ ಯಾವ ರೀತಿ ನಗದು ಹಣದ ಉಪಯೋಗ ಆಗುತ್ತದೆ ಎಂದು ತಿಳಿದೇ ಇದೆ. ಅಂದರೆ ನಗದು ಹಣವನ್ನು ರಾಜಕೀಯ ಪಕ್ಷಗಳಿಗೆ ಕೊಟ್ಟರೆ ಅವರ ನಿಯಂತ್ರಣ ಅಥವಾ ಪ್ರಭಾವ ಸರ್ಕಾರದ ಮೇಲೆ ಆಗುವುದಿಲ್ಲವೇ? ನಗದು ಹಣವನ್ನು ಕೊಡತಕ್ಕಂಥ ವ್ಯಕ್ತಿಗಳ ಮಾಹಿತಿ ಜನರಿಗೆ ಲಭ್ಯವಿದೆಯೇ?
ಹಾಗಿದ್ದ ಕಾರಣ ಈ ಚುನಾವಣಾ ಬಾಂಡ್‌ಗಳ ಪ್ರಯೋಗವಾದ ಪ್ರಾರಂಭದಲ್ಲೇ ಚಿಗುಟಿ ಹಾಕಿದರೆ ಪರಿಣಾಮವೇನು ಎಂದು ಆಲೋಚನೆ ಮಾಡಬೇಕಾಗುತ್ತದೆ. ಜನರ ಮಾಹಿತಿ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಸಂಪೂರ್ಣವಾಗಿ ಯೋಜನೆ ಅವಶ್ಯಕತೆ ಇತ್ತೇ ಎನ್ನುವುದು ಒಂದು ಪ್ರಶ್ನೆ. ಜನರ ಮಾಹಿತಿಯನ್ನು ಬಹಿರಂಗಪಡಿಸಿ ಜಾರಿಗೊಳಿಸಿ ಎಂದು ಸಹ ಹೇಳಬಹುದಿತ್ತು.
ಈ ನಿರ್ಣಯದ ಪರಿಣಾಮವೇನೆಂದರೆ ಯರ‍್ಯಾರು ಬಾಂಡ್ ಅನ್ನು ಖರೀದಿಸಿದ್ದರೋ ಆ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರು ಎಲೆಕ್ಷನ್ ಕಮಿಷನ್‌ಗೆ ನೀಡಬೇಕಾಗುತ್ತದೆ. ತಕ್ಷಣವೇ ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕಾಗುತ್ತದೆ. ನಗದೀಕರಣವಾಗದ ಬಾಂಡುಗಳನ್ನು ರಾಜಕೀಯ ಪಕ್ಷಗಳು ಹಿಂದುರುಗಿಸಬೇಕಾಗುತ್ತದೆ. ೨೦೨೨-೨೩ರಲ್ಲಿ ಭಾರತೀಯ ಜನತಾ ಪಕ್ಷ ಬಾಂಡ್ ಮೂಲಕ ಸುಮಾರು ೧೩೦೦ ಕೋಟಿ ಸಂಗ್ರಹಿಸಿದರೆ, ಕಾಂಗ್ರೆಸ್ ಪಕ್ಷ ಸುಮಾರು ೧೭೧ ಕೋಟಿ ಸಂಗ್ರಹಿಸಿದೆ. ನ್ಯಾಯಾಲಯಗಳು ಸರ್ಕಾರದ ತೀರ್ಮಾನಗಳನ್ನು ಪರಿಶೀಲಿಸುವ ಅಧಿಕಾರ ಇದೆಯೇ ಹೊರತು ಸಮಸ್ಯೆಗೆ ಪರಿಹಾರ ಕೊಡುವ ಜವಾಬ್ದಾರಿ ಅವರಿಗಿಲ್ಲ. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಉದ್ದೇಶದಿಂದ ಜಾರಿಗೆ ತಂದ ಬಾಂಡ್ ಯೋಜನೆ ಈ ರೀತಿ ಕೊನೆಯಾದ ಕಾರಣ ಮುಂದಿನ ದಿನಗಳಲ್ಲಿ ಚುನಾವಣಾ ವ್ಯವಸ್ಥೆಯ ಸುಧಾರಣೆ ಒಂದು ಮರೀಚಿಕೆ ಆಗಬಹುದೇನೋ!