ಹಿಜಾಬ್ ನಿಷೇಧ ವಾಪಸ್ಸಿಗೆ ಸಚಿವ ಲಾಡ್ ಬೆಂಬಲ
ಧಾರವಾಡ: ಹಿಜಾಬ್ ಧರಿಸಲು ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಅವಕಾಶವಿದ್ದು, ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಹಿಂದಕ್ಕೆ ಪಡೆದರೆ ಧರ್ಮ ದಂಗಲ್ ಆಗುತ್ತದೆ ಎಂದು ಹೇಳುವುದು ಸರಿಯಲ್ಲ. ಹಿಜಾಬ್ ವಿಚಾರದಲ್ಲಿ ದಂಗಲ್ ಪದ ಬಳಕೆ ಸರಿಯಲ್ಲ ಎಂದರು.
ನಾನೊಬ್ಬ ಹಿಂದೂ ಇದ್ದರೂ ಹಿಜಾಬ್ ನಿಷೇಧ ಹಿಂಪಡೆಯುವುದಕ್ಕೆ ವಿರೋಧ ಮಾಡುತ್ತಿಲ್ಲ. ಹಿಂದೂಗಳಾರೂ ಸರಕಾರದ ಕ್ರಮವನ್ನು ವಿರೋಧಿಸುವುದಿಲ್ಲ. ವಿರೋಧ ಪಕ್ಷಗಳು ಅನಗತ್ಯವಾಗಿ ವಿರೋಧ ಮಾಡುತ್ತಿವೆ ಎಂದು ಅಅಭಿಪ್ರಾಯಪಟ್ಟರು. ಮುಸ್ಲಿಂ ತುಷ್ಟೀಕರಣ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ದೃಷ್ಟಿಕೋನವೇ ಹಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರೆ ಏನು? ಹಿಂದೂ, ಮುಸ್ಲಿಂ, ಸಿಖ್, ಬೌದ್ಧ ಎಲ್ಲರನ್ನೂ ಒಂದೇ ರೀತಿ ನೋಡುವುದಲ್ಲವೇ ಎಂದು ಪ್ರಶ್ನಿಸಿದರು.
ಹಿಜಾಬ್ ನಿಷೇಧ ವಾಪಸ್ ಪಡೆದಂತೆ ಬಿಜೆಪಿ ಸರಕಾರದ ಇತರ ನಿಷೇಧಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡಲಾಗುವುದು ಎಂದರು.