ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹುತಾತ್ಮ ಸೈನಿಕನ ದುರದೃಷ್ಟ ಪತ್ನಿ

04:00 AM Nov 16, 2024 IST | Samyukta Karnataka

ಬೋಲೋ ಭಾರತ ಮಾತಾಕಿ ಜೈ, ವಂದೇ ಮಾತರಂ, ಸಂದೀಪ ಕೆ ನಾಮ ಅಮರ ರಹೇ, ದೇಶಕ್ಕಾಗಿ ಹೋರಾಡಿ ವೀರಮರಣ ಹೊಂದಿದ ನಮ್ಮ ನಾಡಿನ ವೀರಪುತ್ರ ಸಂದೀಪನಿಗೆ ಜಯವಾಗಲಿ… ಹೀಗೆ ಘೋಷಣೆಗಳು ಹಳ್ಳಿಯಲ್ಲಿ ಮೊಳಗುತ್ತಿದ್ದವು. ಸಾವಿರಾರು ನಿವೃತ್ತ ಸೈನಿಕರು ಎದೆಯ ಮೇಲೆ ಮೆಡಲ್‌ಗಳನ್ನು ಹಾಕಿಕೊಂಡು ಎದೆಯುಬ್ಬಿಸಿ ಆಗಮಿಸಿದ್ದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಯುವಕರು, ದೇಶಭಕ್ತರು ಘೋಷಣೆ ಕೂಗುತ್ತಾ ಆಗಮಿಸುತ್ತಿರುವ ದೃಶ್ಯ ಕಣ್ಣಿಗೆ ಕಟ್ಟುವಂತ್ತಿತ್ತು. ಜಿಲ್ಲೆಯ ರಾಜಕಾರಣಿಗಳು, ಕಂದಾಯ, ಪೊಲೀಸ್ ಅಧಿಕಾರಿಗಳು ಹುತಾತ್ಮ ಸೈನಿಕನಿಗೆ ಸರಕಾರಿ ಗೌರವ ಅರ್ಪಿಸಲು ಮುಂಚಿತವೇ ಠಿಕಾಣಿ ಹೂಡಿದ್ದರು. ಜನದಟ್ಟಣೆಯನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ತಮ್ಮ ಗ್ರಾಮದ ಯುವಕನ ಪಾರ್ಥಿವ ಶರೀರಕ್ಕೆ ಗೌರವ ಅರ್ಪಿಸಲು ಶಾಲೆಯ ಪ್ರಾಂಗಣದಲ್ಲಿ ಸಭೆ ಏರ್ಪಡಿಸಿದ್ದರು. ವೀರ ಸೈನಿಕನ ಮೃತದೇಹವನ್ನು ಶಾಲೆಯ ಪ್ರಾಂಗಣದಲ್ಲಿ ಹೂಳಿ ಅಂತಿಮ ಸಂಸ್ಕಾರ ಮಾಡಿ, ಸಮಾಧಿಯನ್ನು ನಿರ್ಮಿಸಲು ಅಧಿಕಾರಿಗಳು, ಹಿರಿಯರು ನಿರ್ಣಯಿಸಿದ್ದರು. ಪಾರ್ಥಿವ ಶರೀರ ಕಾಶ್ಮೀರದಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತಂದಿದ್ದರು. ದೆಹಲಿಯಿಂದ ಬೆಂಗಳೂರಿಗೆ ಮತ್ತೊಂದು ವಿಮಾನದಲ್ಲಿ ಬಂದು ರಸ್ತೆಯ ಮೂಲಕ ಸಂಜೆ ೫ ಗಂಟೆಗೆ ತಲುಪುವ ನಿರೀಕ್ಷೆ ಇತ್ತು. ಹಳ್ಳಿಯ ಜನರು ದುಃಖದಲ್ಲಿಯೂ ಸಂಭ್ರಮಿಸುತ್ತಿದ್ದರು. ಬಂದ ಜನರಿಗೆ ನೆರಳು, ಅಲ್ಪೋಪಹಾರ, ನೀರಿನ ವ್ಯವಸ್ಥೆ ಮಾಡಿದ್ದರು. ಹುತಾತ್ಮ ಸೈನಿಕನಿಂದ ಹಳ್ಳಿಯ ಇರು ವಿಕೆ ಇಡೀ ರಾಜ್ಯದಲ್ಲಿ ಪರಿಚಯವಾಯಿತು.
