ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹುಬ್ಬಳ್ಳಿ ತುಂಬ ಜೈ ಶ್ರೀ ರಾಮ… ಭವ್ಯ ಅಲಂಕಾರ, ಧಾರ್ಮಿಕ ಭಾವ ಉತ್ತುಂಗಕ್ಕೆ

02:10 AM Jan 21, 2024 IST | Samyukta Karnataka

ಹುಬ್ಬಳ್ಳಿ: ಶ್ರೀರಾಮ ಮಂದಿರ ಉದ್ಘಾಟನೆ ಕಣ್ಣು ತುಂಬಿಕೊಳ್ಳಲು ವಾಣಿಜ್ಯ ನಗರ ಸಜ್ಜಾಗಿದೆ. ದೇಶದ ಈ ಹಬ್ಬವನ್ನು ಆಚರಿಸಲು ಇಲ್ಲಿನ ದೇವಾಲಯಗಳು ಹಾಗೂ ಮನೆಗಳು ಸನ್ನದ್ಧವಾಗಿವೆ.
ಇಡೀ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲೆಡೆ ರಾಮ ನಾಮ ತಾರಕಕ್ಕೇರಿದೆ. ಹುಬ್ಬಳ್ಳಿಗೆ ಹುಬ್ಬಳ್ಳಿಯೇ ಶ್ರೀರಾಮಮಯವಾಗಿದೆ.
ಕೊಪ್ಪೀಕರ ರಸ್ತೆ, ಬ್ರಾಡ್‌ವೇ, ಮರಾಠಾ ಗಲ್ಲಿ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ಬಟರ್ ಮಾರ್ಕೆಟ್, ದಾಜೀಬಾನ ಪೇಟೆ, ಜವಳಿ ಸಾಲು, ಸ್ಟೇಷನ್ ರಸ್ತೆ, ಶಕ್ತಿ ರೋಡ್, ಅಂಚಟಗೇರಿ ಓಣಿ, ಕುಬುಸದ ಗಲ್ಲಿ, ಭೂಸಪೇಟೆ, ಅಕ್ಕಿಹೊಂಡ ಸೇರಿದಂತೆ ಹುಬ್ಬಳ್ಳಿ ಕೇಂದ್ರ ಮಾರುಕಟ್ಟೆ ಭಾಗವನ್ನು ನೋಡಿದವರಿಗೆ ಅಯೋಧ್ಯಾ ನಗರವೇ ಮೈದಳೆದಿರುವ ಭಾವನೆ ಮೂಡುತ್ತಿದೆ.ಇಲ್ಲೆಲ್ಲ ಕೇಸರಿ ಬಣ್ಣದ ಬಂಟಿಂಗ್‌ಗಳನ್ನು ಕಟ್ಟಲಾಗಿದೆ. ಹನುಮಂತ- ಶ್ರೀರಾಮನ ಚಿತ್ರಗಳಿರುವ ಧ್ವಜಗಳನ್ನು ಅಂಗಡಿಗಳ ಮೇಲೆ ಹಾರಿಸಲಾಗಿದೆ.
ವಾಣಿಜ್ಯ ಪ್ರದೇಶಗಳಾದ ಇಲ್ಲೆಲ್ಲ ಅಂಗಡಿಗಳಿಗೆ ದೀಪಾವಳಿಯನ್ನೂ ಮೀರಿಸುವಂತೆ ಲೈಟಿಂಗ್ ಮಾಡಲಾಗಿದೆ. ಮಾಲ್‌ಗಳು-ಮಾರ್ಟ್ಗಳು ಹಾಗೂ ಇನ್ನಿತರ ದೊಡ್ಡ ವಾಣಿಜ್ಯ ಸಂಕೀರ್ಣಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ನಗರದ ತುಂಬ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರ ಹಾಗೂ ಬಂಟಿಂಗ್‌ಗಳ ಅಲಂಕಾರ ನಿಬ್ಬೆರಗಾಗಿಸುವಂತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹುಬ್ಬಳ್ಳಿಯಲ್ಲಿ ಶ್ರೀ ರಾಮೋತ್ಸವ ಭವ್ಯ ಲೋಕವೊಂದು ಧರೆಗಿಳಿಯುವಂತೆ ಮಾಡಿದೆ.
ಈ ಲೋಕದಲ್ಲಿ ಧಾರ್ಮಿಕ ಭಾವನೆಗಳ ಜೊತೆಗೆ, ಊರಿನ ಹಬ್ಬದಂತಹ ಲಾಸ್ಯವಿದೆ. ದೊಡ್ಡ ಜಾತ್ರೆಯೇ ಮೇಳೈಸಿದ ಅನುಭವವನ್ನು ನೀಡುತ್ತಿದೆ. ಸೋಮವಾರದ ಹಬ್ಬದೆಡೆಗಿನ ನಿರೀಕ್ಷೆ ಒಂದೆಡೆಯಾದರೆ, ಇದಕ್ಕೆ ಸಿದ್ಧಗೊಂಡಿರುವ ನಗರವನ್ನು ನೋಡುವುದೂ ಒಂದು ರೀತಿಯ ಹಬ್ಬವೇ ಆಗಿದೆ.

