For the best experience, open
https://m.samyuktakarnataka.in
on your mobile browser.

ಹೂವು ಮುದುಡುವ ಸಮಯ

03:36 AM Aug 06, 2024 IST | Samyukta Karnataka
ಹೂವು ಮುದುಡುವ ಸಮಯ

ಋತುಚಕ್ರದ ಆರಂಭ ಹೆಣ್ತನದ ಕುರುಹಾದ ಗರ್ಭಧಾರಣೆಗೆ ಅಣಿಯಾದರೆ, ಈ ವ್ಯವಸ್ಥೆಯ ನಿಲುಗಡೆ ಮತ್ತೊಂದು ಹೊಸ್ತಿಲು. ಅರಳಿದ ಹೂವು ಮುದುಡುವ ಸಮಯ ಬರಲೇಬೇಕು, ನಿಶ್ಚಿತ! ಆದರೆ ಈ ಕ್ರಿಯೆ ಋಣಾತ್ಮಕವಲ್ಲ ಹೂವು ಮುದುಡುವುದು ಹಣ್ಣಾಗಿ ಮಾಗಲು, ಬದುಕಿನ ಮತ್ತೊಂದು ಮಜಲಿನತ್ತ ಸಾಗಲು… ಇನ್ನೊಂದು ಅವತಾರ.
ಸರಿಸುಮಾರು ೫೦-೫೫ ವರ್ಷ ಪ್ರಾಯದ ನಂತರ ಮುಟ್ಟಾಗುವಿಕೆ ನಿಲ್ಲುವ ಸಮಯ. ಮುಟ್ಟಿನ ಅವಧಿಯಿಲ್ಲದೆ ೧೨ ತಿಂಗಳು ಮುಂದಕ್ಕೆ ಹೋಗುವ ಪ್ರಕ್ರಿಯೆಗೆ ಮುಟ್ಟು ನಿಲ್ಲುವಿಕೆ, ಮನೋಪಾಸ್ ಅಥವಾ ಋತುಸ್ತಬ್ಧ ಎನ್ನುತ್ತಾರೆ. ಮನೋಪಾಸ್ ಸಮಯದಲ್ಲಿ ಮಹಿಳೆಯ ಸಂತಾನೋತ್ಪತ್ತಿ ನಿಲ್ಲುತ್ತದೆ, ಮುಟ್ಟು ನಿಂತಾಗ ಮಹಿಳೆಯರಿಗೆ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತದೆ. ಉತ್ಸಾಹದ ಗಣಿಯಾಗಿದ್ದ ದೇಹಕ್ಕೆ ಈಗ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ! ದೇಹದಲ್ಲಿ ನಿರಾಸಕ್ತಿ, ಈ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಗಳಿಂದ ಮಾನಸಿಕ ದೈಹಿಕ ಅಸಮತೋಲನ ಸಾಮಾನ್ಯ. ಕೆಲವು ಮಹಿಳೆಯರಲ್ಲಿ ಅವರ ದೇಹದ ವೈದ್ಯಕೀಯ ಪರಿಸ್ಥಿತಿಗಳು ಅಥವಾ ಹಿಂದಿನ ಶಸ್ತ್ರಚಿಕಿತ್ಸೆಗಳಿಂದ ಇದು ಮೊದಲೇ ಪ್ರಾರಂಭವಾಗಬಹುದಾದ ಸಾಧ್ಯತೆಗಳಿರುತ್ತವೆ.