ವೀರ ಸೈನಿಕನ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ತಾಯಿ ದುಃಖದ ಹಾಡಿನ ಶೈಲಿಯಲ್ಲಿ ಮಗನ ವೀರಗಾಥೆ, ಪ್ರೀತಿಯನ್ನು, ದುಃಖಿಸಿ ಹೇಳುತ್ತಿದ್ದಳು. ಅಣ್ಣ ತಮ್ಮನನ್ನು ಕಳೆದುಕೊಂಡು ಚಿಂತಾಕ್ರಾಂತನಾಗಿ ಓಡಾಡುತ್ತಿದ್ದ. ಹೆಂಡತಿ ದೀಪಾ (ಎಲ್ಲ ಹೆಸರು ಬದಲಾಯಿಸಲಾಗಿದೆ) ತನ್ನ ತಾಯಿ, ಅಕ್ಕ ತಂಗಿಯರ ಮಧ್ಯೆ ದಿಗ್ಮೂಢಳಾಗಿ ರೋದಿಸುತ್ತಿದ್ದಳು.
ಸಂದೀಪ ಮತ್ತು ದೀಪಾ ಇವರ ಲಗ್ನವು ಕೇವಲ ಎರಡು ವರ್ಷಗಳ ಹಿಂದೆ ಆಗಿತ್ತು. ಚಿಕ್ಕಂದಿನಿಂದಲೇ ದೇಶ, ದೇಶಭಕ್ತಿ, ಸೈನಿಕರು ಅಂದರೆ ಏನೋ ಅಭಿಮಾನ. ಚಿಕ್ಕವಳಿದ್ದಾಗ ಮಿಲ್ಟ್ರಿ, ಪೊಲೀಸ್ ಯೂನಿಫಾರ್ಮ್ ಧರಿಸಿದವರನ್ನು ನೋಡಿದರೆ, ಮಿಲ್ಟ್ರಿ ಸೆಲ್ಯೂಟ್ ಹೊಡೆಯುತ್ತಿದ್ದಳು. ಮರಳಿ ಸೆಲ್ಯೂಟ್ ಹೊಡೆದರಂತೂ ಸ್ವರ್ಗಕ್ಕೆ ಮೂರೇ ಗೇಣು. ಸಂದೀಪ ತನ್ನ ತಾಯಿ, ಸಹೋದರನ ಜೊತೆಗೆ ಕನ್ಯೆ ನೋಡಲು ಬಂದಿದ್ದನು. ಮಿಲ್ಟ್ರಿಯಲ್ಲಿ ದೇಹ ದಂಡಿಸಿ ಗಟ್ಟಿಮುಟ್ಟಾದ ದೇಹಸೌಷ್ಟವ ಹೊಂದಿದ್ದ. ಕೋಲುಮುಖ, ಕಾಶ್ಮೀರದ ಚಳಿಯಲ್ಲಿ ಬಿಗಿಗೊಂಡು ಕೆಂಪು ಬಣ್ಣದಿಂದ ಆರೋಗ್ಯ ಸೂಚಿಸಿ, ಮಿಂಚುವ ಮುಖಾರವಿಂದ. ತಲೆ ಕೂದಲನ್ನು ಚಿಕ್ಕ, ಅಚ್ಚುಕಟ್ಟಾಗಿ, ಚರ್ಮ ಕಾಣಿಸುವ ಹಾಗೆ ಸುತ್ತಲೂ ಕೆಳಭಾಗದಲ್ಲಿ ಕತ್ತರಿಸಿ ಒಪ್ಪ ಓರಣವಾಗಿಸಿದ ಮಿಲ್ಟ್ರಿ ಹೇರ್‌ಕಟ್. ಆದೇಶ ಮಾಡಿ ಪಾಲಿಸುವೆ ಎಂದು ಎದೆಸೆಟಿಸಿ ನಿಲ್ಲುವ ಎತ್ತರ ನಿಲುವಿನ ಭಂಗಿ ಅಭಿಮಾನ ಹುಟ್ಟಿಸುತ್ತಿತ್ತು.
