ಹುಬ್ಬಳ್ಳಿ ಗಲಭೆ ಪ್ರಕರಣ: ಕೇಸ್ ವಾಪಸ್ ಪಡೆದಿದ್ದು ಸರಿಯಾಗಿದೆ
ಧಾರವಾಡ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ಪಡೆದ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡಲಿ ಬೇಡ ಎಂದವರಾರು? ವಕೀಲರು ಕೋರ್ಟ್‌ಗೆ ಹೋಗಲಿ ಕೋರ್ಟ್ ಇರುವುದೇ ವಿಚಾರಣೆ ಮಾಡುವುದಕ್ಕೆ ಎಂದರು.
ಮುಡಾ ವಿಚಾರವಾಗಿ ಬಿಜೆಪಿಯವರು ಪಾದಯಾತ್ರೆ ಮಾಡಿದರು. ಇದೇ ಬಿಜೆಪಿಯವರ ಮೇಲೆ ಎಷ್ಟು ಎಫ್ಐಆರ್ ಇದೇ ನೋಡಿಕೊಳ್ಳಲಿ. ಕೇಂದ್ರ ಸಚಿವರುಗಳ ಮೇಲೆ ಶೇ.39 ರಷ್ಟು ಕೇಸ್ ಇವೆ. ಅವರನ್ನು ಒಳಗೆ ಹಾಕಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು ಎಂದು ಪ್ರಶ್ನಿಸಿದರು.
ಖರ್ಗೆ ಸೈಟ್ ವಾಪಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದರೆ ಅದು ಅವರ ದೊಡ್ಡ ಗುಣ. ಅದಕ್ಕೆ ಬಿಜೆಪಿಯವರು ಖುಷಿಯಾಗಬೇಕು. ಅದಕ್ಕೆ ಯಾಕೆ ರಾಜೀನಾಮೆ ಕೇಳಬೇಕು? ಪ್ರೇರಣಾ ಟ್ರಸ್ಟ್‌ಗೆ ದುಡ್ಡು ಬಂದ ಮೇಲೆಯೇ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದರು. ಯಾಕೆ ಮಾಡಿದ್ದು ಎಂದರೆ ಅವರ ಬಳಿ ವಾಷಿಂಗ್ ಮಶಿನ್ ಇದೆ ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.
ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದೆ. ಸಿಎಂ ಜೊತೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.