"ಅಯ್ಯೋ ಅಮ್ಮ ಯಾಕೆ ಹೀಗೆ ಆಡ್ತಾ ಇದ್ದಾಳೆ, ಯಾವಾಗ ನೋಡಿದ್ರೂ ಸಿಟ್ಟು ಮಾಡ್ತಾಳೆ, ಕೂಗಾಡ್ತಾಳೆ, ಒಮ್ಮೊಮ್ಮೆ ನಗುತ್ತಾ ಮಾತಾಡ್ತಾಳೆ! ಇದು ಮಕ್ಕಳ ಕಂಪ್ಲೆಂಟ್… ಆದರೆ ಯಾಕೋ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಾ ಇದ್ದಾಳೆ ಅನ್ನೋದು ಗಂಡಂದಿರ ದೂರು… ಇದು ೪೫ ವರ್ಷ ದಾಟಿದ ಮಹಿಳೆ ಇರುವ ಪ್ರತಿ ಮನೆಯಲ್ಲಿ ನಡೆಯುವ ಮೇಲ್ನೋಟದ ಸನ್ನಿವೇಶಗಳು. ಇದಕ್ಕೆ ಕಾರಣ ಮಹಿಳೆಯರಲ್ಲಿ ಉಂಟಾಗುವ ಮುಟ್ಟು ನಿಲ್ಲುವ ದಿನಗಳು. ಹೆಣ್ಣಿನ ಜೀವನ ಚಕ್ರದ ಒಂದು ಭಾಗವಾಗಿರುವ ಮುಟ್ಟು, ಅದು ನಿಲ್ಲುವುದು ಸಹಜವೆ! ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಕ್ಷನ್ ಹಾರ್ಮೋನ್‌ಗಳ ಮಟ್ಟದಲ್ಲಿ ಕಡಿಮೆಯಾಗಿ ಮೊಟ್ಟೆ ಬಿಡುಗಡೆಯಾಗುವುದು ನಿಲ್ಲುತ್ತದೆ. ಈ ಸಮಯದಲ್ಲಿ ಮೂಡ್ ಸ್ವಿಂಗ್ಸ್ಗಳು, ಒಂಟಿತನ, ಆತ್ಮವಿಶ್ವಾಸ ಕಡಿಮೆಯಾಗುವುದು ಬಹು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ. ಆತಂಕ, ಮಾನಸಿಕ ಖಿನ್ನತೆಯ ಅನುಭವವಾಗುತ್ತದೆ, ವಿನಾಕಾರಣ ಕೋಪಿಸಿಕೊಂಡು ಕಿರುಚಾಡುವುದು, ಅಂಗೈ, ಕಾಲು, ಜನನಾಂಗದ ಭಾಗ ಸೇರಿ ಇಡೀ ದೇಹ ಇದ್ದಕ್ಕಿದ್ದ ಹಾಗೆ ಬಿಸಿಯಾದ ಅನುಭವವಾಗುವುದು, ಋತುಮತಿಯಾದಾಗ ಕೆಲವರಿಗೆ ಕಡಿಮೆ ರಕ್ತಸ್ರಾವ ಅಥವಾ ಹೆಚ್ಚು ರಕ್ತಸ್ರಾವವಾಗುವುದು ಕಂಡುಬರುತ್ತದೆ. ರಾತ್ರಿ ಸರಿಯಾಗಿ ನಿದ್ದೆ ಬಾರದೆ ಇರುವುದು, ಹಸಿವಾಗದೆ ಇರುವುದು ಅಥವಾ ಅತಿಯಾಗಿ ಹಸಿವಾಗುವುದನ್ನು ಕಾಣಬಹುದು, ದೇಹದಲ್ಲಿ ತೂಕ ಹೆಚ್ಚಾಗುವುದು ಅಥವಾ ಅತಿಯಾಗಿ ತೂಕ ನಷ್ಟವಾಗುವುದು ಜೊತೆಗೆ ಚರ್ಮ, ಜನನಾಂಗ, ಕಣ್ಣು, ಕೂದಲುಗಳಲ್ಲಿ ಒಣಗಿದ ಅನುಭವವನ್ನು ಕಾಣಬಹುದಾಗಿದೆ. ಲೈಂಗಿಕ ಕ್ರಿಯೆಯ ಆಸಕ್ತಿಯಲ್ಲಿ ಕೊರತೆ, ಹೃದಯಬಡಿತ ಹೆಚ್ಚಳ, ತಾತ್ಕಾಲಿಕ ಮೆರೆಗುಳಿತನ, ಮೂತ್ರನಾಳದ ಸೋಂಕು, ನಿಶ್ಶಕ್ತಿ, ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಇಂತಹ ಸಮಯದಲ್ಲಿ ನಮ್ಮನ್ನು ನಾವೇ ದೈಹಿಕವಾಗಿ ಮಾನಸಿಕವಾಗಿ ಬಲಪಡಿಸಿಕೊಳ್ಳಬೇಕು. ಏಕೆಂದರೆ ಹೆಣ್ಣಿಗೆ ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ಬದಲಾವಣೆಯನ್ನು ಮನೆಯವರು ಅರ್ಥಮಾಡಿಕೊಳ್ಳುವುದಿಲ್ಲ ಹಾಗೂ ಅವರಿಗೆ ಇದರ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಹೀಗಾಗಿ ೪೦ ಪ್ರಾಯ ದಾಟಿದ ನಂತರ ದಿನನಿತ್ಯ ವಾಕಿಂಗ್, ಲಘು ವ್ಯಾಯಾಮವನ್ನು ಕನಿಷ್ಠ ೪೫ ನಿಮಿಷಗಳ ಕಾಲ ಮಾಡಬೇಕು. ಇನ್ನು ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳಲು ಹಾರ್ಮೋನ್ ಬದಲಾವಣೆಯನ್ನು ನಿಯಂತ್ರಿಸಲು ನಾಡಿಶೋಧ ವ್ಯಾಯಾಮ, ಬ್ರಹ್ಮಹರಿ ಪ್ರಾಣಾಯಾಮಗಳನ್ನು ತಪ್ಪದೆ ಅಭ್ಯಾಸ ಮಾಡುವುದು ಒಳ್ಳೆಯದು. ಕನಿಷ್ಠ ೧೦ ನಿಮಿಷದಷ್ಟು ಹೊತ್ತು ಧ್ಯಾನದ ಅಭ್ಯಾಸವಿರಲಿ.
