For the best experience, open
https://m.samyuktakarnataka.in
on your mobile browser.

ಹಾರಿಕೆ ಉತ್ತರ…

03:00 AM Sep 24, 2024 IST | Samyukta Karnataka
ಹಾರಿಕೆ ಉತ್ತರ…

ನೀನು ಯಾರು ಏನು ಕೇಳಿದರೂ ಹಾರಿಕೆ ಉತ್ತರ ಕೊಡುವುದನ್ನು ಕಲಿ ಎಂದು ತಿಗಡೇಸಿಗೆ ಅವರ ಅಪ್ಪ ತಿರುಕೇಸಿ ಯಾವಾಗಲೂ ಉಪದೇಶ ನೀಡುತ್ತಿದ್ದ. ಪಿತೃಪರಿಪಾಲಕ ಆಗಬೇಕು ಎಂಬ ತಳವಾರ್ಕಂಟಿ ಮಾತನ್ನು ತೀರ ಮನಸ್ಸಿನ ಮೇಲೆ ತೆಗೆದುಕೊಂಡಿದ್ದರಿಂದ ತಿಗಡೇಸಿ ಅಪ್ಪ ಹೇಳಿದ್ದೇ ಕರೆಕ್ಟು ಎಂಬ ಹಂತಕ್ಕೆ ಬಂದಿದ್ದ ಹಾಗಾಗಿ ತಂದೆಯ ಮಾತನ್ನು ಮೀರುತ್ತಿರಲಿಲ್ಲ. ಯಾವುತ್ತೂ ಹಾರಿಕೆ ಉತ್ತರದ ಬಗ್ಗೆಯೇ ಯೋಚನೆ ಮಾಡುತ್ತಿದ್ದ. ಮರುದಿನ ಸಂತೆಯಲ್ಲಿ ಸಿಕ್ಕ ಡಿವರ‍್ಯಾಚಾರಿಯು ಏನು ತಿಗಡೇಸಿ ಏನೋ ಸುದ್ದಿ ಕೇಳಿದೆನಲ್ಲ ನಿಜವೇ? ಎಂದು ಕೇಳಿದರು. ಅದಕ್ಕೆ ತಿಗಡೇಸಿಯು ನಿಂತಲ್ಲೇ ಟಣಕ್ಕಂತ ಜಿಗಿದು… ಅದೆಲ್ಲ ಸುಳ್ಳು ಸ್ವಾಮೀ ಅಂದ. ತಿಗಡೇಸಿ ಜಿಗಿದು ಮಾತನ್ನು ಹೇಳಿದ್ದರಿಂದ, ಇವನಿಗೆ ಯಾವಾಗ ಏನು ಆಗುತ್ತದೋ ಎಂದು ಅಂದುಕೊಂಡು ಮುಂದೆ ಹೋದರು. ಸಂತೆಯಲ್ಲಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಮನೆಯ ಕಡೆ ಹೊರಟಾಗ ದಾರಿಯಲ್ಲಿ ಕನ್ನಾಳ್ಮಲ್ಲ ಎದುರಾದ. ಆತನ ಮಾತೇ ವಿಚಿತ್ರ. ಏನ್ಲಪಾ ತಿಗಡೇಸಿ.. ಉಳ್ಳಾಗಡ್ಡಿ ಹೆಂಗೆ ಸಂತೇಲಿ ಅಂದಾಗ… ತಿಗಡೇಸಿ ಮತ್ತೆ ಜಿಗಿದು ೪೫ ರೂ.ಗೆ ಕೆಜಿ ಎಂದು ಹೇಳಿದ. ರೇಟು ಕೇಳಿದರೆ ಈ ಮನಿಷಾ ಯಾಕೆ ಜಿಗಿಯುತ್ತಾನೆ ಎಂದು ಅಂದುಕೊಂಡು ಮುಂದೆ ಯಾವ ರೇಟೂ ಕೇಳುವ ಗೊಡವೆಗೆ ಹೋಗಲಿಲ್ಲ. ಕರಿಭಾಗೀರತಿ ಮನೆಗೆ ಹೋಗಿದ್ದ ತಿಗಡೇಸಿಗೆ ಯಾಕಪ್ಪ ಹೇಗಿದ್ದಿ? ನಿಮ್ಮ ಅಪ್ಪನ ಸಮಸ್ಯೆ ಪರಿಹರಿಯಿತೇ? ಎಂದು ಕೇಳಿದ್ದೇ ತಡ… ಚಂಗನೇ ಮೇಲೆ ಜಿಗಿದ ತಿಗಡೇಸಿ… ನಂಗೆನೂ ಗೊತ್ತಿಲ್ಲ ಅಂದ. ಜಿಗಿದ ರಭಸಕ್ಕೆ ಸಜ್ಜಾದ ಮೇಲೆ ಇಟ್ಟಿದ್ದ ಪಾತ್ರೆ ಪಗಡುಗಳು ಟಣ್ಣನೇ ಬಿದ್ದವು. ತೀರ ಸಿಟ್ಟಿಗೆದ್ದ ಕರಿಭಾಗೀರತಿ… ನೀ ಇನ್ನ ಮನೀಗೆ ಹೋಗು ಎಂದು ಕಳುಹಿಸಿದಳು. ಊರತುಂಬ ತಿಗಡೇಸಿ ಮೇಲೆ ಜಿಗಿದು ಹೇಳುವುದರ ಕುರಿತು ಗೊತ್ತಾಯಿತು. ಹಲವರು ತಿಗಡೇಸಿ ಅಪ್ಪನಿಗೆ ಈ ವಿಷಯ ತಿಳಿಸಿ.. ಇದು ಒಳ್ಳೆಯ ಲಕ್ಷಣ ಅಲ್ಲ… ಸ್ವಲ್ಪ ಬುದ್ದಿ ಹೇಳಿ ಅಂದರು. ಅವತ್ತೇ ರಾತ್ರಿ ತಿಗಡೇಸಿಯನ್ನು ಕರೆದ ಅವರಪ್ಪ..ಯಾಕಪ್ಪ ಹೀಗೆ… ನಮ್ಮ ವಂಶದವರಿಗೆ ಯಾರೂ ಒಂದು ಮಾತು ಅಂದವರಲ್ಲ… ನೀನು ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಿಜ ಹೇಳು ಯಾರಾದರೂ ಏನಾದರೂ ಕೇಳಿದರೆ… ಮೇಲೆ ಹಾರಿ ಉತ್ತರ ಕೊಡುತ್ತಿ? ಎಂದು ಕೇಳಿದರು. ಅದಕ್ಕೆ ಕಣ್ಣೀರು ಹಾಕಿಕೊಂಡೇ ತಿಗಡೇಸಿಯು… ನೆನಪಿದೆಯಾ ಅಪ್ಪಾ…! ನೀನೇ ಅವತ್ತು ಹಾರಿಕೆ ಉತ್ತರ ಕೊಡಬೇಕು ಎಂದು ಹೇಳಿದ್ದಿ. ಆದ್ದರಿಂದ ಅವರು ಕೇಳಿದಾಗ ನಾನು ಹಾರಿ ಉತ್ತರ ಕೊಡುತ್ತೇನೆ ಎಂದು ಹೇಳಿದ. ತಿಗಡೇಸಿಯ ಅಪ್ಪ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತ.