ಹುಬ್ಬಳ್ಳಿಯ ಶ್ರೀರಾಮನ ಧ್ವಜಕ್ಕೆ ಹೊರ ರಾಜ್ಯಗಳಿಂದ ಭಾರಿ ಬೇಡಿಕೆ
ರಾಮರಡ್ಡಿ ಅಳವಂಡಿ
ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಒಂದು ವಾರ ಮಾತ್ರ ಬಾಕಿ ಅಷ್ಟೇ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸಮೀಪವಾಗುತ್ತಿದ್ದಂತೆಯೇ ಶ್ರೀರಾಮ ಮತ್ತು ಹನುಮಾನ ಧ್ವಜಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.
ಹಿಂದೂ ಸಂಘಟನೆಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ದೇವಸ್ಥಾನಗಳು, ಶ್ರೀರಾಮನ ಭಕ್ತ ಸಮೂಹ, ಶ್ರೀರಾಮನ ಆರಾಧಕರು ಶ್ರೀರಾಮನ ಚಿತ್ರ ಇರುವ ಕೇಸರಿ ಬಣ್ಣದ ಧ್ವಜ ಕಟ್ಟಲು ಭಾರಿ ಉತ್ಸುಕತೆ ತೋರಿವೆ. ಎಲ್ಲೆಲ್ಲಿ ಈ ರೀತಿಯ ಧ್ವಜ ತಯಾರಿಕೆ ಮಾಡುತ್ತಾರೊ ಅಂತಹ ಕಡೆಗಳಲ್ಲಿ ಧ್ವಜ ತಯಾರಿಕೆಗೆ ಬುಕ್ ಮಾಡುತ್ತಿವೆ. ಹೀಗೆ ಬುಕ್ಕಿಂಗ್ ಪಡೆದ ಧ್ವಜ ತಯಾರಕರು ಈಗಾಗಲೇ ಧ್ವಜ ಪೂರೈಕೆ ಕಾರ್ಯ ಶುರು ಮಾಡಿದ್ದಾರೆ.
ಹೀಗೆ ಸಾವಿರಾರು ಧ್ವಜಗಳನ್ನು ತಯಾರಿ ಮಾಡಿ ದೂರದ ಊರುಗಳಿಗೆ ಹುಬ್ಬಳ್ಳಿಯಲ್ಲಿರುವ ಧ್ವಜ ತಯಾರಕರು ಕಳಿಸುತ್ತಿದ್ದಾರೆ. ಇಲ್ಲಿನ ಮರಾಠ ಗಲ್ಲಿಯ ವಿಜಯ ಹಂದ್ರೆ ನೇತೃತ್ವದಲ್ಲಿ ಸಹೋದರ ಸಂಜಯ ಹಂದೆ, ಸಹಾಯಕರಾದ ಮಹಾಂತೇಶ ಸೇರಿದಂತೆ ಕೆಲ ಸಹಾಯಕರು ಶ್ರೀರಾಮನ ಧ್ವಜ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇವರ ಧ್ವಜ ತಯಾರಿಕಾ ಘಟಕದಲ್ಲಿ ಹಗಲು ರಾತ್ರಿ ಧ್ವಜ ತಯಾರಿಕೆ ಕಾರ್ಯ ನಡೆಯುತ್ತಿದೆ.
ಪ್ರಖರವಾದ ಕೇಸರಿ ಬಣ್ಣದ ಬಟ್ಟೆ, ಕಡುಕಪ್ಪು ಬಣ್ಣದಲ್ಲಿ ಶ್ರೀರಾಮಚಂದ್ರನ ಚಿತ್ರ ಇರುವ ಧ್ವಜಗಳನ್ನು ಇವರು ತಯಾರಿಸುತ್ತಿದ್ದಾರೆ. ಕೇಸರಿ ಬಣ್ಣದ ಧ್ವಜದ ಮೇಲೆ ಬಿಲ್ಲು ಬಾಣ ಹಿಡಿದು ನಿಂತ ಪ್ರಭು ಶ್ರೀರಾಮಚಂದ್ರನ ಆಕರ್ಷಕ ಚಿತ್ರ ಶ್ರೀರಾಮನ ಆರಾಧಕರಲ್ಲಿ ಭಕ್ತಿಯನ್ನು ಇಮ್ಮಡಿಸುವಂತಿದೆ. ಇದು ಇವರು ತಯಾರಿಸುವ ಧ್ವಜದ ವಿಶೇಷ.
ಪುಣೆ, ಶಿರಸಿ, ಗೋವಾ, ಬೆಳಗಾವಿ, ಕೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಗದಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಿಂದ ಧ್ವಜ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ವಿವಿಧ ಅಳತೆಯ ೬-೭ ಸಾವಿರ ಧ್ವಜಗಳನ್ನು ಪೂರೈಸಲಾಗಿದೆ. ಎಲ್ಲ ಧ್ವಜಗಳನ್ನು ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದ ಪಾರ‍್ಸಲ್ ಘಟಕದಿಂದ ಕಳಿಸಿದ್ದೇವೆ ಎಂದು ಧ್ವಜ ತಯಾರಕರಾದ ವಿಜಯ ಹಂದ್ರೆ ಹೇಳಿದರು.
ಒಂದು ಅಡಿಯಿಂದ ಹತ್ತು ಅಡಿವರೆಗೆ ಧ್ವಜ ತಯಾರಿಕೆ
ಒಂದು ಅಡಿ ಧ್ವಜದಿಂದ ಬೇಡಿಕೆಗೆ ತಕ್ಕಂತ ಸೈಜಿನಲ್ಲಿ ಧ್ವಜ ತಯಾರಿಸಿ ಕೊಡುತ್ತಿದ್ದೇವೆ. ೧೦ ಅಡಿಯವರೆಗೂ ಧ್ವಜಗಳನ್ನು ತಯಾರಿಸುತ್ತಿದ್ದೇವೆ. ನಾಲ್ಕು ಮೀಟರಿನ ಧ್ವಜ ಒಂದಕ್ಕೆ ೪೫೦ ರೂ. ನಿಗದಿಪಡಿಸಲಾಗಿದೆ.
ಬಹಳಷ್ಟು ಜನರು ದೊಡ್ಡ ಗಾತ್ರದ ಧ್ವಜ ತಯಾರಿಸಿಕೊಡಲು ಕೇಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ದಿನ ಸಮೀಪ ಆಗುತ್ತಿದ್ದಂತೆಯೇ ದಿನದಿಂದ ದಿನಕ್ಕೆ ಹೆಚ್ಚು ಆರ್ಡರ್ ಬರುತ್ತಿವೆ. ಧ್ವಜಕ್ಕೆ ಬಳಸಿದ ಬಟ್ಟೆ ಗಾಳಿ, ಮಳೆಗೆ ಹರಿಯಬಹುದು. ಆದರೆ, ಕಪ್ಪು ಬಣ್ಣದಲ್ಲಿ ಹಾಕಿರುವ ಶ್ರೀರಾಮನ ಚಿತ್ರದ ಬಣ್ಣ ಮಾತ್ರ ಹೋಗುವುದಿಲ್ಲ. ಅಂತೆಯೇ ನಮ್ಮ ಧ್ವಜಕ್ಕೆ ಬೇಡಿಕೆ ವಿಜಯ್ ಹಂದ್ರೆ ಹಾಗೂ ಅವರ ಸಹೋದರ ಸಂಜಯ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.