ಆಹಾರದ ಪದ್ಧತಿ: ಮುಟ್ಟು ನಿಲ್ಲುವ ದಿನಗಳಲ್ಲಿ ಕೆಲವರಲ್ಲಿ ಅತಿಯಾಗಿ ಹಸಿವಾಗಬಹುದು ಹೀಗಾಗಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ, ಆದಷ್ಟು ತಾಜಾ ಆಹಾರವನ್ನು ಸೇವಿಸಿ. ರಾತ್ರಿ ಮಾಡಿ ಫ್ರಿಡ್ಜ್ನಲ್ಲಿ ಇಟ್ಟ ಆಹಾರದ ಸೇವನೆ ಮಾಡುವ ಅಭ್ಯಾಸ ಬೇಡ. ಕ್ಯಾಲ್ಸಿಯಂ,ವಿಟಮಿನ್ ಡಿ, ಮೆಗ್ನೀಷಿಯಂಯುಕ್ತ ಆಹಾರಗಳನ್ನು ಸೇವಿಸಿ. ಉದಾಹರಣೆಗೆ: ಹಾಲು, ಮೊಟ್ಟೆ, ಮೊಳಕೆ ಬರಿಸಿದ ಕಾಳುಗಳು, ಸೋಯಾಬೀನ್, ಹಸಿರು ತರಕಾರಿಗಳ ಸೇವನೆ ಹೆಚ್ಚಿರಲಿ. ಇದರಿಂದ ಮೂಳೆಗಳ ಹಾನಿಯನ್ನು ತಡೆಯಬಹುದಾಗಿದೆ. ಮಧುಮೇಹ ಇಲ್ಲವೆಂದರೆ ಸೇಬು, ಬಾಳೆಹಣ್ಣು, ದ್ರಾಕ್ಷಿ, ಮೂಸಂಬಿ ಅಂತಹ ಹೆಚ್ಚು ಸಿಹಿಕಾರಕ ಹಣ್ಣುಗಳನ್ನು ಸೇವಿಸಬಹುದು. ಇನ್ನು ತರಕಾರಿಗಳಲ್ಲಿ ಬೀಟ್ರೂಟ್, ಕ್ಯಾರೆಟ್, ಬೀನ್ಸ್ನಂತಹವುಗಳನ್ನು ಹೆಚ್ಚಾಗಿ ಬಳಸುವುದು ತುಂಬಾ ಹಿತಕರ. ಮುಟ್ಟು ನಿಲ್ಲುವ ಸಮಯದಲ್ಲಿ ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ತುಂಬಾ ಹಾನಿಕರವಾಗುತ್ತದೆ. ಎಣ್ಣೆಯುಕ್ತ ಆಹಾರ ಸೇವನೆ ಮಾಡಬೇಡಿ, ಮಸಾಲೆ ಆಹಾರಗಳು, ಟೀ, ಕಾಫಿ ಎಲ್ಲವೂ ದೇಹದ ಬಿಸಿ ಹೆಚ್ಚಿಸುತ್ತದೆ. ಇದರ ಬದಲು ದೇಹ ತಂಪು ಮಾಡುವ ಆಹಾರ ಸೇವನೆ ಮಾಡಿ. ಕಲ್ಲಂಗಡಿ, ನಿಂಬೆಹಣ್ಣಿನ ಪಾನಕ ತುಂಬಾ ಒಳ್ಳೆಯದು. ಮೆಂತ್ಯ ದೋಸೆ, ಮೆಂತ್ಯ ಸಾರು, ತಂಬೂಳಿ, ಜೀರಿಗೆ ಸಾರು ದೇಹಕ್ಕೆ ಹಿತಕರವಾಗುತ್ತೆ.