ಮನೆ, ಬಡಾವಣೆಗಳು
ಕೇಂದ್ರ ವಾಣಿಜ್ಯ ಭಾಗದಲ್ಲಿ ವರ್ತಕರಿಂದ ಈ ಬಗೆಯ ಸಂಭ್ರಮ ಸೃಷ್ಟಿಯಾಗಿದ್ದರೆ, ಬಡಾವಣೆಗಳು ಹಾಗೂ ಒಟ್ಟಾರೆ ನಗರದ ಮನೆಗಳಲ್ಲಿಯೂ ವೈಯಕ್ತಿಕ ಮಟ್ಟದಲ್ಲಿ ಸಂಭ್ರಮ ಮನೆ ಮಾಡಿದೆ.ಅನೇಕ ಅಪಾರ್ಟ್ಮೆಂಟ್‌ಗಳು, ಬಿಡಿ ಮನೆಗಳು, ಬಡಾವಣೆಗಳ ಗುಂಪು ವಸತಿ ಸ್ಥಳಗಳು ಹಾಗೂ ಕಟ್ಟಡಗಳ ಮೇಲೆಲ್ಲ ಶ್ರೀ ರಾಮನ ಧ್ವಜ ಹಾರಾಡುತ್ತಿದೆ.
ಗೋಕುಲ ರಸ್ತೆ, ಟೆಂಡರ್ ಶ್ಯೂರ್ ರಸ್ತೆ, ವಿಜಯನಗರ, ಅಶೋಕನಗರ, ಹೊಸೂರು, ವಿಕಾಸನಗರ, ಬಿಡ್ನಾಳ, ಸಿಲ್ವರ್ ಟೌನ್, ಡಾರ‍್ಸ್ ಕಾಲೋನಿ, ಅಕ್ಷಯ ಪಾರ್ಕ್, ಚನ್ನಪೇಟೆ, ಲಿಂಗರಾಜನಗರ ಮುಖ್ಯ ರಸ್ತೆ, ಮಧುರಾ ಕಾಲೋನಿ, ಅಶೋಕನಗರ, ಕೇಶವಾಪುರ ಮುಖ್ಯ ರಸ್ತೆ, ಕುಸುಗಲ್ ರಸ್ತೆ, ಶ್ರೀನಗರ, ಉಣಕಲ್ ಮುಖ್ಯರಸ್ತೆ ಸೇರಿದಂತೆ ಕೇಂದ್ರ ಸ್ಥಾನದಿಂದ ಹೊರತಾದ ರಸ್ತೆಗಳಲ್ಲಿಯೂ ಬಂಟಿಂಗ್- ಧ್ವಜಗಳು ರಾರಾಜಿಸುತ್ತಿವೆ. ಎಲ್ಲ ಪ್ರಮುಖ ಸರ್ಕಲ್‌ಗಳನ್ನೂ ವರ್ತಕರು ಹಾಗೂ ದಾನಿಗಳ ವೆಚ್ಚದಲ್ಲಿ ಅಲಂಕಾರ ಮಾಡಲಾಗಿದೆ. ರಾಮಭಕ್ತರ ಫ್ಲೆಕ್ಸ್ಗಳು ಎಲ್ಲೆಡೆ ರಾರಾಜಿಸುತ್ತಿವೆ.