ಕನ್ಯೆ ನೋಡಿ ಹೋದ ಎರಡೇ ದಿನದಲ್ಲಿ ಒಪ್ಪಿಗೆ ಸೂಚಿಸಿ ವಿಷಯ ತಿಳಿಸಿದರು. ಅಪ್ಪ ಕೇಳಿದ, ಮಗಳೇ ನಿನಗೆ ವರನು ಮನಸ್ಸಿಗೆ ಬಂದಿದ್ದಾನೆಯೇ?, ನೇರವಾಗಿ ತನಗೆ ಒಪ್ಪಿಗೆ ಇದೆ ಎಂದು ಹೇಳಲಿಲ್ಲ, ನೀವು ಏನು ನಿರ್ಣಯಿಸುತ್ತೀರೋ ಹಾಗೆ ಎಂದು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದಳು. ಅಪ್ಪ ವರನ ಮನೆತನದ ಬಗ್ಗೆ ಎಲ್ಲವನ್ನು ವಿಚಾರಿಸಿ ಅರಿತುಕೊಂಡಿದ್ದನು. ತಂದೆ ತೀರಿಕೊಂಡಿದ್ದಾನೆ, ತಾಯಿ ಇದ್ದಾಳೆ. ಇಬ್ಬರೇ ಗಂಡು ಮಕ್ಕಳು. ಸುಮಾರು ೧೦ ಎಕರೆಯಷ್ಟು ಫಲವತ್ತಾದ ಭೂಮಿ ಇದೆ. ಹಳ್ಳಿಯಲ್ಲಿ ಮಧ್ಯಮ ಗಾತ್ರದ ಮನೆ ಇದೆ. ವರನು ೬, ೭ ವರ್ಷಗಳಿಂದ ಭಾರತೀಯ ಸೇನೆಯ, ಕಾಶ್ಮೀರ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಕೈತುಂಬ ಸಂಬಳ ಇದೆ. ಮಗಳ ಭದ್ರತೆ, ಭವಿಷ್ಯಕ್ಕಾಗಿ ಇಷ್ಟು ಸಾಕು ಎಂದು ಅಪ್ಪ ಹಿರಿಯರ ಜೊತೆಗೆ ನಿರ್ಣಯಿಸಿದ್ದನು. ವರನು ಕೇವಲ ಒಂದು ತಿಂಗಳು ರಜೆ ಮೇಲೆ ಇದ್ದಾನೆ. ಅಷ್ಟರಲ್ಲಿ ಸಂದೀಪ ಮತ್ತು ದೀಪಾ ಇವರ ಲಗ್ನವು ಸಂಪ್ರದಾಯದಂತೆ ಮುಗಿದುಹೋಯಿತು. ಲಗ್ನವಾದ ನಂತರ ಒಂದೇ ವಾರದಲ್ಲಿ ಕಾಶ್ಮೀರಕ್ಕೆ ಹೊರಟು ನಿಂತನು. ಲಗ್ನವಾಗಿ ಅವನನ್ನು ಅರಿಯುವಷ್ಟರಲ್ಲಿ ಸೇನೆಗೆ ಮರಳಿ ಹೋಗಿಬಿಟ್ಟನು. ನಂತರ ಅವನು ಇವಳೆಡೆಗೆ ಬಂದಿದ್ದು ಮೂರು ಸಲ ಮಾತ್ರ. ಮುಂದಿನ ಸಲ ಕರೆದುಕೊಂಡು ಹೋಗಿ ಕಾಶ್ಮೀರ ಸ್ವರ್ಗ ತೋರಿಸುವೆ ಎಂದು ಹೇಳಿ ಮರಳಿ ಬಂದಿದ್ದು ಪಾರ್ಥಿವ ಶರೀರವಾಗಿ. ಎಲ್ಲ ಸರ ಕಾರಿ ಗೌರವದೊಂದಿಗೆ ಪಾರ್ಥಿವ ಶರೀರಕ್ಕೆ ವಿದಾಯ ಹೇಳಿದರು. ವೀರ ಸಮಾಧಿ ನಿರ್ಮಾಣವಾಯಿತು. ದೇಶಭಕ್ತಿಯ ಪರಾಕಾಷ್ಠೆ ಎಲ್ಲೆಡೆ ಹರಡಿತು. ದಿನಗಳು ಉರಳಿದವು. ದೇಶಭಕ್ತಿ ಉದ್ವೇಗ ಇಳಿಯಿತು. ಸಾರ್ವಜನಿಕ ನೆನಪು ಸ್ವಲ್ಪ ದಿನ ಮಾತ್ರ, ಜನರು ಮರೆತರು. ಕೆಲವೇ ದಿನದಲ್ಲಿ ಅತ್ತೆ ತೀರಿಕೊಂಡಳು. ದೀಪಾ ಒಂಟಿಯಾದಳು. ಭಾವನಿಗೆ ತಿಳಿಸಿ ತವರು ಸೇರಿದಳು. ಭಾವ, ನಾದಿನಿ ಬಂದು ಭೇಟಿ ಆಗುತ್ತಿದ್ದರು. ಜಾತ್ರೆ-ಹಬ್ಬಗಳಲ್ಲಿ ಹಳ್ಳಿಗೆ ಬಂದು ಹೋಗುತ್ತಿದ್ದಳು.