ಅಗಸೆ ಬೀಜವನ್ನು ಹುರಿದು ಪುಡಿ ಮಾಡಿ ಅದನ್ನು ಪ್ರತಿದಿನ ಒಂದು ಚಮಚದಷ್ಟು ಸೇವನೆ ಮಾಡುತ್ತಿದ್ದರೆ ಮುಟ್ಟು ನಿಲ್ಲುವ ದಿನಗಳಲ್ಲಿ ಕಾಡುವ ಸಮಸ್ಯೆಗಳನ್ನು ಆದಷ್ಟು ಬಗೆಹರಿಸಬಹುದಾಗಿದೆ. ಹಿರಿಯರು ಬಳಸುತ್ತಿದ್ದ ಆಹಾರ ಪದ್ಧತಿ ಹೆಚ್ಚಿನ ಆರೋಗ್ಯ ಕಾಪಾಡಲು ಸಮರ್ಥ. ಇಡೀ ಶರೀರಕ್ಕೆ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಜೊತೆಗೆ ಸ್ವಲ್ಪ ತುಪ್ಪ ಬೆರೆಸಿ ಸವರಿಕೊಂಡು ಸ್ನಾನ ಮಾಡುವುದು, ನಿತ್ಯ ಈ ಅಭ್ಯಾಸ ರಕ್ತ ಸಂಚಾರವನ್ನು ಸುಗಮಗೊಳಿಸಿ ನರಗಳಿಗೆ ಚೈತನ್ಯ ತುಂಬಿ ಸುಖನಿದ್ರೆ ಬರುವುದು. ಪಾದಗಳಿಗೆ ಎಣ್ಣೆ ಆರೈಕೆ ಕೂಡ ನಿದ್ರಾಜನಕ.
"ಹಾರ್ಮೋನುಗಳೇ ಆಗಿರಲಿ ಅವುಗಳ ಉತ್ಪತ್ತಿ, ನಿಯಂತ್ರಣ, ಕಾರ್ಯ ವ್ಯಾಪ್ತಿಯ ಅಂಗಾಂಗಗಳೇ ಇರಲಿ ಎಲ್ಲವೂ ಆಹಾರದಿಂದ ಪೋಷಿತ ಎನ್ನುವ ಮೂಲ ಸತ್ಯವನ್ನು ಮರೆಯುವಂತಿಲ್ಲ" ಅಕಾಲಿಕ ಅಥವಾ ನೈಸರ್ಗಿಕವಾಗಿ ಮನೋಪಾಸ್ ಉಂಟಾದಾಗ ಮಹಿಳೆಗೆ ಮನೆಯಲ್ಲಿ ಪತಿ ಹಾಗೂ ಮಕ್ಕಳ ಆರೈಕೆ ಬೇಕಾಗುತ್ತದೆ. ಈ ಸಮಯದಲ್ಲಿ ಆಕೆಗೆ ನನ್ನ ಪ್ರೀತಿಸುವವರು ಯಾರೂ ಇಲ್ಲ ಅಂತ ಅನ್ನಿಸಬಹುದು. ಆ ಕ್ಲಿಷ್ಟ ಸಮಯದಲ್ಲಿ ಸೂಕ್ತ ಕಾಳಜಿ ತೋರಿದರೆ ಅವಳಲ್ಲಿ ಆ ಭಾವನೆ ಇಲ್ಲವಾಗುವುದು. ಅವಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡಿ. ಈ ಸಮಯದಲ್ಲಿ ಇವೆಲ್ಲ ಸಹಜ ಅಂತ ಮನೆಯವರು ಅಸಡ್ಡೆ ಮಾಡಬಾರದು.
"ಸಮಸ್ಯೆಗಳಿದ್ದಾಗ ವೈದ್ಯಕೀಯ ಸಹಾಯ ಪಡೆಯಲು ಹಿಂಜರಿಯದಿರಿ. ಅಗತ್ಯಬಿದ್ದಲ್ಲಿ ಮನೋವೈದ್ಯರನ್ನು ಸಂಪರ್ಕಿಸುವುದು"