ದೇವಸ್ಥಾನಗಳ ಸ್ವಚ್ಛತೆ
ಸೋಮವಾರ ನಗರದ ಎಲ್ಲ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳ ಸ್ವಚ್ಛತೆ ಕಾರ್ಯ ಶನಿವಾರ ಭರದಿಂದ ನಡೆಯಿತು.
ಕಮರಿಪೇಟೆಯ ಶ್ರೀ ರಾಮನ ದೇವಾಲಯ, ಮೇದಾರ ಓಣಿಯ ಹನುಮಂತ ಗುಡಿ ಹಾಗೂ ಬೇರೆ ದೇಗುಗಳಲ್ಲಿ ಬಹುತೇಕ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಹಂತದ ಶುಚಿತ್ವ ಹಾಗೂ ಸಣ್ಣ ಪುಟ್ಟ ದುರಸ್ತಿಗಳನ್ನು ರವಿವಾರ ರಾತ್ರಿಯ ವೇಳೆಗೆ ಮುಗಿಸುವುದಾಗಿ ಸಂಬಂಧಿಸಿದವರು ತಿಳಿಸಿದ್ದಾರೆ.ಎಲ್ಲ ದೇವಾಲಯಗಳ ಆವರಣಗಳನ್ನೂ ವಿದ್ಯುತ್ ದೀಪಗಳು ಹಾಗೂ ಕೇಸರಿ ಬಂಟಿಂಗ್‌ಗಳಿಂದ ಅಲಂಕಾರ ಮಾಡಲಾಗಿದೆ. ಇವು ಅಯೋಧ್ಯಾ ಶ್ರೀರಾಮ ಲೋಕ ಧರೆಗಿಳಿದು ಬಂದಿರುವಂತೆ ಕಂಗೊಳಿಸುತ್ತಿವೆ. ಭಾನುವಾರ ಸಂಜೆಯ ಹೊತ್ತಿಗೆ ರಂಗೋಲಿ ಹಾಗೂ ಮತ್ತಿತರ ಪೂರಕ ಕೆಲಸ ಕಾರ್ಯಗಳು ಮುಗಿಯಲಿವೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯ ಹೊತ್ತಿಗೆ ಇಲ್ಲೆಲ್ಲ ವಿಶೇಷ ಪೂಜೆ ನೆರವೇರಲಿದೆ. ಅನೇಕ ಮಠಗಳು ಮತ್ತು ದೇಗುಲಗಳಲ್ಲಿ ಮಧ್ಯಾಹ್ನದ ಪ್ರಸಾದ ಹಾಗೂ ಸಿಹಿ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರದ ವ್ಯವಸ್ಥೆಯನ್ನು ಸರ್ಕಾರ ಮಾಡಿರುವುದರಿಂದ, ಇಲ್ಲಿನ ಕೆಲ ಖಾಸಗಿ ವಲಯದವರು ಎಲ್‌ಇಡಿ ಪರದೆಯನ್ನು ಅಳವಡಿಕೆ ಮಾಡಲಿದ್ದಾರೆ. ನೇರ ಪ್ರಸಾರವನ್ನು ದುರ್ಗದ ಬಯಲು ಸೇರಿ ಕೆಲ ಪ್ರಮುಖ ಸರ್ಕಲ್‌ಗಳಲ್ಲಿ ಮಾಡಲಿದ್ದಾರೆ.

Next Article