ಭಾರತೀಯ ಸೇನೆಯಿಂದ ದೀಪಾಳಿಗೆ ಮೃತ ಸೈನಿಕನ ವಾರಸುದಾರಳಿಗೆ ದೊರೆಯಬೇಕಾದ ಪೆನ್ಷನ್, ಫಂಡ್ ಎಲ್ಲ ಆರ್ಥಿಕ ಸೌಲಭ್ಯವು ದೊರೆತವು. ಭಾವನಿಗೆ ವಿಷಯ ಗೊತ್ತಾಗಿ ತನಗೆ ಮೃತನ ಸೌಲಭ್ಯದಲ್ಲಿ ಭಾಗ ಕೊಡಲು ಕೇಳಲಾರಂಭಿಸಿದ. ಇದು ತನಗೆ ಸೇರಿದ್ದು, ಚಿಕ್ಕ ವಯಸ್ಸಿನಲ್ಲಿ ವಿಧವೆ ಆಗಿದ್ದೇನೆ, ನನ್ನ ಭವಿಷ್ಯಕ್ಕೆ ಬೇಕು ಎಂದು ನಿರಾಕರಿಸಿದಳು. ನಿನಗೆ ಮಕ್ಕಳಿಲ್ಲ, ನನ್ನ ಮಗನನ್ನು ದತ್ತು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ, ನಿರಾಕರಿಸಿದಳು. ಬರುವುದನ್ನು ನಿಲ್ಲಿಸಿದ. ದೀಪಾ ತನ್ನ ಹೆಸರಿನಲ್ಲಿ ಬಂದ ಫಂಡ್ ಹಣದ ಭಾಗದಲ್ಲಿ ನಿವೇಶನ ಖರೀದಿಸಿದಳು. ಬ್ಯಾಂಕ್‌ನಿಂದ ಸಾಲ ಪಡೆದು, ತವರುಮನೆಯ ತನ್ನ ಹಿಸ್ಸೇಯ ಜಮೀನಿನ ಉತ್ಪನ್ನದಿಂದ ಮನೆ ಕಟ್ಟಿಸಿದಳು. ಮೇಲಿನ ಭಾಗವನ್ನು ಬಾಡಿಗೆಗೆ ಕೊಟ್ಟು ಬ್ಯಾಂಕ್ ಕಂತು ಕಟ್ಟಲು ಪ್ರಾರಂಭಿಸಿದಳು.
ಗಂಡ ಹಾಗೂ ಭಾವನ ಹೆಸರಿಗೆ ಜಂಟಿಯಾಗಿ ಇದ್ದ ಮನೆ, ಹೊಲದ ದಾಖಲೆಯಲ್ಲಿ, ಗಂಡನ ಹೆಸರು ಕಡಿಮೆ ಮಾಡಿ ತನ್ನ ಹೆಸರು ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ನೀಡಿದಳು. ಭಾವನು ತಕರಾರು ಸಲ್ಲಿಸಿ ಇವಳು ಸಹೋದರನ ಹೆಂಡತಿ ಅಲ್ಲವೆಂದು ವಾದಿಸಿದ. ಹೆಸರು ದಾಖಲಾಯಿತು. ಭಾವನಿಗೆ ನನ್ನ ಗಂಡನ ಹಿಸ್ಸೇಯನ್ನು ತನಗೆ ವಿಭಜಿಸಿ ಕೊಡಲು ಕೇಳಿದಳು. ಸೇನೆಯಿಂದ ಬಂದ ಹಣದಲ್ಲಿ ಭಾಗ ಕೊಡಲು ಒತ್ತಾಯಿಸಿ ನಿರಾಕರಿಸಿದ. ತನ್ನ ಕಾನೂನುಬದ್ಧ ಹಕ್ಕು ಪಡೆಯಲು ನಿರ್ಣಯಿಸಿದಳು.
