For the best experience, open
https://m.samyuktakarnataka.in
on your mobile browser.

ಹಿಜಾಬ್‌ಗೆ ರಾಹುಲ್ ಬೆಂಬಲ

11:38 PM Feb 27, 2024 IST | Samyukta Karnataka
ಹಿಜಾಬ್‌ಗೆ ರಾಹುಲ್ ಬೆಂಬಲ

ನವದೆಹಲಿ: ಮಹಿಳೆಯರು ಯಾವ ಉಡುಪು ಧರಿಸಬೇಕೆಂದು ಅಪೇಕ್ಷಿಸುತ್ತಾರೋ ಅಂತಹ ವಸ್ತ್ರ ಧರಿಸಲು ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಉತ್ತರಪ್ರದೇಶದ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಈ ಮೇಲಿನಂತೆ ಪ್ರತಿಪಾದಿಸುವ ಮೂಲಕ ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದಕ್ಕೆ ಬೆಂಬಲ ಸೂಚಿಸಿದ್ದಾರೆ.
ನೀವು ಏನು ಧರಿಸುತ್ತೀರೋ ಅದು ನಿಮ್ಮ ಹೊಣೆಗಾರಿಕೆ ಮತ್ತು ನಿಮ್ಮ ತೀರ್ಮಾನ. ಇದನ್ನು ಬೇರೆಯಾರೋ ನಿರ್ಧರಿಸಬೇಕೆಂದು ನಾನಂತೂ ಭಾವಿಸುವುದಿಲ್ಲ ಎಂದವರು ಹೇಳಿದ್ದಾರೆ. ರಾಜಸ್ಥಾನದ ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಕುರಿತ ವಿವಾದ ಹುಟ್ಟಿಕೊಂಡ ಬೆನ್ನಲ್ಲಿ ರಾಹುಲ್ ಮುಸ್ಲಿಮ್ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ. ಶಾಲೆಗಳಲ್ಲಿ ವಸ್ತ್ರ ಸಂಹಿತೆ ಪಾಲಿಸದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ದಿಲ್ವಾರ್ ಎಚ್ಚರಿಕೆ ನೀಡಿದ್ದಾರೆ.
ಗುಜರಾತ್, ಮಹಾರಾಷ್ಟ್ರದಲ್ಲಿ ಯಾತ್ರೆ: ರಾಹುಲ್ ಅವರ ಭಾರತ ಜೋಡೊ ನ್ಯಾಯಯಾತ್ರೆ ಸದ್ಯ ರಾಜಸ್ತಾನದಲ್ಲಿ ಸಾಗುತ್ತಿದ್ದು ಮಾರ್ಚ್ ೭ರಂದು ಗುಜರಾತಿನ ದಾಹೊದ್ ಜಿಲ್ಲೆಯ ಝಲೊಡ್ ಮೂಲಕ ಈ ರಾಜ್ಯ ಪ್ರವೇಶಿಸಲಿದೆ. ಈ ರಾಜ್ಯದ ಏಳು ಜಿಲ್ಲೆಗಳ ಒಟ್ಟು ೧೪ ಲೋಕಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಮುಂದುವರಿಯಲಿದೆ. ಆ ಬಳಿಕ ಮಾರ್ಚ್ ೧೦ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ ಎಂದು ಕಾಂಗ್ರೆಸ್‌ನ ಗುಜರಾತ್ ರಾಜ್ಯ ವಕ್ತಾರ ಮನಿಷ್ ದೋಶಿ ತಿಳಿಸಿದ್ದಾರೆ.