ತನ್ನ ಜೀವನಗಾಥೆಯನ್ನು ಎಳೆಎಳೆಯಾಗಿ ದಾಖಲೆ ಸಮೇತ ಬಿಚ್ಚಿಟ್ಟಳು. ಎಲ್ಲವನ್ನು ಅವಲೋಕಿಸಿ, ನನ್ನ ಕಕ್ಷಿದಾರಳಿಗೆ ಕಾನೂನಾತ್ಮಕ ನ್ಯಾಯ ಪಡೆಯುಲು ಭಾವನ ಮೇಲೆ ಸಮಹಿಸ್ಸೆ ವಿಭಜಿಸಿ, ಪ್ರತ್ಯೇಕ ಸ್ವಾಧೀನಕೊಡಿಸಲು ಪ್ರಾರ್ಥಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದೆ. ಪ್ರತಿವಾದಿ ವಕೀಲರ ಮುಖಾಂತರ ಹಾಜರಾಗಿ ತನ್ನ ತಕರಾರು/ರಿಟನ್ ಸ್ಟೇಟ್ಮೆಂಟ್ ದಾಖಲಿಸಿದನು. ವಾದಿ ಖರೀದಿಸಿ ಕಟ್ಟಿಸಿದ ಮನೆ ಜಂಟಿ ಕುಟುಂಬದ ಆಸ್ತಿ ಅದರಲ್ಲಿ ತನಗೆ ಹಿಸ್ಸೆ ಕೊಡಿಸಲು ಪ್ರತಿವಾದ/ಕೌಂಟರ್ ಕ್ಲೇಮ್ ಹಕ್ಕು ಪ್ರಾರ್ಥಿಸಿದ. ವಾದಿ ಪ್ರತಿವಾದಿ ದಾಖಲೆ ಸಮೇತ ಮೌಖಿಕ ಸಾಕ್ಷಿ ಹಾಜರುಪಡಿಸಿದರು. ಉಭಯ ವಕೀಲರು ವಾದ ಮಂಡಿಸಿದರು.
ನ್ಯಾಯಾಲಯ ವಾದಿಗೆ ಮನೆತನದ ಆಸ್ತಿಯಲ್ಲಿ ಅರ್ಧ ಹಿಸ್ಸೆ ಕೊಡುವಂತೆ ತೀರ್ಪು ನೀಡಿ, ವಾದಿ ನಿವೇಶನ ಖರೀದಿಸಿ ಕಟ್ಟಿಸಿದ ಮನೆ, ಗಂಡ ಮರಣಾನಂತರ ಬಂದ ಫಂಡ್, ತವರುಮನೆ ಹೊಲದ ಉತ್ಪನ್ನ ಮತ್ತು ಬ್ಯಾಂಕ್ ಸಾಲದಿಂದ ಕಟ್ಟಿಸಿದ್ದು, ಅದು ವಾದಿಯ ಸ್ವಯಾರ್ಜಿತ ಆಸ್ತಿ. ಅದರಲ್ಲಿ ಪ್ರತಿವಾದಿಗೆ ಹಕ್ಕಿಲ್ಲ ಎಂದು ನಿರ್ಣಯಿಸಿತು. ಪ್ರತಿವಾದಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯೂ ವಜಾ ಆಯಿತು.
ದೇಶವನ್ನು ವೈರಿ ರಾಷ್ಟ್ರಗಳಿಂದ ರಕ್ಷಿಸಲು, ಹಿಮದ ಚಳಿ, ಮರುಭೂಮಿಯ ಬಿಸಿಲು, ಬಂಜರು ಭೂಮಿಯ ಧೂಳು ಸಹಿಸಿ, ಕುಟುಂಬದ ಪ್ರೀತಿ ವಾತ್ಸಲ್ಯದಿಂದ ಸೈನಿಕ ದೂರವಾಗುತ್ತಾನೆ. ನಿವೃತ್ತರಾದ ಹೆಚ್ಚಿನ ಜನರು ಮನೆಯವರಿಂದ, ಬೇರೆಯವರಿಂದ ಮೋಸಗೊಂಡು ಹಣ ಕಳೆದುಕೊಳ್ಳುತ್ತಾರೆ. ಹುತಾತ್ಮರಾದ ಬಹುಭಾಗ ಸೈನಿಕರ ಹೆಂಡತಿ, ಮಕ್ಕಳು ಇದನ್ನೇ ಅನುಭವಿಸುತ್ತಾರೆ.

Next Article